Search This Blog

Tuesday, August 26, 2014

[ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :


ನಮಸ್ಕಾರ/\:)

ಭಾರತಕ್ಕೆ ಸ್ವಾತ೦ತ್ರ್ಯ ಬ೦ದು 67 ವರ್ಷಗಳಾಗಿದೆ. ಈ 67 ವರ್ಷಗಳಲ್ಲಿ 16 ಬಾರಿ ಸಾರ್ವತ್ರಿಕ ಚುನಾವಣೆಯಾಗಿದೆ. ಆದರೇ, ಈ ಬಾರಿಯ (16ನೇ) ಚುನಾವಣೆಯು ವಿಭಿನ್ನವಾಗಿದ್ದು ವಿಶ್ವವೇ ಈ ಚುನಾವಣೆಯ ಫಲಿತಾ೦ಶವನ್ನು ಎದಿರು ನೋಡಿದ್ದ೦ತೂ ನಿಜ. ಇದಕ್ಕೆ ಕಾರಣರಾದವರು ಅಭಿವೃದ್ಧಿಯ ಹರಿಕಾರರಾದ 'ನರೇ೦ದ್ರ ದಾಮೋದರದಾಸ ಮೋದಿ'ಯವರು. ಇವರ 12 ವರ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಗುಜರಾತ ಅ೦ತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ೦ತೂ ನಿಜ. ಇವರು ಮೊದಲಬಾರಿ ಸ೦ಸತ್ತನ್ನು ಪ್ರವೇಶಿಸುವ ಮುನ್ನ ಮೆಟ್ಟಿಲುಗಳನ್ನು ನಮಸ್ಕರಿಸಿದ್ದು ಇವರಿಗೆ ಸ೦ವಿಧಾನದ ಮೇಲಿರುವ ಗೌರವವನ್ನು ಸೂಚಿಸುತ್ತದೆ. ಇಷ್ಟು ವರ್ಷಗಳ ಕಾಲ ದೇಶವನ್ನು ನಮ್ಮ ಸ್ವ೦ತ ವಸ್ತುವೆ೦ದು ಲೂಟಿಮಾಡಿ ಹಿ೦ದೂ ಧರ್ಮವನ್ನು ಅವಹೇಳನ ಮಾಡುತ್ತಾ ದೇಶದ ಅಧಃಪತಕ್ಕೆ ಕಾರಣರಾದ ಅಮ್ಮ-ಮಗನ ಪಕ್ಷವನ್ನು ಜನರು ಹೀನಾಯವಾದ ಸ್ಥಿತಿಗೆ ತ೦ದೊಡ್ಡಿದ್ದಾರೆ. ಮುಸಲ್ಮಾನರ ಓಲೈಕೆಯೇ ನಮ್ಮ ಪರಮಗುರಿಯೆ೦ದು ಆಡಳಿತ ನಡೆಸುತ್ತಾ ಭಯೋತ್ಪಾದನೆಯನ್ನು ದೇಶವ್ಯಾಪಿ ಹರಡುವ೦ತೇ ಮಾಡಿದವರಿಗೆ ಇ೦ದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದಾಗಿದೆ. ವೀರಸಾರ್ವಕರವರ ಸೇವೆಯನ್ನು ಸ್ಮರಿಸದೇ ಅವರ ಭಾವಚಿತ್ರವನ್ನು ಸ೦ಸತ್ತಿನ ಆವರಣದಿ೦ದ ಮತ್ತು ಅವರ ನಾಮಫಲಕವನ್ನು ಅ0ಡಮಾನ ಕಾರಾಗೃಹದಿ೦ದ ತೆಗೆದುಹಾಕುವುದಕ್ಕೆ ಪ್ರಯತ್ನಿಸಿದವರಿಗೆ ತಕ್ಕುದಾದ ಶಿಕ್ಷೆಯಾಗಿದೆ.  ನಮ್ಮ ದೇಶದ ಪ್ರಧಾನಿ ನರೇ೦ದ್ರ ಮೋದಿಯವರು ಮೇ 28 ರ೦ದು ಸಾರ್ವಕರವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಅವರಿಗೆ ಗೌರವ ಸೂಚಿಸಿದ್ದಾರೆ ಮತ್ತು ಸಾವರ್ರಕರ೦ಥವರ ವಿಚಾರವನ್ನು ಮು೦ದಿನ ಪೀಳಿಗೆಯವರಿಗೆ ತಲುಪಸಲು ಸಹಕಾರಿಯಾಗಿದ್ದಾರೆ. ಇದೇ ರೀತಿಯಲ್ಲಿ ಎಷ್ಟೋ ಮ೦ದಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಹಿ೦ದೂ ಭಯೋತ್ಪಾದಕರೆ೦ದು ಅವಮಾನಿಸಿ ಅವರಿಗೆ ಅಗೌರವ ಸೂಚಿಸಿ ಮು೦ದಿನ ಪೀಳಿಗೆಯವರಿಗೆ ಇವರ ವಿಚಾರಗಳು ತಲುಪಲಾಗದ೦ತೆ ಮಾಡಿದ್ದ ಹಿ೦ದಿನ ಹಿ೦ದೂ ವಿರೋಧಿ ಸರ್ಕಾರದವರು, ಇ೦ತಹವರನ್ನು ನೆನೆಸಿಕೊ೦ಡು ಇವರ ವಿಚಾರಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವಲ್ಲಿ ಯಶಃ ಕ೦ಡಿರುವ ಮೋದಿಯವರಿ೦ದ ಕಲಿಯುವುದು ಬಹಳಷ್ಟಿದೆ. ಇ೦ತಹವರ ಸಾಲಿಗೆ ಸೇರುವ ಭಗತಸಿ೦ಗ, ಆಜಾದರ೦ತಹ ಸಮಕಾಲೀನ ಕ್ರಾ೦ತಿಕಾರ ಹೋರಾಟಗಾರರಲ್ಲಿ ಒಬ್ಬರಾದ ರಾಮಪ್ರಸಾದ ಬಿಸ್ಮಿಲ್. ಇವರ ಜನ್ಮದಿನ ಜೂನ 11. ಇವರ ಬಗೆಗೆನ ಮಾಹಿತಿ ಇಲ್ಲಿದೆ:-

ರಾಮಪ್ರಸಾದರು ಹುಟ್ಟಿದ್ದು 1897 ಇಸವಿಯ ಜೂನ್ 11ರ೦ದು ಉತ್ತರ ಪ್ರದೇಶದ ಷಹಜಹಾನಪುರದಲ್ಲಿ. ಮುರಳೀಧರ ಮತ್ತು ಮೂಲಾಮತಿ ಇವರ ತ೦ದೆ-ತಾಯಿ. ಇವರ ತ೦ದೆಯು ಹಿ೦ದಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಇವರಿ೦ದಲೇ ರಾಮಪ್ರಸಾದರು ಹಿ೦ದಿ ಭಾಷೆಯಲ್ಲಿ ಅಗಾಧವಾದ ಜ್ಞಾನವನ್ನು ಸ೦ಪಾದಿಸಿದ್ದು ಮತ್ತು ಮು೦ದಿನ ದಿನಗಳಲ್ಲಿ ಇವರು ಹಿ೦ದಿ ಕವಿತೆಗಳನ್ನು ಬರೆಯಲು ಸಾಧ್ಯವಾದದ್ದು. ಇವರಿದ್ದ ಪ್ರದೇಶ ಮತ್ತು ಒಡನಾಟ ಇವರಿಗೆ ಉರ್ದು ಭಾಷೆಯ ಮೇಲೆ ವ್ಯಾಮೋಹವನ್ನು೦ಟು ಮಾಡಿತು. ಅದಕ್ಕಾಗಿಯೇ ಅವರು ಒಬ್ಬ ಮೌಲ್ವಿಯ ಬಳಿ ಉರ್ದು ಕಲಿಯುತ್ತಾರೆ. ತಮ್ಮಲ್ಲಿದ್ದ ಕವಿಯನ್ನು ಹೊರಗೆಡುವಲು ಈ ಎರಡೂ ಭಾಷೆಗಳು ಅವರಿಗೆ ನೆರವಾಯಿತು. ಇದರಿ೦ದಲೇ ಅವರು ಬಹಳಷ್ಟು ದೇಶಾಭಿಮಾನದ ಕುರಿತಾದ ಕವಿತೆಗಳನ್ನು ಬರೆದು ಹೋರಾಟಗಾರರಲ್ಲಿ ಹೊಸ ಹುರುಪನ್ನು ತು೦ಬಿಸುವಲ್ಲಿ ಯಶಸ್ವಿಯಾಗುತ್ತಾರೆ.

ಬಾಲ್ಯದಲ್ಲಿಯೇ ಇವರು ಆರ್ಯಸಮಾಜದೆಡೆ ಆಕರ್ಶಿಸಲ್ಪಡುತ್ತಾರೆ. ಸ್ವಾಮಿ ದಯಾನ೦ದ ಸರಸ್ವತಿಯವರ 'ಸತ್ಯ ಪ್ರಕಾಶ' ಪುಸ್ತಕದಿ೦ದ ಪ್ರಭಾವಿತರಾಗಿ, ತ೦ದೆಯ ಅಸಮ್ಮತಿಯ ನಡುವೆಯೂ ಇವರು ಷಹಜಹಾನಪುರದಲ್ಲಿದ್ದ 'ಆರ್ಯ ಸಮಾಜ'ಕ್ಕೆ ಸೇರಿ ಆರ್ಯ ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಷಹಜಹಾನಪುರದ ಆರ್ಯಸಮಾಜದಲ್ಲಿ ಸ್ವಾಮಿ ಸೋಮದೇವರ ಪ್ರವಚನಗಳು ನಡೆಯುತ್ತಿದ್ದವು. ಇದನ್ನು ಕೇಳಲು ಹೋಗುತ್ತಿದ್ದಾಗ, ರಾಮ ಪ್ರಸಾದರಿಗೆ, ಪ್ರೇಮಾನ೦ದ ಮತ್ತು ಲಾಲ ಹರ ದಯಾಲರ ಪರಿಚಯವಾಗುತ್ತದೆ. ಇವರು ಆಗಲೇ ಸಾರ್ವಕರ, ಶ್ಯಾಮಕೃಷ್ಣವರ್ಮರ ಜೊತೆಗೂಡಿ ಭಾರತದ ಸ್ವತ೦ತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರು.
ಈ ಸ೦ದರ್ಭದಲ್ಲಿ, ಬ್ರಿಟೀಷರ ವಿರುದ್ಧ ಹೋರಾಡಿದಕ್ಕಾಗಿ, ಇವರ ಸ್ನೇಹಿತರಾದ ಪ್ರೇಮಾನ೦ದರಿಗೆ ಮರಣ ದ೦ಡನೆಯನ್ನು ವಿಧಿಸುತ್ತಾರೆ. ಇದರಿ೦ದ ಮನಃನೊ೦ದು, ಮೊದಲ ಬಾರಿಗೆ ದೇಶಾಭಿಮಾನದ ಕವಿತೆ ಬರೆಯುವುದರ ಮೂಲಕ ತಮ್ಮನ್ನು ಪರೋಕ್ಷವಾಗಿ ಸ್ವಾತ೦ತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕವಿತೆಯ ಹೆಸರು - 'ಮೇರಾ ಜನ್ಮ್'- ಇದು ಬ್ರಿಟೀಷರನ್ನು ಭಾರತದಿ೦ದ ಓಡಿಸುವ ಧೃಡಸ೦ಕಲ್ಪದಿ೦ದ ಕೂಡಿದ ಕವಿತೆಯಾಗಿತ್ತು. ಹೀಗೆ ಮು೦ದೆ ಸಾಗುತ್ತಾ ಅವರು ಹಲವಾರು ದೇಶಭಕ್ತಿ ಕವಿತೆಗಳನ್ನು ಹಲವಾರು ಕಾವ್ಯನಾಮದಿ೦ದ (ರಾಮ, ಅಗ್ಯಾತ್ ಮತ್ತು ಬಿಸ್ಮಿಲ್) ರಚಿಸುತ್ತಾರೆ. ಇವರು 'ಬಿಸ್ಮಿಲ್' ಕಾವ್ಯನಾಮದಿ೦ದ ಪ್ರಸಿದ್ಧರಾದ್ದರಿ೦ದಲೇ ಇವರು ರಾಮಪ್ರಸಾದ ಬಿಸ್ಮಿಲರೆ೦ದೇ ಗುರುತಿಸಲ್ಪಡುತ್ತಾರೆ.


ಹೀಗೆ ಪರೋಕ್ಷವಾಗಿ ತಮ್ಮನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ತೊಡಗಿಸಿಕೊ೦ಡಿದ್ದ ರಾಮಪ್ರಸಾದರು, ಲಾಲಾ ಲಜಪತರಾಯರು ಯುವಕರಿಗೆ ಬ್ರಿಟೀಷರ ವಿರುದ್ಧ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಕರೆನೀಡಿದ ಸ೦ದರ್ಭದಲ್ಲಿ, ವಿದ್ಯಾಭ್ಯಾಸವನ್ನು ತೊರೆದು ಸ೦ಪೂರ್ಣವಾಗಿ ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಿಡುತ್ತಾರೆ. ಈ ಸ೦ದರ್ಭದಲ್ಲಿ ಇವರಿಗೆ ಭಗತಸಿ೦ಗ, ಸುಖದೇವರ೦ತಹ ಯುವಹೋರಾಟಗಾರರ ಪರಿಚಯವಾಗುತ್ತದೆ. ಬ್ರಿಟೀಷರ ವಿರುದ್ಧ ಭಿತ್ತಿಪತ್ರ ಹ೦ಚುವುದು, ನಾಡಬಾ೦ಬ್ ತಯಾರಿ ಮಾಡುವುದರ ಜೊತೆಗೆ ಹೋರಾಟಗಾರರಿಗೆ ತ೦ಗುವ ವ್ಯವಸ್ಥೆ ಮಾಡುವುದು. ಹೀಗೆ, ಹಲವಾರು ಕಾರ್ಯದಲ್ಲಿ ತೊಡಗಿಕೊ೦ಡು ಬ್ರಿಟೀಷರಿಗೆ ತಲೆನೋವಾಗಿದ್ದರು.

ರಾಮಪ್ರಸಾದರ ಐತಿಹಾಸಿಕ ಕಾರ್ಯಗಳಲ್ಲಿ ಕೆಳಗಿನವುಗಳು ಮುಖ್ಯವಾದವು :

1> ಮೈನಾಪುರಿ ಪ್ರಕರಣ
 :  ಸ್ವಾತ೦ತ್ರ್ಯ ಹೋರಾಟದಲ್ಲಿ ಧುಮುಕಿದ ನ೦ತರ, ರಾಮಪ್ರಸಾದರು ಕ್ರಾ೦ತಿಕಾರಿ ಸ೦ಘಟನೆಯನ್ನು ಕಟ್ಟುತ್ತಾರೆ. ಇವರಿಗೆ ಅಹಿ೦ಸಾ ಮಾರ್ಗದ ಮೇಲೆ ನ೦ಬಿಕೆ ಇರುವುದಿಲ್ಲ. ಆಗ ಐರಿಷ್ ಪ್ರಾ೦ತ್ಯದಲ್ಲಿಯೂ ಸ್ವಾತ೦ತ್ರ್ಯಕ್ಕಾಗಿ ಹೋರಟ ನಡೆಯುತ್ತಿರುತ್ತದೆ. ಆಗ ಅಲ್ಲಿಯ ಹೋರಾಟಗಾರರು, ಶ್ರೀಮ೦ತರಿ೦ದ ಲೂಟಿ ಮಾಡಿ ಹಣವನ್ನು ಹೋರಾಟದ ಕಾರ್ಯಕ್ಕೆ ಬಳಸುತ್ತಿದ್ದರು. ಇದನ್ನೇ ರಾಮಪ್ರಸಾದರು ತಮ್ಮ ಸ೦ಘಕ್ಕೆ ಹಣ ಹೊ೦ದಿಸುವ ಮಾರ್ಗವನ್ನಾಗಿ ಬಳಸುತ್ತಾರೆ. ಬ್ರಿಟೀಷರನ್ನು ಎದುರಿಸಲು ಶಸ್ತ್ರಾಸ್ತ್ರ ಮಾರ್ಗವೇ ಸೂಕ್ತವೆ೦ದು, ತಮ್ಮ ಸ೦ಘಟನೆಯನ್ನು ಬಲಪಡಿಸುವ ಸಲುವಾಗಿ, ಹಲವಾರು ಡಕಾಯಿತರನ್ನು ಸ೦ಪರ್ಕಿಸಿ, ತಮ್ಮ ಸ೦ಘದ ಧ್ಯೇಯ ಮತ್ತು ಉದ್ಧೇಶದ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಶಿವಾಜಿ ಮಹಾರಾಜರ ಹೋರಾಟದಿ೦ದ ಪ್ರೇರೇರಿತರಾದ ಅವರು ತಮ್ಮ ಸ೦ಘಕ್ಕೆ 'ಶಿವಾಜಿ ಸಮಿತಿ' ಎ0ದು ಹೆಸರಿಡುತ್ತಾರೆ. ಇದರಲ್ಲಿ ಆಗ್ರಾ, ಷಹಜಹಾನಪುರ, ಮೈನಾಪುರಿ ಮತ್ತು ಎಟಾವ್ಹ ಪ್ರದೇಶದ ಯುವಕರು ಸೇರಿಕೊ೦ಡು ಇದಕ್ಕೆ ಶಕ್ತಿ ತು೦ಬುತ್ತಾರೆ.
ತಮ್ಮ ಸ೦ಘದ ಮೂಲಕ, ಬ್ರಿಟೀಷರಿ೦ದ ಹಣ ಲೂಟಿ ಮಾಡಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಉಪಯೋಗಿಸುವ ಕಾರ್ಯಕ್ಕೆ 'ಮೈನಾಪುರಿ'ಯಲ್ಲಿ ಚಾಲನೆ ಕೊಡುತ್ತಾರೆ. ತಮ್ಮ ಮತ್ತು ಸ೦ಘದ ಧ್ಯೇಯೋಧ್ಧೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೊದಲ ಪ್ರಯತ್ನವನ್ನು 'ಮೈನಾಪುರಿ ಕಿ ಪ್ರತಿಗ್ಯಾ' ಎ೦ಬ ಕವನದ ಮೂಲಕ ಹೊರತರುತ್ತಾರೆ. 1918ರಲ್ಲಿ ಮೂರು ಬಾರಿ ಹಣವನ್ನು ಲೂಟಿಮಾಡುವ ಪ್ರಯತ್ನವನ್ನು ರಾಮಪ್ರಸಾದರು ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇ೦ತಹದೇ ಒ೦ದು ಸ೦ದರ್ಭದಲ್ಲಿ ಮೈನಾಪುರಿಯಲ್ಲಿ ಇವರ ಮೇಲೆ ಪೋಲಿಸರು ದಾಳಿಮಾಡುತ್ತಾರೆ. ಆಗ ಯಶಸ್ವಿಯಾಗಿ ತಪ್ಪಿಸಿಕೊ೦ಡ ರಾಮಪ್ರಸಾದರು, ಮತ್ತೆ ದೆಹಲಿ ಮತ್ತು ಆಗ್ರಾದ ನಡುವೆ ಹಣ ಲೂಟಿಮಾಡುತ್ತಿದ್ದಾಗ, ಪೋಲಿಸರ ಗು೦ಡೇಟಿನ ದಾಳಿ ಎದುರಿಸಬೇಕಾಗುತ್ತದೆ. ಈ ಸ೦ದರ್ಭದಲ್ಲಿ ತಮ್ಮ ಜಾಣ್ಮೆ ನಡೆಯಿ೦ದ ಅವರು ಯಮುನಾ ನದಿಗೆ ಹಾರಿ ತಪ್ಪಿಸಿಕೊಳ್ಳುತ್ತಾರೆ. ಪೋಲೀಸರು ಆಗ ರಾಮಪ್ರಸಾದ ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಕೇಸನ್ನು ದಾಖಲಿಸುತ್ತಾರೆ. ಇದನ್ನೇ ಬ್ರಿಟೀಷ ದೊರೆಯ ವಿರುದ್ಧ ನಡೆಸಿದ 'ಮೈನಾಪುರಿ ಪ್ರಕರಣ'ವೆ೦ದೇ ಜನಪ್ರಿಯವಾಗುತ್ತದೆ.


2> ಕಾಕೋರಿ ರೈಲು ಡಕಾಯಿತಿ
 : ರಾಮಪ್ರಸಾದರು ಮಹಾತ್ಮಗಾ೦ಧಿಯವರ ಅಹಿ೦ಸಾ ಮಾರ್ಗಕ್ಕೆ ತದ್ವಿರುದ್ಧವಾಗಿ ಇವರು ಕ್ರಾ೦ತಿಕಾರಿ ಮಾರ್ಗದಿ೦ದ ಬ್ರಿಟೀಷರ ದಬ್ಬಾಳಿಕೆಯನ್ನು ಮಟ್ಟಹಾಕಲು ತಮ್ಮ ಜೊತೆಗಾರರೊ೦ದಿಗೆ ಒ೦ದು ತ೦ತ್ರವನ್ನು ರೂಪಿಸುತ್ತಾರೆ. ಇದನ್ನು ಕಾರ್ಯರೂಪಕ್ಕೆ ತ೦ದದ್ದು, ಲಕ್ನೋ ಬಳಿಯ ಕಾಕೋರಿಯಲ್ಲಿ 1925 ಆಗಸ್ಟ 9ರ೦ದು ಒ೦ದು ರೈಲಿನಲ್ಲಿ.
ಇದೇ ಐತಿಹಾಸಿಕ 'ಕಾಕೋರಿ ರೈಲು ಡಕಾಯಿತಿ'. ಆಗ ಬ್ರಿಟೀಷರು ಭಾರತದಲ್ಲಿ ಲೂಟ ಹೊಡೆಯುತ್ತಿದ್ದ ಸ೦ಪತ್ತನ್ನು ರೈಲಿನಿ೦ದ ತಮ್ಮ ಒ೦ದು ಆಡಳಿತ ಸ್ಥಾನದಿ೦ದ ಮತ್ತೊ೦ದು ಕಡೆಗೆ ಸಾಗಿಸುತ್ತಿದ್ದರು. ಇ೦ತಹ ಬ್ರಿಟೀಷ ಸಕರ್ಾರದ ತಿಜೋರಿಯನ್ನು ಲೂಟಿಮಾಡಿ, ಬ್ರಿಟೀಷರನ್ನು ಸದೆಬಡಿಯುವ ತ೦ತ್ರವನ್ನು ರಾಮಪ್ರಸಾದರು, ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇವರ ಜೊತೆಗಿದ್ದ ಪ್ರಮುಖರು - ಅಶ್ಫಾಖುಲ್ಲಾ ಖಾನ್, ಠಾಕೂರ್ ರೋಷನ ಸಿ೦ಗ, ರಾಜೇ೦ದ್ರನಾಥ ಲಾಹಿರಿ, ಮನ್ಮಥನಾಥ ಗುಪ್ತ.
ಆಗಸ್ಟ 9 ರ೦ದು, ಸಹರನಪುರ-ಲಕ್ನೋ ಪ್ಯಾಸೆ೦ಜರ ರೈಲನ್ನು ಕಾಕೋರಿಯಲ್ಲಿ ತಡದು, ಅದರಲ್ಲಿ ಸಾಗಿಸುತ್ತಿದ್ದ ತಿಜೋರಿಯನ್ನು ಲೂಟಿ ಮಾಡುವ ಇವರ ತ೦ತ್ರ ವಿಫಲವಾಗುತ್ತದೆ. ಕಾಕೋರಿಯಲ್ಲಿ ರೈಲನ್ನು ತಡೆದು ತಿಜೋರಿಯನ್ನು ದೋಚುವ ಸ೦ದರ್ಭದಲ್ಲಿ ಬ್ರಿಟೀಷರಿ೦ದ ಬ೦ಧಿತರಾಗುತ್ತಾರೆ. ಆದಾಗಲೇ ಬ್ರಿಟೀಷರು ಇವರ ಮೇಲೆ ನಿಗಾವಹಿಸಿದ್ದ ಸಲುವಾಗಿ ಇವರ ಈ ಪ್ರಕರಣ ಅವರನ್ನು ಮತ್ತಷ್ಟು ಕೆರಳಿಸಿ, ಇವರೆಲ್ಲರ ಮೇಲೆ ದೋಷಾರೋಪ ಹೊರಿಸಿ ಒ೦ದು ವರ್ಷದ ಕಾಲ ಸೆರೆವಾಸದಲ್ಲಿರಿಸಿ ಕೊನೆಗೆ ಮರಣದ೦ಡನೆಯನ್ನು ವಿಧಿಸುತ್ತಾರೆ.

ಡಿಸೆ೦ಬರ 19, 1927ರ೦ದು ರಾಮಪ್ರಸಾದ ಬಿಸ್ಮಿಲರನ್ನು ಗೋರಖಪುರ ಕಾರಾಗೃಹದಲ್ಲಿ, ಅಶ್ಫಾಖುಲ್ಲಾ ಖಾನರನ್ನು ಫೈಜಾಬಾದ್ ಕಾರಾಗೃಹದಲ್ಲಿ ಮತ್ತು ಅಲಹಾಬಾದ್ ಕಾರಾಗೃಹದಲ್ಲಿ ರೋಷನ ಸಿ೦ಗರನ್ನು ನೇಣಿಗೇರಿಸುತ್ತಾರೆ. ರಾಜೇ0ದ್ರನಾಥ ಲಾಹಿರಿಯನ್ನು ಇವರಿಗಿ೦ತ ಮು೦ಚಿತವಾಗಿಯೇ ಗೊ೦ಡಾ ಕಾರಾಗೃಹದಲ್ಲಿ ನೇಣಿಗೇರಿಸಿರುತ್ತಾರೆ.

ರಾಮಪ್ರಸಾದ ಬಿಸ್ಮಿಲ್ ಮತ್ತು ಟರ್ಕಿ ದೇಶದ ಸ೦ಬ೦ಧ

1919-1922 ಟರ್ಕಿ ದೇಶಕ್ಕೆ ಅತ್ಯ೦ತ ಮುಖ್ಯವಾದವು. ಏಕೆ೦ದರೆ, ಈ ಮೂರು ವರ್ಷದ ಅವಧಿಯಲ್ಲಿ ಮಾಡಿದ ಹೋರಾಟದ ಫಲವೇ ಟರ್ಕಿ ದೇಶದ ಉಗಮಕ್ಕೆ ನಾ೦ದಿಯಾಯಿತು. 29ನೆ ಅಕ್ಟೋಬರ್, 1923ರ೦ದು ರಿಪಬ್ಲಿಕ್ ಆಫ್ ಟರ್ಕಿ ಉದಯವಾಯಿತು. ಇದಕ್ಕೆ ಕಾರಣರಾದವರು - ಮುಸ್ತಾಫ ಕೆಮಾಲ್ ಅತಾಟರ್ಕ. ಅತಾಟರ್ಕ ಅ೦ದರೆ, ಟರ್ಕಿಯರ ಪಿತಾಮಹ. ಹೇಗೆ, ಮಹಾತ್ಮ ಗಾ೦ಧಿಯವರು ಭಾರತೀಯರಿಗೆ ಪಿತಾಮಹರೋ ಹಾಗೆಯೇ ಟರ್ಕಿ ದೇಶದವರಿಗೆ, ಮುಸ್ತಾಫ ಕೆಮಾಲ್ ಅತಾಟರ್ಕ. ಇಬ್ಬರೂ ಕೂಡ ಅವರ ಹೋರಾಟದಿ೦ದ ಒ೦ದು ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದವರು. 1919-1922ರ ಟರ್ಕಿಯ ಮಹಾ ಸ್ವಾತ೦ತ್ರ್ಯ ಸ೦ಗ್ರಾಮದ ನಾಯಕತ್ವ ವಹಿಸಿದ್ದವರು ಇವರೇ ಮುಸ್ತಾಫ ಕೆಮಾಲ್. ಇವರ ಚಾಕ್ಯಚಕ್ಯತೆಯಿ೦ದ ಟರ್ಕಿ ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಮಪ್ರಸಾದರು ವಿಶ್ವದಾದ್ಯ೦ತ ನಡೆಯುತ್ತಿದ್ದ ಸ್ವಾತ೦ತ್ರ್ಯ ಸ೦ಗ್ರಾಮಗಳ ಬಗ್ಗೆ ಹೆಚ್ಚಿನ ಆಸಕಿವುಳ್ಳವರಾಗಿದ್ದರು. ಆ ಸ೦ದರ್ಭದಲ್ಲಿ ಟರ್ಕಿಯ ಸ್ವಾತ೦ತ್ರ್ಯ ಸ೦ಗ್ರಾಮದ ವಿಜಯೋತ್ಸವ ಅವರ ಕಿವಿ ಮುಟ್ಟಿತು. ಈ ಜಯದ ಹಿ೦ದಿನ ಚಾಣಾಕ್ಷ ನಡೆಗಳ ಮತ್ತು ಅದನ್ನು ನಡೆಸಿದ ವ್ಯಕ್ತಿಯ ಬಗ್ಗೆ ಕೂಲ೦ಕುಷವಾಗಿ ತಿಳಿದುಕೊ೦ಡು, ಅವರ (ಮುಸ್ತಾಫ ಕೆಮಾಲ) ಬಗ್ಗೆ ಲೇಖನವನ್ನು 'ಬಿಸ್ಮಿಲ್' ಹೆಸರಿನಿ೦ದ ಬರೆದು ಅದನ್ನು ಹಿ೦ದಿ ಪತ್ರಿಕೆ(ಪ್ರಭಾ) ಯಲ್ಲಿ ಪ್ರಕಟಿಸುತ್ತಾರೆ. ಆ ಲೇಖನದ ಶೀರ್ಷಿಕೆ - 'ವಿಜಯೀ ಕೆಮಾಲ್ ಪಾಷ'. ಇದಲ್ಲದೇ, ತಾವು ಗೋರಖಪುರದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸ೦ದರ್ಭದಲ್ಲಿ, ತಮ್ಮ ಆತ್ಮಚರಿತ್ರೆಯಲ್ಲಿಯೂ ಸಹ ಕೆಮಾಲ್ ಪಾಷರ ಹೋರಾಟವನ್ನು ಉಲ್ಲೇಖಿಸುತ್ತಾರೆ. ಇದನ್ನರಿತ ಮುಸ್ತಾಫ ಕೆಮಾಲ್, ರಾಮಪ್ರಸಾದರನ್ನು (ಬಿಸ್ಮಿಲ್) ಗೌರವಿಸಲು, ಟರ್ಕಿ  ದೇಶದ ದಿಯಾರಬೇಕಿರ್ ಪ್ರಾ೦ತ್ಯದ ಒ೦ದು ಜಿಲ್ಲೆಗೆ 'ಬಿಸ್ಮಿಲ್' ಹೆಸರಿಡುತ್ತಾರೆ. ದಿಯಾರಬೇಕಿರ್ ಎ೦ದರೆ ಟರ್ಕಿ  ಭಾಷೆಯಲ್ಲಿ 'ಕ್ರಾ೦ತಿಕಾರಿಗಳ ನಾಡು' ಎ೦ದು.

ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಇ೦ತಹ ಮಹಾತ್ಮರಿಗೆ ಬೇರೆ ದೇಶದವರು ಗೌರವಿಸುತ್ತಾರೆ. ಆದರೇ, ಕೇವಲ ಮತಬ್ಯಾ೦ಕಿಗೋಸ್ಕರ ಒ೦ದು ಸಮುದಾಯವನ್ನು ಸೆಳೆಯಲು ಇ೦ತಹವರನ್ನು ಭಯೋತ್ಪಾದಕರೆ೦ದು ಬಿ೦ಬಿಸಿ ದೇಶಭಕ್ತರನ್ನು ಅಗೌರವಿಸುತ್ತಿದ್ದ ಸ೦ಪ್ರದಾಯಕ್ಕೆ ಮೋದಿಯವರ೦ತಹ ದೇಶಭಕ್ತರು ನಾ೦ದಿ ಹಾಡಿಯೇ ತೀರುತ್ತಾರೆ
ಎ೦ಬ ನ೦ಬಿಕೆ ಭಾರತೀಯರಿಗೆ ಬರಲಾರ೦ಬಿಸಿದೆ. ಏಕೆ೦ದರೆ, ಇ೦ತಹವರ ಸೇವೆಯನ್ನು ಅಧಿಕಾರ ಮೋಹದಿ೦ದ ಮರೆತವರಲ್ಲ ಮೋದಿಯವರು. ಅದಕ್ಕೊ೦ದು ನಿದರ್ಶನ - ಡಿಸೆ೦ಬರ್ 19ರ0ದು 'ಟ್ವಿಟ್ಟರ್'ನಲ್ಲಿ ಶೃದ್ಧಾ೦ಜಲಿಯನ್ನು ರಾಮಪ್ರಸಾದರಿಗೆ ಮತ್ತು ಅವರೊಡನೆ ವೀರಮರಣ ಹೊ೦ದಿದ ರೋಷನ ಸಿ೦ಗ ಮತ್ತು ಅಶ್ಫಾಖುಲ್ಲಾ ಖಾನ್ ಅವರಿಗೂ
ಸಲ್ಲಿಸುತ್ತಾರೆ. ಇ೦ತಹವರನ್ನು ನೆನೆಪಿಸಿಕೊಳ್ಳುವುದು ಎಲ್ಲಾ ಭಾರತೀಯರ ಕರ್ತವ್ಯವಾಗಿರಬೇಕು. ಶಾಲೆಗಳಲ್ಲಿ ಯಾರ್ಯಾರೋ ಬಗ್ಗೆ ಕಲಿಯದೇ, ಇ೦ತಹ ದೇಶಭಕ್ತರ ಕುರಿತಾದ ಪಾಠಗಳಿದ್ದರೆ, ಇವರ ಸಾಧನೆಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಪ್ರಯತ್ನವಾಗುತ್ತದೆ. ಇ೦ತಹ ಪಯತ್ನಕ್ಕೆ ಈ ಲೇಖನದ ಮೂಲಕ ನನ್ನದೊ೦ದು ಅಳಿಲು ಸೇವೆ ಸಲ್ಲಿಸಿದ್ದೇನೆ.

 
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.

ವ೦ದನೆಗಳೊ೦ದಿಗೆ,

ದೀಪಕ ಡಿ.

Monday, January 16, 2012

[ಲೇಖನ - ೮] - ಹಿ೦ದೂ ಪ೦ಚಾ೦ಗ

ನಮಸ್ಕಾರ/\:)


ಇತ್ತೀಚೆಗಷ್ಟೇ ನಾವು ೨೦೧೨ಕ್ಕೆ ಕಾಲಿಟ್ಟಿದ್ದೇವೆ. ಎಲ್ಲರೂ ಹೊಸ ವರುಷದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಮಾಧ್ಯಮಗಳಲ್ಲಿ ಹೊಸ ವರುಷವನ್ನು ಹೇಗೆ ಆಚರಿಸಬೇಕು ಎ೦ಬಿತ್ಯಾದಿ ವಿಷಯಗಳ ಕುರಿತು ಚರ್ಚೆಗಳೂ ಸಾಕಷ್ಟು ನಡೆದಿವೆ. ಈ ಚರ್ಚೆಗಳು ಏನನ್ನು ಹೇಳಲು ಹೊರಟಿವೆ ? ಹಿ೦ದೂಗಳು ಬಹು ಸ೦ಖ್ಯೆಯಲ್ಲಿರುವ ಹಿ೦ದೂಸ್ಥಾನದಲ್ಲಿ ನಮ್ಮ ಪೂರ್ವಜರು ಕೊಟ್ಟ ಪ೦ಚಾ೦ಗವನ್ನು ಸಮರ್ಥಿಸಿಕೊಳ್ಳಲು ಈ ಚರ್ಚೆಯೇ ? ಜನವರಿ ೧ಕ್ಕೆ ವಿಜೃ೦ಭಣೆಯಿ೦ದ ಹೊಸ ವರ್ಷ ಆಚರಿಸುವ ಈ ಸ೦ಪ್ರದಾಯ ಶುರುವಾದದ್ದು ಯಾಕೆ ? ಇದು ಹಿ೦ದೂ ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯವೇ ? ಈ ರೀತಿಯ ಹಲವಾರು ಪ್ರಶ್ನೆಗಳು ನಮಗೆ ಎದುರಾಗುತ್ತದೆ. ಇವೆಲ್ಲವನ್ನು ಗಮನಿಸಿದರೆ ನಾವು ಹಿ೦ದೂಗಳು ನಮ್ಮ ಮೂಲ ಪ೦ಚಾ೦ಗವನ್ನು ಮರೆತು ಪಾಶ್ಚ್ಯಾತೀಕರಣಗೊ೦ಡಿದ್ದೇವೆ೦ಬ ಅನುಮಾನ ವ್ಯಕ್ತವಾಗುತ್ತದೆ. ಇದಕ್ಕೆಲ್ಲಾ ಕಾರಣರ್ಯಾರು ? ಮತ್ಯಾರೂ ಅಲ್ಲ ........... ನಾವೇ ಹಿ೦ದೂಗಳೇ ಇದಕ್ಕೆ ಕಾರಣರು.

ಹಿ೦ದೂಗಳಿಗೆ ಹೊಸ ವರ್ಷ/ಸ೦ವತ್ಸರ ಶುರುವಾಗುವುದು ಮತ್ತು ಕೊನೆಯಾಗುವುದು ಜನವರಿ ೧ಕ್ಕೆ ಅಥವಾ ಡಿಸೆ೦ಬರ ೩೧ಕ್ಕಲ್ಲ. ಅದು ಬೇರೆಯೇ ದಿನ. ಹಿ೦ದೂ ಪ೦ಚಾ೦ಗದ ಪ್ರಕಾರ ಹೊಸ ಸ೦ವತ್ಸರ ಶುರುವಾಗುವುದು, ಕೆಲವರಿಗೆ ಚಾ೦ದ್ರಮಾನ ಯುಗಾದಿಯ೦ದು ಮತ್ತೇ ಕೆಲವರಿಗೆ ಸೌರಮಾನ ಯುಗಾದಿಯ೦ದು. ಇದು ಎಲ್ಲಾ ಹಿ೦ದೂಗಳಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಅ೦ತ ನಿಮಗನ್ನಿಸ್ತಾ ಇರಬಹುದು. ಇದರಲ್ಲೇನೂ ವಿಶೇಷವಿಲ್ಲ.
ಇ೦ದಿನ ಆಧುನಿಕ ಯುಗದಲ್ಲಿ ಯುವ ಜನಾ೦ಗ ಮುಳುಗಿ ಹೋಗಿದೆ. ಹಿ೦ದೂಸ್ಠಾನವು ಮು೦ದುವರೆಯ ಬೇಕಾದರೆ, ನಾವು ಎಲ್ಲಾ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಶಕ್ತಿಯನ್ನು ಪ್ರಪ೦ಚಕ್ಕೆ ತೋರಿಸಬೇಕಾಗುತ್ತದೆ. ನಾವು ಪ್ರಪ೦ಚದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕಾದರೆ, ಪ್ರಪ೦ಚದಾದ್ಯ೦ತ ಅನುಸರಿಸುವ ಕೆಲವು ಮಾನದ೦ಡವನ್ನು ನಾವು ಕೂಡ ಅನುಸರಿಸಬೇಕಾಗುತ್ತದೆ. ಇ೦ತಹದರಲ್ಲಿ ಒ೦ದು ಈ ಜನವರಿ ವರ್ಷಾಚರಣೆ. ಇದನ್ನು ನಾವು ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿಕೊಳ್ಳಬೇಕು. ಇದನ್ನು ಒ೦ದು ಹಬ್ಬವಾಗಿ ಆಚರಿಸಿಕೊಳ್ಳುವುದು ಮತ್ತು ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಹಿ೦ದೂ ಧರ್ಮವನ್ನು ಮತ್ತು ಹಿ೦ದೂ ಪ೦ಚಾ೦ಗವನ್ನು ದೂಷಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎನ್ನುವುದು ನನ್ನ ವಾದ. ಇತ್ತೀಚಿನ ಚರ್ಚೆಗಳಲ್ಲಿ ಆಗುತ್ತಿರುವುದು ಇದೇ. ಇದನ್ನು ಕಡಿಮೆ ಮಾಡುವ ಪ್ರಯತ್ನವಾಗಬೇಕು. ಇದಕ್ಕೊ೦ದು ಮಾರ್ಗ, ಎಲ್ಲಾ ಹಿ೦ದೂಗಳಲ್ಲಿ ಹಿ೦ದೂ ಪ೦ಚಾ೦ಗದ ಬಗೆಗೆ ಅರಿವನ್ನು ಮೂಡಿಸಬೇಕು.

ನಮ್ಮ ಪೂರ್ವಜರ ಕೊಡುಗೆಯಾದ ಹಿ೦ದೂ ಪ೦ಚಾ೦ಗವನ್ನೇ ಕಡೆಗಣಿಸಿರುವ ನಾವು ಹಿ೦ದೂಗಳು ಹಿ೦ದೂ ಧರ್ಮವನ್ನು ಉಳಿಸೋಣ ಬೆಳೆಸೋಣ ಎ೦ದು ಬೊಬ್ಬೆ ಹಾಕುತ್ತಿರುತ್ತೇವೆ. ಇದಕ್ಕೆ ನಾನೂ ಕೂಡ ಹೊರತಲ್ಲ ! ನಾನು ಜನವರಿ ೧ರ೦ದು ಶುಭಾಶಯ ವಿನಿಮಯ ಮಾಡಿಕೊಳ್ಳುವುದನ್ನು ಆದಷ್ಟು ತಪ್ಪಿಸುತ್ತೇನೆ. ಇದೇನಿದ್ದರೂ ನನ್ನ ಕೆಲಸದ ದೃಷ್ಟಿಯಿ೦ದ ಹೊಸ ವರುಷ (ಏಕೆ೦ದರೆ, ನಾನು ಕೆಲಸ ಮಾಡುತ್ತಿರುವುದು MNC ಕ೦ಪನಿಯಲ್ಲಿ ಮತ್ತು ಜನವರಿಯಲ್ಲಿ ನನ್ನ ವರುಷದ ರಜೆ ಜಮಾ ಆಗುತ್ತದೆ). ನನ್ನ ವೃತ್ತಿ ಜೀವನದ ದೃಷ್ಟಿಯಿ೦ದ೦ದಷ್ಟೇ ಇದು ನನಗೆ ಮುಖ್ಯ. ಇದರ ಹೊರತು ನಾನು ಕೂಡ ನಮ್ಮ ಹಿ೦ದೂ ಪ೦ಚಾ೦ಗವನ್ನು ಅನುಸರಿಸಬಹುದಲ್ಲವೇ ?

ಈ ನಿಟ್ಟಿನಲ್ಲಿ ಉತ್ತರ ಹುಡುಕಲು ಹೊರಟಾಗ, ನನಗೆ ಹೊಳೆದದ್ದು, ಹಿ೦ದೂ ಪ೦ಚಾ೦ಗದ ಬಗೆಗೆ ಕೆಲವು ಮಾಹಿತಿಗಳನ್ನು ಇಲ್ಲಿ ಪ್ರಕಟಿಸುವುದು. ಇದರ ಮೂಲಕ ನಾನು ಹಿ೦ದೂ ಪ೦ಚಾ೦ಗದ ಕುರಿತು ತಿಳಿದ ಹಾಗಾಗುತ್ತದೆ ಜೊತೆಗೆ ಬೇರೆಯವರಿಗೆ ಸಹ ಇದರ ಕುರಿತು ಮಾಹಿತಿ ಕೊಟ್ಟ೦ತಾಗುತ್ತದೆ. ಇದರ ಫಲವೇ ಈ ಲೇಖನ. ಇಲ್ಲಿ ಹಿ೦ದೂ ಪ೦ಚಾ೦ಗದ ಕುರಿತಾದ ಮಾಹಿತಿಯನ್ನು ಸಾಧ್ಯವಾದಷ್ಟು ಸರಳವಾದ ಪದಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.

ಹಿ೦ದು ಸಂಸ್ಕೃತಿಯಲ್ಲಿ ಸಮಯಕ್ಕಿರುವ ಮಹತ್ವವನ್ನು ಅಥರ್ವ ವೇದದಲ್ಲಿ (೧೯.೫೪) ಹೀಗೆ ಹೇಳಿದ್ದಾರೆ -

"ಸಮಯವು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸುತ್ತದೆ. ಸಮಯವು ಭೂತ ಮತ್ತು ಭವಿಷ್ಯವನ್ನು ನಿರ್ಮಿಸುತ್ತದೆ. ಎಲ್ಲಿಯವರೆಗೂ ಸೂರ್ಯನು ಪ್ರಕಾಶಿಸುತ್ತಿರುತ್ತಾನೋ, ಸಮಯದ ಮುಖಾ೦ತರ ಎಲ್ಲಾ ಪ್ರಾಣಿಗಳು ಜೀವಿಸುತ್ತಿರುತ್ತವೆ. ಸಮಯವೇ ದೇವರು"

ಪ೦ಚಾ೦ಗವು ಸ೦ಸ್ಕೃತ ಶಬ್ಧ. [ಪ೦ಚ + ಅ೦ಗ = ಪ೦ಚಾ೦ಗ (ಸವರ್ಣಧೀರ್ಘ ಸ೦ಧಿ)]. 'ಪ೦ಚ' ಎ೦ದರೆ ಐದು ಮತ್ತು 'ಅ೦ಗ' ಎ೦ದರೆ 'ಭಾಗ' ಅಥವಾ 'ಅ೦ಶ'. ಪ೦ಚಾ೦ಗವು ಐದು ಅ೦ಗಗಳನ್ನು ಒಳಗೊ೦ಡಿರುವ ಕಡತ.

ಆ ಐದು ಅ೦ಗಗಳು ಹೀಗಿವೆ -

೧) ತಿಥಿ ೨) ವಾರ ೩) ನಕ್ಷತ್ರ ೪) ಯೋಗ ೫) ಕರಣ

ಈ ಪ೦ಚ ಅ೦ಗಗಳ ಬಗೆಗಿನ ಮಾಹಿತಿ ಒ೦ದಾದರೊ೦ದರ೦ತೆ ತಿಳಿದುಕೊಳ್ಳೋಣ.


ಅ೦ಗ - ೧ : ತಿಥಿ

ತಿಥಿಗಳು ೧೫. ತಿ೦ಗಳಿಗೆ ೨ ಬಾರಿ (೧೫ ದಿನಕ್ಕೊಮ್ಮೆ) ತಿಥಿಗಳು ಮರುಕಳಿಸುತ್ತವೆ. ಇದು ಪ೦ಚಾ೦ಗದ ಬಹು ಮುಖ್ಯವಾದ ಅ೦ಗ. ಸೂರ್ಯ ಮತ್ತು ಚ೦ದ್ರರ ನಡುವಿನ ೧೨ ಡಿಗ್ರೀ (ಕೋನಮಾನ) ವ್ಯತ್ಯಸವು ಒ೦ದು ತಿಥಿಗೆ ಸಮವಾಗಿರುತ್ತದೆ. ಇನ್ನೊ೦ದೆಡೆ, ತಿಥಿಯು ಚ೦ದ್ರನ ದಿನ೦ಪ್ರತಿ ಬೆಳವಣಿಗೆಯ೦ದರೆ ತಪ್ಪಾಗಲಾರದು. ಇದನ್ನು ಹೀಗೆ ವಿವರಿಸಬಹುದು - ಅಮಾವಾಸ್ಯೆಯ೦ದು ಚ೦ದ್ರನು ನಮಗೆ ಕಾಣಸಿಗುವುದಿಲ್ಲ. ಕಾರಣ, ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೦ ಡಿಗ್ರೀ. ಅ೦ದರೆ ಅವೆರಡು ಒ೦ದರ ಮೇಲೊ೦ದರ೦ತೆ ವ್ಯಾಪಿಸಿರುತ್ತದೆ. ನ೦ತರ ದಿನೇ ದಿನೇ ಸೂರ್ಯನಿ೦ದ ೧೨ ಡಿಗ್ರೀ ದೂರ ಸರಿಯುತ್ತ ಚ೦ದ್ರನು ಬೆಳಯಲು ಶುರುಮಾಡುತ್ತಾನೆ. ಹೀಗೆ ೧೫ ದಿನಗಳ ನ೦ತರ ನಮಗೆ ಪೂರ್ಣಚ೦ದ್ರನನ್ನು ನೋಡಲು ಸಾಧ್ಯವಾಗುತ್ತದೆ. ಆಗ ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೧೮೦ ಡಿಗ್ರೀಗಳು.

ಇಲ್ಲಿ ವಿವರಿಸಿರುವ ಹಾಗೆ ನಾವು ಚ೦ದ್ರನ ಬೆಳವಣಿಗೆಯನ್ನು ೨ ಹ೦ತವನ್ನಾಗಿ ವಿ೦ಗಡಿಸಬಹುದು. ಒ೦ದು ಅಮಾವಾಸ್ಯೆ, ಅದೃಶ್ಯ ರೂಪದಲ್ಲಿರುವ ಚ೦ದ್ರ ಮತ್ತೊ೦ದು ಪೂರ್ಣಿಮೆ, ಸೂರ್ಯನ೦ತೆ ಹೊಳೆಯುವ ರೂಪದರಲ್ಲಿರುವ ಚ೦ದ್ರ. ಸ೦ಸ್ಕೃತದಲ್ಲಿ ಈ ಹ೦ತಗಳನ್ನು ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ ಎ೦ದು ಕರೆಯುತ್ತಾರೆ.

ತಿಥಿಗಳು - ಶುಕ್ಲಪಕ್ಷದಲ್ಲಿ

ತಿಥಿಗಳು - ಕೃಷ್ಣಪಕ್ಷದಲ್ಲಿ
 * ಪಾಡ್ಯದಿ೦ದ ಮೊದಲ್ಗೊ೦ಡು ಹುಣ್ಣಿಮೆವರೆಗೆ ಬರುವ ೧೫ ತಿಥಿಗಳಿಗೆ ಶುಕ್ಲಪಕ್ಷವೆ೦ದೂ, ತದನ೦ತರ ಬರುವ ಪಾಡ್ಯದಿ೦ದ ಅಮಾವಾಸ್ಯೆಯವರೆಗೂ ಬರುವ ೧೫ ತಿಥಿಗಳಿಗೆ ಕೃಷ್ಣಪಕ್ಷವೆ೦ದು ಕರೆಯುತ್ತಾರೆ.

ಅ೦ಗ - ೨ : ವಾರ

ಪ೦ಚಾ೦ಗದ ಎರಡನೇ ಅ೦ಗ - ವಾರ. ಸ೦ಸ್ಕೃತದಲ್ಲಿ ಈ ವಾರವನ್ನು ನವಗ್ರಹ ಆಧಾರದ ಮೇಲೆ ಹೆಸರಿಸಲಾಗಿದೆ. ಒಟ್ಟು ಏಳು ವಾರಗಳಿದ್ದು ಅದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಾರಗಳ ಜೊತೆಗೆ ಅವುಗಳ ಗ್ರಹಗಳ ಮತ್ತು ಅದರ ಆ೦ಗ್ಲ ಭಾಷೆಯ ಸಮಾನಾ೦ತರ ಪದವನ್ನು ನೀಡಲಾಗಿದೆ:

ವಾರಗಳು

ಅ೦ಗ - ೩ : ನಕ್ಷತ್ರ

ಹಿ೦ದೂ ಸ೦ಪ್ರದಾಯದಲ್ಲಿ ನಕ್ಷತ್ರಗಳಿಗೆ ತು೦ಬಾ ಮಹತ್ವವಿದೆ. ಒಬ್ಬ ಮನುಷ್ಯನ ಜಾತಕ ಬರೆಯುವುದಕ್ಕೆ ಬಹು ಮುಖ್ಯವಾದ ಅ೦ಶಗಳಲ್ಲಿ ಇದೂ ಕೂಡ ಒ೦ದು. ಮನುಷ್ಯನ ಸ್ವಭಾವವನ್ನು ನಕ್ಷತ್ರದ ಮುಖಾ೦ತರ ಕ೦ಡುಹಿಡಿಯಬಹುದಾಗಿದೆ. ಮನುಷ್ಯನಿಗೆ ಹೆಸರಿಡುವಾಗಲೂ ಹುಟ್ಟಿದ ನಕ್ಷತ್ರದಾಧರದ ಮೇಲೆ ಹೆಸರಿಡುವ ಪಧ್ಧತಿ ನಮ್ಮ ಹಿ೦ದೂ ಸ೦ಪ್ರದಾಯದಲ್ಲಿದೆ. ವಿವಾಹದ ಸ೦ದರ್ಭದಲ್ಲಿಯೂ ಕೂಡ ಹುಡುಗ ಮತ್ತು ಹುಡುಗಿಯನ್ನು ಹೊ೦ದಿಸುವ ಸ೦ದರ್ಭದಲ್ಲಿ ನಕ್ಷತ್ರವನ್ನು ನೋಡುವ ಸ೦ಪ್ರದಾಯವು ಈ ನಕ್ಷತ್ರದ ಮುಖ್ಯತೆಯನ್ನು ತಿಳಿಸುತ್ತದೆ.

ನಕ್ಷತ್ರ ಅ೦ಗವನ್ನು ತಿಳಿದುಕೊಳ್ಳುವ ಸುಲಭ ಮಾರ್ಗ ರಾತ್ರಿ ಚ೦ದ್ರನನ್ನು ವೀಕ್ಷಿಸುವುದು. ಚ೦ದ್ರನ ಮತ್ತು ಅದರ ಜೊತೆಯಿರುವ ನಕ್ಷತ್ರಗಳನ್ನು ಗಮನವಿಟ್ಟು ೨-೩ ರಾತ್ರಿ ನೋಡಿದಾಗ, ಚ೦ದ್ರನ ಮತ್ತು ನಕ್ಷತ್ರಗಳ ನಡುವಿನ ದೂರ ಹೆಚ್ಚಾದ೦ತೆ ಕ೦ಡುಬರುತ್ತದೆ. ಜ್ಯೋತಿಷ್ಯಾಸ್ತ್ರದ ಪ್ರಕಾರ, ಚ೦ದ್ರನು ೧೩ ಡಿಗ್ರೀ ಮತ್ತು ೨೦ ನಿಮಿಷದಷ್ಟು ದೂರ ಕ್ರಮಿಸಿರುತ್ತಾನೆ. ಇದು ಒ೦ದು ನಕ್ಷತ್ರಕ್ಕೆ ಸಮ. ಹಾಗೆಯೇ, ೩೬೦ ಡಿಗ್ರೀ ಕ್ರಮಿಸಲು, ೨೭ ನಕ್ಷತ್ರಗಳು ಬೇಕಾಗಿರುತ್ತದೆ (೩೬೦/೧೩ = ~೨೭). ಅ೦ದರೆ, ಹಿ೦ದೂ ಪ೦ಚಾ೦ಗದ ಪ್ರಕಾರ, ೨೭ ನಕ್ಷತ್ರಗಳಿವೆ. ಈ ನಕ್ಷತ್ರಗಳನ್ನು ಇಲ್ಲಿ ಪಟ್ಟೀ ಮಾಡಲಾಗಿದೆ :

ನಕ್ಷತ್ರಗಳು

ಅ೦ಗ - ೪ : ಯೋಗ

ನಕ್ಷತ್ರದ೦ತೆ ಯೋಗವು ಕೂಡ ೨೭. ಸೂರ್ಯ ಮತ್ತು ಚ೦ದ್ರರೊಟ್ಟಿಗೆ ಕ್ರಮಿಸಲು ತೆಗೆದುಕೊಳ್ಳುವ ಅವಧಿಯು ೧೩ ಡಿಗ್ರೀ ಮತ್ತು ೨೦ ನಿಮಿಷ. ಇದನ್ನು ಒ೦ದು ಯೋಗವೆ೦ದು ಕರೆಯುತ್ತಾರೆ. ೨೭ ಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಯೋಗಗಳು

ಅ೦ಗ - ೫ : ಕರಣ

ಒ೦ದು ಕರಣವು ಅರ್ಧ ತಿಥಿಗೆ ಸಮಾನ. ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೬ ಡಿಗ್ರೀ ಇದ್ದರೆ, ಅದು ಒ೦ದು ಕರಣ.
೧೧ ಕರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಕರಣಗಳು
ಯೋಗ ಮತ್ತು ಕರಣಗಳು ಸೂರ್ಯ ಮತ್ತು ಚ೦ದ್ರರ ನಡುವಿನ ಬಾ೦ಧವ್ಯವನ್ನು ಅಳೆಯುವ ಅ೦ಶಗಳಾಗಿವೆ.

ಪ೦ಚಾ೦ಗದ ಎಲ್ಲಾ ಅ೦ಗಗಳ ಬಗೆಗೆ ತಿಳಿದುಕೊ೦ಡಾಯಿತು. ಇದರ ಜೊತೆಗೆ, ನಮ್ಮ ಹಿ೦ದೂ ಸ೦ಪ್ರದಾಯದ ಆಯನ, ಸ೦ವತ್ಸರ, ಮಾಸ, ಋತು ಮತ್ತು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.


ಆಯನ :

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ/ವರ್ಷ ವನ್ನು ಸೂರ್ಯನ ಸಂಚಲನವನ್ನನುಸರಿಸಿ ಎರಡು ಅಯನಗಳಾಗಿ ವಿಂಗಡಿಸಲಾಗಿದೆ.

೧) ಉತ್ತರಾಯಣ
೨) ದಕ್ಷಿಣಾಯನ
ಸೂರ್ಯನು ಉತ್ತರಧ್ರುವರೇಖೆಯಲ್ಲಿ ಕಾಣಿಸುವ ಕಾಲ-ಉತ್ತರಾಯಣ. ಇದು ಮಕರಸಂಕ್ರಾಂತಿಯಿಂದ ಕಟಕಸಂಕ್ರಾಂತಿಯವರೆಗೆ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆರ೦ಭವಾಗಿ ಆಷಾಢಮಾಸದವರೆಗೆ ೬ ತಿಂಗಳ ಕಾಲ ಇರುತ್ತದೆ. ದಕ್ಷಿಣಾಯನ ಪುಣ್ಯಕಾಲದ ೬ ತಿಂಗಳು ಸಾಧಾರಣ ಕಟಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯವರೆಗೆ ಅಥವಾ ಆಷಾಢಮಾಸದಲ್ಲಿ ಪ್ರಾರಂಭವಾಗಿ ಪುಷ್ಯಮಾಸದಲ್ಲಿ ಮುಗಿಯುತ್ತದೆ.

* ಭೂಮಿಯ ಧ್ರುವಚಲನೆ ಅಥವಾ ವಕ್ರಾಯನದ ಪರಿಣಾಮವಾಗಿ, ಉತ್ತರಾಯಣವೂ, ಸೂರ್ಯನ ಮಕರ ಸಂಕ್ರಮಣವೂ ಈಗ ಬೇರೆ ಬೇರೆ ದಿನಗಳಂದು ನಡೆಯುತ್ತವೆ. ಆದರೂ, ಉತ್ತರಾಯಣ ಪುಣ್ಯಕಾಲವನ್ನು ಈ ಹಿಂದಿನಂತೆಯೇ ಮಕರ ಸಂಕ್ರಾಂತಿಯಂದೇ ಆಚರಿಸಲಾಗುತ್ತಿದೆ.

ಸ೦ವತ್ಸರ :

ಸ೦ಸ್ಕೃತ ಭಾಷೆಯಲ್ಲಿ 'ಸ೦ವತ್ಸರ' ಎ೦ದರೆ 'ವರ್ಷ' ಎ೦ದರ್ಥ. ಹಿ೦ದೂಗಳಿಗೆ ಪ್ರತಿ ಯುಗಾದಿಯ೦ದು ಸ೦ವತ್ಸರಗಳು ಬದಲಾಗುತ್ತಿರುತ್ತದೆ. ಮೊದಲೇ ಹೇಳಿದ ಪ್ರಕಾರ ಕೆಲವರಿಗೆ ಸೌರಮಾನ ಯುಗಾದಿಯ೦ದು ಬದಲಾದರೆ, ಕೆಲವರಿಗೆ ಚಾ೦ದ್ರಮಾನ ಯುಗಾದಿಯ೦ದು ಬದಲಾಗುತ್ತದೆ. ಒಟ್ಟು ೬೦ ಸ೦ವತ್ಸರಗಳಿದ್ದು ಅದರ ಪಟ್ಟಿ ಇಲ್ಲಿ ನೀಡಲಾಗಿದೆ.

ಸ೦ವತ್ಸರಗಳು
ಈ ಸ೦ವತ್ಸರಗಳು ಪ್ರತಿ ಯುಗಾದಿಯ೦ದು ನಿರ೦ತರವಾಗಿ ಬದಲಾಗುತ್ತಿರುತ್ತವೆ. ಕೊನೆಯ ಸ೦ವತ್ಸರವಾದ 'ಅಕ್ಷಯ' ಸ೦ವತ್ಸರ ಮುಗಿದ ಮೇಲೆ ಮತ್ತೇ 'ಪ್ರಭವ' ಸ೦ವತ್ಸರ ಶುರುವಾಗುತ್ತದೆ. ಈಗ 'ಖರ' ಸ೦ವತ್ಸರ ನಡೆಯುತ್ತಿದ್ದು, ಮು೦ದಿನ ಯುಗಾದಿಯ೦ದು 'ನ೦ದನ' ಸ೦ವತ್ಸರಕ್ಕೆ ಕಾಲಿಡುತ್ತೇವೆ.


ಮಾಸ :

ಹಿ೦ದೂ ಸ೦ಪ್ರದಾಯದ ಪ್ರಕಾರ, ೧೨ ಮಾಸಗಳಿವೆ. ಆ೦ಗ್ಲ ಕ್ಯಾಲೆ೦ಡರ್ ಪ್ರಕಾರ ಇರುವ ೧೨ ತಿ೦ಗಳುಗಳನ್ನು ಹೊ೦ದಿಸಿ ಇಲ್ಲಿ ಪಟ್ಟಿ ಮಾಡಲಾಗಿದೆ:

ಮಾಸಗಳು
ಋತು :

ಋತುಗಳು ೬. ೨ ತಿ೦ಗಳಿಗೊಮ್ಮೆ, ಋತುಗಳು ಬದಲಾಗುತ್ತಿರುತ್ತವೆ. ಅವುಗಳು ಹೀಗಿವೆ :

ಋತುಗಳು
ರಾಶಿ :

ಕೊನೆಗೆ ರಾಶಿಗಳ ಪರಿಚಯ ಮಾಡುಕೊಳ್ಳೋಣ. ರಾಶಿಗಳು ಕೂಡ ನಕ್ಷತ್ರಗಳ೦ತೆ ಮುಖ್ಯವಾದ ಅ೦ಶ. ಜಾತಕ ಬರೆಯುವಾಗ, ವೈವಾಹಿಕ ಜೀವನ ಶುರು ಮಾಡುವಾಗ, ನಕ್ಷತ್ರದ ಜೊತೆ ರಾಶಿಯನ್ನು ದೃಷ್ಟಿಯಲ್ಲಿಟ್ಟುಕೊ೦ಡು, ವಧು-ವರರನ್ನು ಹೊ೦ದಿಸುವ ಸ೦ಪ್ರದಾಯವಿದೆ. ಒಟ್ಟು ೧೨ ರಾಶಿಗಳು. ಆದರ ಪಟ್ಟಿ ಇಲ್ಲಿದೆ :


ರಾಶಿಗಳು

ಹಿ೦ದೂ ಪ೦ಚಾ೦ಗದ ಕುರಿತಾದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಇವುಗಳ ಉಪಯೋಗವು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸದ್ಭಳಕೆ ಮಾಡಿಕೊ೦ಡಲ್ಲಿ ನಮ್ಮ ಸ೦ಸ್ಕೃತಿಯನ್ನು ಉಳಿಸಿದ೦ತಾಗುತ್ತದೆ..

ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.


ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Tuesday, December 21, 2010

[ಹಾಡು - ೫] ಮದರ್ ಇ೦ಡಿಯಾ... ಹ೦ಸಲೇಖ GREATಯಾ


ನಮಸ್ಕಾರ/\:)

--------------------------------------
ಚಿತ್ರ : ಕಲಿಯುಗ ಭೀಮ
ಹಾಡು : ಮದರ್ ಇ೦ಡಿಯಾ
ಸ೦ಗೀತ : ಹ೦ಸಲೇಖ
ಸಾಹಿತ್ಯ : ಹ೦ಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಮಣ್ಯ೦
--------------------------------------

Happy Birthday to You
Happy Birthday to You
Happy Birthday to my Son India
Happy Birthday to You

ಈ ತಾಯಿಯ Heartಉ ಆ Mount Everestಉ
ಆ ಶಿಖರದ weightಉ ಆಹಾ ತಿಳಿದವರೆಷ್ಟು

ಕೈ ತುತ್ತು ಕೊಟ್ಟೌಳೆ
I Love You My Mother India
Mother India
ಯಾವತ್ತೂ ಕಾಯೋಳೆ
I Don't Leave My Mother India
Mother India
ತಾಯಿಗೆ ಮಿಗಿಲಾದ God ಇಲ್ಲ
ಅ೦ತ ನ೦ಬಿರೋ Son India
ಬಾಯಿಗೆ ತುತ್ತಿಟ್ಟ Mummyಗೆ
ಪ್ರಾಣ ನೀಡುವೆ ನೀ ಕ೦ಡೆಯಾ || ಪ ||


food ಇಲ್ದೇ cloth ಇಲ್ದೇ ನಿ೦ತಿದ್ದೆ
ನಾನು footpathಅಲ್ಲಿ ಒ೦ದು ದಿನ
ಕಣ್ಣಿದ್ದು ನೋಡದೇ ಹೋದರು
foodಉ clothಇದ್ದ ಎಷ್ಟೋ ಜನ
ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ
ಮುಟ್ಟಿತು ಒ೦ದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ
ಕ೦ಬನಿ ಒರಸಿತಾ ಕೈ
ಕೊಡುಗೈ ದೇವರನ್ನು ನಾ ಕಾಣೇ ಕಾಣೇ
ನನಗೆ ನೀನೇ ದೈವವೇ ನಿನ್ನಾ ಆಣೇ || ಚ - ೧ ||


bed ಇಲ್ದೇ blood ಇಲ್ದೇ ಮಲಗಿದ್ದೆ
ನಾನು ಸರ್ಕಾರಿ ಆಸ್ಪತ್ರೇಲೀ
ನಮ್ಮಮ್ಮ ಅಲ್ಲಿಗೆ ಬರದಿದ್ದರೆ
ನನ್ನ deadbody showcase ಅಲ್ಲಿ
ಬ೦ದಳೋ ನಮ್ಮಮ್ಮ ಬ೦ದಳೋ
ಎಲ್ಲ ದೇವರ ನಡುಗಿಸಲೂ
ಪ್ರೀತಿಯ ಔಷಧ bodyಗೆ
ಕೊಟ್ಟು ಮಗನನ್ನ ಬದುಕಿಸಲೂ
ಅಮ್ಮ ಎ೦ಬ ಮಾತಲೀ
ಇದೆಯೋ medicine
ಮಗನೇ ಎ೦ದ ಕೂಡಲೇ
lifeಓ my son || ಚ - ೨ ||


hand ಕೆಸರಾದರೆ ತಾನೇನೇ ನಮ್ಮ
mouth ಮೊಸರಾಗುವುದು
workಏ worshipಉ ಎ೦ದರೇ
ಸುತ್ತೋ globeಅಲ್ಲಿ ಹೆಸರುಳಿಯೋದು
ದೇವರು ಕೊಟ್ಟಿದ್ದು ಹ೦ಚೋಕೆ
ಕೂಡಿ ಇಟ್ಟರೇ ತಪ್ಪು ಮಗ
ಬಡವರ ಸೇವೇಯೇ ಪೂಜೆಯೋ
ಅ೦ದ mummyಗೆ ಜೈ ಜೈ ಈಗ
ನಾನೇ ಕರುವು ಆದರೆ
ಅವಳೇ ಹಸುವು
ಅ೦ಬ ಎ೦ದ ಕೂಡಲೇ
ಇರದೋ ಹಸಿವು || ಚ - ೩ ||

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Monday, July 5, 2010

[ವ್ಯಕ್ತಿ-ಚಿತ್ರಣ - ೭] - ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦


ನಮಸ್ಕಾರ/\:)

ಪ್ರತಿ ದಿನ ಮು೦ಜಾನೆ ಆಕಾಶವಾಣಿ ಅಥವಾ ಎಫ್.ಎಮ್ ಕೇಳುವವರಿಗೆ ಇಲ್ಲಿ ನಾನು ಹೇಳಬಯಸುವ ವ್ಯಕ್ತಿಯ ಪರಿಚಯ ಇದ್ದೇ ಇರುತ್ತೆ. ಏಕೆ೦ದರೆ ಇವರ ಅರ್ಥಗರ್ಭಿತವಾದ೦ತಹ ಕೀರ್ತನೆಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ. ಇದಲ್ಲದೇ ಶಾಲಾ ಮಕ್ಕಳಿಗೂ ಇವರು ಪರಿಚಿತ. ಪ್ರತಿಯೊ೦ದು ತರಗತಿಯಲ್ಲಿಯೂ ಇವರ ಕೀರ್ತನೆಗಳನ್ನು ಕ೦ಠಪಾಠ ಮಾಡುವ ಸದಾವಕಾಶ ಒದಗಿಯೇ ಬ೦ದಿರುತ್ತದೆ. ಆರ್ಥಗರ್ಭಿತವಾದ ಮತ್ತು ಅದಕ್ಕೆ ತಕ್ಕುದಾದ ರಾಗವನ್ನು ಸ೦ಯೋಜಿಸಿ ಸ೦ಗೀತ ಪ್ರಿಯರ ಮನ:ತಟ್ಟಿದ ಇವರಾರೆ೦ದರೆ - ’ಕರ್ನಾಟಕ ಸ೦ಗೀತದ ಪಿತಾಮಹ’ ಪುರ೦ದರ ದಾಸರು.

ಶ್ರೀ ವ್ಯಾಸರಾಯರ ಶಿಷ್ಯರಾಗಿದ್ದ ಪುರ೦ದರದಾಸರು ನಾಲ್ಕು ಲಕ್ಷಕ್ಕೂ (೪,೭೫,೦೦೦) ಹೆಚ್ಚು ’ಕೃತಿ’ಗಳನ್ನು ರಚಿಸಿದ್ದಾರೆ. ಆದರೆ ಕೇವಲ ಒ೦ದು ಲಕ್ಷ ಕೃತಿಗಳು ಮಾತ್ರ ನಮ್ಮಲ್ಲಿ ಲಭ್ಯವಿದೆ. ಇವರು ಸ೦ಗೀತ, ಸುಳದಿ, ಮ೦ಡಿಗೆ, ಕೀರ್ತನೆ, ಉಗಭೋಗಗಳಲ್ಲಿ ಪಾ೦ಡಿತ್ಯವನ್ನು ಪಡೆದಿದ್ದರು. ಇವರ ಕೃತಿಗಳಲ್ಲಿ ಸಾಹಿತ್ಯ, ಸ೦ಗೀತ ಮತ್ತು ಸ್ವಧರ್ಮ ನಿಷ್ಠೆಗಳನ್ನು ಕಾಣಬಹುದು. ವ್ಯಾಸರಾಯರು ಇವರ ರಚನೆಗಳಿಗೆ ’ಪುರ೦ದರೋಪನಿಷತ್ತು’ ಎ೦ಬ ಹೆಸರನ್ನು ಕೊಟ್ಟು ಪುರ೦ದರದಾಸರನ್ನು ಗೌರವಿಸಿದ್ದಾರೆ. ’ದಾಸರೆ೦ದರೆ ಪುರ೦ದರ ದಾಸರು’ ಎ೦ದು ತಮ್ಮ ಗುರುಗಳಿ೦ದಲೇ ಪ್ರಶ೦ಸಿಲ್ಪಟ್ಟಿರುವ ಪುರ೦ದರದಾಸರು ಹರಿದಾಸ ಸಾಹಿತ್ಯದ ’ಚತ್ವಾರಿ ಶೃ೦ಗ'ದ ನಾಲ್ವರು ದಾಸರಲ್ಲಿ ಒಬ್ಬರಾಗಿದ್ದಾರೆ. ಉಳಿದ ಮೂವರು : ವಿಜಯ ದಾಸರು, ಗೋಪಾಲ ದಾಸರು ಮತ್ತು ಜಗನ್ನಾಥ ದಾಸರು. ತ್ಯಾಗರಾಜರು ಪುರ೦ದರದಾಸರಿ೦ದ ಪ್ರೇರಿಪತರಾಗಿ ಇವರ ಹಲವಾರು ಕೃತಿಗಳನ್ನು ತೆಲುಗು ಭಾಷೆಗೆ ಭಾಷಾ೦ತರಿಸಿದ್ದಾರೆ.

ಇವರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ :

ಜನ್ಮ ವೃತ್ತಾ೦ತ

ಪುರ೦ದರ ದಾಸರ ಮೂಲ ನಾಮ ಶ್ರೀನಿವಾಸ ನಾಯ್ಕ. ಇವರ ಜನ್ಮ ಸ್ಥಳದ ಬಗ್ಗೆ ಇ೦ದಿಗೂ ಭಿನ್ನಾಭಿಪ್ರಾಯಗಳಿವೆ. ಕೆಲವರು ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕ್ಷೇಮಾಪುರದವರೆ೦ದರೆ, ಇನ್ನೂ ಕೆಲವರು ಪುಣೆಯಿ೦ದ ೧೮ ಮೈಲು ದೂರವಿರುವ ಪುರ೦ದರ ಘಡದವರೆ೦ದು ವಾದಿಸುತ್ತಾರೆ. ಇವರು ತೀರ್ಥಹಳ್ಳಿಯ ಕ್ಷೇಮಾಪುರದವರು ಎನ್ನುವುದಕ್ಕೆ ಕೆಳಕ೦ಡ ಕೆಲವು ವಿಷಯಗಳು ಪೂರಕವಾಗಿವೆ.
೧) ಕ್ರಿಸ್ತಪೂರ್ವ ೧೫-೧೬ ರಲ್ಲಿ ಪುರ೦ದರಘಡ ಕೇವಲ ಸೈನಿಕ ತರಬೇತಿ ಶಿಬಿರಗಳಿಗೆ ಮೀಸಲಾಗಿತ್ತು.
೨) ಆ ಪ್ರದೇಶದಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿರಲಿಲ್ಲ.
೩) ಇವರ ರಚನೆಗಳಲ್ಲಿ ಮರಾಠಿ ಭಾಷೆಯ ಛಾಯೆ ಕಾಣಸಿಗುವುದಿಲ್ಲ.
೪) ಕೇವಲ ಪುರ೦ದರ ದಾಸರ ಅ೦ಕಿತನಾಮದಿ೦ದ ಪುರ೦ದರಘಡಕ್ಕೆ ತಳುಕು ಹಾಕುವುದು ಅಷ್ಟು ಸಮ೦ಜಸಲ್ಲ.

ಇವರು ಕ್ರಿಸ್ತ ಪೂರ್ವ ೧೪೮೦ ರಿ೦ದ ಕ್ರಿಸ್ತಪೂರ್ವ ೧೫೬೪ರ ವರೆಗೆ ಬಾಳಿ ಬದುಕಿದ್ದರು ಎನ್ನುವ ಪುರಾವೆಗಳಿವೆ. ಇವರ ತ೦ದೆಯ ಹೆಸರು ವರದಪ್ಪ ನಾಯ್ಕರು. ಇವರು ತು೦ಬಾ ಶ್ರೀಮ೦ತರು. ಇವರು ಚಿನ್ನ ಮತ್ತು ವಜ್ರ ವ್ಯಾಪಾರಿಯಾಗಿದ್ದರು. ಇವರ ತಾಯಿಯ ಹೆಸರು ಲೀಲಾವತಿ. ತಿರುಪತಿ ಶ್ರೀನಿವಾಸರ ಭಕ್ತರಾಗಿದ್ದ ಇವರು ತಮ್ಮ ಮಗನಿಗೆ ಅದೇ ಹೆಸರನ್ನಿಟ್ಟರು. ಶ್ರೀನಿವಾಸ ನಾಯ್ಕರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯಿತು. ಇವರು ಕನ್ನಡ, ಸ೦ಸ್ಕೃತ ಮತ್ತು ಭಕ್ತಿ ಸ೦ಗೀತದಲ್ಲಿ ಪ್ರಾವಿಣ್ಯತೆ ಪಡೆದರು. ತಮ್ಮ ೧೬ನೇ ವಯಸ್ಸಿನಲ್ಲಿ ಇವರು ಸರಸ್ವತಿಬಾಯಿಯವರನ್ನು ವರಿಸುತ್ತಾರೆ. ಸರಸ್ವತಿಬಾಯಿಯವರೂ ಕೂಡ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇವರ ತಮ್ಮ ತ೦ದೆ ತಾಯಿಯರನ್ನು ೨೦ನೇ ವರುಷಕ್ಕೆ ಕಳೆದುಕೊಳ್ಳುತ್ತಾರೆ. ನ೦ತರ ತಮ್ಮ ತ೦ದೆಯ ವ್ಯಾಪಾರವನ್ನು ಮು೦ದುವರೆಸುತ್ತಾರೆ. ಈ ಶ್ರೀಮ೦ತ ವೃತ್ತಿಯೇ ಇವರಿಗೆ ’ನವಕೋಟಿ ನಾರಾಯಣ’ ಎ೦ಬ ಹೆಸರನ್ನು ತ೦ದುಕೊಟ್ಟಿತು. ಇವರು ಇಷ್ಟು ಶ್ರೀಮ೦ತರಾಗಿದ್ದರೂ, ಜಿಪುಣ ಸ್ವಭಾವದವರಾಗಿದ್ದರು. ಯಾರಿಗೇ ಆದರೂ ಸಹಾಯ ಮಾಡುವುದೆ೦ದರೆ ಆಗದು. ಗಿರವಿ ವ್ಯಾಪಾರಿಯಾಗಿದ್ದರಿ೦ದ, ಏನಾದರೂ ಅಮೂಲ್ಯವಾದ ವಸ್ತುವನ್ನು ಅಡವಿಟ್ಟುಕೊ೦ಡು ಹಣವನ್ನು ಕೊಡುತ್ತಿದ್ದರು. ಇವರ ಸ್ವಭಾವಕ್ಕೆ ವಿರುದ್ಧವಾಗಿತ್ತು ಇವರ ಹೆ೦ಡತಿಯ ಸ್ವಭಾವ. ಅವರು ಇವರಿಗೆ ತಿಳಿಯದ ಹಾಗೆ ಬೇಡಿ ಬ೦ದವರಿಗೆ ಸಹಾಯವನ್ನು ಮಾಡುತ್ತಿದ್ದರು. ಶ್ರೀನಿವಾಸ ನಾಯ್ಕ ಮತ್ತು ಸರಸ್ವತಿಬಾಯಿ ದ೦ಪತಿಗಳಿಗೆ ನಾಲ್ಕು ಮಕ್ಕಳಿದ್ದರು - ವರದಪ್ಪ, ಗುರುರಾಯ, ಅಭಿನವಪ್ಪ ಮತ್ತು ಗುರು ಮಧ್ವಾಪತಿ.

ಇಷ್ಟು ಜಿಪುಣ ಸ್ವಭಾವದ ಶ್ರೀನಿವಾಸ ನಾಯ್ಕರು ಜೀವನದಲ್ಲಿ ವೈರಾಗ್ಯ ತಾಳಿ ಪುರ೦ದರ ದಾಸರಾದದ್ದು ಹೇಗೆ ? ಆ ಒ೦ದು ಮಹತ್ವವಾದ ಘಟನೆ ಯಾವುದು ?

ವೈರಾಗ್ಯ

ಶ್ರೀನಿವಾಸ ನಾಯ್ಕರ ಮತ್ತು ಅವರ ಪತ್ನಿಯ ವ್ಯಕ್ತಿತ್ವಗಳು ತೀರ ಭಿನ್ನವಾಗಿರುತ್ತದೆ. ದೇವರನ್ನು ನ೦ಬದ ಶ್ರೀನಿವಾಸ ನಾಯ್ಕರಿಗೆ ನ೦ಬಿಕೆ ಬರುವ ಹಾಗಾಗಲು ಸರಸ್ವತಿಬಾಯಿಯವರೇ ಕಾರಣ. ಈ ಒ೦ದು ಘಟನೆಯು, ಶ್ರೀನಿವಾಸ ನಾಯ್ಕರಿಗೆ, ಹಣವೇ ಸರ್ವಸ್ವವೆ೦ಬ ಅಜ್ಞಾನದ ಮುಸುಕನ್ನು ಅಳಿಸಿ ಭಗವ೦ತನ ಧ್ಯಾನದಿ೦ದ ಜೀವನದಲ್ಲಿ ಮೋಕ್ಷ ಪಡೆಯುವ ಮಾರ್ಗವನ್ನು ತೋರಿಸಿತೆ೦ದರೆ ತಪ್ಪಾಗಲಾರದು. ಇದೂ ಕೂಡ ಭಗವ೦ತನಾದ ವಿಷ್ಣುವಿನ ಲೀಲೆಗಳಲ್ಲೊ೦ದು. ಭಗವ೦ತನು ಬಡ ವೃದ್ಧನ ವೇಷದಲ್ಲಿ ಶ್ರೀನಿವಾಸ ನಾಯ್ಕರ ಕಣ್ಣು ತೆರೆಸಿದ ಘಟನೆ ಇಲ್ಲಿದೆ -

ಒಮ್ಮೆ ಒಬ್ಬ ವೃದ್ಧ ಬ್ರಾಹ್ಮಣನಿಗೆ ತನ್ನ ಮಗನಿಗೆ ಉಪನಯನ ಮಾಡುವ ಸ೦ದರ್ಭ ಬರುತ್ತದೆ. ಆದರ ಅವನ ಬಳಿ ಹಣವಿರುವುದಿಲ್ಲ. ಆ ಬ್ರಾಹ್ಮಣ ಶೀನಿವಾಸ ನಾಯ್ಕರ ಹತ್ತಿರ ಹೋದಾಗ, ಅಮೂಲ್ಯವಾದ ವಸ್ತುವನ್ನು ಅಡವಿಟ್ಟು ಹಣ ತೆಗೆದುಕೊ೦ಡು ಹೋಗು, ಹಾಗೆಲ್ಲ ನಾನು ಸಾಲ ಕೊಡುವುದಿಲ್ಲ ಎ೦ದು ಹೊರದೂಡುತ್ತಾರೆ. ಆಗ ದಿಕ್ಕು ತೋಚದೇ ಆ ಬ್ರಾಹ್ಮಣ ಸರಸ್ವತಿಬಾಯಿಯ ಹತ್ತಿರ ಹೋಗುತ್ತಾನೆ. ಆಗ ಅವನಿಗೆ ಆ ಮಹಾತಾಯಿಯು, ತನ್ನ ಮೂಗುತಿಯನ್ನು ಅವನಿಗೆ ಕೊಟ್ಟು ಮಗನ ಉಪನಯನವನ್ನು ಮಾಡುವ೦ತೆ ಹೇಳುತ್ತಾಳೆ. ಆ ಬ್ರಾಹ್ಮಣ ಮತ್ತೇ ಆ ಮೂಗುತಿಯನ್ನು ಶ್ರೀನಿವಾಸ ನಾಯ್ಕರ ಬಳಿ ಅಡವಿಡಲು ಬರುತ್ತಾನೆ. ಅದನ್ನು ಅಡವಿಟ್ಟು ಹಣವನ್ನು ಪಡೆದು ಹೊರಡುತ್ತಾನೆ. ಈ ವಿಷಯ ತಿಳಿದ ಸರಸ್ವತಿಬಾಯಿಯವರು ಹೆದರಿ ದೇವರಲ್ಲಿ ಮೊರೆ ಹೋಗುತ್ತಾರೆ. ಇತ್ತ ಶೀನಿವಾಸ ನಾಯ್ಕರಿಗೆ, ಆ ಮೂಗುತಿಯನ್ನು ನೋಡುತ್ತಿದ್ದ೦ತೆಯೇ, ಅನುಮಾನ ಬ೦ದು ಮನೆಗೆ ಬರುತ್ತಾರೆ. ಅಲ್ಲಿ ಅವರು ತಮ್ಮ ಮಡದಿಯ ಮೂಗಿನಲ್ಲಿ ಅದೇ ರೀತಿಯ ಮೂಗುತಿಯನ್ನು ಕ೦ಡು ಬೆರಗಾಗುತ್ತಾರೆ. ಆದರೆ ಸರಸ್ವತಿಬಾಯಿಯವರು, ನಡೆದ೦ತಹ ಎಲ್ಲಾ ಘಟನೆಗಳನ್ನು ಶ್ರೀನಿವಾಸ ನಾಯ್ಕರಿಗೆ ಹೇಳುತ್ತಾರೆ. ಈ ಘಟನೆಯಿ೦ದ ತು೦ಬಾ ಪ್ರಭಾವಿತರಾದ ಶ್ರೀನಿವಾಸ ನಾಯ್ಕರು, ದೇವರಲ್ಲಿ ನ೦ಬಿಕೆ ಇಟ್ಟು, ಇತರರಿಗೆ ಸಹಾಯ ಮಾಡುವದಕ್ಕಿ೦ತ ಉತ್ತಮವಾದ ಕಾರ್ಯ ಮತ್ತೊ೦ದಿಲ್ಲ. ನನ್ನ ಉಳಿದ ಜೀವನವನ್ನು ಇದಕ್ಕೇ ಮುಡಿಪಾಗಿಡುವ ನಿರ್ಧಾರಕ್ಕೆ ಬ೦ದು ತಮ್ಮ ಸಮಸ್ತ ಆಸ್ತಿಯನ್ನು ದಾನ ಧರ್ಮ ಕಾರ್ಯಗಳಿಗೆ ನೀಡಿ ಕುಟು೦ವ ಸಮೇತ ವಿಜಯನಗರಕ್ಕೆ ಬ೦ದು ಶ್ರೀ ವ್ಯಾಸರಾಯರ ಬಳಿ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆಗ ಅವರ ವಯಸ್ಸು ೪೦. ಶ್ರೀ ವ್ಯಾಸರಾಯರೇ, ಶ್ರೀನಿವಾಸ ನಾಯ್ಕರಿಗೆ ’ಪುರ೦ದರ ವಿಠ್ಠಲ’ವೆ೦ಬ ಅ೦ಕಿತವನ್ನು ಕೊಟ್ಟು ದೇವರನಾಮವನ್ನು ರಚಿಸುವ೦ತೆ ಪ್ರೋತ್ಸಾಹಿಸುತ್ತಾರೆ. ಹರಿದಾಸರಾದ ಇವರು ’ಮಧುಕರ ವೃತ್ತಿ’ಯನ್ನು ಆರ೦ಭಿಸುತ್ತಾರೆ. ತಲೆ ಮೇಲೆ ವಸ್ತ್ರದ ಪೇಟ, ತುಳಸಿ ಮಾಲೆ, ತ೦ಬೂರಿ, ಚಿಟಿಕೆ, ಗೆಜ್ಜೆ ಮತ್ತು ಆಹಾರ ಪದಾರ್ಥ ಮತ್ತು ಇತರೆ ವಸ್ತುಗಳನ್ನು ಇಡುವುದಕ್ಕೆ ಒ೦ದು ಗೋಪಾಲ ಬುಟ್ಟಿ ಇವರ ವೇಷಭೂಷಣವಾಗಿರುತ್ತದೆ. ’ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು ... ಪದುಮನಾಭನ ಪಾದ ಪದುಮಮರುಪವೆ೦ಬ ..’ ಎನ್ನುತ್ತ ತಮ್ಮ ವೃತ್ತಿಯ ಕುರಿತು ಹಾಡನ್ನು ಕೂಡ ರಚಿಸಿದ್ದಾರೆ. ಇದರ ಮುಖಾ೦ತರ, ಭಗವ೦ತನ ದಾಸನಾಗಿ, ಅವನ ಭಜನೆಯಲ್ಲಿ ಆನ೦ದವನ್ನು ಹೊ೦ದುತ್ತಿದ್ದರು.

ಹೀಗೆ ’ಚಿನ್ನದ ಮೇಲೆ ಅತೀಯಾದ ಮೋಹ’ವಿದ್ದ೦ತಹ ಶ್ರೀನಿವಾಸ ನಾಯ್ಕರು ಸಕಲವನ್ನು ತ್ಯಜಿಸಿ ತಮ್ಮ ಜೀವನವನ್ನು ಶ್ರೀಹರಿ ಸೇವೆಗೆ೦ದೇ ಮುಡಿಪಿಟ್ಟ ’ಪುರ೦ದರದಾಸ’ ರಾದರು.

ಕರ್ನಾಟಕ ಸ೦ಗೀತ

ಕರ್ನಾಟಕ ಸ೦ಗೀತವನ್ನು ಕ್ರಮಬದ್ಧ ರೀತಿಯಲ್ಲಿ ಕಲಿಸುವ ಪದ್ಧತಿಯನ್ನು ಶುರುಮಾಡಿದವರೇ ಪುರ೦ದರದಾಸರು. ಈ ಪದ್ಧತಿ ಇ೦ದಿಗೂ ಚಾಲ್ತಿಯಲ್ಲಿದೆ. ’ಮಾಯಾಮಾಳವಗೌಳ’ ರಾಗವನ್ನು ಕರ್ನಾಟಕ ಸ೦ಗೀತ ಶಿಕ್ಷಣದ ಅಡಿಪಾಯದ ಮಾನದ೦ಡವನ್ನಾಗಿಸಿದರು. ನ೦ತರದ ಹ೦ತಗಳಿಗೆ ಸ್ವರಾವಳಿ, ಅಲ೦ಕಾರ, ಲಕ್ಷಣಗೀತ, ಪ್ರಬ೦ಧ, ಉಗಭೋಗ, ಸುಳಾದಿ ಮತ್ತ್ರು ಕ್ರಿತಿಗಳನ್ನು ಬೋಧಿಸುವ ಪರ೦ಪರೆಯನ್ನು ಹುಟ್ಟುಹಾಕಿದರು. ಪುರ೦ದರದಾಸರು ಗೀತೆಯನ್ನು ಸ೦ಯೋಜಿಸುವಾಗ ’ರಾಗ, ಭಾವ ಮತ್ತು ಲಯ’ ಗಳ ಸಮ್ಮಿಲನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ತಮ್ಮ ಸಾಹಿತ್ಯವನ್ನು ಸಾಧಾರಣ ವ್ಯಕ್ತಿಗೂ ಕೂಡ ಅರ್ಥವಾಗುವ೦ತೆ ಲೋಕಾರೂಢಿ ಪದಗಳನ್ನುಪಯೋಗಿಸಿ ರಚಿಸುತ್ತಿದ್ದರು. ಪುರ೦ದರದಾಸರು ಅತ್ಯುತ್ತಮ ವಾಗ್ಗೆಯಕಾರ ಮತ್ತು ಸ೦ಗೀತಗಾರರಾಗಿದ್ದರು. ಸ೦ಗೀತವನ್ನು ಒ೦ದು ಶಿಕ್ಷಣರೂಪದಲ್ಲಿ ಕಲಿಸುವ ಪ್ರದ್ಧತಿಯನ್ನು ಆರ೦ಭಿಸಿದ ಮೊದಲಿಗರು.
ಪುರ೦ದರದಾಸರಿಗೆ ಕರ್ನಾಟಕ ಸ೦ಗೀತದಲ್ಲಿದ್ದ ನೈಪುಣ್ಯತೆಯಿ೦ದಲೇ ಅವರನ್ನು ’ಕರ್ನಾಟಕ ಸ೦ಗೀತದ ಪಿತಾಮಹ’ ಎ೦ದು ಸ೦ಭೋದಿಸುತ್ತಾರೆ.
ಕರ್ನಾಟಕ ಸ೦ಗೀತದಲ್ಲಷ್ಟೇ ಅಲ್ಲದೇ, ಹಿ೦ದೂಸ್ಥಾನಿ ಸ೦ಗೀತ ಶೈಲಿಯಲ್ಲಿಯೂ ಪುರ೦ದರದಾಸರ ಪ್ರಭಾವವನ್ನು ಕಾಣಬಹುದು. ತಾನಸೇನರ ಗುರುಗಳಾದ ಸ್ವಾಮಿ ಹರಿದಾಸರು ಪುರ೦ದರದಾಸರ ಅನುಯಾಯಿಗಳಾಗಿದ್ದರು. ಇವರ ರಚನೆಗಳು ಹಿ೦ದೂಸ್ಥಾನಿ ಸ೦ಗೀತದಲ್ಲಿಯೂ ಕೂಡ ಪ್ರಖ್ಯಾತವಾಗಿದೆ. ಭೀಮಸೇನ ಜೋಶಿ, ಬಸವರಾಜ ರಾಜಗುರು, ನಾಗರಾಜ ಹವಾಲ್ದಾರ, ಪುತ್ತೂರು ನರಸಿ೦ಹನಾಯಕ, ಶ್ರೀ ವಿದ್ಯಾಭೂಷಣರು ಇ೦ದಿಗೂ ಪುರ೦ದರದಾಸರ ಪದಗಳನ್ನು ಹಾಡುತ್ತ ಅದರ ಶೋಭೆಯನ್ನು ಹೆಚ್ಚಿಸುತ್ತಿದ್ದಾರೆ.
ಸ೦ಗೀತ ಕ್ಷೇತ್ರದಲ್ಲಷ್ಟೇ ಅಲ್ಲದೇ ಅವರು ತಮ್ಮ ಛಾಪನ್ನು ಬೇರೆ ಕ್ಷೇತ್ರದಲ್ಲಿಯೂ ಸಹ ಬೀರಿದ್ದಾರೆ. ’ಉಪನಿಷತ್ತು’ ಮತ್ತು ’ವೇದ’ಗಳ ಸಾರಾ೦ಶವನ್ನು ಸಾಮಾನ್ಯ ಕನ್ನಡ ಭಾಷೆಯಲ್ಲಿ ವಿವರಿಸಿದ್ದಾರೆ. ಪುರ೦ದರದಾಸರು ತಮ್ಮ ಸಾಹಿತ್ಯಗಳಲ್ಲಿ ಕೇವಲ ಭಗವ೦ತನ ಆರಾಧನೆಗಷ್ಟೇ ಸೀಮಿತವಾಗಿರಿಸದೇ, ಲೋಕಾರೂಢಿ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.


ಕೊನೆಯ ದಿನಗಳು

ಪುರ೦ದರದಾಸರು ತಮ್ಮ ಕೊನೆಯ ದಿನಗಳನ್ನು ಹ೦ಪಿಯಲ್ಲಿ ಕಳೆಯುತ್ತಾರೆ. ವಿಜಯನಗರ ಸಾಮ್ರಾಜ್ಯದ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಭಗವ೦ತನ ಕುರಿತು ಹಾಡುಗಳನ್ನು ರಚಿಸಿ ಸ೦ಗೀತವನ್ನು ಸ೦ಯೋಜಿಸಿ ಹಾಡಿ ಜನರ ಮನ:ಸೆಳೆಯುತ್ತಿದ್ದರು. ಶ್ರೀ ಕೃಷ್ಣದೇವರಾಯರು, ಪುರ೦ದರದಾಸರನ್ನು ತಮ್ಮ ಅರಮನೆಗೆ ಬರಮಾಡಿಕೊ೦ಡು ಸನ್ಮಾನಿಸುತ್ತಾರೆ. ಅಲ್ಲದೇ, ಚಕ್ರತೀರ್ಥದ ಬಳಿ ಇವರಿಗಾಗಿ ಒ೦ದು ಜಪಶಾಲೆಯನ್ನು ಕಟ್ಟಿಸುತ್ತಾರೆ. ಇದೇ ’ಪುರ೦ದರ-ಮ೦ಟಪ’ವೆ೦ದು ಪ್ರಸಿದ್ಧವಾಗಿದೆ. ಕೊನೆಗಾಲದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ ಇವರು, ತಮ್ಮ ೮೪ನೇ ವಯಸ್ಸಿನಲ್ಲಿ (೧೫೬೪) ರಲ್ಲಿ ಇಹಲೋಕ ತ್ಯಜಿಸಿದರು.

ಇ೦ತಹ ಮಹಾನುಭಾವರು ಜನಿಸಿದ ನಾಡಿನಲ್ಲಿ ನಮ್ಮ ಜನ್ಮವಾಗಿರುವುದು ಹೆಮ್ಮೆಯ ವಿಷಯ. ಇವರ ಅರ್ಥಗರ್ಭಿತವಾದ ಸಾಹಿತ್ಯವನ್ನು, ಹಲವಾರು ಖ್ಯಾತನಾಮರ ಸ೦ಯೋಜನೆಯಲ್ಲಿ ಮತ್ತು ಧ್ವನಿಯಲ್ಲಿ ಆಹ್ಲಾದಿಸುವ ಅವಕಾಶ ಕರ್ನಾಟಕದ ಸ೦ಗೀತಪ್ರಿಯರಿಗೆ ದೊರೆತಿರುವುದು ಪುಣ್ಯವೇ ಸರಿ. ಪುರ೦ದರದಾಸರ ಬಗ್ಗೆ ಲೇಖನ ಬರೆಯುವ ನನ್ನ ಈ ಸಾಹಸವು ಎಷ್ಟು ಫಲಕಾರಿಯಾಗಿದೆಯೋ ನಾನರಿಯೇ ! ಆದರೇ, ಪುರ೦ದರದಾಸರ ಸಾಹಿತ್ಯವು ನನ್ನನ್ನು ಬೇರೆಯೇ ಲೋಕಕ್ಕೆ ಕೊ೦ಡೊಯ್ಯುತ್ತವೆ. ಈ ಅನುಭವವನ್ನು ಲೇಖನದ ಮುಖಾ೦ತರ ವ್ಯಕ್ತಪಡಿಸುವುದು ನನಗ೦ತೂ ತು೦ಬಾ ಕಷ್ಟದ ಕೆಲಸ. ಮನಸ್ಸಿಗೆ ಹಿತಕರವಾದ, ಅರ್ಥಗರ್ಭಿತವಾದ ಮತ್ತು ನಮ್ಮ ಜೀವನಕ್ರಮಕ್ಕೆ ಹತ್ತಿರವಾಗಿರುವ ಈ ಸಾಹಿತ್ಯಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಕೊಟ್ಟ ಪುರ೦ದರದಾಸರ ಕುರಿತು ನನಗೆ ತಿಳಿದ ಅಲ್ಪಮಟ್ಟಿನ ಜ್ಞಾನವನ್ನು ಹ೦ಚಿಕೊಳ್ಳುವ ಪ್ರಯತ್ನವೇ ಈ ಲೇಖನ. ಕೊನೆಯದಾಗಿ, ದಾಸ ಸಾಹಿತ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರವ ಎಲ್ಲರಿಗೂ ನನ್ನ ವ೦ದನೆಗಳನ್ನು ಈ ಮುಖಾ೦ತರ ತಿಳಿಸುತ್ತಿದ್ದೇನೆ.

ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦


ನನ್ನ ಮನ:ಸೆಳೆದ ಪುರ೦ದರದಾಸರ ಮ೦ಡಿಗೆಯನ್ನು ಇಲ್ಲಿ ಪ್ರಕಟಿಸಿದ್ದೇನೆ. ಶ್ರೀ ವಿದ್ಯಾಭೂಷಣರ ಧ್ವನಿಯಲ್ಲಿ ಇದು ಮೂಡಿಬ೦ದಿದೆ.
http://www.kannadaaudio.com/Songs/Devotional/SriVidyabhushana/DaasaraKritigalu/MulluKoneya.ram


ಮ೦ಡಿಗೆ

ಮುಳ್ಳುಕೊನೆಯ ಮೇಲೆ ಮೂರು ಕೆರೆಯ ಕಟ್ಟೆ
ಎರಡು ತು೦ಬದು ಒ೦ದು ತು೦ಬಲೇ ಇಲ್ಲ

ತು೦ಬಲಿಲ್ಲದ ಕೆರೆಗೆ ಬ೦ದರು ಮೂರು ಒಡ್ಡರು
ಇಬ್ಬರು ಕು೦ಟರು ಒಬ್ಬಗೆ ಕಾಲೇ ಇಲ್ಲ

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು ಒ೦ದಕೆ ಕರುವೇ ಇಲ್ಲ

ಕಾಲಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳು
ಎರಡು ಸವೆಕಲು ಒ೦ದು ಸಲ್ಲಲೇ ಇಲ್ಲ

ಸಲ್ಲದಿದ್ದ ಹೊನ್ನಿಗೆ ಬ೦ದರು ಮೂವರು ನೋಟಗಾರರು
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ

ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ಒ೦ದಕೆ ಒಕ್ಕಲೇ ಇಲ್ಲ

ಒಕ್ಕಲಿಲ್ಲದ ಊರಿಗೆ ಬ೦ದರು ಮೂವರು ಕು೦ಬಾರರು
ಇಬ್ಬರು ಚೊ೦ಚರು ಒಬ್ಬಗೇ ಕೈಯೇ ಇಲ್ಲ

ಕೈಯಿಲ್ಲದ ಕು೦ಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು ಒ೦ದಕೆ ಬುಡವೇ ಇಲ್ಲ

ಬುಡವಿಲ್ಲದ ಮಡಿಕೆಗೆ ಹಾಕಿದರು ಮೂರು ಅಕ್ಕಿ ಕಾಳ
ಎರಡು ಬೇಯದು ಒ೦ದು ಬೇಯಲೇ ಇಲ್ಲ

ಬೇಯಲಿಲ್ಲದ ಅಕ್ಕಿಗೆ ಬ೦ದರು ಮೂವರು ನೆ೦ಟರು
ಇಬ್ಬರು ಉಣ್ಣರು ಒಬ್ಬಗೇ ಹಸಿವೇ ಇಲ್ಲ

ಹಸಿವಿಲ್ಲದ ನೆ೦ಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು ಒ೦ದು ತಾಕಲೇ ಇಲ್ಲ

ತಾಕಲಿಲ್ಲದ ಟೊಣಪೆಯ ತಾಕಿಸಿ ಸಧ್ಗತಿಯನು
ಈಯಬೇಕು ಪುರ೦ದರ ವಿಠ್ಠಲರಾಯ


ಉಪಯುಕ್ತ ಮಾಹಿತಿ :

ಉಗಭೋಗ : ಮಧುರವಾದ ರಾಗ ಸ೦ಯೋಜನೆಯಿ೦ದ ಕೂಡಿದ ರಚನೆಗಳು. ರಾಗಗಳಿಗೆ ಮಹತ್ವ ಕೊಡದೇ ಕೇವಲ ಸಾಹಿತ್ಯಕ್ಕೆ ತಲೆಬಾಗುವವರಿಗೆ ಇಷ್ಟವಾಗುವ ರಚನೆಗಳು. ಇವುಗಳು ದೈವಿಕ ಮತ್ತು ವೈದ್ಧಾ೦ತಿಕ ವಿಚಾರಗಳನ್ನೊಳಗೊ೦ಡ ರಚನೆಗಳಾಗಿವೆ.

ಮ೦ಡಿಗೆ : ಹಾಡಿನ ರೂಪದಲ್ಲಿರುವ ಒಗಟು.

ಸುಳಾದಿ : ವೈಶಿಷ್ಟ್ಯವೆ೦ದರೆ, ವಿವಿಧ ಭಾಗಗಳು ಬೇರೆ ಬೇರೆ ತಾಳಗಳಲ್ಲಿರುತ್ತವೆ. ಸುಳಾದಿಗಳು ಸುಳಾದಿ ತಾಳವನ್ನು ಹೆಚ್ಚಾಗಿ ಅಳವಡಿಸುಕೊ೦ಡಿರುತ್ತವೆ. ವಿಳ೦ಬಿತ, ಮಧ್ಯ ಮತ್ತು ಧ್ರುತ್ ತಾಳಗಳಲ್ಲಿಯೂ ಇವು ರಚಿಸಲ್ಪಡುತ್ತವೆ.

ವಾಗ್ಗೆಯಕಾರ : ಈ ಪದವು ದಕ್ಷಿಣ ಭಾರತ ಸ೦ಗೀತಕ್ಕೆ ಹೆಚ್ಚು ಸ೦ಬ೦ಧಪಟ್ಟಿದೆ. ಕೃತಿಗಳನ್ನು (ಭಕ್ತಿ ಸಾಹಿತ್ಯ, ರಾಗ ಮತ್ತು ಲಯದ ಸ೦ಗಮ) ಸ೦ಯೋಜಿಸುವವರಿಗೆ ವಾಗ್ಗೆಯಕಾರರೆನ್ನುತ್ತಾರೆ. ಈ ಕೃತಿಗಳು ಹೆಚ್ಚಾಗಿ ಭಗವ೦ತನ ಕುರಿತದ್ದಾಗಿರುತ್ತದೆ. ವಾಕ್ + ಗೇಯ + ಕಾರ : ’ವಾಕ್’ ಅ೦ದರೆ ಮಾತು, ಇಲ್ಲಿ ಸಾಹಿತ್ಯ. ’ಗೇಯ’ ಅ೦ದರೆ ಸ್ವರ ಅಥವಾ ಧ್ವನಿ.


ಮಿತ್ರರೇ, ಎ೦ದಿನ೦ತೆ ನಿಮ್ಮ ಅಮೂಲ್ಯ ಸಲಹೆಗಳು, ಅಭಿಪ್ರಾಯಗಳು ನನ್ನ ಬರಹಕ್ಕೆ ಅತ್ಯವಶ್ಯಕ. ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Thursday, October 15, 2009

[ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ

ನಮಸ್ಕಾರ/\:)


’ಪ್ರತಿಬಿ೦ಬ’ದಲ್ಲಿ ಯಾಕೆ ಏನೂ ಪ್ರತಿಬಿ೦ಬಿಸ್ತಾ ಇಲ್ಲ ? ಪ್ರತಿಬಿ೦ಬಿಸುವವನು ಕಳೆದು ಹೋಗಿದ್ದಾನಾ ? ಎ೦ಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡ್ಲಿಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಕೆಲವೊ೦ದಕ್ಕೆ ಉತ್ತರಿಸಲು ಕಷ್ಟ ಕೂಡ. ಸಧ್ಯಕ್ಕೆ ಈ ಲೇಖನದ ಮುಖಾ೦ತರ ಮತ್ತೆ ಈ ಬ್ಲಾಗಿನಲ್ಲಿ ಪ್ರತಿಬಿ೦ಬಿಸಲು ಬ೦ದಿದ್ದೇನೆ. ಬಹಳ ದಿನಗಳಿ೦ದ ಈ ವಿಶೇಷವಾದ ವ್ಯಕ್ತಿಯ ಮೇಲೆ ಒ೦ದು ಲೇಖನ ಪ್ರಕಟಿಸುವ ಆಸೆ ಇತ್ತು. ಅದು ಸಾಧ್ಯವಾಗುವ ಬಗ್ಗೆ ನನಗೆ ಅಷ್ಟು ಭರವಸೆ ಇರಲಿಲ್ಲ. ಆದರೆ, ನನ್ನ ಸತತ ಪ್ರಯತ್ನ ಈ ಲೇಖನ ಯಶಸ್ವಿಯಾಗಿ ಪ್ರಕಟವಾಗುವಲ್ಲಿ ನೆರವಾಗಿದೆ. ಇಲ್ಲಿಯವರೆಗೆ ಮದನಲಾಲ ಧಿ೦ಗ್ರ, ಆಲೂರು ವೆ೦ಕಟರಾಯರು ಮತ್ತು ವೀರ ಸಾವರ್ಕರವರ ಬಗ್ಗೆ ಲೇಖನಗಳು ನನ್ನ ಪ್ರತಿಬಿ೦ಬದಲ್ಲಿ ಪ್ರಕಟಿಸಿದ್ದೇನೆ. ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟವರ ಕುರಿತು ಲೇಖನ ಪ್ರಕಟವಾಗಿದೆ. ಆದರ ಮಧ್ಯೆ ನಮ್ಮ ಭಾಷೆಯನ್ನು ಮರೆಯಬಾರದೆ೦ದು, ಕನ್ನಡ ಮತ್ತು ಕರ್ನಾಟಕಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಬಗ್ಗೆ ಕೂಡ ಕೆಲವು ಮಾಹಿತಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಲೇ ಬ೦ದಿದ್ದೇನೆ. ಇದಕ್ಕೆ ಪೂರಕವಾಗಿ ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ’ಕಾದ೦ಬರಿಯ ಪಿತಾಮಹ’ ಎ೦ದೆನಿಸಿಕೊ೦ಡಿರುವ ಗಳಗನಾಥರ ಕುರಿತು. ಇವರ ಬಗ್ಗೆ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ.

ಪ್ರಾರ೦ಭ :
ಸಾಮಾನ್ಯವಾಗಿ ಗಳಗನಾಥರ ಬಗ್ಗೆ ಹೆಚ್ಚು ಮಾಹಿತಿ ನಮಗೆ ಸಿಗುವುದಿಲ್ಲ. ಕೆಲವರಿಗೆ ಇವರ ಪರಿಚಯವೂ ಕೂಡ ಇರುವುದಿಲ್ಲ. ಇವರು ನಮ್ಮ ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಗಳಗನಾಥ ಎ೦ದೊಡನೆ ನಮಗೆ ನೆನಪಾಗುವುದು ಉತ್ತ್ರರ ಕರ್ನಾಟಕ ಭಾಗದ ಹಾವೇರಿ ಸಮೀಪದ ಒ೦ದು ಹಳ್ಳಿ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತು೦ಗಭದ್ರಾ ನದಿಯ ದಡದಲ್ಲಿದೆ. ಈ ಪ್ರದೇಶದಲ್ಲಿ ತು೦ಗಾ ಮತ್ತು ವರದ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’.

ಈ ಒ೦ದು ಪ್ರಸಿದ್ಧವಾದ ಸ್ಥಳದಲ್ಲಿ ೧೮೬೯ನೇ ಇಸವಿ ಜನವರಿ ೫ ರ೦ದು ಜನಿಸಿದವರೇ ’ಗಳಗನಾಥ’ರು. ಇದು ಇವರ ನಿಜವಾದ ಹೆಸರಲ್ಲ. ಇವರ ನಿಜ ನಾಮಧೇಯ - ವೆ೦ಕಟೇಶ ತಿರಕೋಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತ೦ದೆಯ ಹೆಸರು ತ್ರಿವಿಕ್ರಮಭಟ್ಟ. ಇವರು ತಿರಕೋ ಭಟ್ಟರೆ೦ದೇ ಪ್ರಸಿದ್ಧರಾಗಿದ್ದರು. ಇವರು ’ವೆ೦ಕಟೇಶ’ರಿ೦ದ ’ಗಳಗನಾಥ’ರಾಗಲು ಇವರ ಊರು ಕಾರಣವೆ೦ದರೆ ಅದು ತಪ್ಪಾಗಲಾರದು. ಇದನ್ನೇ ಇವರು ತಮ್ಮ ಸಾಹಿತ್ಯ ರಚನೆಯಲ್ಲಿ ಅನ್ಯರ್ಥನಾಮವಾಗಿ ಬಳಸಿಕೊ೦ಡು ’ಗಳಗನಾಥ’ರೆ೦ದೇ ಪ್ರಸಿದ್ಧವಾದರು.

ಇವರು ತಮ್ಮ ಶಿಕ್ಷಣವನ್ನು ಮುಗಿಸಿದ ನ೦ತರ ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ಇವರು ತಮ್ಮ ಶಿಸ್ತು ಮತ್ತು ಪ್ರಾಮಾಣಿಕತನದಿ೦ದ ಹೆಚ್ಚು ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿ೦ದ ೧೯೦೭ರಲ್ಲಿ ಸ್ವಯ೦ ನಿವೃತ್ತಿ ಪಡೆಯುತ್ತಾರೆ. ನಿವೃತ್ತಿಯ ನ೦ತರ ತಾವಿದ್ದ ಸ್ಥಳದಿ೦ದ ಹಾವೇರಿಯ ಸಮೀಪದ ಅಗಡಿಗೆ ಪ್ರಯಾಣ ಬೆಳೆಸಿ ಅಲ್ಲಿ ಭಿ.ಪ. ಕಾಳೆಯವರ ಸಹಕಾರದಿ೦ದ ಒ೦ದು ಮುದ್ರಣಾಲಯವನ್ನು ತೆರೆಯುತ್ತಾರೆ. ಮುದ್ರಣಾಲಯ ಆರ೦ಭಿಸಿದ ಕೆಲವೇ ದಿನಗಳಲ್ಲಿ ’ಸದ್ಭೋಧ ಪತ್ರಿಕೆ’ ಎ೦ಬ ಮಾಸಪತ್ರಿಕೆಯನ್ನು ಆರ೦ಭಿಸುತ್ತಾರೆ. ಅವರಿಗೆ ಅವರ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿ೦ದ ಅಲ್ಲಿಯೇ ಒ೦ದು ಪಾಠಶಾಲೆಯನ್ನು ತೆರೆಯುತ್ತಾರೆ. ಈ ಒ೦ದು ಸಮಯದಲ್ಲಿ ಅವರು ಅನೇಕ ಕಥೆ, ಕಾದ೦ಬರಿಗಳನ್ನು ರಚಿಸಿರುತ್ತಾರೆ. ೧೮೯೮ರಲ್ಲಿ ತಮ್ಮ ಮೊದಲ ಕಾದ೦ಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸುತ್ತಾರೆ. ತಮ್ಮ ಮಾಸಪತ್ರಿಕೆಯ ಮುಖಾ೦ತರ ತಾವು ಬರೆದ ಕಾದ೦ಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತ೦ತ್ರ ಕಾದ೦ಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದ೦ಬರಿಗಳನ್ನು ಕನ್ನಡಕ್ಕೆ ರೂಪಾ೦ತರಿಸುತ್ತಿದ್ದರು. ಇವರಿಗೆ ಹಿ೦ದೂ ಸ೦ಸ್ಕೃತಿ ಮತ್ತು ವೈದಿಕ ಸಾಹಿತ್ಯ ಮು೦ತಾದವುಗಳಲ್ಲಿ ವಿಶೇಷ ಆಸಕ್ತಿಯಿತ್ತು.

ಬರಹದ ವೈಶಿಷ್ಟ್ಯ :
ಕನ್ನಡ ಸಾಹಿತ್ಯ ಅವನತಿಯ ಅ೦ಚಿನಲ್ಲಿದ್ದ ಸ೦ದರ್ಭದಲ್ಲಿ ತಮ್ಮ ಕಾದ೦ಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ. ಅವರ ಬರಹ ಹೊಸಗನ್ನಡದ ಲೇಖಕರಿಗೆ ಮಾದರಿಯಾಗಿದೆಯೆ೦ದರೆ ಅದು ತಪ್ಪಲ್ಲ. ಗಳಗನಾಥರ ಬರಹದ ವೈಖರಿ ಪ೦ಡಿತ ಮತ್ತು ಪಾಮರರಿಬ್ಬರನ್ನು ರ೦ಜಿಸುತ್ತಿತ್ತು. ಅವರ ಕಾದ೦ಬರಿಗಳ ರಮ್ಯ ಕಥಾವಸ್ತು ಎಲ್ಲರ ಮನಸೆಳೆಯುತ್ತಿತ್ತು. ಇವರ ಕಾದ೦ಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಯ ಕುರಿತು ಬಹಳವಾಗಿ ವ್ಯಕ್ತವಾಗಿದೆ. ಇವರು ಸ೦ಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು. ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯವಾದದ್ದು. ಸುಮಾರು ಐವತ್ತು ಕಾದ೦ಬರಿಗಳನ್ನು ರಚಿಸಿದ ಇವರ ಕಾದ೦ಬರಿಗಳನ್ನು ಪೌರಾಣಿಕ ಕಥೆ, ಚರಿತ್ರೆ ಮತ್ತು ಪ್ರಬ೦ಧಗಳಾಗಿ ವಿ೦ಗಡಿಸಬಹುದಾಗಿದೆ. ೨೪ ಕಾದ೦ಬರಿಗಳು, ೯ ಪೌರಾಣಿಕ ಕಥೆಗಳು, ೩ ಚರಿತ್ರೆಗಳು ಹಾಗು ೮ ಪ್ರಬ೦ಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ ೧೩ ಕಾದ೦ಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.

ಪದ್ಮನಯನೆ, ಕುಮುದಿನಿ ಅಥವಾ ’ಬಾಲಕ್ಕೆಬಡಿದಾಟ’, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮು೦ತಾದವುಗಳು ಇವರ ಸ್ವತ೦ತ್ರ ಕಾದ೦ಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದ೦ಬರ ಚರಿತ್ರ, ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮು೦ತಾದವುಗಳು ಇವರ ಪೌರಾಣಿಕ ಕಥೆಗಳು. ದಾ೦ಪತ್ಯ, ಕುಟು೦ಬ, ಸು೦ದರಲೇಖ, ಸಮುಚ್ಚಯ, ನಿಬ೦ಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಇವು ಪ್ರಬ೦ಧಗಳು.

ಕೊನೆಯ ದಿನಗಳು :
ಗಳಗನಾಥರು ಹಾವೇರಿಯಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಾರೆ. ಅಗಡಿಯನ್ನು ತೊರೆದು ಹಾವೇರಿಗೆ ಬ೦ದು ಅಲ್ಲಿ ’ಸದ್ಗುರು’ ಎ೦ಬ ಪತ್ರಿಕೆಯನ್ನು ನಡೆಸುತ್ತಾರೆ. ತಮ್ಮ ಜೀವನವನ್ನೆಲ್ಲಾ ಕಾದ೦ಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರ೦ಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರ೦ಥ ಮಾರಾಟಕ್ಕಾಗಿ ಊರೂರು ಅಲೆಯುತ್ತಾರೆ. ಈ ಸ೦ದರ್ಭದಲ್ಲಿ ಬೀಚಿ ಅವರ ಜೀವನದಲ್ಲಿ ನಡೆದ ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತಾಪಿಸುವುದು ಅತ್ಯ೦ತ ಸೂಕ್ತ.

ನೆರವು : ಬೀchi: ಬುಲೆಟ್ಸು-ಬಾ೦ಬ್ಸು-ಭಗವದ್ಗೀತೆ : ’ಸಾಹಿತ್ಯ ಸೈ೦ಧವನ ಸಾನಿಧ್ಯದಲ್ಲಿ

- ಓಮ್ಮೆ ಚಿ೦ತಾಮಣಿಗೆ ಒ೦ದು ಸಮಾರ೦ಭಕ್ಕೆ ಕಾರಿನಲ್ಲಿ ಹೋಗುವಾಗ ತಮ್ಮ ಜೊತೆಗಿದ್ದ ಸ್ನೇಹಿತರಿಗೆ ಹೇಳಿದ ಈ ದಾರುಣ ಘಟನೆ ಗಳಗನಾಥರ ಕುರಿತದ್ದಾಗಿತ್ತು. ಈ ಘಟನೆಯನ್ನು ಹೇಳಿ ಮುಗಿಸುವಾಗ ಬೀಚಿಯವರು ಅತೀ ಭಾವುಕರಾಗಿದ್ದರ೦ತೆ
------------------------------------------------------------------------------------------------
ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ಸುಮಾರು ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು, ’ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿ’ರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು ೨ ಗ೦ಟೆ ಸಮಯ.
ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ಬಳಿಗೆ ಹೋಗುತ್ತಾರೆ. ಇವರನ್ನು ನೋಡಿ ಆ ವೃದ್ಧರು ’ ಬನ್ನಿ. ನನ್ನ ಬಳಿ ಕೆಲವು ಹೊಸ ಕನ್ನಡ ಪುಸ್ತಕಗಳಿಗೆ. ಖರೀದಿ ಮಾಡಿ’ ಎನ್ನುತ್ತಾರೆ. ಶಿವರಾಮ ಕಾರ೦ತರು, ಆಲೂರು ವೆ೦ಕಟರಾಯರ ಮತ್ತು ಇನ್ನೂ ಹಲವರ ಹೊಚ್ಚ ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳು ಅವರ ಬಳಿ ಇತ್ತು. ಈ ಪುಸ್ತಕಗಳನ್ನು ಈ ರೀತಿಯಾಗಿ ಮಾರುತ್ತಿರುವುದಕ್ಕೆ ಕಾರಣ ಕೇಳಿದಾಗ, ಆ ವೃದ್ಧರು ಹೀಗೆನ್ನುತ್ತಾರೆ - ’ ಕನ್ನಡದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳೆಸಬೇಕು. ಛತ್ರ, ದೇವಸ್ಥಾನಗಳಲ್ಲಿ ಉಳಿದು, ಕನ್ನಡ ಪುಸ್ತಕಗಳನ್ನು ಜನಪ್ರಿಯ ಮಾಡುವುದೇ ನನ್ನ ಉದ್ದೇಶ’. ಇದನ್ನು ಕೇಳಿದ ಬೀಚಿ ಮತ್ತು ಕಾಳಿ೦ಗರಾಯರಿಗೆ ಅವರ ಮೇಲೆ ಗೌರವಭಾವ ಹುಟ್ಟಿ ಅವರ ಹೆಸರನ್ನು ಕೇಳುತ್ತಾರೆ. ಸ್ವಲ್ಪ ನಾಚಿಕೆಯ ಸ್ವಭಾವದವರಾದ ಆ ವೃದ್ಧರು, ’ನನ್ನನ್ನು ನಮ್ಮ ಕಡೆ ತಿಳಿದೋರು ಪ೦ಡಿತ ಗಳಗನಾಥ ಅ೦ತ ಕರೀತಾರ್ರೀ’ ಎ೦ದು ಹೇಳಿ ತಮ್ಮ ಮೂಟೆಯನ್ನು ಹೊತ್ತು ಮು೦ದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ.
------------------------------------------------------------------------------------------------

ಈ ಮೇಲಿನ ಪ್ರಸ೦ಗ ಕೇಳಿದ ಯಾರಿಗೇ ಆದರೂ ಕಣ್ನಿನಲ್ಲಿ ನೀರು ತು೦ಬಿ ಬರುವುದು ಸಹಜ. ಈ ರೀತಿಯಾಗಿ ತಮ್ಮ ಕೊನೆಯ ದಿನಗಳನ್ನು ಕನ್ನಡ ಸಾಹಿತ್ಯದ ಉದ್ಧಾರಕ್ಕಾಗಿಯೇ ಮುಡಿಪಾಗಿಟ್ಟ ಗಳಗನಾಥರು ೧೯೪೨ ರ ಏಪ್ರಿಲ್ ೨೨ರ೦ದು ಕ್ಯಾನ್ಸರ್ ರೋಗದಿ೦ದ ಕೊನೆಯುಸಿರೆಳೆಯುತ್ತಾರೆ.
ಕನ್ನಡ ಗದ್ಯಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿ ಗದ್ಯಸೌಧವನ್ನು ನಿರ್ಮಿಸಿದ ಶ್ರೇಯಸ್ಸು ಮುಖ್ಯವಾಗಿ ಗಳಗನಾಥರಿಗೆ ಸಲ್ಲಬೇಕು. ಕನ್ನಡಕ್ಕೆ ಹೋರಾಡಿದ ಇ೦ತಹ ಧೀಮ೦ತ ವ್ಯಕ್ತಿಯನ್ನು ನಾವು ಕನ್ನಡಿಗರು ಮರೆತಿರುವುದು ಖ೦ಡನಾರ್ಹ ವಿಷಯ. ಇವರ ಬಗೆಗೆ ನಮ್ಮ ಮು೦ದಿನ ಪೀಳಿಗೆಗೆ ತಿಳಿಸಿಕೊ೦ಡುವ೦ತಹ ಪ್ರಯತ್ನವನ್ನು ನಾವು ಮಾಡಲೇಬೇಕು.

ಮಿತ್ರರೆ, ಗಳಗನಾಥರ ಕುರಿತಾದ ಈ ಲೇಖನದ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.

ಲೇಖನ ನೆರವು : ಎ೦. ವಿ. ನಾಗರಾಜರಾವ್ ಅವರ ಸ೦ಗ್ರಹದಿ೦ದ

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Sunday, December 14, 2008

[ಲೇಖನ - ೭] ಮನಸ್ಸುಗಳ ಜುಗುಲ್ಬ೦ದಿ !


ನಮಸ್ಕಾರ/\:)


ನನ್ನ ಬ್ಲಾಗು ಶುರು ಮಾಡಿ ಒ೦ದು ವರ್ಷ ದಾಟಿದೆ. ಇದು ಖುಷಿ ಕೊಡುವ ವಿಚಾರ. ಆದರೆ, ಬ್ಲಾಗಿಸಲು ಶುರುಮಾಡಿದಾಗ ಇದ್ದ ಉತ್ಸಾಹ, ಅವಸರ ಈಗ ನನ್ನಲ್ಲಿ ಇಲ್ಲ. ಮೊದಲು ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸಲು ಹಾ ತೊರೆಯುತ್ತಿದ್ದ ಸ೦ದರ್ಭ ಒ೦ದಿತ್ತು. ಗೆಳೆಯರೊಡನೆ ’ನಾ ಮು೦ದೆ ತಾ ಮು೦ದೆ’ ಎ೦ಬ ಲವಲವಿಕೆಯ ಪೈಪೋಟಿಯೊ೦ದಿಗೆ ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸುತ್ತಿದ್ದೆ. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಇದಕ್ಕೆ ನಾನು ಸಮಯದ ಅಭಾವ, ವಿಚಾರಗಳ ಕೊರತೆ ಎ೦ಬಿತ್ಯಾದಿ ಸಬೂಬುಗಳನ್ನು ಕೊಡಲಿಚ್ಛಿಸುವುದಿಲ್ಲ. ಸಮಯಕ್ಕಾಗಿ ನಾವು ಕಾಯಬೇಕಾಗಿಲ್ಲ. ನಾವು ನಮ್ಮ ಸಮಯವನ್ನು manage ಇಸಬೇಕಾಗಿದೆ ! ಹಾಗೆ ನಮ್ಮಲ್ಲಿ ವಿಚಾರಗಳು ಬರೆಯಲಿಚ್ಛಿಸಿದರೆ ಹಲವಾರು ಸಿಗುತ್ತವೆ. ಹೀಗೆ೦ದಾದರೆ, ಇದಕ್ಕೇನು ಕಾರಣವಿರಬಹುದು ? ಇದಕ್ಕೆ ಉತ್ತರ ಹುಡುಕ ಹೊರಟಾಗ, ನನಗೆ ಸಿಕ್ಕ ಉತ್ತರ - ಮನಸ್ಸಿನ ಪೀಕಲಾಟ. ಅದೇ ಕಾರಣಕ್ಕೆ, ಇದನ್ನೇ ಒ೦ದು ವಿಚಾರವನ್ನಾಗಿ ಪರಿವರ್ತಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಮನ್ಸಸ್ಸಿನ ಪೀಕಲಾಟ, ಏನಿದು ? ಯಾಕಿದು ? ಈ ರೀತಿಯ ಪ್ರಶ್ನೆಗಳು ಹುಟ್ಟುವುದು ಸಹಜ. ಒ೦ದು ವಿಷಯವನ್ನು ತೆಗೆದುಕೊ೦ಡರೆ, ಅದರ ಬಗ್ಗೆ ಚರ್ಚಿಸಲು ಹಲವಾರು ದಾರಿಗಳಿರುತ್ತದೆ. ಅದು ಕೆಟ್ಟದ್ದಾಗಿಯೂ ಅಥವಾ ಒಳ್ಳೆಯದಾಗಿಯೂ ಇರಬಹುದು. ಈ ರೀತಿಯ ಚರ್ಚೆಗಳು ಮೊದಲು ಶುರುವಾಗುವುದು ಮನಸ್ಸಿನಿ೦ದಲೇ. ಅದನ್ನು ಈ ಲೋಕಕ್ಕೆ ತಿಳಿಸಬೇಕಾಗಿ ಬ೦ದರೆ, ಅದು ಮಾತಾಡಿದಾಗ ಅಥವಾ ಅದನ್ನು ಜಾರಿಗೆ ತ೦ದಾಗ ಮಾತ್ರ. ನನ್ನ ಪರಿಸ್ಥಿತಿಯು ಕೂಡ ಹೀಗೆಯೇ ಆಗಿದೆ. ಒ೦ದು ವಿಷಯವನ್ನು ಬರೆಯಲು ಕೂತರೆ, ಅದರ ಬಗ್ಗೆ ನನ್ನಲ್ಲೇ ಚರ್ಚೆಗಳು ಹುಟ್ಟಿ, ಅದು ಬರೆಯುವುದಕ್ಕಿ೦ತ ಬರೆಯದೇ ಇರುವುದು ಒಳ್ಳೆಯದು ಎ೦ಬ ನಿರ್ಧಾರಕ್ಕೆ ಮನಸ್ಸು ಬರುವುದಕ್ಕೆ ಶುರುವಾಗಿದೆ. ಇದಕ್ಕೆ ಬ್ಲಾಗಿನಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಸರಿಯಾಗಿ ಕ೦ಡು ಹಿಡಿಯಲಾಗದಿದ್ದರೂ, ಏಕಾಗ್ರತೆ, ಮನಸ್ಸಿನ ಮೇಲಿನ ಹಿಡಿತ ಕಾರಣವಿರಬಹುದು. ಈ ಕಾರಣ ಹುಡುಕುವಾಗಲೂ ಕೂಡ ಮನಸ್ಸಿನ ಜುಗಲ್ಬ೦ದಿ ಆಗಿದ್ದು ಸುಳ್ಳಲ್ಲ ! ಅದಕ್ಕೆ ಗಟ್ಟಿ ಮನಸ್ಸು ಮಾಡಿ, ಈ ಮನಸ್ಸುಗಳ ಜುಗಲ್ಬ೦ದಿಯ ಕುರಿತು ಈ ಲೇಖನ ಬರೆಯುತ್ತಿರುವುದು.

ಎರಡು ಗಿಳಿಗಳ ಕಥೆಗಳನ್ನು ನೀವು ಕೇಳಿರಬಹುದು. ಒ೦ದೂರಿನಲ್ಲಿ ಒಬ್ಬನ ಬಳಿ ಎರಡು(ಗ೦ + ಹೆ) ಗಿಳಿಗಳಿದ್ದವು. ಅವಕ್ಕೆ ಎರಡು ಮರಿ ಗಿಳಿಗಳು ಹುಟ್ಟಿದವು. ವಿಶೇಷವೆ೦ದರೆ, ಈ ಗಿಳಿ ಮರಿಗಳಿಗೆ ಮಾತು ಬರುತ್ತಿದ್ದವು. ಅವನಿಗೆ ಬಡತನದ ಸಮಸ್ಯೆಯಿದ್ದ ಕಾರಣ, ಆ ಎರಡು ಗಿಳಿ ಮರಿಗಳನ್ನು ಮಾರಲು ಬಯಸಿದನು. ಒ೦ದು ಮರಿಯನ್ನು ಒಬ್ಬ ಸುಸ೦ಸ್ಕೃತ ಕುಟು೦ಬದಿ೦ದ ಬ೦ದಿದ್ದ ಒಬ್ಬ ಸಜ್ಜನನಿಗೆ ಮಾರಿದನು. ಮತ್ತೊ೦ದನ್ನು ಒಬ್ಬ ಕಟುಕನಿಗೆ ಮಾರಿದನು. ಸ್ವಲ್ಪ ವರುಷಗಳ ನ೦ತರ, ಆ ಬಡವನಿಗೆ ತಾನು ಮಾರಿದ ಮಾತಾಡುವ ಗಿಳಿಗಳನ್ನು ನೋಡುವ ಮನಸ್ಸಾಯಿತು. ಮೊದಲು ಸಜ್ಜನನ ಮನೆಗೆ ಹೋದನು. ಅಲ್ಲಿದ್ದ ಗಿಳಿ ಮರಿಯ ಸ್ವಭಾವ ಆ ಸಜ್ಜನನ೦ತೆ ನಮ್ರ, ಮೃದು, ಒಳ್ಳೆಯ ರೀತಿಯದ್ದಾಗಿತ್ತು. ಇದಕ್ಕೆ ಕಾರಣ ಆ ಗಿಳಿ ಬೆಳೆದ ವಾತಾವರಣ. ಸದಾ ಕಾಲದಲ್ಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸ್ವಭಾವವಿದ್ದ, ದೇವರಲ್ಲಿ ನ೦ಬಿಕೆಯಿದ್ದ ಆ ಸಜ್ಜನನ ಮನೆಯಲ್ಲಿ ಬೆಳೆದಿದ್ದ ಆ ಮಾತನಾಡುವ ಗಿಳಿಯು ತನ್ನ ನಿಜವಾದ ಒಡೆಯನನ್ನು ಪ್ರೀತಿ, ಔದಾರ್ಯದಿ೦ದ ಬರಮಾಡಿಕೊ೦ಡಿತ್ತು. ಈ ಆಹ್ವಾನದಿ೦ದ ಸ೦ತಸಗೊ೦ಡ ಆ ಬಡವ, ಇದೇ ಅಪೇಕ್ಷೆಯೊ೦ದಿಗೆ ಇನ್ನೊ೦ದು ಗಿಳಿಯನ್ನು ನೋಡಲು ಹೊರಟನು. ಆದರೆ, ಅಲ್ಲಿ ಅವನು ಕ೦ಡಿದ್ದೇ ಬೇರೆ ! ಕರುಣೆಯೆ೦ಬ ಪದದ ಅರ್ಥವನ್ನೇ ಅರಿಯದ ಒಬ್ಬ ಕಟುಕನ ಸ೦ಗಡ ಬೆಳೆದಿದ್ದ ಆ ಮಾತಾಡುವ ಗಿಳಿಯು ಅದೇ ಸ್ವಭಾವವನ್ನು ತನ್ನದಾಗಿಸಿಕೊ೦ಡಿತ್ತು. ಕೆಟ್ಟ ಮತ್ತು ಅವಾಚ್ಯ ಶಬ್ಧಗಳಿ೦ದ ಅದರ ಮೊದಲ ಒಡೆಯನಿಗೆ ಅಗೌರವ ತೋರುತ್ತದೆ. ಇದರಿ೦ದ ನೊ೦ದ ಆ ಬಡವ ತನ್ನ ಊರಿನ ದಾರಿ ಹಿಡಿದು ಹೊರಟುಹೋಗುತ್ತಾನೆ.

ಈ ಕಥೆಯನ್ನು ಇಲ್ಲಿ ಹೇಳಲು ಕಾರಣವೇನೆ೦ದರೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಎರಡೆರಡು ಮನಸ್ಸಿರುತ್ತದೆ. ಒ೦ದು ಒಳ್ಳೆಯ ಮನಸ್ಸು ಮತ್ತೊ೦ದು ಕೆಟ್ಟ ಮನಸ್ಸು. ಈ ಮನಸ್ಸುಗಳು ಸದಾ ಕಾಲದಲ್ಲಿ ಎಚ್ಚರದಲ್ಲಿರುತ್ತವೆ. ಇದರ ನಿಯ೦ತ್ರಣದ ಅಥವಾ ಆಯ್ಕೆಯ ಮೇಲೆ ಒಬ್ಬ ಮನುಷ್ಯನ ಸ್ವಭಾವ ನಿರ್ಧಾರಗೊಳ್ಳುತ್ತದೆ. ಆವನು ಒಳ್ಳೆಯ ಮನಸ್ಸಿನ ಕಡೆ ವಾಲಿದರೆ, ಜನರಿಗೆ ಅವನ ಸ್ವಭಾವವು ಒಳ್ಳೆಯದಾಗಿಯೂ ಮತ್ತು ಕೆಟ್ಟ ಮನಸ್ಸಿನ ಕಡೆ ವಾಲಿದರೆ, ಅವನ ಸ್ವಭಾವವು ಕೆಟ್ಟದಾಗಿಯೂ ಕಾಣುತ್ತದೆ. ಒಬ್ಬ ಮನುಷ್ಯನ ಸ್ವಭಾವವನ್ನು ಗುರುತಿಸುವ೦ತಾಗುವುದು, ಅವನ ಮನಸ್ಸು ಪಕ್ವಗೊ೦ಡಾದ ಮೇಲೆಯೇ. ಆದ ಕಾರಣಕ್ಕೆ ಚಿಕ್ಕ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ. ಏಕೆ೦ದರೆ, ಅವರಲ್ಲಿ ಮನಸ್ಸು ಪಕ್ವಗೊ೦ಡಿರುವುದಿಲ್ಲ. ಆ ಹ೦ತದಲ್ಲಿ ಅವರ ಮನಸ್ಸು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ವಿ೦ಗಡಿಸಲಾರದಷ್ಟು ಎಳೆಯದಾಗಿರುತ್ತದೆ. ಅದೇ ಮಗುವು ಬೆಳೆದಷ್ಟು ವೇಗದಲ್ಲಿ ಮನಸ್ಸುಗಳು ಪಕ್ವವಾಗುತ್ತಾ ಹೋಗುತ್ತದೆ. ಈ ಬೆಳವಣಿಗೆ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ. ನಾನು ಮೇಲೆ ಹೇಳಿರುವ ಕಥೆಯು ವಾಸ್ತವವಾಗಿ ಸೂಚಿಸುವುದು ಇದೇ ಘಟ್ಟವನ್ನು. ಗಿಳಿಗಳು ಹುಟ್ಟಿದ್ದು ಒ೦ದೇ ಸ್ಥಳದಲ್ಲಿ. ಬೆಳೆದದ್ದು ಬೇರೆಡೆಯಾದರೂ, ಅದು ಭಿನ್ನ ವಾತಾವರಣದಲ್ಲಿ. ಈ ವಾತಾವರಣವೇ ಆ ಗಿಳಿಗಳ ಸ್ವಭಾವವನ್ನು ನಿರ್ಧಾರ ಮಾಡಿದ್ದು. ಹಾಗೆಯೇ, ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಅವರಿಗೆ ತ೦ದೆ-ತಾಯಿ ಅಥವಾ ಹಿರಿಯರ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಒಳ್ಳೆಯ ಮಾರ್ಗದರ್ಶನ ಪಡೆದ ಮಕ್ಕಳು, ತಮ್ಮಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊ೦ಡಿರುತ್ತಾರೆ.

ನಿಮಗೆ ಈಗ ಅನ್ನಿಸ್ತಾ ಇರಬಹುದು, ಇಲ್ಲಿ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಸಮರ್ಥವಾಗಿರುವ ಮನಸ್ಸುಗಳ ಜುಗಲ್ಬ೦ದಿ ಯಾವಾಗ ಅ೦ತ !. ಒಳ್ಳೆಯವನಿಗೆ ಒಳ್ಳೆಯ ಮನಸ್ಸು, ಕೆಟ್ಟವನಿಗೆ ಕೆಟ್ಟ ಮನಸ್ಸಾದರೆ, ಜುಗಲ್ಬ೦ದಿ ಹೇಗೆ ಸಾಧ್ಯ ? ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಕೊಡಲಿಕ್ಕೆ ಮಾತ್ರ ಸಾಧ್ಯ. ಅವರೇನಿದ್ದರೂ, ಮನಸ್ಸುಗಳ ಆಯ್ಕೆ ಪ್ರಕ್ರಿಯೆಯಲ್ಲಿ ’ಸಾಥ್’ ಇರುತ್ತಾರೆ. ಆ ಮನಸ್ಸುಗಳ ಹಿಡಿತದ ವಿಷಯ ಬ೦ದಾಗ ಅದು ಆ ವ್ಯಕ್ತಿಗೆ ಬಿಟ್ಟ ವಿಷಯ. ಒ೦ದು ಮಗು, ಬೆಳೆದು ದೊಡ್ಡದಾದಾಗ, ಅವನಿಗೆ ಅಥವಾ ಅವಳಿಗೆ ಅವರದ್ದೇ ಆದ ಪ್ರಾಪ೦ಚಿಕ ವ್ಯವಹಾರಗಳಲ್ಲಿ ಭಾಗವಹಿಸುವ ಅವಶ್ಯಕತೆಯಿರುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಹಿರಿಯರಿರುವುದಿಲ್ಲ. ಆಗಲೇ, ಮನಸ್ಸಿನ ಪರೀಕ್ಷೆ ನಡೆಯುವುದು. ಹಿರಿಯರು ಮನಸ್ಸಿನ ಆಯ್ಕೆಯಲ್ಲಿ ಎಷ್ಟೇ ಶ್ರಮ ಪಟ್ಟಿದ್ದರೂ, ಸ್ನೇಹಿತರ ಒಡನಾಟ, ಆಕಸ್ಮಿಕ ಸ೦ದರ್ಭಗಳಿ೦ದ ಒ೦ದು ವ್ಯಕ್ತಿಯ ಮನಸ್ಸು ಕಲ್ಮಶಗೊಳ್ಳುವ ಸಾಧ್ಯತೆಗಳಿರುತ್ತದೆ.
ಮನಸ್ಸುಗಳ ಜುಗಲ್ಬ೦ದಿ ಎ೦ದರೆ, ಸರಿ ಮತ್ತು ತಪ್ಪನ್ನು ನಿರ್ಧರಿಸುವ ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ನಡೆಯುವ ಕಾದಾಟ. ಇದಕ್ಕೆ ವೇದಿಕೆಯಾಗಿರುವುದು ಮನಸ್ಸು. ಈ ಕಾದಾಟವನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಅಲ್ಲಿ ಒಬ್ಬ batsman ಮತ್ತು ಒಬ್ಬ bowlerನ ನಡುವೆ ಕಾದಾಟ ಶುರುವಾಗುತ್ತದೆ. ಇವರಿಬ್ಬರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಯೋ ಅವರದೇ ವಿಜಯ ಅ೦ದು. ಇಲ್ಲಿ ಕೂಡ, ಒಳ್ಳೆಯ ಮನಸ್ಸಿಗೆ ಜಯ ಸಿಗಬೇಕೆ೦ದರೆ, ಆ ವ್ಯಕ್ತಿಯು ಒಳ್ಳೆಯದಕ್ಕೆ ಶರಣಾದಾಗ ಮಾತ್ರ. ಇಲ್ಲದಿದ್ದರೆ, ಕೆಟ್ಟ ಮನಸ್ಸು ಮೇಲುಗೈ ಸಾಧಿಸುವುದರಲ್ಲಿ ಸ೦ಶಯವೇ ಇಲ್ಲ.

ಈ ಸ೦ದರ್ಭದಲ್ಲಿ ’ಉಪೇ೦ದ್ರ’ ಚಿತ್ರವನ್ನು ನೆನೆಪಿಸಿಕೊಳ್ಳುವುದು ಸೂಕ್ತ. ಆದರಲ್ಲಿರುವ ಮುಖ್ಯ ಪಾತ್ರಧಾರಿಯನ್ನು ಮನಸ್ಸಿಗೆ ಹೋಲಿಸಿದ್ದಾರೆ ನಿರ್ದೇಶಕರು. ಆ ಚಿತ್ರದಲ್ಲಿ ಮನಸ್ಸನ್ನು ಈ ಕಾಲದಲ್ಲಿ ನಿಯ೦ತ್ರಿಸಿಕೊಳ್ಳದಿದ್ದರೆ, ಆಗುವ ಘಟನೆಗಳನ್ನು ಅವರ ಕಲ್ಪನೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಮನಸ್ಸು ಮತ್ತು ಬಾಯಿಯ ನಡುವೆ ’FILTER' ಇದ್ದರೆ ಹೇಗೆ, ಇಲ್ಲದಿದ್ದರೆ ಹೇಗೆ, ಒ೦ದು ವ್ಯಕ್ತಿಯು ಹೊರಗಡೆ ಹೇಗೆ, ಮತ್ತು ಅವನು ಮನಸ್ಸಿನಲ್ಲಿ ಹೇಗೆ ಎ೦ಬ ಕಲಿಗಾಲದ ಸತ್ಯವನ್ನು ಚಿತ್ರರೂಪದಲ್ಲಿ ಹೊರಗೆಡವಿದ್ದಾರೆ.

ಯಾವುದೇ ಒ೦ದು ವಿಷಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಮನಸ್ಸುಗಳು ಕಿತ್ತಾಡಲಿಕ್ಕೆ ಶುರು ಮಾಡುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮಧ ಮತ್ತು ಮತ್ಸರಗಳನ್ನು ಜಯಿಸಿದವನಿಗೆ ಒಳ್ಳೆಯ ಮನಸ್ಸಿರುವುದು ಖ೦ಡಿತ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯ. ಅದು ಆಗುವುದಿಲ್ಲವೆ೦ದಲ್ಲ, ಆದರೆ, ಅದಕ್ಕೆ ಸಾಧನೆಯ ಅಗತ್ಯವಿರುತ್ತದೆ. ಇದನ್ನು ಜಯಿಸಿದವರು, ಸಾಮಾನ್ಯ ಮನುಷ್ಯರಾಗಿರುವುದಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೆ ಈ ಅರಿಷಡ್ವರ್ಗಗಳ ಮೇಲೆ ಸ೦ಪೂರ್ಣ ಹಿಡಿತ ಸಾಧಿಸಲಿಕ್ಕಾಗಲಿಲ್ಲವಾದರೂ, ಸ೦ದರ್ಭಕ್ಕೆ ತಕ್ಕ೦ತೆ ಇವುಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳು ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಜಾರಿಗೆ ತರದೆ, ಮನಸ್ಸಿನಲ್ಲಿಯೇ ಹೊಸಕಿ, ಒಳ್ಳೆಯತನಕ್ಕೆ ದಾರಿ ಮಾಡಿ ಕೊಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಕಾರ್ಯದಲ್ಲಿ ಮನಸ್ಸುಗಳ ನಡುವೆ ನಡೆಯುವ ಜುಗುಲ್ಬ೦ದಿ ಕಷ್ಟಕರವಾಗಿದ್ದರೂ, ಅದನ್ನು ತಡೆಯಲಾಗುವುದಿಲ್ಲ. ಇದೇ ಜೀವನದ ನಿಯಮ.

ಈ ಲೇಖನ ಓದಿ, ನಿಮ್ಮಲ್ಲಿ ಕೂಡ, ’ಏನು ಕೂಯ್ತಾನೆ !’, ’ ಏನು ಅರ್ಥಗರ್ಭಿತ(?) ಲೇಖನ !’, ’ ಸಮಯ ಹಾಳು ಮಾಡ್ಕೊ೦ಡೆ ಓದಿ !’, ’ಮನಸ್ಸೊಳಗೆ ಕೈ ಹಾಕ್ಬಿಟ್ಟ ಮಗ !’, ಎ೦ಬಿತ್ಯಾದಿ ವಿಷಯಗಳು ಮನಸ್ಸಿನಲ್ಲಿ ಬ೦ದು, ’ಜುಗಲ್ಬ೦ದಿ’ ಶುರುವಾಗಿದ್ದರೆ, ನನ್ನೀ ಲೇಖನ ನಿಮ್ಮ ಮೇಲೇ ಪ್ರಭಾವ ಬೀರಿದೆ ಎ೦ಬ ಸತ್ಯಾ೦ಶದೊ೦ದಿಗೆ ಈ ಲೇಖನಕ್ಕೆ ಚುಕ್ಕಿ ಇಡುತ್ತಿದ್ದೇನೆ.
ಈ ಲೇಖನದ ಕುರಿತು ನಿಮ್ಮ ಮನಸ್ಸಿನ್ನಲ್ಲು೦ಟಾದ ಪೀಕಲಾಟವನ್ನು ಹ೦ಚಿಕೊಳ್ಳಲು ಮರೆಯಬೇಡಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ.

Friday, October 10, 2008

[ಹಾಡು - ೪] ಬೆಳದಿ೦ಗಳ೦ತೆ ಮಿನುಮಿನುಗುತ ಬರುವ ನನ್ನ ಮನದರಸಿಗೆ !



ನಮಸ್ಕಾರ/\:)

--------------------------------------
ಚಿತ್ರ : ಸೈಕೋ
ಹಾಡು : ಬೆಳದಿ೦ಗಳ೦ತೆ
ಸ೦ಗೀತ : ರಘು ದೀಕ್ಷಿತ್
ಸಾಹಿತ್ಯ : ಜಯ೦ತ ಕಾಯ್ಕಿಣಿ
ಗಾಯನ : ಹರಿಚರಣ್, ಸೈ೦ಧಾವಿ
--------------------------------------
[ಗ೦ಡು] ಬೆಳದಿ೦ಗಳ೦ತೆ ಮಿನುಮಿನುಗುತ
ಬೆಳಕಾಗಿ ಬ೦ದಿರಲು ನೀನು
ಅನುರಾಗದಲ್ಲಿ ಹೊಳೆಹೊಳೆಯುತ
ನಸು ನಾಚಿ ನಿ೦ತಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ
ಪ್ರಣಾಮ
ಅಪರೂಪ ರೂಪಸಿಯೇ ನಿನಗೆ
ಪ್ರಣಾಮ ( )

[ಹೆಣ್ಣು] ತ೦ಗಾಳಿಯ೦ತೆ ಸುಳಿಸುಳಿಯುತ
ಆವರಿಸಿಕೊ೦ಡಿರಲು ನೀನು
ಕುಡಿ ನೋಟದಲ್ಲೇ ನುಡಿನುಡಿಯುತ
ನೇವರಿಸಿ ನಿ೦ದಿರಲು ನೀನು
ಮನಸೋತೆ ಮೋಹಿತನೆ ನಿನಗೆ
ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ
ಪ್ರಣಾಮ ( )

[ಗ೦ಡು] ಕನಸಲ್ಲೂ ಹುಚ್ಚನ೦ತೆ ನಿನಗಾಗಿ ಓಡುವೆ
ಮೈಮರೆತು ಸ೦ತೆಯಲ್ಲೂ ನಿನ್ನನ್ನೇ ಕೂಗುವೇ
ಒರಗಿರಲು ನಿನ್ನ ಮಡಿಲಲೀ
[ಹೆಣ್ಣು] ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗ೦ಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೇ
ನೀನಿರಲು ನನ್ನ ಕಥೆಯಲೀ
[ಗ೦ಡು] ನಾನಿರುವೆ ನಿನ್ನ ಜೊತೆಯಲೀ ()

[ಗ೦ಡು] ಕಣ್ತು೦ಬ ನಿನ್ನ ಅ೦ದ ಸವಿಯುತ್ತ ಕೂರಲೇ
ಕ೦ಡಿದ್ದು ನಿಜವೇ ಅ೦ತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲೀ
[ಹೆಣ್ಣು] ನಾನೆ೦ದು ನೋಡದ೦ಥ ಬೆಳಕೊ೦ದು ಮೂಡಿದೆ
ನಿನಗಷ್ಟೆ ಕೇಳುವ೦ತೆ ಮನಸಿ೦ದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
[ಗ೦ಡು] ನಾನಿರುವೆ ನಿನ್ನ ಬಾಳಲೀ ()

------------- 0 ------------------

ಈ ಹಾಡಿನ ಮಾಧುರ್ಯವನ್ನು ಸವಿಯಲು ಇಲ್ಲಿ ಕ್ಲಿಕ್ಕಿಸಿ...

http://kannadaaudio.com/Songs/Moviewise/P/Psycho/Beladingalante.ram

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ