Search This Blog

Friday, January 4, 2008

[ವ್ಯಕ್ತಿ-ಚಿತ್ರಣ - ೪] ಕನ್ನಡ ಕುಲಪುರೋಹಿತರು - ಆಲೂರು ವೆ೦ಕಟರಾಯರು

ನಮಸ್ಕಾರ/\:)


ನನ್ನ ಹಿ೦ದಿನ 'ವ್ಯಕ್ತಿ-ಚಿತ್ರಣ' ಅ೦ಕಣದಲ್ಲಿ ನಾನು ನಿಮಗೆ ನಮ್ಮ ದೇಶದ ಸ್ವಾತ೦ತ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ 'ಮದನಲಾಲ ಧಿ೦ಗ್ರಾ'ರ ಪರಿಚಯ ಮಾಡಿ ಕೊಟ್ಟಿದ್ದೆ. ಇಲ್ಲಿ ನಿಮಗೆನಮ್ಮ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಎಲ್ಲಾ ಕನ್ನಡಿಗರು ನೆನೆಯಬೇಕಾದ, ಮಹಾನ್ ಪುರುಷರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.




'ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ

ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ'

- ಡಿ. ಎಸ್. ಕರ್ಕಿಯವರು.




ಕನ್ನಡದ ದೀಪವೆ೦ದರೆ, ಕರ್ನಾಟಕದ ದೀಪ. ಕನ್ನಡ ಭಾಷೆ, ಸ೦ಸ್ಕೃತಿಯ ದೀಪ. ಒಳ್ಳೆಯತನಕ್ಕೆ ಹೆಸರುವಾಸಿಯಾದ, ನಮ್ಮ ಭಾಷೆ, ಸ೦ಸ್ಕೃತಿಯನ್ನು ಆರಾಧಿಸುವ ಎಲ್ಲಾ ಸಮಸ್ತ ಕನ್ನಡಿಗರ ದೀಪ. ಕರ್ನಾಟಕದಲ್ಲಿ ಎಲ್ಲಾ ಕನ್ನಡಿಗರು ಕನ್ನಡತನವೆ೦ಬ ಬೆಳಕನ್ನು ಸದಾ ಕಾಲ ಚೆಲ್ಲುತ್ತಿರಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸ೦ಸ್ಕೃತಿಯು ಯಾವಾಗಲೂ ಕನ್ನಡಿಗರ ಪ್ರೀತಿಯ ಬೆಳೆಕಿನಿ೦ದ ಪ್ರಕಾಶಿಸುತ್ತಿರಬೇಕು. ನಮ್ಮ ಭಾಷೆ, ಸ೦ಸ್ಕೃತಿಗೆ ಎ೦ದಿಗೂ ಬೆಳಕಿನ ಅಭಾವ ಬರಬಾರದು. ಏನಾದರೂ ಬೆಳಕಿನ ಅಭಾವ ಬ೦ದರೆ, ಅದಕ್ಕೆ ಬೆಳಕನ್ನು ಚೆಲ್ಲುತ್ತಿರುವ ಕನ್ನಡಿಗರೇ ಹೊಣೆ. ಹೇಗೆ ಡಿ.ಎಸ್. ಕರ್ಕಿಯವರ ಮೇಲಿನ ಕವನದ ಸಾಲುಗಳು, ಕನ್ನಡತನದ ದೀಪವನ್ನು ಕರ್ನಾಟಕದೆಲ್ಲೆಡೆ ಹಚ್ಚಬೇಕೆ೦ದು ಹೇಳುತ್ತದೆಯೋ, ಹಾಗೆಯೇ, ಇದೇ ರೀತಿಯಾದ, ಕನ್ನಡತನದ ಬಗೆಗೆ ಕನ್ನಡಿಗರ ಮನದಲ್ಲಿ ಒಲವನ್ನು ಹುಟ್ಟುಹಾಕಿದ, ನಮ್ಮ ಭಾಷೆ, ಸ೦ಸ್ಕೃತಿಯ ಉಳಿವಿಗಾಗಿ ಹೋರಾಡುವ೦ತೆ ಜನರನ್ನು ಪ್ರೇರೇಪಿಸುತ್ತಾ, 'ಕರ್ನಾಟಕ ಏಕೀಕರಣ ಸಮಿತಿ'ಯನ್ನು ಹುಟ್ಟು ಹಾಕಿ, ನಮ್ಮ ಕರ್ನಾಟಕ ರಾಜ್ಯದ ಹುಟ್ಟಿಗೆ ಕಾರಣಕರ್ತರಾದ ಆಲೂರು ವೆ೦ಕಟರಾಯರ ಕಿರು ಪರಿಚಯವನ್ನು ಇಲ್ಲಿ ಮಾಡಿಕೊಡುತ್ತಿದ್ದೇನೆ.


ಈ ಲೇಖನವನ್ನು ನಮ್ಮ ಕರ್ನಾಟಕದ ಮತ್ತು ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.



ಆಲೂರು ವೆ೦ಕಟರಾವ್ ಅವರು ಜುಲೈ೧೨, ೧೮೮೦ ರ೦ದು ಕರ್ನಾಟಕ ಜಿಲ್ಲೆಯ ಬಿಜಾಪುರದಲ್ಲಿ ಜನಿಸಿದರು. ಅವರ ತ೦ದೆಯ ಹೆಸರು ಭೀಮ ರಾವ್. ಇವರ ತ೦ದೆಯವರು ಬ್ರಿಟೀಷರ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಲೆಕ್ಕ ಪರಿಶೀಲನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಾಯಿಯ ಹೆಸರು ಭಾಗೀರಥಿ ಬಾಯಿ. ಇವರ ತ೦ದೆ ಮತ್ತು ತಾಯಿ ಇಬ್ಬರು ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದು, ದಾನ ಮತ್ತು ಧರ್ಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊ೦ಡವರಾಗಿದ್ದರು. ಅವರ ಮನೆಯ ಬಾಗಿಲು ಅವರ ಸಂಬಂಧಿಕರಿಗಲ್ಲದೇ, 'ವಾರಾನ್ನ'ಕ್ಕೆ ಬರುತ್ತಿದ್ದ ಎಷ್ಟೋ ಓದುವ ಹುಡುಗರಿಗೆ ಸದಾ ತೆರೆದಿರುತ್ತಿತ್ತು. ಅವರ ತ೦ದೆಯವರು ಸರ್ಕಾರಿ ಉದ್ಯೋಗದಲ್ಲಿದ್ದದ್ದರಿ೦ದ ಒ೦ದೂರಿ೦ದ ಮತ್ತೊ೦ದೂರಿಗೆ ವರ್ಗಾವಣೆಗೊಳ್ಳುತ್ತಿದ್ದರು. ಇದೇ ಕಾರಣದಿ೦ದ, ವೆ೦ಕಟರಾಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಅವರ ತ೦ದೆಯವರು ವರ್ಗಾವಣೆಗೊಳ್ಳೂತ್ತಿದ್ದ ಎಲ್ಲಾ ಸಣ್ಣ ಸಣ್ಣ ಊರುಗಳಲ್ಲಿ ಪೂರೈಸಿದರು. ಇವರು ತಮ್ಮ ಮೆಟ್ರಿಕೆ ಪರೀಕ್ಷೆಯನ್ನು ೧೮೯೭ರಲ್ಲಿ ಧಾರವಾಡದಲ್ಲಿ ಮುಗಿಸಿದರು. ಆ೦ಗ್ಲ ಭಾಷೆ, ಸ೦ಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿಯೂ ಚೆನ್ನಾಗಿ ಪಳಗಿದ್ದ ವೆ೦ಕಟರಾಯರ ಒಲವು ಕನ್ನಡ ಭಾಷೆಯ ಮೇಲೆ ಹೆಚ್ಚಾಗಿತ್ತು.


ಅವರು ಹುಟ್ಟಿದ ಕಾಲದಲ್ಲಿ, ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ೫ ಭಾಗವಾಗಿ ವಿ೦ಗಡಣೆಗೊ೦ಡಿತ್ತು.


೧) ಮೈಸೂರು ಮಹಾರಾಜ ಅಧೀನದಲ್ಲಿದ್ದ ೯ ಜಿಲ್ಲೆಗಳು - ಆಡಳಿತ ಭಾಷೆ : ಕನ್ನಡ

೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾ೦ತ್ಯಕ್ಕೆ ಸೇರಿತ್ತು - ಆಡಳಿತ ಭಾಷೆ : ತಮಿಳು

೩) ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ ನಿಜಾಮರ ಪ್ರಾ೦ತ್ಯದಲ್ಲಿ ಸೇರಿತ್ತು - ಆಡಳಿತ ಭಾಷೆ : ಉರ್ದು

೪) ಕೊಡಗು ತನ್ನದೇ ಆದ ಬೇರೊ೦ದು ಪ್ರಾ೦ತ್ಯವಾಗಿತ್ತು - ಆಡಳಿತ ಭಾಷೆ : ಕೊಡವ

೫) ೪ ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಿಜಾಪುರ ಮು೦ಬೈ ಪ್ರಾ೦ತ್ಯಕ್ಕೆ ಸೇರಿತ್ತು. ಇದನ್ನು ಆಗ 'ಉತ್ತರ ಕರ್ನಾಟಕ' ಅಥವಾ 'ದಕ್ಷಿಣ ಮರಾಠ ಪ್ರಾ೦ತ್ಯ' ಎ೦ದು ಗುರುತಿಸುತ್ತಿದ್ದರು - ಆಡಳಿತ ಭಾಷೆ : ಮರಾಠಿ


ಇವರು ಹುಟ್ಟಿದ್ದು ಬಿಜಾಪುರದಲ್ಲಿ. ಅದು 'ದಕ್ಷಿಣ ಮರಾಠ ಪ್ರಾ೦ತ್ಯ'ಕ್ಕೆ ಸೇರಿದ್ದರಿ೦ದ, ಇಲ್ಲಿನ ಜನರು ಬಹಳಷ್ಟು ಮರಾಠಿ ಭಾಷೆಯ ಪ್ರಭಾವಕ್ಕೊಳಗಾಗಿದ್ದರು. ವೆ೦ಕಟರಾಯರು ಮರಾಠಿ ಭಾಷೆಯನ್ನು ಬಲ್ಲವರಾಗಿದ್ದಕ್ಕೆ ಇದೇ ಕಾರಣ. ಈ ಪ್ರಾ೦ತ್ಯದಲ್ಲಿ ಕಾಲೇಜು ಇದ್ದದ್ದು ಪುಣೆಯಲ್ಲಿ ಮಾತ್ರ. ಪುಣೆಯ 'ಫರ್ಗೂಸ್ಸನ್' ಕಾಲೇಜಿಗೆ ಸೇರಿ ಬಿ.ಎ ಓದಿ, ೧೯೦೫ರಲ್ಲಿ ಕಾನೂನು ಪಧವಿಯನ್ನು ಪಡೆದರು. ಇವರ ಕಾಲೇಜು ಜೀವನ ಅತ್ಯುತ್ತಮವಾಗಿತ್ತು. ಸ್ವಾತ೦ತ್ರ್ಯ ಹೋರಾಟದ ಮೊದಲ ಘಟ್ಟದಲ್ಲಿದ್ದ ಕಾಲ. ವೀರ ಸಾವರ್ಕರ, ಸೇನಾಪತಿ ಬಾಪಟ್ ಇವರೆಲ್ಲ ಆಲೂರರ ಸಹಪಾಠಿಗಳಾಗಿದ್ದರು. ಲೋಕಮಾನ್ಯ ತಿಲಕರು, ಆಗಿನ ಯುವಕರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಪ್ರೇರಿಪಿಸುತ್ತಿದ್ದರು. ಇದಕ್ಕೆ ಅವರು ಶಿವಾಜಿ ಉತ್ಸವ, ಗಣೇಶ ಉತ್ಸವಗಳನ್ನು ಮಾಡಿ, ಈ ಉತ್ಸವಗಳನ್ನು ಯುವಕರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಮಾಡಲು ವೇದಿಕೆಯನ್ನಾಗಿ ಮಾಡಿಕೊ೦ಡಿದ್ದರು. ಇದಲ್ಲದೆ ಹಲವಾರು ದೇಶೀಯ ಶಾಲೆಗಳನ್ನು ಸ್ಥಾಪಿಸಿ, ಸ್ವಾತ೦ತ್ರ ಸ೦ಗ್ರಾಮಗಳ ಬಗೆಗೆ ಮಾಹಿತಿ ನೀಡಿ, ಯುವಕರನ್ನು ಸ್ವಾತ೦ತ್ರ್ಯ ಹೋರಾಟಗಾರರನ್ನಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ತಿಲಕರಿ೦ದ ಪ್ರೇರೇಪಿತಗೊ೦ಡು, ದೇಶಸೇವೆ ಮಾಡುವ ಆಸ್ಥೆಯಿ೦ದ, ಆಲೂರರು ಧಾರವಾಡಕ್ಕೆ ಬ೦ದರು. ಧಾರವಾಡಕ್ಕೆ ಬ೦ದ ಮೊದಲಲ್ಲಿ, ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಶುರುಮಾಡಿದರು. ಆಗ ಈ ಹುದ್ದೆಯನ್ನು ನಿರಾಯಾಸವಾಗಿ ಹೆಸರು ಮತ್ತು ಹಣ ಮಾಡುವ ಹುದ್ದೆಯೆ೦ದು ಜನ ಭಾವಿಸುತ್ತಿದ್ದರು. ಆದರೆ, ಕನ್ನಡತಾಯಿ ರಾಜರಾಜೇಶ್ವರಿಯ ಸೇವೆ ಮಾಡುವ ಆಸೆಯಿ೦ದ ಈ ಕೆಲಸವನ್ನು ತೊರೆದು, ಕನ್ನಡ ಪರ ಹೋರಾಟಕ್ಕೆ ಅಣಿಯಾದರು.



ಪ್ರಾ೦ತೀಯ ವಿ೦ಗಡಣೆಗಳಿ೦ದ, ಮೈಸೂರು ಪ್ರಾ೦ತ್ಯವನ್ನೊರತುಪಡಿಸಿ, ಉಳಿದೆಲ್ಲಾ ಪ್ರಾ೦ತ್ಯಗಳಲ್ಲಿದ್ದ ಕನ್ನಡಿಗರು ಹಲವಾರು ಸಮಸ್ಯೆಗಳನ್ನೆದುರಿಸುತ್ತಿದ್ದರು. ಈ ಪ್ರಾ೦ತ್ಯಗಳಲ್ಲಿ ಕನ್ನಡಿಗರನ್ನು ತಾತ್ಸಾರಭಾವನೆಯಿ೦ದ ಕಾಣುತ್ತಿದ್ದರು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತಿರಲಿಲ್ಲ. ಇಲ್ಲಿನ ಕನ್ನಡಿಗರ ಸಣ್ಣ ರೀತಿಯಲ್ಲಿ ಭಾಷ-ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದರಾದರೂ, ಅದು ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಈ ಹೋರಾಟವು ಕ್ರಮೇಣ ಬೆಳೆದು ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿ ಒ೦ದು ಕನ್ನಡ ರಾಜ್ಯವನ್ನು ಮಾಡುವ ಒ೦ದು ಹೋರಾಟಕ್ಕೆ ನಾ೦ದಿ ಹಾಡಿತು. ಇದಕ್ಕೆ ಚಾಲನೆ ನೀಡಿದವರೇ ಆಲೂರು ವೆ೦ಕಟರಾಯರು. ಈ ಹೋರಾಟವೇ 'ಕರ್ನಾಟಕ ಏಕೀಕರಣ ಹೋರಾಟ'. ಇದಕ್ಕೆ ವೇದಿಕೆಯಾಗಿದ್ದು, ೧೮೯೦ರಲ್ಲೇ ಸ್ಥಾಪಿತವಾಗಿದ್ದ 'ಕರ್ನಾಟಕ ವಿದ್ಯಾವರ್ಧಕ ಸ೦ಘ'. ಆಲೂರರಿ೦ದ ಈ ಸ೦ಘಕ್ಕೆ ಮತ್ತು 'ಏಕೀಕರಣ ಹೋರಾಟಕ್ಕೆ' ಬಲ ಬ೦ತೆ೦ದರೆ ಅದು ಅತಿಶಯೋಕ್ತಿಯ ಮಾತಲ್ಲ.


೧೯೦೩ರಲ್ಲಿ 'ಕರ್ನಾಟಕ ವಿದ್ಯಾವರ್ಧಕ ಸ೦ಘ'ದಲ್ಲಿ ಚಟುವಟಿಕೆಗಳು ಬಿರುಸಿನಿ೦ದ ಆರ೦ಭವಾಗ ತೊಡಗಿತು. ಎಲ್ಲಾ ಕನ್ನಡಿಗರಿಗೆ, ಈ ಹೋರಾಟದ ಬಗ್ಗೆ ಮಾಹಿತಿ ನೀಡತೊಡಗಿದರು. ಅನೇಕ ಸಾಹಿತಿಗಳು, ಪತ್ರಕರ್ತರು, ಬರಹಗಾರರನ್ನು ಈ ಹೋರಾಟಕ್ಕೆ ಪಾಲ್ಗೊಳ್ಳುವ೦ತೆ ಪ್ರೇರೇಪಿಸಿ, ಅದರಲ್ಲಿ ಯಶಸ್ಸನ್ನು ಕ೦ಡರು. ನ೦ತರ ೧೯೦೭ ಮತ್ತು ೧೯೦೮ರಲ್ಲಿ ೨ ಬಾರಿ ಎಲ್ಲಾ ಕನ್ನಡ ಬರಹಗಾರರ ಸಭೆಯನ್ನು ಧಾರವಾಡದಲ್ಲಿ ಆಯೋಜಿಸಿದರು. ೧೯೧೫ರಲ್ಲಿ ಆಲೂರರು, ಕನ್ನಡ ಬರಹಗಾರರಿಗೆ ವೇದಿಕೆಯಾಗಲೆ೦ದು, 'ಸಾಹಿತ್ಯ ಪರಿಷತ್ತ'ನ್ನು ಹುಟ್ಟುಹಾಕುವಲ್ಲಿ ನೆರೆವಾದರು. ಇದೇ ರೀತಿಯಾಗಿ ಹಲವಾರು ಕನ್ನಡ ಪರ ಸ೦ಘಟನೆಗಳನ್ನು ರಾಜ್ಯದ ನಾನಾಕಡೆಗಳಲ್ಲಿ ಹುಟ್ಟುಹಾಕುವಲ್ಲಿ ಆಲೂರರು ಪ್ರಮುಖ ಪಾತ್ರವಹಿಸಿದರು. ಈ ಸ೦ಘಟನೆಗಳಿ೦ದ ಕನ್ನಡಿಗರ ಏಕೀಕರಣಕ್ಕೆ ನೆರವಾಗುವ ಹಲವಾರು ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯೋಜಿಸುವಲ್ಲಿ ಸಫಲರಾದರು.



೧೯೧೨ರಲ್ಲಿ ಆಲೂರರು ರಚಿಸಿದ ಬೃಹದ್ಗ್ರಂಥ 'ಕರ್ನಾಟಕ ಗತವೈಭವ', 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಚೈತನ್ಯವನ್ನು ತ೦ದುಕೊಟ್ಟಿತು. ಈ ಬೃಹದ್ಗ್ರಂಥಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು (ಹಳೆಯ ಕಾಲದ ಶಾಸನ, ನಾಣ್ಯಗಳು, ಹಸ್ತಲಿಖಿತ ಪುಸ್ತಕಗಳು) ಕಲೆಹಾಕಿ, ಬೃಹದ್ಗ್ರ೦ಥವನ್ನು ಸ೦ಪೂರ್ಣಗೊಳಿಸಲು ಸರಿಸುಮಾರು ೧೩ ವರುಷ ತೆಗೆದುಕೊ೦ಡರು.



[ ಮಾಹಿತಿ : ಈ ಬೃಹದ್ಗ್ರಂಥದಲ್ಲಿ ಆಲೂರರು, ಕರ್ನಾಟಕವನ್ನು ಆಳಿದ ರಾಜವ೦ಶಸ್ಥರ ಶೌರ್ಯ, ಪರಾಕ್ರಮಗಳ ಬಗ್ಗೆ, ನಾಡಿನ ಸ೦ಸ್ಕೃತಿಯ ಏಳಿಗೆಗಾಗಿ ಅವರು ನೀಡಿದ ಕೊಡುಗೆಗಳ ಬಗ್ಗೆ, ಅವರ ಆಳ್ವಿಕೆಯಲ್ಲಿ ಕಟ್ಟಿದ ದೇವಸ್ಥಾನಗಳ ಬಗ್ಗೆ, ಆ ದೇವಸ್ಥಾನಗಳ ವಿನ್ಯಾಸದ ಬಗ್ಗೆ, ಅವರ ಕಾಲದಲ್ಲಿದ್ದ ವಾಣಿಜ್ಯ ವಹಿವಾಟುಗಳ ಬಗ್ಗೆ ಅದ್ವಿತೀಯ ವಿವರಣೆಗಳನ್ನು ನೀಡಿದ್ದಾರೆ. ಈ ಗ್ರ೦ಥಕ್ಕೆ ಈಗ ೯೬ ವಸ೦ತಗಳನ್ನು ಸ೦ಪೂರ್ಣಗೊಳಿಸಿದ ಹೆಮ್ಮೆ.]



'ಕರ್ನಾಟಕ ಗತವೈಭವ'ವು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಿ, 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಬಲ ಮತ್ತು ಜನಪ್ರಿಯತೆಯನ್ನು ತ೦ದುಕೊಟ್ಟಿತು. ಇದೇ ಕಾರಣಕ್ಕೆ ಆಲೂರರನ್ನು 'ಕನ್ನಡ ಕುಲಪುರೋಹಿತ' ಎ೦ದು ಇ೦ದಿಗೂ ನಾವು ಸ್ಮರಿಸುತ್ತೇವೆ. ದೇಶದ ಸ್ವಾತ೦ತ್ರ್ಯಕ್ಕೆ ಹೋರಾಡಲು ಎಲ್ಲರೂ ಸ೦ಘಟಿತರಾಗುತ್ತಿದ್ದ ಕಾಲದಲ್ಲಿ, ಕರ್ನಾಟಕದ ಹೋರಾಟಗಾರರಿಗೆ, ಸ್ವಾತ೦ತ್ರ್ಯ ಹೋರಾಟವನ್ನು, ಕನ್ನಡ ಭಾಷಿಗರ ಕೂಡಿಸಿ ಸ೦ಘಟಿತ ಕರ್ನಾಟಕವನ್ನು ಹುಟ್ಟು ಹಾಕುವ ಹೋರಾಟಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ಅಮೂಲ್ಯ ಅವಕಾಶ ದೊರೆಯಿತು. ಈ ನಿಟ್ಟಿನಲ್ಲಿ ಆಲೂರರನ್ನು ಜೊತೆಗೂಡಿದ ಪ್ರಮುಖರೆ೦ದರೆ, ಸಿದ್ದಪ್ಪ ಕಾ೦ಬ್ಳಿ, ಆರ್. ಎಚ್. ದೇಶಪಾ೦ಡೆ, ರ೦ಗರಾವ ದಿವಾಕರ, ಕೌಜಲಗಿ ಶ್ರೀನಿವಾಸ ರಾವ್, ಕೆ೦ಗಲ್ ಹನುಮ೦ತಯ್ಯ, ಗೊರೂರು ರಾಮಸ್ವಾಮಿ ಐಯ್ಯ೦ಗಾರರು, ಎಸ್. ನಿಜಲಿ೦ಗಪ್ಪನವರು, ಟಿ. ಮರಿಯಪ್ಪ, ಅನಕೃ. ಇದರಲ್ಲಿ ಅನಕೃರವರು ತಮ್ಮ ಕಾದ೦ಬರಿಗಳ ಮುಖಾ೦ತರ ಜನರನ್ನು ಈ ಹೋರಾಟದಲ್ಲಿ ಪಾಲ್ಗೊಳ್ಳುವಲ್ಲಿ ಮಾಡಿದ ಮೋಡಿ ಪ್ರಶ೦ಸನೀಯವಾದದ್ದು.


ಈ ಹೋರಾಟದ ನಡುವೆಯೂ ಆಲೂರರು, ಹಲವಾರು ಪುಸ್ತಕಗಳನ್ನು ಬರೆದರು. ಕನ್ನಡ ಶಾಲೆಗಳನ್ನು ಸ್ಥಾಪಿಸಿದರು. ಅವರ ವಕೀಲ ವೃತ್ತಿಯ ಪರವಾನಗಿ ರದ್ದಾಗಿ, ಅವರು ಆ ಕೆಲಸವನ್ನು ಸ೦ಪೂರ್ಣವಾಗಿ ತೊರೆದರು. ಆಗಿದ್ದ ಎಲ್ಲಾ ೫ ಪ್ರಾ೦ತ್ಯಗಳಲ್ಲಿ ಹೋರಾಟದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ಪ್ರಾ೦ತ್ಯಗಳಲ್ಲಿದ್ದ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಬಗ್ಗೆ ತಮ್ಮ ಭಾಷಣದ ಮುಖಾ೦ತರ ಜಾಗೃತಿ ಮೂಡಿಸುತ್ತಿದ್ದರು. ಈ ಕಾರಣದಿ೦ದ ಅವರು ಜೈಲುವಾಸವನ್ನು ಸಹ ಅನುಭವಿಸಿದರು. ಇಷ್ಟೆಲ್ಲಾ ಹೋರಾಟ ಮಾಡಿದರೂ, ಆಲೂರರಿಗೆ ಅದರ ಫಲವನ್ನು ಕಾಣಲು ೫೦ ವರ್ಷಗಳು ಬೇಕಾಯಿತು. ಕೊ೦ಚ ತಡವಾದರೂ, ೧೯೫೬ರಲ್ಲಿ ಆಲೂರರು ಕ೦ಡ ಪ್ರತ್ಯೇಕ ಕನ್ನಡ ರಾಜ್ಯದ ಕನಸು ನನಸಾಯಿತು. ಎಲ್ಲಾ ಕನ್ನಡ ಭಾಷೆ ಮಾತನಾಡುವ ಜನರಿರುವ ಪ್ರದೇಶವನ್ನು ಒ೦ದು ರಾಜ್ಯವೆ೦ದು ಘೋಷಿಸಿ, 'ಮೈಸೂರು' ಎ೦ದು ನಾಮಕರಣ ಮಾಡಿದರು. ಇದು ಆಲೂರರಿಗೆ ಸ೦ದ ಜಯ. 'ಕರ್ನಾಟಕ ಏಕೀಕರಣ ಹೋರಾಟದಲ್ಲಿ' ಪಾಲ್ಗೊ೦ಡ ಎಲ್ಲಾ ಸಹೃದಯ ಕನ್ನಡಿಗರಿಗೆ ಸ೦ದ ಜಯ. ಈ ಜಯದ ಹಿ೦ದೆ ಇರುವ ಆಲೂರರ ಪರಿಶ್ರಮ ಊಹಿಸಲಾಗದ೦ತಹದ್ದು.


[ ಮಾಹಿತಿ : 'ಮೈಸೂರು' ರಾಜ್ಯವು ನವೆ೦ಬರ ೧, ೧೯೫೬ರಲ್ಲಿ ಹುಟ್ಟಿತು. ಇದೇ ಕಾರಣದಿ೦ದ, ಪ್ರತೀ ವರ್ಷವು ಈ ದಿನದ೦ದು 'ಕರ್ನಾಟಕ ರಾಜ್ಯೋತ್ಸವ'ವನ್ನು ಆಚರಿಸುತ್ತೇವೆ. ೧೯೭೪ರಲ್ಲಿ 'ಮೈಸೂರು' ರಾಜ್ಯವನ್ನು 'ಕರ್ನಾಟಕ' ರಾಜ್ಯವನ್ನಾಗಿ ಮರು-ನಾಮಕರಣ ಮಾಡಲಾಯಿತು. ]


೧೯೩೦ರಲ್ಲಿ ಮೈಸೂರಿನಲ್ಲಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದ ಆಲೂರರು, ತಮ್ಮ ಕೊನೆಯ ಕಾಲದಲ್ಲಿ ಕೂಡ ಕನ್ನಡವೇ ಉಸಿರು ಎ೦ಬ ನೀತಿಯನ್ನು ಪಾಲಿಸುತ್ತಿದ್ದರು. ಈ ಸಮಯದಲ್ಲಿ ಅವರು ’ಮಧ್ವರ ತತ್ವ”ಗಳನ್ನು ಮತ್ತು ’ಭಗವದ್ಗೀತೆ”ಯನ್ನು ಸರಳ ಭಾಷೆಯಲ್ಲಿ ಬರೆದು ಪುಸ್ತಕ ರೂಪದಲ್ಲಿ ಹೊರತ೦ದರು. ಹೀಗೆ ಜೀವನದುದ್ದಕ್ಕೂ 'ಕನ್ನಡ'ತನವನ್ನು ಮೆರೆದ ಆಲೂರರು ೨೫ ಫೆಬ್ರವರಿ, ೧೯೬೪ರ೦ದು ಕನ್ನಡಮ್ಮನ ಪಾದ ಸೇರಿ ಕನ್ನಡಿಗರ ಮನದಲ್ಲಿ ಅಮರರಾದರು. ಆಲೂರರ ೫೦ ವರ್ಷಕ್ಕೂ ಮಿಗಿಲಾದ ಕನ್ನಡ ಸೇವೆಯ ಸ್ಮರಣಾರ್ಥವಾಗಿ ಅವರೇ ಬರೆದ೦ತಹ 'ನನ್ನ ಜೀವನ ಸ್ಮ್ರಿತಿಗಳು' ಪುಸ್ತಕವನ್ನು, ಅವರೇ ಹೊರತ೦ದ 'ಜಯಕರ್ನಾಟಕ' ಮಾಸಿಕ ಪತ್ರಿಕೆಯಲ್ಲಿ ಅ೦ಕಣದ ರೂಪದಲ್ಲಿ ಪ್ರಕಟಿಸಲಾಯಿತು.



[ ಮಾಹಿತಿ : ಈ ಪುಸ್ತಕದಲ್ಲಿ ಹಲವಾರು ಸ್ವಾತ೦ತ್ರ್ಯ ಹೋರಾಟಗಾರರ ಬಗೆಗೆ, 'ಕರ್ನಾಟಕ ಏಕೀಕರಣ'ದ ರೂವಾರಿಯಾದ ಆಲೂರರ ಹೋರಾಟದ ಹೆಜ್ಜೆಗುರುತಗಳ ಬಗ್ಗೆ ಮಾಹಿತಿ ದೊರೆಯುತ್ತದೆ ]


ಕೊನೆಯದಾಗಿ, ಇವರ ಬಗ್ಗೆಯೂ ನಾವು ನಮ್ಮ ಶಾಲಾ ದಿನಗಳಲ್ಲಿ ಎಳ್ಳಷ್ಟೂ ಮಾಹಿತಿಯನ್ನು ಗ್ರಹಿಸದೇ ಇರುವುದು ಬೇಸರ ತರುವ೦ತಹ ಸ೦ಗತಿ. ಹೀಗೆ, ಒ೦ದು ಸು೦ದರ ಕರುನಾಡನ್ನು ಕಟ್ಟುವಲ್ಲಿ ಯಶಸ್ವಿಯಾದ ಈ ಮಹಾತ್ಮರು ರಚಿಸಿದ 'ಕರ್ನಾಟಕ ಗತವೈಭವ'ವನ್ನು ನಾವು ನಮ್ಮ ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊ೦ಡಾಗ ಮಾತ್ರ ನಾವು ಆಲೂರರನ್ನು ಮತ್ತು ಅವರ ಈ ಶ್ರೇಷ್ಠ ಕಾರ್ಯವನ್ನು ಗೌರವಿಸಿದ೦ತಾಗುತ್ತದೆ. ತಮ್ಮ ಜೀವನವನ್ನು ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಏಳಿಗೆಗಾಗಿ ಮುಡಿಪಿಟ್ಟ ಈ ಮಹಾನ್ ಚೇತನರನ್ನು ಎಲ್ಲಾ ಸ್ವಾಭಿಮಾನಿ ಕನ್ನಡಿಗರು ಸದಾ ಕಾಲ ನೆನೆಯುತ್ತಿರಲೇಬೇಕೆ೦ದು ತಿಳಿಸುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತಿದ್ದೇನೆ.


ಓದುಗರ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.


ವ೦ದನೆಗಳೊ೦ದಿಗೆ,


ಇ೦ತಿ,


ದೀಪಕ.