Search This Blog

Wednesday, December 19, 2007

[ಅತಿಥಿ-ಲೇಖನ - ೨] "ಹೋಳಿ" - ಇದೇ ಬೇಕಿತ್ತೆ ?


ಹವ್ಯಾಸಿ ರಂಗಭೂಮಿಗೆ ನನ್ನ ಪ್ರವೇಶವಾದದ್ದು ಕೆಲವೇ ವರ್ಷಗಳ ಹಿಂದೆ. ನಾನೇನು ಅಂತಹ ಅನುಭವಿಯೂ ಅಲ್ಲ ಅಥವಾ ಒಂದು ನಾಟಕದ ವಿಮರ್ಶೆ ಬರೆಯುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಇಲ್ಲಿರುವುದು ಕೇವಲ ನನ್ನ ವಯಕ್ತಿಕ ಅಭಿಪ್ರಾಯಗಳು ಮತ್ತು ಮನದಾಳದ ಮಾತುಗಳು.


೧೯೬೫ರಲ್ಲೇ ಮರಾಠಿಯಲ್ಲಿ ತೆರೆಕಂಡಿದ್ದ ನಾಟಕ 'ಹೋಳಿ' ಕನ್ನಡಕ್ಕೆ ಇದುವರೆಗೂ ಭಾಷಾಂತರ ಆಗಿರಲೇ ಇಲ್ಲ. ಕನ್ನಡದವರು ಇಂತಹ ಕಾನ್ಸೆಪ್ಟ್ ಗಳನ್ನು ಇಷ್ಟಪಡುವುದಿಲ್ಲವೆಂದೋ ಅಥವಾ ಭಾಷಾಂತರಿಸಲು ಯಾರಿಗೂ ಆಸಕ್ತಿ ಮೂಡದೆಯೋ ಒಟ್ಟಿನಲ್ಲಿ ಕನ್ನಡಿಗರಿಗೆ ಇದರ ದರ್ಶನಭಾಗ್ಯ ದೊರೆತಿರಲಿಲ್ಲ. ಇದೊಂದು ಹಾಸ್ಯಮಿಶ್ರಿತ ಆದರೂ ದುಃಖಾಂತ ಹೊಂದಿರುವ ಒಂದು ಸಾಮಾಜಿಕ ನಾಟಕ. ಕಾಲೇಜ್ ಓದುತ್ತಿರುವ ಕೆಲವು ಪಡ್ಡೆ ಹುಡುಗರ ಹಾಸ್ಟೆಲ್ ಜೀವನದ ಕಥೆ. ಇದೊಂದು ರ್ಯಾಗಿಂಗ್ ಕಥೆ ಹಾಗೂ ಅದರ ದುಷ್ಪರಿಣಾಮಗಳನ್ನು ಹೇಳುವ ನಾಟಕ ಎಂದು ಈ ನಾಟಕದ ಶೀರ್ಷಿಕೆಯಲ್ಲಿದ್ದರೂ ಇದು ರ್ಯಾಗಿಂಗ್ ಕಥೆ ಎಂದು ನನಗನಿಸಲಿಲ್ಲ. ರ್ಯಾಗಿಂಗ್ ಎಂದರೆ ಸೀನಿಯರ್‌ಗಳು ಜೂನಿಯರ್‌ಗಳಿಗೆ ಕೊಡುವ ಕಿರುಕುಳವೇ ಹೊರತು ಸಹಪಾಠಿಯನ್ನು ತೊಂದರೆಗೆ ಸಿಕ್ಕಿಸುವುದಲ್ಲ. "ಅಬಲರ ಮೇಲೆ ಸಬಲರ ದೌರ್ಜನ್ಯದ ಚಿತ್ರಣ" ಎಂದು ವಿವರಣೆ ನೀಡಿರುವ ಈ ನಾಟಕದ ನಿರ್ದೇಶಕರ ಮಾತೇ ಇದಕ್ಕೆ ಸರಿಯಾಗಿ ಹೊಂದುತ್ತದೆ. ಆದರೆ ನನಗೆ ನಿಜವಾಗಿಯೂ ಬೇಸರ ತಂದ ಸಂಗತಿಯೆಂದರೆ ಈ ಚಿತ್ರಣವನ್ನು ಜನರ ಮುಂದಿಡಲು ಆಯ್ದುಕೊಂಡ ದಾರಿ. ಹಾಸ್ಟೆಲ್‍ನ ರಿಕ್ರಿಯೇಷನ್ ರೂಮ್‍ನಲ್ಲಿ ಪ್ರಾರಂಭವಾಗುವ ನಾಟಕ ಅಲ್ಲೇ ಕೊನೆಗೊಳ್ಳುತ್ತದೆ. ಮಧ್ಯ ಒಂದು ಕ್ಯಾಂಟೀನ್ ಮತ್ತೊಂದು ಸಭೆಯ ದೃಶ್ಯಗಳು. ಆದರೆ ಎಲ್ಲ ದೃಶ್ಯಗಳಲ್ಲೂ ಅವಾಚ್ಯ ಶಬ್ದಗಳದ್ದೇ ಏಕತಾನತೆ. ನಾಟಕ ಹುಡುಗರ ಜೀವನದ ಬಗ್ಗೇ ಇರಬಹುದು. ಆದರೆ ಇದನ್ನು ರಂಗದಮೇಲೆ ಪ್ರದರ್ಶಿಸಬೇಕಾದರೆ ಅದನ್ನು ನೋಡಲು ಬರುವಂಥವರು ಎಲ್ಲ ವಯಸ್ಸಿನವರೂ, ಹೆಂಗಸರು, ಮಕ್ಕಳೂ ಇರುತ್ತಾರೆಂಬ ಕಲ್ಪನೆಯೇ ಲೇಖಕರಿಗೆ ಬಂದಂತಿಲ್ಲ. ಲೇಖಕ ಎಂತಹುದೇ ಮನಸ್ಥಿತಿಯವನಿರಲಿ ಅಂತಹ ನಾಟಕವನ್ನಾಡುವ ನಾವೆಂಥವರು? 'ಅಮ್ಮನ್' 'ಅಕ್ಕನ್' ಇಲ್ಲದೇ ಇರುವ ಮಾತುಗಳು ಕೆಲವೇ ಎಂದರೂ ತಪ್ಪಿಲ್ಲ. ಇಷ್ಟೂ ಸಾಲದೆಂಬಂತೆ, ನಾಟಕದಲ್ಲಿ ಬರುವ ೯೦% ಜನ ಹುಡುಗರಾಗಲಿ, ಹುಡುಗಿಯರಾಗಲಿ, ಸಲಿಂಗಕಾಮಿಗಳು ಎಂದು ತೋರಿಸುತ್ತಾರೆ. ಹಾಸ್ಟೆಲ್‍ನಲ್ಲಿ ಸಲಿಂಗಕಾಮಿಗಳಲ್ಲದವರನ್ನು ಹುಡುಕುವ ಪರಿಸ್ಥಿತಿ! ನಿಜಜೀವನದಲ್ಲಿ ನಾನೂ ಹಾಸ್ಟೆಲ್‍ನಲ್ಲೇ ಇದ್ದೆ. ನಮ್ಮ ಸಂಖ್ಯೆ ೩೫೦ ಇತ್ತು. ಇಂತಹ ಒಂದು ಘಟನೆಯೂ ನಡೆದಿರಲಿಲ್ಲ. ಸತ್ಯಕ್ಕೆ ಬಹುದೂರ ನಿಂತಿರುವ ಇಂತಹ ಕಲ್ಪನೆಗಳನ್ನು ಸಾಮಾಜಿಕ ಎಂದು ಕರೆಯಬೇಕೋ ಅಥವಾ ಫಿಕ್ಷನ್ ಎನ್ನಬೇಕೋ ತಿಳಿಯುತ್ತಿಲ್ಲ. ಇವುಗಳ ನಡುವೆ, 'ದೇಸಾಯಿ' ಎಂಬ ಭಾರತೀಯ ಸಂಸ್ಕೃತಿಪ್ರೇಮಿಯನ್ನು ಅಪಮಾನಿಸುವ ದೃಶ್ಯ. 'ನೀವು ಸಂಸ್ಕೃತಿಯವರು ಗಂಡಸತ್ತವರನ್ನು ಬಸುರು ಮಾಡುವವರು' ಎಂಬಂತಹ ಅಸಂಬದ್ಧ, ಅರ್ಥವಿಲ್ಲದ ಸಂಭಾಷಣೆಗಳು ಲೇಖಕನ ಪೂರ್ವಾಗೃಹಪೀಡಿತ ಭಾವನೆಗಳನ್ನು ಸೂಚಿಸುತ್ತವೆ.

ನಾಟಕದಿಂದ ಯಾವ ನೀತಿಯನ್ನು ಹೇಳುತ್ತೇವೆ ಎಂಬುದೆಷ್ಟು ಮುಖ್ಯವೋ ಅದನ್ನು ಹೇಗೆ ಹೇಳುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಇಂತಹ ನಾಟಕಗಳ ಕೊನೆಯಲ್ಲಿ ಪ್ರೇಕ್ಷಕ ನೀತಿಯನ್ನು ಮರೆತು ಕೇವಲ ಬೈಗುಳಗಳನ್ನು ತಲೆಯಲ್ಲಿ ತುಂಬಿಕೊಂಡು ಹೊರಬೀಳುತ್ತಾನೆ. ಎಳೆಯ ಮಕ್ಕಳು ಹತ್ತು ವರ್ಷಗಳ ನಂತರ ತಿಳಿದುಕೊಳ್ಳಬೇಕಾದ ಶಬ್ದಗಳ ಬಗ್ಗೆ ಈಗಲೇ ತಿಳಿದುಕೊಳ್ಳುತ್ತಾರೆ. ಹೆಂಗಸರಿಗೆ ಯಾತಕ್ಕಾದರೂ ಬಂದೆವೋ ಅನ್ನಿಸಿಬಿಟ್ಟಿರುತ್ತದೆ. ಮರಾಠಿಗರು ಬಹಳ ಬೋಳ್ಡ್ ಆಗಿರಬಹುದು. ನಾಟಕರಂಗದಲ್ಲಿ ನಮಗಿಂತಲೂ ಮುಂದುವರೆದಿರಬಹುದು. ಅದೇ ಕಾರಣಕ್ಕೆ ನಮ್ಮ ಸಂಸ್ಕೃತಿಗೇ ಹೊಂದದ ಕಾನ್ಸೆಪ್ಟ್ ಗಳನ್ನು ಜನರ ಮೇಲೆ ಹೇರುವುದಾದರೂ ಯಾಕೆ? ಇಷ್ಟಕ್ಕೂ ನಮ್ಮ ನಾಟಕ ಮಾಡುವ ಚಟ ತೀರಿಸಿಕೊಳ್ಳಲು 'ಹೋಳಿ'ಯೇ ಆಗಬೇಕೆ?

ಧನ್ಯವಾದಗಳೊಂದಿಗೆ

- ಸಿದ್ಧಾರ್ಥ



---------------------------------------------------------------------------------------------------------------------------------------------------------------

ನಮಸ್ಕಾರ/\:)


ನನ್ನ ಮಿತ್ರ ಸಿದ್ಧಾರ್ಥರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇ೦ತಿ,

ವ೦ದನೆಗಳೊ೦ದಿಗೆ,

ದೀಪಕ.


---------------------------------------------------------------------------------------------------------------------------------------------------------------

1 comment:

C.A.Gundapi said...

maga .. Chennagi barididdiya.
Ninna ella lekhanagalu nanage swalpa chikkkadu anisuttave. May be u choose intersting topics :)

Keep going