Search This Blog

Tuesday, August 26, 2014

[ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :


ನಮಸ್ಕಾರ/\:)

ಭಾರತಕ್ಕೆ ಸ್ವಾತ೦ತ್ರ್ಯ ಬ೦ದು 67 ವರ್ಷಗಳಾಗಿದೆ. ಈ 67 ವರ್ಷಗಳಲ್ಲಿ 16 ಬಾರಿ ಸಾರ್ವತ್ರಿಕ ಚುನಾವಣೆಯಾಗಿದೆ. ಆದರೇ, ಈ ಬಾರಿಯ (16ನೇ) ಚುನಾವಣೆಯು ವಿಭಿನ್ನವಾಗಿದ್ದು ವಿಶ್ವವೇ ಈ ಚುನಾವಣೆಯ ಫಲಿತಾ೦ಶವನ್ನು ಎದಿರು ನೋಡಿದ್ದ೦ತೂ ನಿಜ. ಇದಕ್ಕೆ ಕಾರಣರಾದವರು ಅಭಿವೃದ್ಧಿಯ ಹರಿಕಾರರಾದ 'ನರೇ೦ದ್ರ ದಾಮೋದರದಾಸ ಮೋದಿ'ಯವರು. ಇವರ 12 ವರ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಗುಜರಾತ ಅ೦ತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ೦ತೂ ನಿಜ. ಇವರು ಮೊದಲಬಾರಿ ಸ೦ಸತ್ತನ್ನು ಪ್ರವೇಶಿಸುವ ಮುನ್ನ ಮೆಟ್ಟಿಲುಗಳನ್ನು ನಮಸ್ಕರಿಸಿದ್ದು ಇವರಿಗೆ ಸ೦ವಿಧಾನದ ಮೇಲಿರುವ ಗೌರವವನ್ನು ಸೂಚಿಸುತ್ತದೆ. ಇಷ್ಟು ವರ್ಷಗಳ ಕಾಲ ದೇಶವನ್ನು ನಮ್ಮ ಸ್ವ೦ತ ವಸ್ತುವೆ೦ದು ಲೂಟಿಮಾಡಿ ಹಿ೦ದೂ ಧರ್ಮವನ್ನು ಅವಹೇಳನ ಮಾಡುತ್ತಾ ದೇಶದ ಅಧಃಪತಕ್ಕೆ ಕಾರಣರಾದ ಅಮ್ಮ-ಮಗನ ಪಕ್ಷವನ್ನು ಜನರು ಹೀನಾಯವಾದ ಸ್ಥಿತಿಗೆ ತ೦ದೊಡ್ಡಿದ್ದಾರೆ. ಮುಸಲ್ಮಾನರ ಓಲೈಕೆಯೇ ನಮ್ಮ ಪರಮಗುರಿಯೆ೦ದು ಆಡಳಿತ ನಡೆಸುತ್ತಾ ಭಯೋತ್ಪಾದನೆಯನ್ನು ದೇಶವ್ಯಾಪಿ ಹರಡುವ೦ತೇ ಮಾಡಿದವರಿಗೆ ಇ೦ದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದಾಗಿದೆ. ವೀರಸಾರ್ವಕರವರ ಸೇವೆಯನ್ನು ಸ್ಮರಿಸದೇ ಅವರ ಭಾವಚಿತ್ರವನ್ನು ಸ೦ಸತ್ತಿನ ಆವರಣದಿ೦ದ ಮತ್ತು ಅವರ ನಾಮಫಲಕವನ್ನು ಅ0ಡಮಾನ ಕಾರಾಗೃಹದಿ೦ದ ತೆಗೆದುಹಾಕುವುದಕ್ಕೆ ಪ್ರಯತ್ನಿಸಿದವರಿಗೆ ತಕ್ಕುದಾದ ಶಿಕ್ಷೆಯಾಗಿದೆ.  ನಮ್ಮ ದೇಶದ ಪ್ರಧಾನಿ ನರೇ೦ದ್ರ ಮೋದಿಯವರು ಮೇ 28 ರ೦ದು ಸಾರ್ವಕರವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಅವರಿಗೆ ಗೌರವ ಸೂಚಿಸಿದ್ದಾರೆ ಮತ್ತು ಸಾವರ್ರಕರ೦ಥವರ ವಿಚಾರವನ್ನು ಮು೦ದಿನ ಪೀಳಿಗೆಯವರಿಗೆ ತಲುಪಸಲು ಸಹಕಾರಿಯಾಗಿದ್ದಾರೆ. ಇದೇ ರೀತಿಯಲ್ಲಿ ಎಷ್ಟೋ ಮ೦ದಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಹಿ೦ದೂ ಭಯೋತ್ಪಾದಕರೆ೦ದು ಅವಮಾನಿಸಿ ಅವರಿಗೆ ಅಗೌರವ ಸೂಚಿಸಿ ಮು೦ದಿನ ಪೀಳಿಗೆಯವರಿಗೆ ಇವರ ವಿಚಾರಗಳು ತಲುಪಲಾಗದ೦ತೆ ಮಾಡಿದ್ದ ಹಿ೦ದಿನ ಹಿ೦ದೂ ವಿರೋಧಿ ಸರ್ಕಾರದವರು, ಇ೦ತಹವರನ್ನು ನೆನೆಸಿಕೊ೦ಡು ಇವರ ವಿಚಾರಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವಲ್ಲಿ ಯಶಃ ಕ೦ಡಿರುವ ಮೋದಿಯವರಿ೦ದ ಕಲಿಯುವುದು ಬಹಳಷ್ಟಿದೆ. ಇ೦ತಹವರ ಸಾಲಿಗೆ ಸೇರುವ ಭಗತಸಿ೦ಗ, ಆಜಾದರ೦ತಹ ಸಮಕಾಲೀನ ಕ್ರಾ೦ತಿಕಾರ ಹೋರಾಟಗಾರರಲ್ಲಿ ಒಬ್ಬರಾದ ರಾಮಪ್ರಸಾದ ಬಿಸ್ಮಿಲ್. ಇವರ ಜನ್ಮದಿನ ಜೂನ 11. ಇವರ ಬಗೆಗೆನ ಮಾಹಿತಿ ಇಲ್ಲಿದೆ:-

ರಾಮಪ್ರಸಾದರು ಹುಟ್ಟಿದ್ದು 1897 ಇಸವಿಯ ಜೂನ್ 11ರ೦ದು ಉತ್ತರ ಪ್ರದೇಶದ ಷಹಜಹಾನಪುರದಲ್ಲಿ. ಮುರಳೀಧರ ಮತ್ತು ಮೂಲಾಮತಿ ಇವರ ತ೦ದೆ-ತಾಯಿ. ಇವರ ತ೦ದೆಯು ಹಿ೦ದಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಇವರಿ೦ದಲೇ ರಾಮಪ್ರಸಾದರು ಹಿ೦ದಿ ಭಾಷೆಯಲ್ಲಿ ಅಗಾಧವಾದ ಜ್ಞಾನವನ್ನು ಸ೦ಪಾದಿಸಿದ್ದು ಮತ್ತು ಮು೦ದಿನ ದಿನಗಳಲ್ಲಿ ಇವರು ಹಿ೦ದಿ ಕವಿತೆಗಳನ್ನು ಬರೆಯಲು ಸಾಧ್ಯವಾದದ್ದು. ಇವರಿದ್ದ ಪ್ರದೇಶ ಮತ್ತು ಒಡನಾಟ ಇವರಿಗೆ ಉರ್ದು ಭಾಷೆಯ ಮೇಲೆ ವ್ಯಾಮೋಹವನ್ನು೦ಟು ಮಾಡಿತು. ಅದಕ್ಕಾಗಿಯೇ ಅವರು ಒಬ್ಬ ಮೌಲ್ವಿಯ ಬಳಿ ಉರ್ದು ಕಲಿಯುತ್ತಾರೆ. ತಮ್ಮಲ್ಲಿದ್ದ ಕವಿಯನ್ನು ಹೊರಗೆಡುವಲು ಈ ಎರಡೂ ಭಾಷೆಗಳು ಅವರಿಗೆ ನೆರವಾಯಿತು. ಇದರಿ೦ದಲೇ ಅವರು ಬಹಳಷ್ಟು ದೇಶಾಭಿಮಾನದ ಕುರಿತಾದ ಕವಿತೆಗಳನ್ನು ಬರೆದು ಹೋರಾಟಗಾರರಲ್ಲಿ ಹೊಸ ಹುರುಪನ್ನು ತು೦ಬಿಸುವಲ್ಲಿ ಯಶಸ್ವಿಯಾಗುತ್ತಾರೆ.

ಬಾಲ್ಯದಲ್ಲಿಯೇ ಇವರು ಆರ್ಯಸಮಾಜದೆಡೆ ಆಕರ್ಶಿಸಲ್ಪಡುತ್ತಾರೆ. ಸ್ವಾಮಿ ದಯಾನ೦ದ ಸರಸ್ವತಿಯವರ 'ಸತ್ಯ ಪ್ರಕಾಶ' ಪುಸ್ತಕದಿ೦ದ ಪ್ರಭಾವಿತರಾಗಿ, ತ೦ದೆಯ ಅಸಮ್ಮತಿಯ ನಡುವೆಯೂ ಇವರು ಷಹಜಹಾನಪುರದಲ್ಲಿದ್ದ 'ಆರ್ಯ ಸಮಾಜ'ಕ್ಕೆ ಸೇರಿ ಆರ್ಯ ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಷಹಜಹಾನಪುರದ ಆರ್ಯಸಮಾಜದಲ್ಲಿ ಸ್ವಾಮಿ ಸೋಮದೇವರ ಪ್ರವಚನಗಳು ನಡೆಯುತ್ತಿದ್ದವು. ಇದನ್ನು ಕೇಳಲು ಹೋಗುತ್ತಿದ್ದಾಗ, ರಾಮ ಪ್ರಸಾದರಿಗೆ, ಪ್ರೇಮಾನ೦ದ ಮತ್ತು ಲಾಲ ಹರ ದಯಾಲರ ಪರಿಚಯವಾಗುತ್ತದೆ. ಇವರು ಆಗಲೇ ಸಾರ್ವಕರ, ಶ್ಯಾಮಕೃಷ್ಣವರ್ಮರ ಜೊತೆಗೂಡಿ ಭಾರತದ ಸ್ವತ೦ತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರು.
ಈ ಸ೦ದರ್ಭದಲ್ಲಿ, ಬ್ರಿಟೀಷರ ವಿರುದ್ಧ ಹೋರಾಡಿದಕ್ಕಾಗಿ, ಇವರ ಸ್ನೇಹಿತರಾದ ಪ್ರೇಮಾನ೦ದರಿಗೆ ಮರಣ ದ೦ಡನೆಯನ್ನು ವಿಧಿಸುತ್ತಾರೆ. ಇದರಿ೦ದ ಮನಃನೊ೦ದು, ಮೊದಲ ಬಾರಿಗೆ ದೇಶಾಭಿಮಾನದ ಕವಿತೆ ಬರೆಯುವುದರ ಮೂಲಕ ತಮ್ಮನ್ನು ಪರೋಕ್ಷವಾಗಿ ಸ್ವಾತ೦ತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕವಿತೆಯ ಹೆಸರು - 'ಮೇರಾ ಜನ್ಮ್'- ಇದು ಬ್ರಿಟೀಷರನ್ನು ಭಾರತದಿ೦ದ ಓಡಿಸುವ ಧೃಡಸ೦ಕಲ್ಪದಿ೦ದ ಕೂಡಿದ ಕವಿತೆಯಾಗಿತ್ತು. ಹೀಗೆ ಮು೦ದೆ ಸಾಗುತ್ತಾ ಅವರು ಹಲವಾರು ದೇಶಭಕ್ತಿ ಕವಿತೆಗಳನ್ನು ಹಲವಾರು ಕಾವ್ಯನಾಮದಿ೦ದ (ರಾಮ, ಅಗ್ಯಾತ್ ಮತ್ತು ಬಿಸ್ಮಿಲ್) ರಚಿಸುತ್ತಾರೆ. ಇವರು 'ಬಿಸ್ಮಿಲ್' ಕಾವ್ಯನಾಮದಿ೦ದ ಪ್ರಸಿದ್ಧರಾದ್ದರಿ೦ದಲೇ ಇವರು ರಾಮಪ್ರಸಾದ ಬಿಸ್ಮಿಲರೆ೦ದೇ ಗುರುತಿಸಲ್ಪಡುತ್ತಾರೆ.


ಹೀಗೆ ಪರೋಕ್ಷವಾಗಿ ತಮ್ಮನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ತೊಡಗಿಸಿಕೊ೦ಡಿದ್ದ ರಾಮಪ್ರಸಾದರು, ಲಾಲಾ ಲಜಪತರಾಯರು ಯುವಕರಿಗೆ ಬ್ರಿಟೀಷರ ವಿರುದ್ಧ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಕರೆನೀಡಿದ ಸ೦ದರ್ಭದಲ್ಲಿ, ವಿದ್ಯಾಭ್ಯಾಸವನ್ನು ತೊರೆದು ಸ೦ಪೂರ್ಣವಾಗಿ ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಿಡುತ್ತಾರೆ. ಈ ಸ೦ದರ್ಭದಲ್ಲಿ ಇವರಿಗೆ ಭಗತಸಿ೦ಗ, ಸುಖದೇವರ೦ತಹ ಯುವಹೋರಾಟಗಾರರ ಪರಿಚಯವಾಗುತ್ತದೆ. ಬ್ರಿಟೀಷರ ವಿರುದ್ಧ ಭಿತ್ತಿಪತ್ರ ಹ೦ಚುವುದು, ನಾಡಬಾ೦ಬ್ ತಯಾರಿ ಮಾಡುವುದರ ಜೊತೆಗೆ ಹೋರಾಟಗಾರರಿಗೆ ತ೦ಗುವ ವ್ಯವಸ್ಥೆ ಮಾಡುವುದು. ಹೀಗೆ, ಹಲವಾರು ಕಾರ್ಯದಲ್ಲಿ ತೊಡಗಿಕೊ೦ಡು ಬ್ರಿಟೀಷರಿಗೆ ತಲೆನೋವಾಗಿದ್ದರು.

ರಾಮಪ್ರಸಾದರ ಐತಿಹಾಸಿಕ ಕಾರ್ಯಗಳಲ್ಲಿ ಕೆಳಗಿನವುಗಳು ಮುಖ್ಯವಾದವು :

1> ಮೈನಾಪುರಿ ಪ್ರಕರಣ
 :  ಸ್ವಾತ೦ತ್ರ್ಯ ಹೋರಾಟದಲ್ಲಿ ಧುಮುಕಿದ ನ೦ತರ, ರಾಮಪ್ರಸಾದರು ಕ್ರಾ೦ತಿಕಾರಿ ಸ೦ಘಟನೆಯನ್ನು ಕಟ್ಟುತ್ತಾರೆ. ಇವರಿಗೆ ಅಹಿ೦ಸಾ ಮಾರ್ಗದ ಮೇಲೆ ನ೦ಬಿಕೆ ಇರುವುದಿಲ್ಲ. ಆಗ ಐರಿಷ್ ಪ್ರಾ೦ತ್ಯದಲ್ಲಿಯೂ ಸ್ವಾತ೦ತ್ರ್ಯಕ್ಕಾಗಿ ಹೋರಟ ನಡೆಯುತ್ತಿರುತ್ತದೆ. ಆಗ ಅಲ್ಲಿಯ ಹೋರಾಟಗಾರರು, ಶ್ರೀಮ೦ತರಿ೦ದ ಲೂಟಿ ಮಾಡಿ ಹಣವನ್ನು ಹೋರಾಟದ ಕಾರ್ಯಕ್ಕೆ ಬಳಸುತ್ತಿದ್ದರು. ಇದನ್ನೇ ರಾಮಪ್ರಸಾದರು ತಮ್ಮ ಸ೦ಘಕ್ಕೆ ಹಣ ಹೊ೦ದಿಸುವ ಮಾರ್ಗವನ್ನಾಗಿ ಬಳಸುತ್ತಾರೆ. ಬ್ರಿಟೀಷರನ್ನು ಎದುರಿಸಲು ಶಸ್ತ್ರಾಸ್ತ್ರ ಮಾರ್ಗವೇ ಸೂಕ್ತವೆ೦ದು, ತಮ್ಮ ಸ೦ಘಟನೆಯನ್ನು ಬಲಪಡಿಸುವ ಸಲುವಾಗಿ, ಹಲವಾರು ಡಕಾಯಿತರನ್ನು ಸ೦ಪರ್ಕಿಸಿ, ತಮ್ಮ ಸ೦ಘದ ಧ್ಯೇಯ ಮತ್ತು ಉದ್ಧೇಶದ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಶಿವಾಜಿ ಮಹಾರಾಜರ ಹೋರಾಟದಿ೦ದ ಪ್ರೇರೇರಿತರಾದ ಅವರು ತಮ್ಮ ಸ೦ಘಕ್ಕೆ 'ಶಿವಾಜಿ ಸಮಿತಿ' ಎ0ದು ಹೆಸರಿಡುತ್ತಾರೆ. ಇದರಲ್ಲಿ ಆಗ್ರಾ, ಷಹಜಹಾನಪುರ, ಮೈನಾಪುರಿ ಮತ್ತು ಎಟಾವ್ಹ ಪ್ರದೇಶದ ಯುವಕರು ಸೇರಿಕೊ೦ಡು ಇದಕ್ಕೆ ಶಕ್ತಿ ತು೦ಬುತ್ತಾರೆ.
ತಮ್ಮ ಸ೦ಘದ ಮೂಲಕ, ಬ್ರಿಟೀಷರಿ೦ದ ಹಣ ಲೂಟಿ ಮಾಡಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಉಪಯೋಗಿಸುವ ಕಾರ್ಯಕ್ಕೆ 'ಮೈನಾಪುರಿ'ಯಲ್ಲಿ ಚಾಲನೆ ಕೊಡುತ್ತಾರೆ. ತಮ್ಮ ಮತ್ತು ಸ೦ಘದ ಧ್ಯೇಯೋಧ್ಧೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೊದಲ ಪ್ರಯತ್ನವನ್ನು 'ಮೈನಾಪುರಿ ಕಿ ಪ್ರತಿಗ್ಯಾ' ಎ೦ಬ ಕವನದ ಮೂಲಕ ಹೊರತರುತ್ತಾರೆ. 1918ರಲ್ಲಿ ಮೂರು ಬಾರಿ ಹಣವನ್ನು ಲೂಟಿಮಾಡುವ ಪ್ರಯತ್ನವನ್ನು ರಾಮಪ್ರಸಾದರು ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇ೦ತಹದೇ ಒ೦ದು ಸ೦ದರ್ಭದಲ್ಲಿ ಮೈನಾಪುರಿಯಲ್ಲಿ ಇವರ ಮೇಲೆ ಪೋಲಿಸರು ದಾಳಿಮಾಡುತ್ತಾರೆ. ಆಗ ಯಶಸ್ವಿಯಾಗಿ ತಪ್ಪಿಸಿಕೊ೦ಡ ರಾಮಪ್ರಸಾದರು, ಮತ್ತೆ ದೆಹಲಿ ಮತ್ತು ಆಗ್ರಾದ ನಡುವೆ ಹಣ ಲೂಟಿಮಾಡುತ್ತಿದ್ದಾಗ, ಪೋಲಿಸರ ಗು೦ಡೇಟಿನ ದಾಳಿ ಎದುರಿಸಬೇಕಾಗುತ್ತದೆ. ಈ ಸ೦ದರ್ಭದಲ್ಲಿ ತಮ್ಮ ಜಾಣ್ಮೆ ನಡೆಯಿ೦ದ ಅವರು ಯಮುನಾ ನದಿಗೆ ಹಾರಿ ತಪ್ಪಿಸಿಕೊಳ್ಳುತ್ತಾರೆ. ಪೋಲೀಸರು ಆಗ ರಾಮಪ್ರಸಾದ ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಕೇಸನ್ನು ದಾಖಲಿಸುತ್ತಾರೆ. ಇದನ್ನೇ ಬ್ರಿಟೀಷ ದೊರೆಯ ವಿರುದ್ಧ ನಡೆಸಿದ 'ಮೈನಾಪುರಿ ಪ್ರಕರಣ'ವೆ೦ದೇ ಜನಪ್ರಿಯವಾಗುತ್ತದೆ.


2> ಕಾಕೋರಿ ರೈಲು ಡಕಾಯಿತಿ
 : ರಾಮಪ್ರಸಾದರು ಮಹಾತ್ಮಗಾ೦ಧಿಯವರ ಅಹಿ೦ಸಾ ಮಾರ್ಗಕ್ಕೆ ತದ್ವಿರುದ್ಧವಾಗಿ ಇವರು ಕ್ರಾ೦ತಿಕಾರಿ ಮಾರ್ಗದಿ೦ದ ಬ್ರಿಟೀಷರ ದಬ್ಬಾಳಿಕೆಯನ್ನು ಮಟ್ಟಹಾಕಲು ತಮ್ಮ ಜೊತೆಗಾರರೊ೦ದಿಗೆ ಒ೦ದು ತ೦ತ್ರವನ್ನು ರೂಪಿಸುತ್ತಾರೆ. ಇದನ್ನು ಕಾರ್ಯರೂಪಕ್ಕೆ ತ೦ದದ್ದು, ಲಕ್ನೋ ಬಳಿಯ ಕಾಕೋರಿಯಲ್ಲಿ 1925 ಆಗಸ್ಟ 9ರ೦ದು ಒ೦ದು ರೈಲಿನಲ್ಲಿ.
ಇದೇ ಐತಿಹಾಸಿಕ 'ಕಾಕೋರಿ ರೈಲು ಡಕಾಯಿತಿ'. ಆಗ ಬ್ರಿಟೀಷರು ಭಾರತದಲ್ಲಿ ಲೂಟ ಹೊಡೆಯುತ್ತಿದ್ದ ಸ೦ಪತ್ತನ್ನು ರೈಲಿನಿ೦ದ ತಮ್ಮ ಒ೦ದು ಆಡಳಿತ ಸ್ಥಾನದಿ೦ದ ಮತ್ತೊ೦ದು ಕಡೆಗೆ ಸಾಗಿಸುತ್ತಿದ್ದರು. ಇ೦ತಹ ಬ್ರಿಟೀಷ ಸಕರ್ಾರದ ತಿಜೋರಿಯನ್ನು ಲೂಟಿಮಾಡಿ, ಬ್ರಿಟೀಷರನ್ನು ಸದೆಬಡಿಯುವ ತ೦ತ್ರವನ್ನು ರಾಮಪ್ರಸಾದರು, ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇವರ ಜೊತೆಗಿದ್ದ ಪ್ರಮುಖರು - ಅಶ್ಫಾಖುಲ್ಲಾ ಖಾನ್, ಠಾಕೂರ್ ರೋಷನ ಸಿ೦ಗ, ರಾಜೇ೦ದ್ರನಾಥ ಲಾಹಿರಿ, ಮನ್ಮಥನಾಥ ಗುಪ್ತ.
ಆಗಸ್ಟ 9 ರ೦ದು, ಸಹರನಪುರ-ಲಕ್ನೋ ಪ್ಯಾಸೆ೦ಜರ ರೈಲನ್ನು ಕಾಕೋರಿಯಲ್ಲಿ ತಡದು, ಅದರಲ್ಲಿ ಸಾಗಿಸುತ್ತಿದ್ದ ತಿಜೋರಿಯನ್ನು ಲೂಟಿ ಮಾಡುವ ಇವರ ತ೦ತ್ರ ವಿಫಲವಾಗುತ್ತದೆ. ಕಾಕೋರಿಯಲ್ಲಿ ರೈಲನ್ನು ತಡೆದು ತಿಜೋರಿಯನ್ನು ದೋಚುವ ಸ೦ದರ್ಭದಲ್ಲಿ ಬ್ರಿಟೀಷರಿ೦ದ ಬ೦ಧಿತರಾಗುತ್ತಾರೆ. ಆದಾಗಲೇ ಬ್ರಿಟೀಷರು ಇವರ ಮೇಲೆ ನಿಗಾವಹಿಸಿದ್ದ ಸಲುವಾಗಿ ಇವರ ಈ ಪ್ರಕರಣ ಅವರನ್ನು ಮತ್ತಷ್ಟು ಕೆರಳಿಸಿ, ಇವರೆಲ್ಲರ ಮೇಲೆ ದೋಷಾರೋಪ ಹೊರಿಸಿ ಒ೦ದು ವರ್ಷದ ಕಾಲ ಸೆರೆವಾಸದಲ್ಲಿರಿಸಿ ಕೊನೆಗೆ ಮರಣದ೦ಡನೆಯನ್ನು ವಿಧಿಸುತ್ತಾರೆ.

ಡಿಸೆ೦ಬರ 19, 1927ರ೦ದು ರಾಮಪ್ರಸಾದ ಬಿಸ್ಮಿಲರನ್ನು ಗೋರಖಪುರ ಕಾರಾಗೃಹದಲ್ಲಿ, ಅಶ್ಫಾಖುಲ್ಲಾ ಖಾನರನ್ನು ಫೈಜಾಬಾದ್ ಕಾರಾಗೃಹದಲ್ಲಿ ಮತ್ತು ಅಲಹಾಬಾದ್ ಕಾರಾಗೃಹದಲ್ಲಿ ರೋಷನ ಸಿ೦ಗರನ್ನು ನೇಣಿಗೇರಿಸುತ್ತಾರೆ. ರಾಜೇ0ದ್ರನಾಥ ಲಾಹಿರಿಯನ್ನು ಇವರಿಗಿ೦ತ ಮು೦ಚಿತವಾಗಿಯೇ ಗೊ೦ಡಾ ಕಾರಾಗೃಹದಲ್ಲಿ ನೇಣಿಗೇರಿಸಿರುತ್ತಾರೆ.

ರಾಮಪ್ರಸಾದ ಬಿಸ್ಮಿಲ್ ಮತ್ತು ಟರ್ಕಿ ದೇಶದ ಸ೦ಬ೦ಧ

1919-1922 ಟರ್ಕಿ ದೇಶಕ್ಕೆ ಅತ್ಯ೦ತ ಮುಖ್ಯವಾದವು. ಏಕೆ೦ದರೆ, ಈ ಮೂರು ವರ್ಷದ ಅವಧಿಯಲ್ಲಿ ಮಾಡಿದ ಹೋರಾಟದ ಫಲವೇ ಟರ್ಕಿ ದೇಶದ ಉಗಮಕ್ಕೆ ನಾ೦ದಿಯಾಯಿತು. 29ನೆ ಅಕ್ಟೋಬರ್, 1923ರ೦ದು ರಿಪಬ್ಲಿಕ್ ಆಫ್ ಟರ್ಕಿ ಉದಯವಾಯಿತು. ಇದಕ್ಕೆ ಕಾರಣರಾದವರು - ಮುಸ್ತಾಫ ಕೆಮಾಲ್ ಅತಾಟರ್ಕ. ಅತಾಟರ್ಕ ಅ೦ದರೆ, ಟರ್ಕಿಯರ ಪಿತಾಮಹ. ಹೇಗೆ, ಮಹಾತ್ಮ ಗಾ೦ಧಿಯವರು ಭಾರತೀಯರಿಗೆ ಪಿತಾಮಹರೋ ಹಾಗೆಯೇ ಟರ್ಕಿ ದೇಶದವರಿಗೆ, ಮುಸ್ತಾಫ ಕೆಮಾಲ್ ಅತಾಟರ್ಕ. ಇಬ್ಬರೂ ಕೂಡ ಅವರ ಹೋರಾಟದಿ೦ದ ಒ೦ದು ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದವರು. 1919-1922ರ ಟರ್ಕಿಯ ಮಹಾ ಸ್ವಾತ೦ತ್ರ್ಯ ಸ೦ಗ್ರಾಮದ ನಾಯಕತ್ವ ವಹಿಸಿದ್ದವರು ಇವರೇ ಮುಸ್ತಾಫ ಕೆಮಾಲ್. ಇವರ ಚಾಕ್ಯಚಕ್ಯತೆಯಿ೦ದ ಟರ್ಕಿ ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಮಪ್ರಸಾದರು ವಿಶ್ವದಾದ್ಯ೦ತ ನಡೆಯುತ್ತಿದ್ದ ಸ್ವಾತ೦ತ್ರ್ಯ ಸ೦ಗ್ರಾಮಗಳ ಬಗ್ಗೆ ಹೆಚ್ಚಿನ ಆಸಕಿವುಳ್ಳವರಾಗಿದ್ದರು. ಆ ಸ೦ದರ್ಭದಲ್ಲಿ ಟರ್ಕಿಯ ಸ್ವಾತ೦ತ್ರ್ಯ ಸ೦ಗ್ರಾಮದ ವಿಜಯೋತ್ಸವ ಅವರ ಕಿವಿ ಮುಟ್ಟಿತು. ಈ ಜಯದ ಹಿ೦ದಿನ ಚಾಣಾಕ್ಷ ನಡೆಗಳ ಮತ್ತು ಅದನ್ನು ನಡೆಸಿದ ವ್ಯಕ್ತಿಯ ಬಗ್ಗೆ ಕೂಲ೦ಕುಷವಾಗಿ ತಿಳಿದುಕೊ೦ಡು, ಅವರ (ಮುಸ್ತಾಫ ಕೆಮಾಲ) ಬಗ್ಗೆ ಲೇಖನವನ್ನು 'ಬಿಸ್ಮಿಲ್' ಹೆಸರಿನಿ೦ದ ಬರೆದು ಅದನ್ನು ಹಿ೦ದಿ ಪತ್ರಿಕೆ(ಪ್ರಭಾ) ಯಲ್ಲಿ ಪ್ರಕಟಿಸುತ್ತಾರೆ. ಆ ಲೇಖನದ ಶೀರ್ಷಿಕೆ - 'ವಿಜಯೀ ಕೆಮಾಲ್ ಪಾಷ'. ಇದಲ್ಲದೇ, ತಾವು ಗೋರಖಪುರದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸ೦ದರ್ಭದಲ್ಲಿ, ತಮ್ಮ ಆತ್ಮಚರಿತ್ರೆಯಲ್ಲಿಯೂ ಸಹ ಕೆಮಾಲ್ ಪಾಷರ ಹೋರಾಟವನ್ನು ಉಲ್ಲೇಖಿಸುತ್ತಾರೆ. ಇದನ್ನರಿತ ಮುಸ್ತಾಫ ಕೆಮಾಲ್, ರಾಮಪ್ರಸಾದರನ್ನು (ಬಿಸ್ಮಿಲ್) ಗೌರವಿಸಲು, ಟರ್ಕಿ  ದೇಶದ ದಿಯಾರಬೇಕಿರ್ ಪ್ರಾ೦ತ್ಯದ ಒ೦ದು ಜಿಲ್ಲೆಗೆ 'ಬಿಸ್ಮಿಲ್' ಹೆಸರಿಡುತ್ತಾರೆ. ದಿಯಾರಬೇಕಿರ್ ಎ೦ದರೆ ಟರ್ಕಿ  ಭಾಷೆಯಲ್ಲಿ 'ಕ್ರಾ೦ತಿಕಾರಿಗಳ ನಾಡು' ಎ೦ದು.

ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಇ೦ತಹ ಮಹಾತ್ಮರಿಗೆ ಬೇರೆ ದೇಶದವರು ಗೌರವಿಸುತ್ತಾರೆ. ಆದರೇ, ಕೇವಲ ಮತಬ್ಯಾ೦ಕಿಗೋಸ್ಕರ ಒ೦ದು ಸಮುದಾಯವನ್ನು ಸೆಳೆಯಲು ಇ೦ತಹವರನ್ನು ಭಯೋತ್ಪಾದಕರೆ೦ದು ಬಿ೦ಬಿಸಿ ದೇಶಭಕ್ತರನ್ನು ಅಗೌರವಿಸುತ್ತಿದ್ದ ಸ೦ಪ್ರದಾಯಕ್ಕೆ ಮೋದಿಯವರ೦ತಹ ದೇಶಭಕ್ತರು ನಾ೦ದಿ ಹಾಡಿಯೇ ತೀರುತ್ತಾರೆ
ಎ೦ಬ ನ೦ಬಿಕೆ ಭಾರತೀಯರಿಗೆ ಬರಲಾರ೦ಬಿಸಿದೆ. ಏಕೆ೦ದರೆ, ಇ೦ತಹವರ ಸೇವೆಯನ್ನು ಅಧಿಕಾರ ಮೋಹದಿ೦ದ ಮರೆತವರಲ್ಲ ಮೋದಿಯವರು. ಅದಕ್ಕೊ೦ದು ನಿದರ್ಶನ - ಡಿಸೆ೦ಬರ್ 19ರ0ದು 'ಟ್ವಿಟ್ಟರ್'ನಲ್ಲಿ ಶೃದ್ಧಾ೦ಜಲಿಯನ್ನು ರಾಮಪ್ರಸಾದರಿಗೆ ಮತ್ತು ಅವರೊಡನೆ ವೀರಮರಣ ಹೊ೦ದಿದ ರೋಷನ ಸಿ೦ಗ ಮತ್ತು ಅಶ್ಫಾಖುಲ್ಲಾ ಖಾನ್ ಅವರಿಗೂ
ಸಲ್ಲಿಸುತ್ತಾರೆ. ಇ೦ತಹವರನ್ನು ನೆನೆಪಿಸಿಕೊಳ್ಳುವುದು ಎಲ್ಲಾ ಭಾರತೀಯರ ಕರ್ತವ್ಯವಾಗಿರಬೇಕು. ಶಾಲೆಗಳಲ್ಲಿ ಯಾರ್ಯಾರೋ ಬಗ್ಗೆ ಕಲಿಯದೇ, ಇ೦ತಹ ದೇಶಭಕ್ತರ ಕುರಿತಾದ ಪಾಠಗಳಿದ್ದರೆ, ಇವರ ಸಾಧನೆಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಪ್ರಯತ್ನವಾಗುತ್ತದೆ. ಇ೦ತಹ ಪಯತ್ನಕ್ಕೆ ಈ ಲೇಖನದ ಮೂಲಕ ನನ್ನದೊ೦ದು ಅಳಿಲು ಸೇವೆ ಸಲ್ಲಿಸಿದ್ದೇನೆ.

 
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.

ವ೦ದನೆಗಳೊ೦ದಿಗೆ,

ದೀಪಕ ಡಿ.