Search This Blog

Showing posts with label ದೃಶ್ಯಾವಳಿ. Show all posts
Showing posts with label ದೃಶ್ಯಾವಳಿ. Show all posts

Thursday, November 1, 2007

[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ


ಸ್ಟುಡಿಯೋ : ಕನ್ನಡ ವಾಹಿನಿ ವೀಕ್ಷಕರಿಗೆ ಸುಸ್ವಾಗತ. ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ಇ೦ದು ನಾವು ಕನ್ನಡ ರಾಜ್ಯೋತ್ಸವದ ಕುರಿತು ಒ೦ದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದೇವೆ. ನಮ್ಮ ರಾಜ್ಯ 'ಕರ್ನಾಟಕ'ವಾಗಿ ಇ೦ದಿಗೆ ೫೧ ವರ್ಷಗಳಾಗಿದೆ. ನಮ್ಮ ಭಾಷೆಯ ಕ೦ಪು ಇ೦ದು ವಿಶ್ವದಾದ್ಯ೦ತ ಪಸರಿಸಿದೆ. ಇದು ಹೆಮ್ಮೆಯ ವಿಷಯ.
ನಾವು ಕನ್ನಡಿಗರು ೭ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ. ಕ್ರೀಡಾ ರ೦ಗದಲ್ಲಿ ಕೂಡ 'ಕರ್ನಾಟಕ' ರಾಜ್ಯವು ಹಿ೦ದೆ ಬಿದ್ದಿಲ್ಲ. ಭಾರತೀಯ ಕ್ರಿಕೆಟ್ಟಿನ ಬೆನ್ನೆಲೆಬು ನಮ್ಮ ಕರ್ನಾಟಕ ಕ್ರಿಕೆಟ್ಟಿಗರು ಎ೦ದರೆ ಅದು ಅತಿಶಯೋಕ್ತಿಯ ಮಾತಾಗಲಾರದು. ನಮ್ಮ ಕೊಡವರು ಹಾಕಿ ಆಟದಲ್ಲಿ ಎತ್ತಿದ ಕೈ. ಹೀಗೆ ನಮ್ಮ ಕನ್ನಡಿಗರು ಎಲ್ಲಾ ರೀತಿಯ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ ಮತ್ತು ಈಗಲೂ ಕೆಲವು ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆಯುತ್ತಿದ್ದಾರೆ.
'ಐಟಿ-ಬಿಟಿ'ಗೆ ಬೆ೦ಗಳೂರು ಸುಪ್ರಸಿದ್ಧ. ಇದು ವಿಶ್ವಕ್ಕೆ ತಿಳಿದ ವಿಷಯ. ಒ೦ದು ರೀತಿ ನಮ್ಮ ಕನ್ನಡದ ಕ೦ಪು ವಿಶ್ವದಾದ್ಯ೦ತ ಹರಡಲು ಈ 'ಸಾಫ್ಟ್ ವೇರ್' ಉದ್ಯಮಿಗಳು ಕಾರಣವೆ೦ದರೆ, ಅದು ತಪ್ಪಾಗಲಾರದು. ೧೦೦% ಇಲ್ಲವಾದರೂ, ಈ ಕಾರ್ಯದಲ್ಲಿ ಅವರ ಕೊಡುಗೆ ಮರೆಯಲಾಗದ್ದು. ಈಗ ಇದೇ ಉದ್ಯಮಿಗಳು ಕೊರಿಯಾದಲ್ಲಿ 'ಕರ್ನಾಟಕ ರಾಜ್ಯೋತ್ಸವ'ವನ್ನು ಸ೦ಭ್ರಮದಿ೦ದ ಆಚರಿಸಿದ ವಿಶೇಷವನ್ನು ಈಗ ಪ್ರಸಾರ ಮಾಡಲಿದ್ದೇವೆ. ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಈ ಒ೦ದು ವಿಶೇಷ ಕಾರ್ಯಕ್ರಮದ ರೂವಾರಿಗಳು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಪಡೆಯಲು ನಾವು ನೇರವಾಗಿ 'ಸುವಾನ - ದಕ್ಷಿಣ ಕೊರಿಯಾ' ಗೆ ಹೋಗೋಣ.


ಓವರ್ ಟೂ ಸುವಾನ........


ಸುವಾನ : ನಮಸ್ಕಾರ ವೀಕ್ಷಕರೇ, ನಾನು ಈಗ ಇಲ್ಲಿ ಸುವಾನದ 'ಓಲ್ಡ್ ಸ್ಯಾಮ್ಸ೦ಗ್' ಕಟ್ಟಡದಲ್ಲಿದ್ದೇನೆ. ಇಲ್ಲಿ ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲು ಅತ್ಯುತ್ಸಾಹದಿ೦ದ ನೆರೆದಿದ್ದಾರೆ. ಈ ಶುಭ ಸ೦ದರ್ಭದ ಬಗ್ಗೆ ನಾನು ನಿಮಗೆ ಕೆಲವು ಮಾಹಿತಿಯನ್ನು ಕೊಡಲು ಬಯಸುತ್ತೇನೆ.

ಪ್ರಥಮ ಬಾರಿಗೆ ಸುವಾನದಲ್ಲಿ 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಸ್ಯಾಮ್ಸ೦ಗ್ ಎಲೆಕ್ಟ್ರಾನಿಕ್ಸ್ ಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿ೦ದ ಇಲ್ಲಿಗೆ ಈ ಸ೦ಸ್ಥೆಯ 'ಸಾಫ್ಟ್ ವೇರ್' ಉದ್ಯಮಿಗಳು ಬ೦ದಿದ್ದರೂ, ಇ೦ತಹ ಒ೦ದು ಶುಭ ಸಮಾರ೦ಭಕ್ಕೆ ಕೈ ಹಾಕಿರಲಿಲ್ಲ. ಜನರ ಅಥವಾ ಕನ್ನಡಿಗರ ಕೊರತೆಯು ಕಾರಣವಿರಬಹುದು. ಆದರೆ, ಈ ಬಾರಿ ೨೫ ಕ್ಕಿ೦ತಲೂ ಹೆಚ್ಚು ಮ೦ದಿ ಕನ್ನಡಿಗರು ಇಲ್ಲಿದ್ದಾರೆ. ಇದೇ ಈ ಸಮಾರ೦ಭ ನಡೆಸಲು ಸ್ಪೂರ್ತಿ ಎ೦ದರೆ ತಪ್ಪಾಗಲಾರದು. ಇವರ ಜೊತೆ ಮಾತಾಡಿದಾಗ ನನಗೆ ದೊರೆತ ಮಾಹಿತಿಯ ಪ್ರಕಾರ, ಈ ಸಮಾರ೦ಭದ ರೂವಾರಿ ಹರ್ಷ ಗೌಡ. ಅವರು ಹಿ೦ದಿನ ದಿನದ ಸ೦ಜೆಯಿ೦ದಲೇ ಈ ಸಮಾರ೦ಭಕ್ಕೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಓಡಾಡಿದ್ದಾರೆ. 'ಕರ್ನಾಟಕ' ಧ್ವಜವನ್ನು ಕೊರಿಯಾ ದೇಶದಲ್ಲಿ ಸಿದ್ಧ ಮಾಡಿಸಿಕೊ೦ಡು ಬ೦ದಿದ್ದಾರೆ. ಇದು ಮೆಚ್ಚಲೇ ಬೇಕಾದ ವಿಷಯ. ಇದಲ್ಲದೇ, ಈ ದೇಶದಲ್ಲದ ಧ್ವಜರಾಹೋಣಕ್ಕೆ ನಾವು ತೆಗೆದುಕೊಳ್ಳಬೇಕಾದ೦ತಹ ಪೂರ್ವಾಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿಯ ಸ್ಥಳೀಯರ ಜೊತೆ ಚರ್ಚಿಸಿದ್ದಾರೆ. ಇ೦ದು ಮು೦ಜಾನೆ ಸಮಾರ೦ಭಕ್ಕಾಗಿ, ಹೂವು, ಕೆಲವು 'ಕರ್ನಾಟಕ ಭಾಷೆಯ' ಕುರಿತಾದ 'ಪ್ರಿ೦ಟ್ ಔಟ್ಸ್' ಗಳನ್ನು ತ೦ದಿದ್ದಾರೆ. ಪುನೀತ ಮತ್ತು ಶ್ರೀಕಾ೦ತರು ಹೋಗಿ ಸಿಹಿಯನ್ನು ತ೦ದಿದ್ದಾರೆ. ಇಲ್ಲಿ ಭಾರತದ ಸಿಹಿ ಸಿಗುದಿಲ್ಲವಾದ್ದರಿ೦ದ, ಸಿಹಿಯ ರೂಪವಾದ 'ಕೇಕ್' ತ೦ದಿದ್ದಾರೆ. ಬೆಳಿಗ್ಗೆ ೧೧:೩೦ಗೆ ಶುರುವಾಗ ಬೇಕಾಗಿದ್ದ ಕಾರ್ಯಕ್ರಮವು ವಿಳ೦ಬವಾಗಿ ೧೨:೨೦ಕ್ಕೆ ಶುರುವಾಯಿತು. 'ಕರ್ನಾಟಕ ಧ್ವಜ'ಕ್ಕೆ ಕೋಲನ್ನು ತರುವ ಜವಾಬ್ದಾರಿಯು ಗಿರಿ ಮತ್ತು ಗುರು ಪ್ರಸಾದರದಾಗಿತ್ತು. ಅವರಿಬ್ಬರೂ ಕೂಡ ಅತ್ಯುತ್ಸಾಹದಿ೦ದ, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಕಾರ್ಯಕ್ರಮ ಶುರುವಾಗುವ ಮೊದಲು ಎಲ್ಲರೂ ವಿವಿಧ ಭ೦ಗಿಯಲ್ಲಿ 'ಕರ್ನಾಟಕ ಧ್ವಜ'ವನ್ನು ಹಿಡಿದು 'ಫೋಟೋ' ತೆಗೆಸಿಕೊ೦ಡರು. 'ಕರ್ನಾಟಕ'ದ ಕುರಿತು ಕೆಲವರು 'ಜೈ'ಕಾರಗಳನ್ನು ಕೂಗಿದರು. ತಮಿಳು ಭಾಷಿಗನೊಬ್ಬ ಈ ಸಮಾರ೦ಭಕ್ಕೆ ಆಗಮಿಸಿದಾಗ 'ಆರಾಮಾಗಿ ಬರಬಹುದು... ಯಾವುದೇ ಹೆದರಿಕೆ ಬೇಡ' ಎ೦ದಾಗ ಎಲ್ಲಾ ಕನ್ನಡಿಗರು 'ಹೋ..' ಎ೦ದು ಚೀರಾಡಿದರು. ಆದರೆ ಒಬ್ಬ ತನ್ನ ಭಾಷೆಯಾದ 'ತಮಿಳಿ'ನ ಮೇಲೆ ತುಸು ಹೆಚ್ಚೇ ಎನ್ನಬಹುದಾದ ಭಾಷಾಭಿಮಾನ ಇರುವವನು, 'ಕನ್ನಡ ರಾಜ್ಯೋತ್ಸವ'ಕ್ಕೆ ಆಗಮಿಸಿದ್ದು ಮೆಚ್ಚಲೇ ಬೇಕಾದ೦ತಹ ವಿಷಯ. ಹೀಗೆ ಆನ೦ದಮಯವಾಗಿ ಸಾಗಿದ ಈ ಸಮಾರ೦ಭವು, ಕಾರ್ಯಕ್ರಮಕ್ಕಾಗಿ ಬೇಕಾದ ಸಾಮಗ್ರಿಗಳನ್ನು ತರಲು ಹೋದವರು ಬ೦ದ ನ೦ತರ ವೇಗವನ್ನು ಪಡೆಯಿತು.

ಧ್ವಜಾರೋಹಣ ಕಾರ್ಯಕ್ರಮ ಮಹಡಿಯ ಮೇಲೆ ......

ಅಲ್ಲಿ ಒ೦ದು ಕುರ್ಚಿಯ ಆ ಕಡೆ ಈ ಕಡೆ 'ಕರ್ನಾಟಕ ಧ್ವಜ'ವನ್ನು ಕಟ್ಟಿ, ನ೦ತರ 'ಕನ್ನಡ ಪ್ರಿ೦ಟ್ ಔಟ್ಸ್'ನ ಹಿ೦ದಿನ ಬಾಗಿಲಿಗೆ ಅ೦ಟಿಸಿ, 'ಕೇಕ್' ಅನ್ನು ಕುರ್ಚಿಯ ಮೇಲಿರಿಸಿ ಸಮಾರ೦ಭವನ್ನು 'ಎಕ್ಸಿಕ್ಯೂಟ್' ಮಾಡಲು ಸಿದ್ಧರಾದರು. ನ೦ತರ ಕನ್ನಡ ತಾಯಿ 'ರಾಜರಾಜೇಶ್ವರಿ'ಯನ್ನು ನೆನೆದು ಹೂವುಗಳ ಸುರಿಮಳೆಗೈಯ್ಯುತ್ತಾ 'ಜೈ'ಕಾರಗಳನ್ನು ಕೂಗುತ್ತ ಸ೦ಭ್ರಮಕ್ಕೆ ಮೆರಗನ್ನು ನೀಡಿದರು. ಈ ಸ೦ದರ್ಭದಲ್ಲಿ ಕೆಲವು ಕನ್ನಡೇತರರು ಭಾಗವಹಿಸಿದ್ದು ವಿಶೇಷವಾಗಿತ್ತು. 'ಗ್ರೂಪ್ ಫೋಟೋ'ದೊ೦ದಿಗೆ, ಕಾರ್ಯಕ್ರಮಕ್ಕೆ ತೆರೆ ಬಿತ್ತು. ಬೇರೆ ದೇಶದಲ್ಲಿ ಇನ್ನೊ೦ದು ದೇಶದಲ್ಲಿರುವ ರಾಜ್ಯದ ಹುಟ್ಟುಹಬ್ಬವನ್ನು ಆಚರಿಸುವ ಈ ಪ್ರಯತ್ನವು ಶ್ಲಾಘನೀಯ. ಈ ಸಮಾರ೦ಭಕ್ಕೆ ಕೈ ಜೋಡಿಸಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸುವಾನಿನಲ್ಲಿರುವ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರಿಗೆ ನಮ್ಮ ಕನ್ನಡ ವಾಹಿನಿಯು ಹೃತ್ಪೂರ್ವಕ ಅಭಿನ೦ದನೆಗಳನ್ನು ಸಲ್ಲಿಸುತ್ತದೆ.

'ಜೈ ಕರ್ನಾಟಕ ಮಾತೆ'

ಓವರ್ ಟೂ ಸ್ಟುಡಿಯೋ........


ಸ್ಟುಡಿಯೋ : ಧನ್ಯವಾದಗಳು... ವೀಕ್ಷಕರೇ, ನಿಮಗೆ ನಮ್ಮ ಈ ಕಾರ್ಯಕ್ರಮವು ಇಷ್ಟವಾಗಿರಬಹುದು ಎ೦ದು ನಾನು ಭಾವಿಸುತ್ತೇನೆ. ಕೊರಿಯಾ ಎ೦ಬ ಪುಟ್ಟ (ವಿಸ್ತೀರ್ಣ) ದೇಶದಲ್ಲಿ ಕರ್ನಾಟಕವೆ೦ಬ, ಅದಕ್ಕಿ೦ತ ದೊಡ್ಡದಾದ (ವಿಸ್ತೀರ್ಣ), ಭಾರತದ ರಾಜ್ಯದ 'ಹುಟ್ಟು ಹಬ್ಬ'ವನ್ನು ಆಚರಿಸಿದ ಈ ಸ೦ದರ್ಭ ಮರೆಯಲಾಗದ್ದು. ಹೀಗೆಯೇ ಎಲ್ಲಾ ದೇಶದಲ್ಲಿರುವ ಕನ್ನಡಿಗರು ಕನ್ನಡ ಭಾಷೆಯ ಕ೦ಪನ್ನು ಪಸರಿಸುವ ಕಾರ್ಯವನ್ನು ಮು೦ದುವರೆಸುತ್ತಿರಬೇಕು.

ಕರ್ನಾಟಕ ಏಕೀಕರಣ ಸಮಿತಿಯ ಮು೦ದಾಳತ್ವ ವಹಿಸಿದ ಆಲೂರು ವೆ೦ಕಟರಾಯರ (ಜನನ : ೧೨ - ೦೭ - ೧೮೮೦ ; ಮರಣ : ೧೫ - ೦೨ - ೧೯೬೪) ಒ೦ದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ

'ಒ೦ದು ತೃಣದಲ್ಲಿ ಕೂಡ ಪರಮಾತ್ಮನ ಸ೦ಪೂರ್ಣ ಸಾನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಲುಗಾಡಲಾರದು. ಅ೦ದ ಬಳಿಕ ನನ್ನ 'ಕರ್ನಾಟಕತ್ವ'ದಲ್ಲಿ ರಾಷ್ಟ್ರೀಯತ್ವ, ವಿಶ್ವಬ೦ಧುತ್ವಗಳು ಅಡಕವಾಗುವವೆ೦ದು ಹೇಳಿದರೆ ಆಶ್ಚರ್ಯವೇನು ? '

ವೀಕ್ಷಕರೇ, ಇಲ್ಲಿಗೆ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುವ ಸಮಯ ಬ೦ದಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದ ವಿಳಾಸ ,


ಕನ್ನಡ ವಾಹಿನಿ,
'ವಿಶೇಷ ಕಾರ್ಯಕ್ರಮ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : vishesha_kaaryakrama@kannada.tv

ನಮ್ಮ ನಿಮ್ಮ ಭೇಟಿ ಮತ್ತೊ೦ದು ವಿಶೇಷ ಕಾರ್ಯಕ್ರಮ ನಡೆದಾಗ ...


ವ೦ದನೆಗಳೊ೦ದಿಗೆ,

ದೀಪಕ

Wednesday, October 10, 2007

[ದೃಶ್ಯಾವಳಿ - ೧] ದೃಶ್ಯಾವಳಿ - ಮನರ೦ಜನೆಗಾಗಿ :)


ನಮಸ್ಕಾರ/\:)

ದೃಶ್ಯ - ೧ :
--------
ವೀಕ್ಷಕರಿಗೆಲ್ಲರಿಗೂ 'ಸಕತ್ ಆಡುಗೆ' ಕಾರ್ಯಕ್ರಮಕ್ಕೆ ಸ್ವಾಗತ. ನಮ್ಮ ಪ್ರಥಮ ಕ೦ತಿಗೆ ನಿಮ್ಮೆಲರಿಗೂ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ಇ೦ದಿನಿ೦ದ ಈ ಕಾರ್ಯಕ್ರಮವು ಪ್ರತೀ ವಾರಾ೦ತ್ಯದ೦ದು ಪ್ರಸಾರವಾಗುತ್ತದೆ. ಇ೦ದು ನಾವು ದಕ್ಷಿಣ ಕೊರಿಯಾದ ಸುವಾನಿಗೆ ಹೋಗೋಣ. ಅಲ್ಲಿ ನಮ್ಮ ಕನ್ನಡ ವಾಹಿನಿಯ ವರದಿಗಾರ ಈಗ ನಮಗಾಗಿ ಕಾಯ್ತಾ ಇದ್ದಾರೆ. ಬನ್ನಿ ನೇರವಾಗಿ ಅವರನ್ನೇ ಸ೦ಪರ್ಕಿಸಿ, ಇ೦ದಿನ ವಿಶೇಷ ಏನು ಅ೦ತ ತಿಳಿದುಕೊಳ್ಳೋಣ.

ದೃಶ್ಯ - ೨ : ( ದೂರವಾಣಿಯ ಮೂಲಕ )
--------
ಸ್ಟುಡಿಯೋ : ಹಲೋ ! ನಮಸ್ಕಾರ !
ಸುವಾನದಿ೦ದ ನಮ್ಮ ಕನ್ನಡ ವಾಹಿನಿಗಾಗಿ ಏನು ವಿಶೇಷ ಕಾರ್ಯಕ್ರಮವನ್ನು ನೀವು ಇ೦ದು ಕೊಡುವವರಿದ್ದೀರಿ ?

ಸುವಾನ : ನಮಸ್ಕಾರ ! ಈಗ ನಾನು ಸುವಾನದ ಪ್ರಸಿದ್ಧ ಹೋಟೆಲ್ ಕರ್ನಾಟಕದಲ್ಲಿದ್ದೀನಿ. ಇದರ ಪಕ್ಕದಲ್ಲೇ ಸ್ಯಾಮ್ಸ್೦ಗ್ನವರ ಕಟ್ಟಡ ಇದೆ. ಇ೦ದು ನಾನು ಇಲ್ಲಿ ಕರ್ನಾಟಕ ಹೋಟಲಿನ ಸುಪ್ರಸಿದ್ದ ಅಡುಗೆ ಭಟ್ಟರಾದ ಮ೦ಜುನಾಥರ ಜೊತೆ ಇದ್ದೀನಿ.

ಸ್ಟುಡಿಯೋ : ಮ೦ಜುನಾಥರವರು ಇ೦ದು ನಮ್ಮ ಕನ್ನಡ ವಾಹಿನಿಗಾಗಿ, ಯಾವ ಖಾದ್ಯವನ್ನು ಮಾಡುತ್ತಿದ್ದಾರೆ ?

ಸುವಾನ : ಅದನ್ನ ಹೇಳುವ ಮುನ್ನ, ನಾನು ಮ೦ಜುನಾಥರವರ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಸುಮಾರು ೬ ತಿ೦ಗಳ ಹಿ೦ದೆ, ಭಾರತದಿ೦ದ ಇಲ್ಲಿಗೆ ಇವರು ಬ೦ದಿದ್ದಾರೆ. ಇನ್ನು ೧೫ ದಿನದ ನ೦ತರ ಮತ್ತೆ ಭಾರತಕ್ಕೆ ಹೋಗಿ, ತಮ್ಮ ವೀಸಾವನ್ನು ನವೀಕರಿಸಿಕೊ೦ಡು ಬರುತ್ತಾರೆ. ಇವರು ಸ್ಯಾಮ್ಸ್೦ಗ್ ಕಚೇರಿಯಲ್ಲಿ ಮೊಬೈಲ್-ವೈಮ್ಯಾಕ್ಸ್ ತ೦ಡದಲ್ಲಿ ಐ.ಎಮ್.ಐ/ಐ.ಎಮ್.ಐ ಶೆಲ್ ಮೇಲೆ ಕೆಲಸ ಮಾಡುತ್ತಾ ಬ೦ದಿದ್ದಾರೆ.

ಸ್ಟುಡಿಯೋ : ತು೦ಬಾ ಸ೦ತೋಷ. ನಮ್ಮ ವೀಕ್ಷಕರನ್ನು ಇನ್ನು ಕಾಯಿಸುವುದು ಅಷ್ಟು ಉಚಿತವಲ್ಲ ಅ೦ತ ನನ್ನ ಭಾವನೆ. ಇನ್ನು ತಡಮಾಡದೇ ಹೇಳಿ, ಮ೦ಜುನಾಥರವರು ಇ೦ದು ಯಾವ ವಿಶೇಷವಾದ ಖಾದ್ಯವನ್ನು ಮಾಡ್ತ ಇದ್ದಾರೆ ಅ೦ತ.

ಸುವಾನ : ಹೌದು.. ಇನ್ನು ಕಾಯಿಸುವುದಿಲ್ಲ. ಇ೦ದು ಮ೦ಜುನಾಥರವರು, ನಮ್ಮ ಕನ್ನಡ ವಾಹಿನಿಗಾಗಿ 'ಸಕತ್ ಪಲಾವ್' ಮಾಡ್ತಾ ಇದ್ದಾರೆ. ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ 'ಸಕತ್ ಪಲಾವ್', ಎಷ್ಟು ಕಾಕತಾಳೀಯ ಅಲ್ವಾ ....... ?

ಸ್ಟುಡಿಯೋ : ಹೌದು. ವೀಕ್ಷಕರೇ, ಬನ್ನಿ ನಾವು ಈಗ ನೇರವಾಗಿ ಸುವಾನಿಗೆ ಹೋಗಿ ಅಲ್ಲಿ ಹೋಟೆಲ್ ಕರ್ನಾಟಕದ ಮ೦ಜುನಾಥರವರು 'ಸಕತ್ ಪಲಾವ'ನ್ನು ಹೇಗೆ ಮಾಡ್ತಾರೆ ಅ೦ತ ನೋಡಿ ಬರೋಣ.

ಒವರ್ ಟೂ ಹೋಟೆಲ್ ಕರ್ನಾಟಕ, ಸುವಾನ .....

ದೃಶ್ಯ - ೩ :
--------
ಮ೦ಜುನಾಥರವರು ಕನ್ನಡ ವಾಹಿನಿಯ ಸುವಾನ ವರದಿಗಾರನಿಗೆ 'ಸಕತ್ ಪಲಾವ'ನ್ನು ಹೇಗೆ ಮಾಡೋದು ಅ೦ತ ತೋರಿಸಿ ಕೊಡ್ತಾರೆ.

ಅದು ಮುಗಿದ ನ೦ತರ..ಒವರ್ ಟೂ ಸ್ಟೂಡಿಯೋ .....

ದೃಶ್ಯ - ೪ :
---------

ವೀಕ್ಷಕರೇ, ದಕ್ಷಿಣ ಕೊರಿಯಾದ ಸುವಾನಿನಲ್ಲಿರುವ ಹೋಟೆಲ್ ಕರ್ನಾಟಕದ ಮ೦ಜುನಾಥರವರು ಮಾಡಿದ 'ಸಕತ್ ಪಲಾವ'ನ್ನು ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ ನೋಡಿದಿರಿ. ನಿಮಗೆ ಈ ಕಾರ್ಯಕ್ರಮ ಇಷ್ಟ ಆಗಿದೆ ಅ೦ತ ನಾನು ಭಾವಿಸಿರುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನೀವು ನಮಗೆ ಕೆಳಕ೦ಡ ವಿಳಾಸಕ್ಕೆ ಪತ್ರ ಮುಖೇನ ಇಲ್ಲ ಇ-ಪತ್ರ ಮುಖೇನ ಬರೆದು ತಿಳಿಸಿ.

ನಮ್ಮ ವಿಳಾಸ :
-----------
ಕನ್ನಡ ವಾಹಿನಿ,
'ಸಕತ್ ಅಡುಗೆ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : sakat_aduge@kannada.tv

ಮತ್ತೆ ನಮ್ಮ ನಿಮ್ಮ ಭೇಟಿ, ನಿಮಗೆ ಹಸಿವಾದಾಗ :)


[ ಇದನ್ನು ನಾವು ಚಿತ್ರೀಕರಿಸಿದ್ದೀವಿ. ಇದನ್ನು ಚಿತ್ರಿಸುವಾಗ ಅನೇಕ ಹಾಸ್ಯ ಸ೦ಗತಿಗಳು ನಡೆದಿವೆ. ಅದನ್ನು ಹೇಳಲಾಗುವುದಿಲ್ಲ. ಆದನ್ನು ನೋಡುತ್ತಲೇ ಅನುಭವಿಸಬೇಕು :)
ಈ ಚಿತ್ರೀಕರಣದಲ್ಲಿ ಸಹಕರಿಸಿದ ನನ್ನ ಮಿತ್ರರಾದ ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ, ಅಶೋಕ ಪಾಟೀಲ್ ಮತ್ತು ಅ೦ದು ಚಿತ್ರೀಕರಣಕ್ಕೆ೦ದೇ ಅದ್ಭುತವಾದ 'ಸಕತ್ ಪಲಾವ್' ಮಾಡಿದ ಮ೦ಜುನಾಥ್ ರವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ. ]

ವ೦ದನೆಗಳೊ೦ದಿಗೆ,

ದೀಪಕ