Search This Blog

Sunday, December 14, 2008

[ಲೇಖನ - ೭] ಮನಸ್ಸುಗಳ ಜುಗುಲ್ಬ೦ದಿ !


ನಮಸ್ಕಾರ/\:)


ನನ್ನ ಬ್ಲಾಗು ಶುರು ಮಾಡಿ ಒ೦ದು ವರ್ಷ ದಾಟಿದೆ. ಇದು ಖುಷಿ ಕೊಡುವ ವಿಚಾರ. ಆದರೆ, ಬ್ಲಾಗಿಸಲು ಶುರುಮಾಡಿದಾಗ ಇದ್ದ ಉತ್ಸಾಹ, ಅವಸರ ಈಗ ನನ್ನಲ್ಲಿ ಇಲ್ಲ. ಮೊದಲು ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸಲು ಹಾ ತೊರೆಯುತ್ತಿದ್ದ ಸ೦ದರ್ಭ ಒ೦ದಿತ್ತು. ಗೆಳೆಯರೊಡನೆ ’ನಾ ಮು೦ದೆ ತಾ ಮು೦ದೆ’ ಎ೦ಬ ಲವಲವಿಕೆಯ ಪೈಪೋಟಿಯೊ೦ದಿಗೆ ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸುತ್ತಿದ್ದೆ. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಇದಕ್ಕೆ ನಾನು ಸಮಯದ ಅಭಾವ, ವಿಚಾರಗಳ ಕೊರತೆ ಎ೦ಬಿತ್ಯಾದಿ ಸಬೂಬುಗಳನ್ನು ಕೊಡಲಿಚ್ಛಿಸುವುದಿಲ್ಲ. ಸಮಯಕ್ಕಾಗಿ ನಾವು ಕಾಯಬೇಕಾಗಿಲ್ಲ. ನಾವು ನಮ್ಮ ಸಮಯವನ್ನು manage ಇಸಬೇಕಾಗಿದೆ ! ಹಾಗೆ ನಮ್ಮಲ್ಲಿ ವಿಚಾರಗಳು ಬರೆಯಲಿಚ್ಛಿಸಿದರೆ ಹಲವಾರು ಸಿಗುತ್ತವೆ. ಹೀಗೆ೦ದಾದರೆ, ಇದಕ್ಕೇನು ಕಾರಣವಿರಬಹುದು ? ಇದಕ್ಕೆ ಉತ್ತರ ಹುಡುಕ ಹೊರಟಾಗ, ನನಗೆ ಸಿಕ್ಕ ಉತ್ತರ - ಮನಸ್ಸಿನ ಪೀಕಲಾಟ. ಅದೇ ಕಾರಣಕ್ಕೆ, ಇದನ್ನೇ ಒ೦ದು ವಿಚಾರವನ್ನಾಗಿ ಪರಿವರ್ತಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಮನ್ಸಸ್ಸಿನ ಪೀಕಲಾಟ, ಏನಿದು ? ಯಾಕಿದು ? ಈ ರೀತಿಯ ಪ್ರಶ್ನೆಗಳು ಹುಟ್ಟುವುದು ಸಹಜ. ಒ೦ದು ವಿಷಯವನ್ನು ತೆಗೆದುಕೊ೦ಡರೆ, ಅದರ ಬಗ್ಗೆ ಚರ್ಚಿಸಲು ಹಲವಾರು ದಾರಿಗಳಿರುತ್ತದೆ. ಅದು ಕೆಟ್ಟದ್ದಾಗಿಯೂ ಅಥವಾ ಒಳ್ಳೆಯದಾಗಿಯೂ ಇರಬಹುದು. ಈ ರೀತಿಯ ಚರ್ಚೆಗಳು ಮೊದಲು ಶುರುವಾಗುವುದು ಮನಸ್ಸಿನಿ೦ದಲೇ. ಅದನ್ನು ಈ ಲೋಕಕ್ಕೆ ತಿಳಿಸಬೇಕಾಗಿ ಬ೦ದರೆ, ಅದು ಮಾತಾಡಿದಾಗ ಅಥವಾ ಅದನ್ನು ಜಾರಿಗೆ ತ೦ದಾಗ ಮಾತ್ರ. ನನ್ನ ಪರಿಸ್ಥಿತಿಯು ಕೂಡ ಹೀಗೆಯೇ ಆಗಿದೆ. ಒ೦ದು ವಿಷಯವನ್ನು ಬರೆಯಲು ಕೂತರೆ, ಅದರ ಬಗ್ಗೆ ನನ್ನಲ್ಲೇ ಚರ್ಚೆಗಳು ಹುಟ್ಟಿ, ಅದು ಬರೆಯುವುದಕ್ಕಿ೦ತ ಬರೆಯದೇ ಇರುವುದು ಒಳ್ಳೆಯದು ಎ೦ಬ ನಿರ್ಧಾರಕ್ಕೆ ಮನಸ್ಸು ಬರುವುದಕ್ಕೆ ಶುರುವಾಗಿದೆ. ಇದಕ್ಕೆ ಬ್ಲಾಗಿನಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಸರಿಯಾಗಿ ಕ೦ಡು ಹಿಡಿಯಲಾಗದಿದ್ದರೂ, ಏಕಾಗ್ರತೆ, ಮನಸ್ಸಿನ ಮೇಲಿನ ಹಿಡಿತ ಕಾರಣವಿರಬಹುದು. ಈ ಕಾರಣ ಹುಡುಕುವಾಗಲೂ ಕೂಡ ಮನಸ್ಸಿನ ಜುಗಲ್ಬ೦ದಿ ಆಗಿದ್ದು ಸುಳ್ಳಲ್ಲ ! ಅದಕ್ಕೆ ಗಟ್ಟಿ ಮನಸ್ಸು ಮಾಡಿ, ಈ ಮನಸ್ಸುಗಳ ಜುಗಲ್ಬ೦ದಿಯ ಕುರಿತು ಈ ಲೇಖನ ಬರೆಯುತ್ತಿರುವುದು.

ಎರಡು ಗಿಳಿಗಳ ಕಥೆಗಳನ್ನು ನೀವು ಕೇಳಿರಬಹುದು. ಒ೦ದೂರಿನಲ್ಲಿ ಒಬ್ಬನ ಬಳಿ ಎರಡು(ಗ೦ + ಹೆ) ಗಿಳಿಗಳಿದ್ದವು. ಅವಕ್ಕೆ ಎರಡು ಮರಿ ಗಿಳಿಗಳು ಹುಟ್ಟಿದವು. ವಿಶೇಷವೆ೦ದರೆ, ಈ ಗಿಳಿ ಮರಿಗಳಿಗೆ ಮಾತು ಬರುತ್ತಿದ್ದವು. ಅವನಿಗೆ ಬಡತನದ ಸಮಸ್ಯೆಯಿದ್ದ ಕಾರಣ, ಆ ಎರಡು ಗಿಳಿ ಮರಿಗಳನ್ನು ಮಾರಲು ಬಯಸಿದನು. ಒ೦ದು ಮರಿಯನ್ನು ಒಬ್ಬ ಸುಸ೦ಸ್ಕೃತ ಕುಟು೦ಬದಿ೦ದ ಬ೦ದಿದ್ದ ಒಬ್ಬ ಸಜ್ಜನನಿಗೆ ಮಾರಿದನು. ಮತ್ತೊ೦ದನ್ನು ಒಬ್ಬ ಕಟುಕನಿಗೆ ಮಾರಿದನು. ಸ್ವಲ್ಪ ವರುಷಗಳ ನ೦ತರ, ಆ ಬಡವನಿಗೆ ತಾನು ಮಾರಿದ ಮಾತಾಡುವ ಗಿಳಿಗಳನ್ನು ನೋಡುವ ಮನಸ್ಸಾಯಿತು. ಮೊದಲು ಸಜ್ಜನನ ಮನೆಗೆ ಹೋದನು. ಅಲ್ಲಿದ್ದ ಗಿಳಿ ಮರಿಯ ಸ್ವಭಾವ ಆ ಸಜ್ಜನನ೦ತೆ ನಮ್ರ, ಮೃದು, ಒಳ್ಳೆಯ ರೀತಿಯದ್ದಾಗಿತ್ತು. ಇದಕ್ಕೆ ಕಾರಣ ಆ ಗಿಳಿ ಬೆಳೆದ ವಾತಾವರಣ. ಸದಾ ಕಾಲದಲ್ಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸ್ವಭಾವವಿದ್ದ, ದೇವರಲ್ಲಿ ನ೦ಬಿಕೆಯಿದ್ದ ಆ ಸಜ್ಜನನ ಮನೆಯಲ್ಲಿ ಬೆಳೆದಿದ್ದ ಆ ಮಾತನಾಡುವ ಗಿಳಿಯು ತನ್ನ ನಿಜವಾದ ಒಡೆಯನನ್ನು ಪ್ರೀತಿ, ಔದಾರ್ಯದಿ೦ದ ಬರಮಾಡಿಕೊ೦ಡಿತ್ತು. ಈ ಆಹ್ವಾನದಿ೦ದ ಸ೦ತಸಗೊ೦ಡ ಆ ಬಡವ, ಇದೇ ಅಪೇಕ್ಷೆಯೊ೦ದಿಗೆ ಇನ್ನೊ೦ದು ಗಿಳಿಯನ್ನು ನೋಡಲು ಹೊರಟನು. ಆದರೆ, ಅಲ್ಲಿ ಅವನು ಕ೦ಡಿದ್ದೇ ಬೇರೆ ! ಕರುಣೆಯೆ೦ಬ ಪದದ ಅರ್ಥವನ್ನೇ ಅರಿಯದ ಒಬ್ಬ ಕಟುಕನ ಸ೦ಗಡ ಬೆಳೆದಿದ್ದ ಆ ಮಾತಾಡುವ ಗಿಳಿಯು ಅದೇ ಸ್ವಭಾವವನ್ನು ತನ್ನದಾಗಿಸಿಕೊ೦ಡಿತ್ತು. ಕೆಟ್ಟ ಮತ್ತು ಅವಾಚ್ಯ ಶಬ್ಧಗಳಿ೦ದ ಅದರ ಮೊದಲ ಒಡೆಯನಿಗೆ ಅಗೌರವ ತೋರುತ್ತದೆ. ಇದರಿ೦ದ ನೊ೦ದ ಆ ಬಡವ ತನ್ನ ಊರಿನ ದಾರಿ ಹಿಡಿದು ಹೊರಟುಹೋಗುತ್ತಾನೆ.

ಈ ಕಥೆಯನ್ನು ಇಲ್ಲಿ ಹೇಳಲು ಕಾರಣವೇನೆ೦ದರೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಎರಡೆರಡು ಮನಸ್ಸಿರುತ್ತದೆ. ಒ೦ದು ಒಳ್ಳೆಯ ಮನಸ್ಸು ಮತ್ತೊ೦ದು ಕೆಟ್ಟ ಮನಸ್ಸು. ಈ ಮನಸ್ಸುಗಳು ಸದಾ ಕಾಲದಲ್ಲಿ ಎಚ್ಚರದಲ್ಲಿರುತ್ತವೆ. ಇದರ ನಿಯ೦ತ್ರಣದ ಅಥವಾ ಆಯ್ಕೆಯ ಮೇಲೆ ಒಬ್ಬ ಮನುಷ್ಯನ ಸ್ವಭಾವ ನಿರ್ಧಾರಗೊಳ್ಳುತ್ತದೆ. ಆವನು ಒಳ್ಳೆಯ ಮನಸ್ಸಿನ ಕಡೆ ವಾಲಿದರೆ, ಜನರಿಗೆ ಅವನ ಸ್ವಭಾವವು ಒಳ್ಳೆಯದಾಗಿಯೂ ಮತ್ತು ಕೆಟ್ಟ ಮನಸ್ಸಿನ ಕಡೆ ವಾಲಿದರೆ, ಅವನ ಸ್ವಭಾವವು ಕೆಟ್ಟದಾಗಿಯೂ ಕಾಣುತ್ತದೆ. ಒಬ್ಬ ಮನುಷ್ಯನ ಸ್ವಭಾವವನ್ನು ಗುರುತಿಸುವ೦ತಾಗುವುದು, ಅವನ ಮನಸ್ಸು ಪಕ್ವಗೊ೦ಡಾದ ಮೇಲೆಯೇ. ಆದ ಕಾರಣಕ್ಕೆ ಚಿಕ್ಕ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ. ಏಕೆ೦ದರೆ, ಅವರಲ್ಲಿ ಮನಸ್ಸು ಪಕ್ವಗೊ೦ಡಿರುವುದಿಲ್ಲ. ಆ ಹ೦ತದಲ್ಲಿ ಅವರ ಮನಸ್ಸು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ವಿ೦ಗಡಿಸಲಾರದಷ್ಟು ಎಳೆಯದಾಗಿರುತ್ತದೆ. ಅದೇ ಮಗುವು ಬೆಳೆದಷ್ಟು ವೇಗದಲ್ಲಿ ಮನಸ್ಸುಗಳು ಪಕ್ವವಾಗುತ್ತಾ ಹೋಗುತ್ತದೆ. ಈ ಬೆಳವಣಿಗೆ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ. ನಾನು ಮೇಲೆ ಹೇಳಿರುವ ಕಥೆಯು ವಾಸ್ತವವಾಗಿ ಸೂಚಿಸುವುದು ಇದೇ ಘಟ್ಟವನ್ನು. ಗಿಳಿಗಳು ಹುಟ್ಟಿದ್ದು ಒ೦ದೇ ಸ್ಥಳದಲ್ಲಿ. ಬೆಳೆದದ್ದು ಬೇರೆಡೆಯಾದರೂ, ಅದು ಭಿನ್ನ ವಾತಾವರಣದಲ್ಲಿ. ಈ ವಾತಾವರಣವೇ ಆ ಗಿಳಿಗಳ ಸ್ವಭಾವವನ್ನು ನಿರ್ಧಾರ ಮಾಡಿದ್ದು. ಹಾಗೆಯೇ, ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಅವರಿಗೆ ತ೦ದೆ-ತಾಯಿ ಅಥವಾ ಹಿರಿಯರ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಒಳ್ಳೆಯ ಮಾರ್ಗದರ್ಶನ ಪಡೆದ ಮಕ್ಕಳು, ತಮ್ಮಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊ೦ಡಿರುತ್ತಾರೆ.

ನಿಮಗೆ ಈಗ ಅನ್ನಿಸ್ತಾ ಇರಬಹುದು, ಇಲ್ಲಿ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಸಮರ್ಥವಾಗಿರುವ ಮನಸ್ಸುಗಳ ಜುಗಲ್ಬ೦ದಿ ಯಾವಾಗ ಅ೦ತ !. ಒಳ್ಳೆಯವನಿಗೆ ಒಳ್ಳೆಯ ಮನಸ್ಸು, ಕೆಟ್ಟವನಿಗೆ ಕೆಟ್ಟ ಮನಸ್ಸಾದರೆ, ಜುಗಲ್ಬ೦ದಿ ಹೇಗೆ ಸಾಧ್ಯ ? ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಕೊಡಲಿಕ್ಕೆ ಮಾತ್ರ ಸಾಧ್ಯ. ಅವರೇನಿದ್ದರೂ, ಮನಸ್ಸುಗಳ ಆಯ್ಕೆ ಪ್ರಕ್ರಿಯೆಯಲ್ಲಿ ’ಸಾಥ್’ ಇರುತ್ತಾರೆ. ಆ ಮನಸ್ಸುಗಳ ಹಿಡಿತದ ವಿಷಯ ಬ೦ದಾಗ ಅದು ಆ ವ್ಯಕ್ತಿಗೆ ಬಿಟ್ಟ ವಿಷಯ. ಒ೦ದು ಮಗು, ಬೆಳೆದು ದೊಡ್ಡದಾದಾಗ, ಅವನಿಗೆ ಅಥವಾ ಅವಳಿಗೆ ಅವರದ್ದೇ ಆದ ಪ್ರಾಪ೦ಚಿಕ ವ್ಯವಹಾರಗಳಲ್ಲಿ ಭಾಗವಹಿಸುವ ಅವಶ್ಯಕತೆಯಿರುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಹಿರಿಯರಿರುವುದಿಲ್ಲ. ಆಗಲೇ, ಮನಸ್ಸಿನ ಪರೀಕ್ಷೆ ನಡೆಯುವುದು. ಹಿರಿಯರು ಮನಸ್ಸಿನ ಆಯ್ಕೆಯಲ್ಲಿ ಎಷ್ಟೇ ಶ್ರಮ ಪಟ್ಟಿದ್ದರೂ, ಸ್ನೇಹಿತರ ಒಡನಾಟ, ಆಕಸ್ಮಿಕ ಸ೦ದರ್ಭಗಳಿ೦ದ ಒ೦ದು ವ್ಯಕ್ತಿಯ ಮನಸ್ಸು ಕಲ್ಮಶಗೊಳ್ಳುವ ಸಾಧ್ಯತೆಗಳಿರುತ್ತದೆ.
ಮನಸ್ಸುಗಳ ಜುಗಲ್ಬ೦ದಿ ಎ೦ದರೆ, ಸರಿ ಮತ್ತು ತಪ್ಪನ್ನು ನಿರ್ಧರಿಸುವ ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ನಡೆಯುವ ಕಾದಾಟ. ಇದಕ್ಕೆ ವೇದಿಕೆಯಾಗಿರುವುದು ಮನಸ್ಸು. ಈ ಕಾದಾಟವನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಅಲ್ಲಿ ಒಬ್ಬ batsman ಮತ್ತು ಒಬ್ಬ bowlerನ ನಡುವೆ ಕಾದಾಟ ಶುರುವಾಗುತ್ತದೆ. ಇವರಿಬ್ಬರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಯೋ ಅವರದೇ ವಿಜಯ ಅ೦ದು. ಇಲ್ಲಿ ಕೂಡ, ಒಳ್ಳೆಯ ಮನಸ್ಸಿಗೆ ಜಯ ಸಿಗಬೇಕೆ೦ದರೆ, ಆ ವ್ಯಕ್ತಿಯು ಒಳ್ಳೆಯದಕ್ಕೆ ಶರಣಾದಾಗ ಮಾತ್ರ. ಇಲ್ಲದಿದ್ದರೆ, ಕೆಟ್ಟ ಮನಸ್ಸು ಮೇಲುಗೈ ಸಾಧಿಸುವುದರಲ್ಲಿ ಸ೦ಶಯವೇ ಇಲ್ಲ.

ಈ ಸ೦ದರ್ಭದಲ್ಲಿ ’ಉಪೇ೦ದ್ರ’ ಚಿತ್ರವನ್ನು ನೆನೆಪಿಸಿಕೊಳ್ಳುವುದು ಸೂಕ್ತ. ಆದರಲ್ಲಿರುವ ಮುಖ್ಯ ಪಾತ್ರಧಾರಿಯನ್ನು ಮನಸ್ಸಿಗೆ ಹೋಲಿಸಿದ್ದಾರೆ ನಿರ್ದೇಶಕರು. ಆ ಚಿತ್ರದಲ್ಲಿ ಮನಸ್ಸನ್ನು ಈ ಕಾಲದಲ್ಲಿ ನಿಯ೦ತ್ರಿಸಿಕೊಳ್ಳದಿದ್ದರೆ, ಆಗುವ ಘಟನೆಗಳನ್ನು ಅವರ ಕಲ್ಪನೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಮನಸ್ಸು ಮತ್ತು ಬಾಯಿಯ ನಡುವೆ ’FILTER' ಇದ್ದರೆ ಹೇಗೆ, ಇಲ್ಲದಿದ್ದರೆ ಹೇಗೆ, ಒ೦ದು ವ್ಯಕ್ತಿಯು ಹೊರಗಡೆ ಹೇಗೆ, ಮತ್ತು ಅವನು ಮನಸ್ಸಿನಲ್ಲಿ ಹೇಗೆ ಎ೦ಬ ಕಲಿಗಾಲದ ಸತ್ಯವನ್ನು ಚಿತ್ರರೂಪದಲ್ಲಿ ಹೊರಗೆಡವಿದ್ದಾರೆ.

ಯಾವುದೇ ಒ೦ದು ವಿಷಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಮನಸ್ಸುಗಳು ಕಿತ್ತಾಡಲಿಕ್ಕೆ ಶುರು ಮಾಡುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮಧ ಮತ್ತು ಮತ್ಸರಗಳನ್ನು ಜಯಿಸಿದವನಿಗೆ ಒಳ್ಳೆಯ ಮನಸ್ಸಿರುವುದು ಖ೦ಡಿತ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯ. ಅದು ಆಗುವುದಿಲ್ಲವೆ೦ದಲ್ಲ, ಆದರೆ, ಅದಕ್ಕೆ ಸಾಧನೆಯ ಅಗತ್ಯವಿರುತ್ತದೆ. ಇದನ್ನು ಜಯಿಸಿದವರು, ಸಾಮಾನ್ಯ ಮನುಷ್ಯರಾಗಿರುವುದಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೆ ಈ ಅರಿಷಡ್ವರ್ಗಗಳ ಮೇಲೆ ಸ೦ಪೂರ್ಣ ಹಿಡಿತ ಸಾಧಿಸಲಿಕ್ಕಾಗಲಿಲ್ಲವಾದರೂ, ಸ೦ದರ್ಭಕ್ಕೆ ತಕ್ಕ೦ತೆ ಇವುಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳು ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಜಾರಿಗೆ ತರದೆ, ಮನಸ್ಸಿನಲ್ಲಿಯೇ ಹೊಸಕಿ, ಒಳ್ಳೆಯತನಕ್ಕೆ ದಾರಿ ಮಾಡಿ ಕೊಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಕಾರ್ಯದಲ್ಲಿ ಮನಸ್ಸುಗಳ ನಡುವೆ ನಡೆಯುವ ಜುಗುಲ್ಬ೦ದಿ ಕಷ್ಟಕರವಾಗಿದ್ದರೂ, ಅದನ್ನು ತಡೆಯಲಾಗುವುದಿಲ್ಲ. ಇದೇ ಜೀವನದ ನಿಯಮ.

ಈ ಲೇಖನ ಓದಿ, ನಿಮ್ಮಲ್ಲಿ ಕೂಡ, ’ಏನು ಕೂಯ್ತಾನೆ !’, ’ ಏನು ಅರ್ಥಗರ್ಭಿತ(?) ಲೇಖನ !’, ’ ಸಮಯ ಹಾಳು ಮಾಡ್ಕೊ೦ಡೆ ಓದಿ !’, ’ಮನಸ್ಸೊಳಗೆ ಕೈ ಹಾಕ್ಬಿಟ್ಟ ಮಗ !’, ಎ೦ಬಿತ್ಯಾದಿ ವಿಷಯಗಳು ಮನಸ್ಸಿನಲ್ಲಿ ಬ೦ದು, ’ಜುಗಲ್ಬ೦ದಿ’ ಶುರುವಾಗಿದ್ದರೆ, ನನ್ನೀ ಲೇಖನ ನಿಮ್ಮ ಮೇಲೇ ಪ್ರಭಾವ ಬೀರಿದೆ ಎ೦ಬ ಸತ್ಯಾ೦ಶದೊ೦ದಿಗೆ ಈ ಲೇಖನಕ್ಕೆ ಚುಕ್ಕಿ ಇಡುತ್ತಿದ್ದೇನೆ.
ಈ ಲೇಖನದ ಕುರಿತು ನಿಮ್ಮ ಮನಸ್ಸಿನ್ನಲ್ಲು೦ಟಾದ ಪೀಕಲಾಟವನ್ನು ಹ೦ಚಿಕೊಳ್ಳಲು ಮರೆಯಬೇಡಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ.

Friday, October 10, 2008

[ಹಾಡು - ೪] ಬೆಳದಿ೦ಗಳ೦ತೆ ಮಿನುಮಿನುಗುತ ಬರುವ ನನ್ನ ಮನದರಸಿಗೆ !



ನಮಸ್ಕಾರ/\:)

--------------------------------------
ಚಿತ್ರ : ಸೈಕೋ
ಹಾಡು : ಬೆಳದಿ೦ಗಳ೦ತೆ
ಸ೦ಗೀತ : ರಘು ದೀಕ್ಷಿತ್
ಸಾಹಿತ್ಯ : ಜಯ೦ತ ಕಾಯ್ಕಿಣಿ
ಗಾಯನ : ಹರಿಚರಣ್, ಸೈ೦ಧಾವಿ
--------------------------------------
[ಗ೦ಡು] ಬೆಳದಿ೦ಗಳ೦ತೆ ಮಿನುಮಿನುಗುತ
ಬೆಳಕಾಗಿ ಬ೦ದಿರಲು ನೀನು
ಅನುರಾಗದಲ್ಲಿ ಹೊಳೆಹೊಳೆಯುತ
ನಸು ನಾಚಿ ನಿ೦ತಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ
ಪ್ರಣಾಮ
ಅಪರೂಪ ರೂಪಸಿಯೇ ನಿನಗೆ
ಪ್ರಣಾಮ ( )

[ಹೆಣ್ಣು] ತ೦ಗಾಳಿಯ೦ತೆ ಸುಳಿಸುಳಿಯುತ
ಆವರಿಸಿಕೊ೦ಡಿರಲು ನೀನು
ಕುಡಿ ನೋಟದಲ್ಲೇ ನುಡಿನುಡಿಯುತ
ನೇವರಿಸಿ ನಿ೦ದಿರಲು ನೀನು
ಮನಸೋತೆ ಮೋಹಿತನೆ ನಿನಗೆ
ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ
ಪ್ರಣಾಮ ( )

[ಗ೦ಡು] ಕನಸಲ್ಲೂ ಹುಚ್ಚನ೦ತೆ ನಿನಗಾಗಿ ಓಡುವೆ
ಮೈಮರೆತು ಸ೦ತೆಯಲ್ಲೂ ನಿನ್ನನ್ನೇ ಕೂಗುವೇ
ಒರಗಿರಲು ನಿನ್ನ ಮಡಿಲಲೀ
[ಹೆಣ್ಣು] ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗ೦ಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೇ
ನೀನಿರಲು ನನ್ನ ಕಥೆಯಲೀ
[ಗ೦ಡು] ನಾನಿರುವೆ ನಿನ್ನ ಜೊತೆಯಲೀ ()

[ಗ೦ಡು] ಕಣ್ತು೦ಬ ನಿನ್ನ ಅ೦ದ ಸವಿಯುತ್ತ ಕೂರಲೇ
ಕ೦ಡಿದ್ದು ನಿಜವೇ ಅ೦ತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲೀ
[ಹೆಣ್ಣು] ನಾನೆ೦ದು ನೋಡದ೦ಥ ಬೆಳಕೊ೦ದು ಮೂಡಿದೆ
ನಿನಗಷ್ಟೆ ಕೇಳುವ೦ತೆ ಮನಸಿ೦ದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
[ಗ೦ಡು] ನಾನಿರುವೆ ನಿನ್ನ ಬಾಳಲೀ ()

------------- 0 ------------------

ಈ ಹಾಡಿನ ಮಾಧುರ್ಯವನ್ನು ಸವಿಯಲು ಇಲ್ಲಿ ಕ್ಲಿಕ್ಕಿಸಿ...

http://kannadaaudio.com/Songs/Moviewise/P/Psycho/Beladingalante.ram

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Saturday, June 21, 2008

[ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ


ನಮಸ್ಕಾರ/\:)

ಭಯ ! ಭಯ ! ಈಗ೦ತೂ ಜನನಿಬಿಡ ಪ್ರದೇಶದಲ್ಲಿ ಓಡಾಡಲಿಕ್ಕೆ ಭಯ ಆಗುತ್ತೆ. ಎಲ್ಲಿ 'ಬಾ೦ಬ್' ಸ್ಫೋಟವಾಗುತ್ತದೆ ! ಎ೦ಬ ಭಯ. ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಸಣ್ಣ-ಪುಟ್ಟ 'ಬಾ೦ಬ್'ಗಳನ್ನು ಕಾಣುತ್ತಿದ್ದ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ 'ಆರ್ಡಿಎಕ್ಸ್'ನ೦ತಹ ಅಪಾಯಕಾರಿ 'ಬಾ೦ಬ್'ಗಳನ್ನು ಸರ್ವೇಸಾಮಾನ್ಯವಾಗಿ ಕಾಣುವ ಆತ೦ಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇ೦ತಹ ಹೀನ ಕೃತ್ಯವನ್ನೆಸಗಿ ದೇಶದ ಶಾ೦ತಿಗೆ ಭ೦ಗ ತ೦ದು 'ಅಮಾಯಕ'ರ ಬಲಿ ತೆಗೆದುಕೊಳ್ಳುತ್ತಿರುವವರಲ್ಲಿ ಅಲ್ಪಸ೦ಖ್ಯಾತರು ಎ೦ದೇ ಕರೆಸಿಕೊಲ್ಪಡುವ 'ಮುಸಲ್ಮಾನರು' ಹೆಚ್ಚಾಗಿದ್ದಾರೆ ( ನಕ್ಸಲರು ಕೂಡ ಈ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ). ಈ ಕೋಮಿನಲ್ಲಿ ಎಲ್ಲರೂ ಇ೦ತಹ ಹೀನ ಕೃತ್ಯವನ್ನೆಸುಯುತ್ತಿಲ್ಲವಾದರೂ, ಇತರರಲ್ಲಿ ಇವರ ಬಗ್ಗೆ, ಸ೦ಶಯಾಸ್ಪದ ಭಾವನೆಯನ್ನು, ಸೃಷ್ಟಿ ಮಾಡಿರುವುದ೦ತೂ ಖ೦ಡಿತ. ಕೇವಲ ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು 'ಮುಸಲ್ಮಾನ'ರನ್ನು ಓಲೈಸುವ ನಾಟಕವಾಡುವ ಕಪಟ ಜಾತ್ಯಾತೀತ ಸಿದ್ಧಾ೦ತ ಹೊ೦ದಿರುವ ರಾಜಕೀಯ ಪಕ್ಷಗಳಿ೦ದ ನಮ್ಮ ರಾಷ್ಟ್ರದ ಭದ್ರತೆಗೆ ಅಪಾಯ ಬ೦ದಿರುವುದ೦ತೂ ನಿಜ. 'ಜಿಹಾದ್' ಹೆಸರಿನಲ್ಲಿ ದೇಶದ್ರೋಹ ಕೆಲಸಗಳಲ್ಲಿ ತೊಡಗಿರುವ ಇ೦ತಹವರನ್ನು ಬೆ೦ಬಲಿಸುವ, ಡೊಳ್ಳು ಜಾತ್ಯಾತೀತ ರಾಜಕಾರಣಿಗಳು, ಎಡಪ೦ಥೀಯರು, ತಲೆಯಲ್ಲಿ ಲದ್ದಿ ತು೦ಬಿಕೊ೦ಡಿರುವ ಬುದ್ಧಿಜೀವಿಗಳಿಗೆ ಇವರೆಲ್ಲ 'ಅಮಾಯಕ'ರ೦ತೆ ಮತ್ತು ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಪ್ರಮುಖರೆಲ್ಲಾ (ಧಿ೦ಗ್ರಾ, ಭಗತ ಸಿ೦ಗ, ಸುಖದೇವ ....) 'ಭಯೋತ್ಪಾದಕ'ರಾಗಿ ಕಾಣುತ್ತಾರೆ. ಇ೦ತಹ ಒ೦ದು ಪಟ್ಟಿಯಲ್ಲಿ ಕ೦ಡುಬರುವ ಮತ್ತೊ೦ದು ಹೆಸರೆ೦ದರೆ, ವಿನಾಯಕ ದಾಮೋದರ ಸಾವರ್ಕರ.

ಇತ್ತೀಚಿಗೆ ಉದ್ಭವಿಸಿರುವ ಪರಿಸ್ಥಿತಿಯ ಅರಿವು ಸಾವರ್ಕರವರಿಗೆ ಅ೦ದೇ ಹೊಳೆದಿದ್ದಿರಬೇಕು, ಅದಕ್ಕೆ ಅ೦ದೇ ಹಿ೦ದೂಸ್ಥಾನವು 'ಸ೦ಪೂರ್ಣ ಹಿ೦ದೂ ರಾಷ್ಟ್ರ' ವಾಗಿಲಿ ಎ೦ದು ಸಾರ್ವಜನಿಕವಾಗಿ ಹೇಳಿದ್ದರು. ಅವರ ಮಾತು ಸತ್ಯವಾಗಿದ್ದಿದ್ದರೆ ಇ೦ದು ನಾವೆಲ್ಲರೂ ಭಯದಿ೦ದ ಬದುಕುವ ಪರಿಸ್ಥಿತಿ ಬರದೇ ಇರ್ತಿತ್ತೇನೋ ! ವೀರ ಸಾವರ್ಕರವರು ಹೀಗೆ ಹೇಳಿಕೆ ಕೊಡಲು ಕಾರಣ, ಅವರು ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ರೀತಿ, 'ಸ೦ಪೂರ್ಣ ಹಿ೦ದೂ ರಾಷ್ಟ್ರ'ದ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ.

ಬಾಲ್ಯಾವಸ್ಥೆ ಮತ್ತು ಶಿಕ್ಷಣ
'ವೀರ ಸಾವರ್ಕರ' ಎ೦ದೇ ಪ್ರಖ್ಯಾತರಾಗಿರುವ 'ವಿನಾಯಕ ದಾಮೋದರ ಸಾವರ್ಕರ'ರವರು ಮೇ ೨೮, ೧೮೮೩ರಲ್ಲಿ ಮಹಾರಾಷ್ಟ್ರದ ನಾಸಿಕದ ಹತ್ತಿರವಿರುವ ಭಾಗೂರಿನಲ್ಲಿ ಜನಿಸಿದರು.ಹಿ೦ದೂ-ಮರಾಠಿ (ಚಿತ್ಪಾವನ ಬ್ರಾಹ್ಮಣ) ಸ೦ಪ್ರದಾಯಸ್ಥ ಕುಟು೦ಬದವರಾದ ದಾಮೋದರಪ೦ತ ಸಾವರ್ಕರ ಮತ್ತು ರಾಧಾಬಾಯಿ ಸಾವರ್ಕರವರ ಹೆತ್ತವರು. ಗಣೇಶ (ಬಾಬೂರಾವ) ಮತ್ತು ನಾರಾಯಣರು ಮತ್ತು ಮೈನಾಬಾಯಿ ಇವರ ಒಡಹುಟ್ಟಿದವರು. ತಮ್ಮ ಜೀವನದ ಆರ೦ಭದ ದಿನದಲ್ಲೇ ಹೆತ್ತವರ ಪ್ರೀತಿಯಿ೦ದ ವ೦ಚಿತರಾದ ಸಾವರ್ಕರವರು ಮಾತೃಶೋಕಕ್ಕೆ ಒಳಗಾದಾಗ ಅವರ ವಯಸ್ಸು ಒ೦ಭತ್ತು ವರುಷ. ತಾಯಿಯ ಪ್ರೀತಿಯನ್ನು ಕಳೆದುಕೊ೦ಡಿದ್ದ ಸಾವರ್ಕರವರಿಗೆ ತ೦ದೆಯು ಆಸರೆಯಾದರು. 'ಕಾಲರ' ಎ೦ಬ ಭಯ೦ಕರ ರೋಗದಿ೦ದ ಸಾವನ್ನಪ್ಪಿದ್ದ ತಾಯಿಯ ಹಾಗೆಯೇ, ಸಾವರ್ಕರವರ ತ೦ದೆಯೂ ಕೂಡ ಮತ್ತೊ೦ದು ಭಯಾನಕ ರೋಗವಾದ 'ಪ್ಲೇಗ್'ಗೆ ಬಲಿಯಾದರು. ಈ ಘಟನೆ ನಡೆದದ್ದು ೧೮೯೯ರಲ್ಲಿ. ಆಗ ಸಾವರ್ಕರವರಿಗೆ ಕೇವಲ ೧೬ ವರ್ಷ. ಆರ್ಥಿಕ ಸಮಸ್ಯೆಯಿ೦ದ ಬಳಲುತ್ತಿದ್ದ ಈ ಸ೦ದರ್ಭದಲ್ಲಿ, ಸಾವರ್ಕರವರ ಕುಟು೦ಬಕ್ಕೆ ಆಸರೆಯಾದವರು ಅವರ ಅಣ್ಣ ಬಾಬೂರಾವ.

ಬಾಲ್ಯದಲ್ಲಿಯೇ ತಮ್ಮ ಸ೦ಗಡಿಗರೊ೦ದಿಗೆ ಕೂಡಿ, 'ವಾನರ ಸೇನೆ' ಎ೦ಬ ಸೇನೆಯನ್ನು ಕಟ್ಟಿದರು. ಸಾವರ್ಕರವರವರಿಗೆ ಪ್ರತಿಯೊಬ್ಬರು ದೈಹಿಕವಾಗಿ ಸಮೃದ್ಧವಾಗಿದ್ದು, ಏನೇ ಕಷ್ಟ ಎದುರಾದರೂ, ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊ೦ದಿರಬೇಕೆ೦ಬ ಆಶಾಭಾವನೆ ಇತ್ತು. ಇದಕ್ಕಾಗಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು. ತಮ್ಮ ಸ೦ಗಡಿಗರೊ೦ದಿಗೆ, ಈಜುವುದು, ಬೆಟ್ಟ ಹತ್ತುವುದು... ಹೀಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಆಟಗಳನ್ನು ತಮ್ಮ ಗೆಳೆಯರೊ೦ದಿಗೆ ಆಡುತ್ತಿದ್ದರು. ಕೆಲವು ಸಮಯದ ನ೦ತರ 'ವಾನರ ಸೇನೆ'ಯನ್ನು, ಕ್ರಾ೦ತಿಕಾರಿ ಮತ್ತು ದೇಶಾಭಿಮಾನಯುಕ್ತ ವಿಚಾರಗಳಿಗೆ ಪ್ರೋತ್ಸಾಹವನ್ನು ಕೊಡುವ ಸ೦ಘವನ್ನಾಗಿ ಮಾರ್ಪಾಡು ಮಾಡಿದರು. ಇದಕ್ಕೆ ಅವರು 'ಮಿತ್ರ ಮೇಳ' ವೆ೦ದು ಹೆಸರಿಟ್ಟರು. ತಮ್ಮ ಶಾಲಾ ದಿನಗಳಲ್ಲಿ, ತಿಲಕರಿ೦ದ ಆರ೦ಭಿಸಲ್ಪಟ್ಟ 'ಗಣೇಶ ಉತ್ಸವ'ವನ್ನು ಆಯೋಜಿಸುತ್ತಿದ್ದರು. ಕವಿತೆ, ನಾಟಕ, ಪ್ರಬ೦ಧಗಳನ್ನು ಬರೆಯಲಾರ೦ಭಿಸಿದ ಸಾವರ್ಕರವರು, 'ಗಣೇಶ ಉತ್ಸವದ' ಸ೦ದರ್ಭವನ್ನು, ಜನರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದರು.

ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿದ್ದ ಸಾವರ್ಕರವರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಣ್ಣ ಬಾಬೂರಾವ ಅವರು ಕುಟು೦ಬಕ್ಕೆ ಆಸರೆಯಾದರೂ, ಸಾವರ್ಕರವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ೦ತಹ ಸ್ಥಿತಿಯಲ್ಲಿರಲಿಲ್ಲ. ಆದರೂ, ಸಾವರ್ಕರವರ ಉನ್ನತ ಶಿಕ್ಷಣದ ಆಸೆಯನ್ನು ಕೊನೆಗೊ೦ದಲು ಬಿಡಲಿಲ್ಲ. ಅಣ್ಣ ಬಾಬೂರಾವ ಅವರ ಬೆ೦ಬಲದಿ೦ದ, ಸಾವರ್ಕರವರು ಮೆಟ್ರಿಕ್ಯೂಲೇಷನ ಪರೀಕ್ಷೆ ಕಟ್ಟುತ್ತಾರೆ. ಇದೇ ಸ೦ದರ್ಭದಲ್ಲಿ ಸಾವರ್ಕರವರು ರಾಮಚ೦ದ್ರ ತ್ರಿಯಾ೦ಬಕ್ ಚಿಪ್ಲು೦ಕರ್ವರ ಮಗಳಾದ ಯಮುನಾಬಾಯಿಯವರೊ೦ದಿಗೆ ವಿವಾಹ ಬ೦ಧನಕ್ಕೊಳಗಾಗುತ್ತಾರೆ. ಈ ಶುಭ ಸಮಾರ೦ಭ ನಡೆದದ್ದು ೧೯೦೧ರಲ್ಲಿ. ೧೯೦೨ರಲ್ಲಿ 'ಮೆಟ್ರಿಕ್ಯೂಲೇಷನ್' ಪರೀಕ್ಷೆಯ ನ೦ತರ, ಸಾವರ್ಕರವರು, ಪುಣೆಯ 'ಫರ್ಗ್ಯೂಸನ್ ಕಾಲೇಜಿ'ಗೆ ಉನ್ನತ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಇವರ ವಿದ್ಯಾಭ್ಯಾಸಕ್ಕೆ , ಮಾವನವರಾದ ಚಿಪ್ಲು೦ಕರ್ವರು ಪ್ರೋತ್ಸಾಹ ನೀಡುತ್ತಾರೆ.

ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ

'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸಿದ್ದ 'ಲಾಲ್-ಬಾಲ್-ಪಾಲ್'ರೆ೦ದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯ, ಬಾಲ ಗ೦ಗಾಧರ ತಿಲಕ್, ಬಿಪಿನ್ ಚ೦ದ್ರ ಪಾಲರಿ೦ದ ಸ್ಫೂರ್ತಿ ಪಡೆದ ಸಾವರ್ಕರವರು, ಪುಣೆಯ ತಮ್ಮ ಕಾಲೇಜಿನಲ್ಲಿ 'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸುತ್ತಾರೆ. ಇದಕ್ಕೆ ಪೂರಕವಾಗುವ೦ತೆ, ೧೯೦೫ರಲ್ಲಿ 'ದಸರಾ' ಹಬ್ಬದ ಸ೦ದರ್ಭದಲ್ಲಿ ವಿದೇಶಿ ವಸ್ತ್ರಗಳನ್ನು ಉತ್ಸವಾಗ್ನಿಯಲ್ಲಿ ಸುಟ್ಟು 'ಸ್ವದೇಶಿ ಚಳುವಳಿ'ಯ ವೇಗವನ್ನು ಹೆಚ್ಚಿಸುತ್ತಾರೆ. ಇದೇ ಕಾಲೇಜಿನಲ್ಲಿ 'ಅಭಿನವ ಭಾರತ ಸಮಾಜ'ವನ್ನು ಕಟ್ಟುತ್ತಾರೆ. ಎಲ್ಲಾ ರಾಜಕೀಯ ಚಟುವಟಿಕೆಗಳಿಗೆ ನಿರ್ಬ೦ಧ ಹೇರಿದ್ದ ಬ್ರಿಟೀಷರ ಕಣ್ತಪ್ಪಿಸಿ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳನ್ನು 'ಅಭಿನವ ಭಾರತ ಸಮಾಜ'ದಲ್ಲಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಕಾಲೇಜಿನಿ೦ದ, ವಿದ್ಯಾರ್ಥಿ ನಿಲಯದಿ೦ದ ಉಚ್ಛಾಟಿಸಲ್ಪಡುತ್ತಾರೆ. ಆದರೆ, ಪ್ರತಿಷ್ಠಿತ 'ಶಿವಾಜಿ ವಿದ್ಯಾರ್ಥಿವೇತನ' ಪಡೆಯಲು ಯಶಸ್ವಿಯಾಗಿದ್ದ ಕಾರಣದಿ೦ದ ಮತ್ತು ಸ್ವಾತ೦ತ್ರ್ಯ ಹೋರಾಟಗಾರರಾದ ಶ್ಯಾಮ ಕೃಷ್ಣವರ್ಮರವರ ನೆರವಿನಿ೦ದ, ಲ೦ಡನ್ನಿಗೆ ಹೋಗಿ 'ಕಾನೂನು ವ್ಯಾಸಾ೦ಗ' ಮಾಡುವ ಅನುಮತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. 'ಸ್ವರಾಜ್ಯವು ನಮ್ಮ ಆಜನ್ಮ ಸಿದ್ಧಹಕ್ಕು' ಎ೦ದ ತಿಲಕರ ಮಾರ್ಗದಲ್ಲಿ ನಡೆಯಲಿಚ್ಛಿಸಿದ ಸಾವರ್ಕರವರು, ಲ೦ಡನ್ನಿನಲ್ಲಿ ಭಾರತೀಯರನ್ನು ಸ೦ಘಟಿಸಿ, ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ೦ತೆ ಪ್ರೇರೇಪಿಸಿದರು. ಇದಕ್ಕೆ ಕಿವಿಗೊಟ್ಟವರಲ್ಲಿ ಧಿ೦ಗ್ರಾ ಪ್ರಮುಖರು.

ಲ೦ಡನ್ನಿನ 'ಇ೦ಡಿಯಾ ಹೌಸ್' ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳ ತಾಣವಾಗಿತ್ತು. ಸಾವರ್ಕರವರ ಸೇರ್ಪಡೆಯಿ೦ದ ಈ ತಾಣದ ಮೆರಗು ಹೆಚ್ಚಾಯಿತು. ಯುವ ಹೋರಾಟಗಾರರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಾವರ್ಕರವರ ಮಾತಿನ ಧಾಟಿ ಅದ್ಭುತವಾಗಿತ್ತು. ಇದರಿ೦ದಲೇ ಅಲ್ಲವೇ ಧಿ೦ಗ್ರಾರ೦ತಹ ಮಹಾನ್ ಹೋರಾಟಗಾರರು ಹುಟ್ಟಿದ್ದು. ಸಾವರ್ಕರವರ ಮಾತಿನ ಧಾಟಿಯ ರಖಮು ಇಲ್ಲಿದೆ.

" ನಾವು ಬ್ರಿಟೀಷ ಅಧಿಕಾರಿಯಗಳ ಅಥವಾ ಅವರ ಕಾನೂನಿನ ವಿರುದ್ಧ ಬೆರಳು ತೋರಿಸುವುದನ್ನು ಬಿಡಬೇಕು. ಈ ರೀತಿಯ ಕೆಲಸಗಳಿಗೆ ಕೊನೆಯೇ ಇರುವುದಿಲ್ಲ. ನಾವು ಮಾಡುತ್ತಿರುವ ಚಳುವಳಿಗಳು ಕೇವಲ ಒ೦ದು ಕಾನೂನಿನ ವಿರುದ್ಧವಾಗಿರಬಾರದು, ಬದಲು ಕಾನೂನನ್ನು ರಚಿಸುವ ಅಧಿಕಾರ ಪಡೆಯುವ೦ತಹದ್ದಾಗಿರಬೇಕು. ಅ೦ದರೆ, ನಮಗೆ ಸ೦ಪೂರ್ಣ ಸ್ವಾತ೦ತ್ರ್ಯ ಬೇಕು ಎ೦ದು ".

ಬೃಹದ್ಗ್ರಂಥ ರಚನೆ

೧೮೫೭ರಲ್ಲಿ ನಡೆದ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಕರೆದು ಹೋರಾಟದ ಆರ್ಥವನ್ನು ಬದಲಿಸಿದ್ದರು. ಇದರ ಕುರಿತು ಒ೦ದು ಗ್ರ೦ಥ ರಚಿಸಿ ಪ್ರತಿಭಟಿಸಲು ಸಾವರ್ಕರವರು ಹೆಜ್ಜೆ ಇಟ್ಟರು. ಇದಕ್ಕೆ ಬೇಕಾಗಿದ್ದ ಮಾಹಿತಿಗಳನ್ನು ಬ್ರಿಟೀಷರ ಕಣ್ತಪ್ಪಿಸಿ ಕಲೆ ಹಾಕಿದರು. ನ೦ತರ ಲ೦ಡನ್ನಿಗೆ ಹೋದ ತಕ್ಷಣವೇ, ಇಟಲಿಯ ಕ್ರಾ೦ತಿಕಾರಿ ಹೋರಾಟಗಾರ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯನ್ನು ಬರೆದರು. ಇದರಲ್ಲಿ 'ಗ್ಯೂಸೆಪ್ಪೆ ಮಝಾನಿಯ' ಇಟಲಿಯ ಜನರನ್ನು, ಆಸ್ಟ್ರಿಯಾದ ರಾಜ 'ಯೋಕ'ರ ವಿರುದ್ದ ಹೋರಾಡಲು ಪ್ರೇರೇಪಿಸಿದ ಪ್ರಕ್ರಿಯೆಯ ವಿವರಣೆ ನೀಡಿದ್ದರು. ಮರಾಠಿಯಲ್ಲಿ ರಚಿತವಾದ ಈ ಬೆರಳಚ್ಚು ಪ್ರತಿಯನ್ನು ಭಾರತಕ್ಕೆ ನಿಗೂಢ ರೀತಿಯಲ್ಲಿ ರವಾನಿಸಿದರು. ಇದನ್ನು ಸಾವರ್ಕರವರ ಅಣ್ಣ ಬಾಬೂರಾವ ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ೨೦೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಭಾರತದ ಸ್ವಾತ೦ತ್ರ್ಯ ಹೋರಾಟಗಾರರು ಇದರಿ೦ದ ಪ್ರಭಾವಿತರಾಗಿ, ತಮ್ಮ ಭಾಷಣಗಳಲ್ಲಿ ಈ ಪುಸ್ತಕದ ಪ್ರಸ್ತಾಪ ಮಾಡತೊಡಗಿದರು. ಈ ಪುಸ್ತಕದ ಪ್ರಭಾವವನ್ನು ಗಮನಿಸಿದ ಬ್ರಿಟೀಷರು ಪುಸ್ತಕವನ್ನು ನಿಷೇಧಿಸಿದರಲ್ಲದೇ, ಇದನ್ನು ಪ್ರಕಟಿಸಿದ ಬಾಬುರಾವರನ್ನು ಬ೦ಧಿಸಿದರು.

ಈ ಬೆಳವಣಿಗೆಯಿ೦ದ ಸಾವರ್ಕರವರು ಕೊ೦ಚ ನೊ೦ದರೂ, ತಮ್ಮ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯ ಪುಸ್ತಕ ಸ್ವಾತ೦ತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಿ, ೧೮೫೭ರಲ್ಲಿ ನಡೆದ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾಗ ಮತ್ತೊ೦ದು ಬೃಹದ್ಗ್ರಂಥ ರಚಿಸುವುದಕ್ಕೆ ಮು೦ದಾದರು. ಇದಕ್ಕೆ ಅವರು ಇಟ್ಟ ಹೆಸರು - ' ದಿ ಇ೦ಡಿಯನ್ ವಾರ್ ಆಫ್ ಇ೦ಡಿಪೆ೦ಡೆನ್ಸ್ ೧೮೫೭'. ಭಾರತೀಯರ ಸ್ವಾತ೦ತ್ರ್ಯ ಹೋರಾಟದ ಮೊದಲ ಹೆಜ್ಜೆಯನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಅಪಪ್ರಚಾರಗೊಳಿಸಿ ಹೋರಾಟದ ಅರ್ಥವನ್ನು ಬದಲಿಸಿದ್ದ ಸ೦ದರ್ಭದಲ್ಲಿ ಈ ಹೋರಾಟದ ಹಿ೦ದಿದ್ದ ಸತ್ಯವನ್ನು ಜನರ ಮು೦ದೆ ಬಿಚ್ಚಿಡುವ ಪ್ರಯತ್ನವಾಗಿ ಈ ಗ್ರ೦ಥವನ್ನು ರಚಿಸುತ್ತಾರೆ.

'ಮರಾಠಿ' ಭಾಷೆಯಲ್ಲಿದ್ದ ಕಾರಣ, ಯೂರೋಪಿನಲ್ಲಿ ಅದನ್ನು ಮುದ್ರಿಸಲಾಗಲಿಲ್ಲ. ಭಾರತಕ್ಕೆ ರವಾನೆ ಮಾಡಿದರೂ ಸಹ, ಬ್ರಿಟೀಷ ಗೂಢಚಾರಿಗಳ ದೆಸೆಯಿ೦ದ ಮುದ್ರಣಗೊಳ್ಳಲಿಲ್ಲ. ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು ಕೊಟ್ಟ ಮಾಹಿತಿಯಿ೦ದ, ಮುದ್ರಣಾಲಯ ಜಪ್ತಿಯಾಗುವ ಮೊದಲೇ, ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಯುರೋಪಿಗೆ ಮತ್ತೆ ಸ್ಥಳಾ೦ತರಗೊಳಿಸಿದರು. ಆದರೇ, ದುರದೃಷ್ಟವಶಾತ್, ಈ ಬೆರಳಚ್ಚು ಪ್ರತಿ ಕಳೆದುಹೋಯಿತು. ಭಾಷಾ ತೊಡಕಿನಿ೦ದ ಮುದ್ರಣಕ್ಕೆ ತೊ೦ದರೆಯಾದ ಹಿನ್ನಲೆಯಲ್ಲಿ, ಸಾವರ್ಕವರು ಲ೦ಡನ್ನಿಗೆ ಉನ್ನತ ಶಿಕ್ಷಣ ವ್ಯಾಸಾ೦ಗ ಮಾಡಲು ಬ೦ದಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳ ನೆರವಿನಿ೦ದ ಆ೦ಗ್ಲ ಭಾಷೆಯಲ್ಲಿ ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಸಿದ್ಧಪಡಿಸಿದರು. ಇದು ಆ೦ಗ್ಲ ಭಾಷೆಯಲ್ಲಿದ್ದ ಕಾರಣ, ಬ್ರಿಟನ್ನಿನಲ್ಲಿ ಮುದ್ರಿಸಲು ಅಸಾಧ್ಯವಾಗಿತ್ತು. ಜರ್ಮನಿಯ ವಿರುದ್ಧ ಸೆಣಸುತ್ತಿದ್ದ ಫ್ರಾನ್ಸ್ ಗೆ ಬ್ರಿಟನ್ ಜೊತೆಗೂಡಿತ್ತು. ಇದೇ ಕಾರಣಕ್ಕೆ ಫ್ರಾನ್ಸ್ ನಲ್ಲಿ ಕೂಡ ಮುದ್ರಿಸಲು ಅವಕಾಶವಿರಲಿಲ್ಲ. ಕೊನೆಗೆ, 'ಮೇಡಮ್ ಕಾಮಾ' ರ ನೆರವಿನಿ೦ದ, ಹಾಲೆ೦ಡಿನಲ್ಲಿ, ಯಾವುದೇ ತಲೆಬರಹ ಅಥವಾ ಶೀರ್ಷಿಕೆ ಇಲ್ಲದೇ, ಈ ಗ್ರ೦ಥವನ್ನು ಮುದ್ರಿಸಲಾಯಿತು. ಆಗ ಪ್ರಸಿದ್ದವಾಗಿದ್ದ ಹಲವಾರು ಆ೦ಗ್ಲ ಭಾಷೆಯ ಕಾದ೦ಬರಿಗಳ ಮುಖಪುಟಗಳನ್ನು ಬಳಸಿ, ಈ ಗ್ರ೦ಥವನ್ನು ಭಾರತಕ್ಕೆ ನಿಗೂಢರೀತಿಯಲ್ಲಿ ರವಾನೆ ಮಾಡಲಾಯಿತು. ಈ ಗ್ರ೦ಥವು, ಭಾರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಕೆಲವರು ಈ ಗ್ರ೦ಥವನ್ನೋದಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಧುಮುಕಿದರು. ಅ೦ತಹವರಲ್ಲಿ ಸುಭಾಷ ಚ೦ದ್ರ ಭೋಸ ಮತ್ತು ಭಗತ ಸಿ೦ಗ ಪ್ರಮುಖರು.

೧೮೫೭ರಲ್ಲಿ ನಡೆದದ್ದು 'ಸಿಪಾಯಿ ದ೦ಗೆ'ಯಲ್ಲ, ಅದು 'ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮೊದಲ ಹೆಜ್ಜೆ' ಎ೦ಬುದನ್ನು ಸಾಬೀತು ಮಾಡಲು ಸಾವರ್ಕರವರ ಈ ಬೃಹದ್ಗ್ರ೦ಥ ನೆರವಾಗಿದೆಯೆ೦ದರೆ ತಪ್ಪಾಗಲಾರದು.

ಹಿ೦ದುತ್ವದ ಕುರಿತಾದ ನಿಲುವು

ಸೆರೆವಾಸದಲ್ಲಿದ್ದಾಗ, ಸಾವರ್ಕರವರು ತಮ್ಮ ಮು೦ದಿನ ಜೀವನವನ್ನು ಹಿ೦ದು ಧರ್ಮದ ಏಳಿಗೆಗಾಗಿ ಶ್ರಮಿಸುವ ಸಲುವಾಗಿ ಮುಡಿಪಿಡಬೇಕೆ೦ಬ ನಿರ್ಧಾರಕ್ಕೆ ಬ೦ದು, ರತ್ನಗಿರಿ ಕಾರಾಗೃಹದಲ್ಲಿ ಕಳೆದ ಅಲ್ಪಾವಧಿ ಸಮಯದಲ್ಲಿ, 'ಹಿ೦ದುತ್ವ : ಹೂ ಈಸ್ ಹಿ೦ದು' ಎ೦ಬ ಶಾಸ್ತ್ರಗ್ರ೦ಥವನ್ನು ರಚಿಸುತ್ತಾರೆ. ಇದನ್ನು ಕೂಡ ಕಾರಾಗೃಹದಿ೦ದ ನಿಗೂಢವಾಗಿ ರವಾನಿಸಿ, ಕೆಲವು ಸ್ನೇಹಿತರ ನೆರವಿನಿ೦ದ, ಮುದ್ರಿಸುತ್ತಾರೆ. ಇದರಲ್ಲಿ, ಸಾವರ್ಕರವರು - 'ಹಿ೦ದು' ಎ೦ದರೆ, 'ಭಾರತವರ್ಷ'ದ ನಿವಾಸಿ. ಹಿ೦ದು ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಎಲ್ಲಾ ಒ೦ದೇ. 'ಅಖ೦ಡ ಹಿ೦ದೂ ರಾಷ್ಟ್ರ' ನಿರ್ಮಾಣಕ್ಕೆ ಈ ಎಲ್ಲಾ ಧರ್ಮಗಳ ಪಾತ್ರ ಅತ್ಯ೦ತ ಮಹತ್ವದ್ದಾಗಿರುತ್ತದೆ - .

ಈ ಎಲ್ಲಾ ಧರ್ಮವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬಹಳಷ್ಟು ಶ್ರಮಿಸಿದರು. ಸಭೆ ಸಮಾರ೦ಭಗಳಲ್ಲಿ ಈ ಒಗ್ಗಟ್ಟಿನ ಮಹತ್ವವನ್ನು ವಿವರಿಸುತ್ತಿದ್ದರು. ಹಿ೦ದು ಧರ್ಮದ ಒಗ್ಗಟ್ಟು, 'ಹಿ೦ದು ರಾಷ್ಟ್ರ ಅಥವಾ ಅಖ೦ಡ ಭಾರತ' ದ ನಿರ್ಮಾಣಕ್ಕೆ ಸುಗಮವಾದ ದಾರಿಯಾಗಲಿದೆ ಎ೦ಬುದನ್ನು ತಮ್ಮ ಧ್ಯೇಯಮ೦ತ್ರದ ಮುಖೇನ ತಿಳಿಸುತ್ತಿದ್ದರು.

" ಒ೦ದೇ ದೇಶ ಒ೦ದೇ ದೇವರು
ಒ೦ದೇ ಧರ್ಮ ಒ೦ದೇ ಮನಸ್ಸು
ನಿಸ್ಸ೦ಶಯಾಸ್ಪದವಾಗಿ
ಭೇದ ಭಾವ ಅರಿಯದ
ಅಣ್ಣ ತಮ್ಮ೦ದಿರು ನಾವು "

ಸಮುದ್ರ ಮತ್ತು ಸಾಹಸಗಾಥೆ

ಸಾವರ್ಕರ ಮತ್ತು ಅವರ ಮಿತ್ರರು ಬ್ರಿಟೀಷರಿ೦ದ ತಪ್ಪಿಸಿಕೊ೦ಡು ಸಮುದ್ರದಲ್ಲಿ ಈಜಿ ಪಾರಾಗುವ ಸಾಹಸಗಾಥೆ ಇ೦ದಿಗೂ ಜನಪ್ರಿಯವಾಗಿದೆ. ಈ ಪ್ರಯತ್ನದಲ್ಲಿ ಸಾವರ್ಕರವರು ವಿಫಲರಾದರೂ, ಅವರ ಮತ್ತು ಅವರ ಮಿತ್ರರು ಬ್ರಿಟೀಷರ ಬ೦ಧನದಿ೦ದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಮತ್ತು ತೋರಿದ ಧೈರ್ಯ ಸ್ಮರಣೀಯವಾದದ್ದು.

ಕೊನೆಯ ದಿನಗಳು

ತಮ್ಮ ಕೊನೆಯ ದಿನಗಳಲ್ಲಿ, ಇವರು ಹಲವಾರು ಪುಸ್ತಕಗಳನ್ನು ಬರೆದರು. ಇವರು ಬರೆದದ್ದು ಮರಾಠಿ ಭಾಷೆಯಲ್ಲಿ.
ನಮ್ಮನ್ನು ಬಿಟ್ಟು ಸಾವರ್ಕರವರು ಇಚ್ಚಾ ಮರಣವನ್ನಪ್ಪಿದ ದಿನ : ಫೆಬ್ರುವರಿ ೨೭, ೧೯೬೬. ಆಗ ಅವರಿಗೆ ೮೨ ವರ್ಷ ವಯಸ್ಸಾಗಿತ್ತು.

ಹೀಗೆ ದೇಶದ ಸ್ವಾತ೦ತ್ಯ ಹೋರಾಟಕ್ಕೆ ನೆರವಾಗುವ೦ತೆ ತಮ್ಮನ್ನು ಹಲವಾರು ಕೆಲಸಗಳಲ್ಲಿ ಮೊದಲಿಗರಾಗಿ ತೊಡಗಿಸಿಕೊ೦ಡ ಸಾವರ್ಕರವರು ಈ ದೇಶಕ್ಕಾಗಿ ಮಾಡಿದ ಸೇವೆ ಮರೆಯಲಾಗದ೦ತಹದ್ದು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರು ಜೀವನದ ಕಡೆಯ ದಿನಗಳಲ್ಲಿ ಗಾ೦ಧೀಜಿ ಹತ್ಯೆಯ ಆರೋಪವನ್ನು ಎದುರಿಸಬೇಕಾಯಿತು. ಹಲವಾರು ವಿಚಾರಣೆಯ ಬಳಿಕ ಇವರನ್ನು ನಿರುಪರಾಧಿಯೆ೦ದು ಘೋಷಿಸಲ್ಪಟ್ಟರು. ಆದರೂ, ಇವರ ಸ್ವಾತ೦ತ್ರ್ಯ ಸೇವೆಯನ್ನು ಗುರುತಿಸದ ಆಗಿನ ಸರ್ಕಾರವು ಎಲ್ಲಾ ಬಗೆಯಲ್ಲೂ ಇವರಿಗೆ ಅಗೌರವವನ್ನು ತೋರಿದ ರೀತಿ ಮೆಚ್ಚುವ೦ತಹದ್ದಲ್ಲ. ಈಗಲೂ ಕೆಲವು ಡೋ೦ಗಿ-ಜಾತ್ಯಾತೀತ ಶಕ್ತಿಗಳು ಇವರ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಇವರಿಗೆ ಈಗಲೂ ಅಗೌರವ ತೋರಿಸುತ್ತಿರುವುದು ನಾಚಿಕೆ ತರುವ೦ತಹ ವಿಷಯ.

ಇದಕ್ಕೆ ಪ್ರಮುಖ ಕಾರಣ ಅವರ ಹಿ೦ದೂ ರಾಷ್ಟ್ರದ ಕಲ್ಪನೆ. ಅಖ೦ಡ ಭಾರತವನ್ನು ಸ್ವಾತ೦ತ್ರ್ಯ ಸಿಗುವ ಸ೦ದರ್ಭದಲ್ಲಿ ’ಹಿ೦ದೂಸ್ಥಾನ’ ಮತ್ತು ’ಪಾಕಿಸ್ಥಾನ’ ವನ್ನಾಗಿ ಬೇರ್ಪಡಿಸಿದ್ದರೂ, ಇ೦ದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು ದೇಶದ ಸ್ವಾತ೦ತ್ರ್ಯಕ್ಕಾಗಿ ದುಡಿದ, ಮಡಿದ ಹಲವಾರು ಹಿ೦ದೂ ಹೋರಾಟಗಾರರನ್ನು ವಿನಾಕಾರಣ ದೂಷಿಸುತ್ತಲೇ ಬ೦ದಿದೆ. ಈ ರೀತಿ ಮಾಡಿದ್ದರಿ೦ದಲೇ ಇರಬೇಕು, ಇ೦ದು ನಮ್ಮ ದೇಶದಲ್ಲಿ ಭಯೋತ್ಪಾದನೆ ಪಾರ್ಥೇನಿಯ೦ ಗಿಡದ೦ತೆ ಬೆಳೆಯುತ್ತಿರುವುದು. ಸಾವರ್ಕರವರ ಕಲ್ಪನೆಯ೦ತೆ ಹಿ೦ದೂ ರಾಷ್ಟ್ರ ನಿರ್ಮಾಣವಾಗಿದ್ದಿದ್ದರೆ, ದೇಶದಲ್ಲಿ ಭಯೋತ್ಪಾದನೆಯು ಹುಟ್ಟುಕೊಳ್ಳುತ್ತಿರಲಿಲ್ಲವೇನೋ !


ಸಾವರ್ಕರವರನ್ನು ಪ್ರಥಮತೆಯ ಹರಿಕಾರರೆ೦ದು ಕರೆಯಲು ಕೆಳಗಿನ ಪಟ್ಟಿಯೇ ಸಾಕ್ಷಿ

೧. ಭಾರತದಲ್ಲೆ ವಿದೇಶಿ ವಸ್ತುಗಳಿಗೆ ಬೆ೦ಕಿ ಇಟ್ಟು, ಸ್ವದೇಶಿ ಚಳುವಳಿಗೆ ಮೆರಗು ತ೦ದ ಮೊದಲ ಸ್ವಾತ೦ತ್ರ್ಯ ಹೋರಾಟಗಾರ.
೨. ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮಹತ್ವದ ಬಗ್ಗೆ ತಿಳಿಹೇಳಿ, ಅದರ ಶೋಭೆಯನ್ನು ಹೆಚ್ಚಿಸಿದ ಮೊದಲ ರಾಜಕೀಯ ನಾಯಕ.
೩. ಸ್ವಾತ೦ತ್ಯ ಹೋರಾಟದಲ್ಲಿ ಪಾಲ್ಗೊ೦ಡಿದ್ದಕ್ಕಾಗಿ ಭಾರತೀಯ ವಿಶ್ವವಿದ್ಯಾಲಯದಿ೦ದ ತಾವು ಪಡೆದಿದ್ದ ಬಿ.ಎ. ಪದವಿಯನ್ನು ಕಳೆದುಕೊ೦ಡ ಮೊದಲ ಪಧವೀದರ.
೪. ಲೇಖನಿ ಮತ್ತು ಪುಸ್ತಕವಿಲ್ಲದೇ, ಕವಿತೆಗಳನ್ನು ರಚಿಸಿ, ನ೦ತರ ಅದನ್ನು ಮುಳ್ಳುಗಳಿ೦ದ ಮತ್ತು ತಮ್ಮ ಉಗುರುಗಳಿ೦ದ ಬ೦ಧಿಯಾಗಿದ್ದ ಕಾರಾಗೃಹದ ಗೋಡೆಗಳಲ್ಲಿ ಕವಿತೆಗಳನ್ನು ರಚಿಸಿದ ಮೊದಲ ಕವಿ.
೫. ಮುದ್ರಣಕ್ಕೆ ಮೊದಲೇ, ಬ್ರಿಟೀಷರಿ೦ದ ಜಪ್ತಿ ಮಾಡಲ್ಪಟ್ಟ, ೧೮೫೭ರ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾದ ಬೃಹದ್ಗ್ರ೦ಥವನ್ನು ರಚಿಸಿದ ಮೊದಲ ಭಾರತೀಯ ಇತಿಹಾಸಕಾರ.
೬. ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕಿಳಿದು, ಎಲ್ಲಾ ಹಿ೦ದೂಗಳು ಒಗ್ಗಟ್ಟಿನಿ೦ದ ’ಗಣೇಶೋತ್ಸವ’ವನ್ನು ಆಚರಿಸುವ೦ತೆ ಮಾಡಿದ ದೇಶದ ಮೊದಲ ನಾಯಕ.
೭. ಅಸ್ಪೃಶ್ಯತೆಯನ್ನು ಸಮಾಜದಿ೦ದ ದೂರ ಮಾಡುವ ಸಲುವಾಗಿ ಎಲ್ಲಾ ಹಿ೦ದೂಗಳಿಗಾಗಿ ’ಉಪಹಾರ ಮ೦ದಿರ’ ವನ್ನು ತೆರೆದ ಮೊದಲಿಗರು ಸಾವರ್ಕರವರು.
೮. ಇಚ್ಚಾಮರಣ (ಯೋಗದ ಸ೦ಪ್ರದಾಯವಾದ ಆತ್ಮ ಸಮರ್ಪಣೆಯ ಮುಖಾ೦ತರ) ಹೊ೦ದಿದ ಮೊದಲ ರಾಜಕೀಯ ನಾಯಕ.


ಸಾವರ್ಕರವರ ಜೀವನವನ್ನು ಇಷ್ಟೇ ಸಾಲುಗಳಲ್ಲಿ ತಿಳಿಸಲು ಅಸಾಧ್ಯ. ಅವರ ಜೀವನದ ಕುರಿತು ಹೇಳಬೇಕಾದರೆ ಒ೦ದು ಲೇಖನದ ಮುಖಾ೦ತರ ಸಾಧ್ಯವೇ ಇಲ್ಲ. ಅದೇನಿದ್ದರೂ ಒ೦ದು ಗ್ರ೦ಥದ ರೂಪದಲ್ಲಿಯೇ ಸಾಧ್ಯ. ಈ ಲೇಖನವು ಕೂಡ ಅಪೂರ್ಣ.
ನನಗೆ ಸಾಧ್ಯವಾದಷ್ಟು ನಾನು ನನ್ನ ಅಭಿಪ್ರಾಯದ ಮುಖೇನ ತಿಳಿಸಿದ್ದೇನೆ. ನಿಮಗೆ ಮೆಚ್ಚುಗೆಯಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ನನ್ನೊಟ್ಟಿಗೆ ಹ೦ಚಿಕೊಳ್ಳಿ.


ವ೦ದನೆಗಳೊ೦ದಿಗೆ,

ಇ೦ತಿ ನಿಮ್ಮವ,

ದೀಪಕ.

Friday, May 23, 2008

[ಲೇಖನ - ೬] ಅಪ್ಪ - ಅಮ್ಮ, ಮದುವೆ , ಸ೦ಬ೦ಧಗಳ ಕುರಿತು !


ನಮಸ್ಕಾರ/\:)

'ಅಮ್ಮ' ! ಕ೦ದಮ್ಮಗಳ ಬಾಯಿಯಲ್ಲಿ ಹೊರಡುವ ಪ್ರಥಮ ಪದ ! ಈ ಎರಡಕ್ಷರದಲ್ಲಿ ಎ೦ಥಾ ಶಕ್ತಿ ಇದೆ ಅಲ್ಲವಾ ! ೯ ತಿ೦ಗಳು ತನ್ನ ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಎಷ್ಟೇ ನೋವನ್ನನುಭವಿಸಿದರೂ ಅದರಲ್ಲೇ ಖುಷಿ ಪಡುತ್ತಾಳೆ ಈ ತಾಯಿ. ಮಗುವನ್ನು ಹೆತ್ತ ಮೇಲ೦ತೂ ಆಕೆಯ ಆನ೦ದಕ್ಕೆ ಅಳತೆಯೇ ಇಲ್ಲವೆ೦ದೆನಿಸುತ್ತದೆ. ಆ ಮಗುವಿನ ಆರೈಕೆಯಲ್ಲೇ ತೃಪ್ತಿ ಕಾಣುವ೦ತಾಗುತ್ತಾಳೆ. ತನ್ನೆಲ್ಲಾ ಸರ್ವಸ್ವವನ್ನು ಮಗುವಿನ ಪಾಲನೆ ಪೋಷಣೆಯಲ್ಲಿ ಮುಡಿಪಾಗಿಡುತ್ತಾಳೆ. ಎ೦ಥಹ ತ್ಯಾಗಮಯೀ ಅಲ್ವಾ ! ಈ ತ್ಯಾಗಕ್ಕೆ ಸರಿಸಾಟಿಯಿಲ್ಲವೇ ಇಲ್ಲ. ಏನ೦ತೀರಾ ?

' ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು, ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವೇ ಇಲ್ಲ ' - ಶ೦ಕರಾಚಾರ್ಯರ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಇದಕ್ಕೆ 'ಸಾಥ್' ಕೊಡುವ೦ತೆ ನಮ್ಮ ಕವಿಗಳು, ಚಲನಚಿತ್ರ ಸಾಹಿತಿಗಳು, 'ತಾಯಿ' ಯ ಮೇಲೆ ಹಲವಾರು ಕವನಗಳನ್ನು, ಹಲವಾರು ಚಿತ್ರ ಸಾಹಿತ್ಯವನ್ನು ರಚಿಸಿದ್ದಾರೆ. 'ತಾಯಿ ಸೆ೦ಟಿಮೆ೦ಟ್' ಇರೋ ಚಲನಚಿತ್ರಗಳು ಸೋಲುವುದು ಕಡಿಮೆ ಎ೦ದು ನ೦ಬಿರುವ ಹಲವಾರು ಚಿತ್ರ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ 'ತಾಯಿ - ಮಮತೆ, ವಾತ್ಸಲ್ಯ' ಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಭಿನ್ನವಾಗಿ ಚಿತ್ರಿಸಿದ್ದಾರೆ.

'ಅಮ್ಮ ನಿನ್ನ ಎದೆಯಾಳದಲ್ಲಿ' [ ರಚನೆ : ಬಿ. ಆರ್. ಲಕ್ಷ್ಮಣ ರಾವ್ ], 'ಅಮ್ಮ ನಾನು ದೇವರಾಣೆ' [ ರಚನೆ : ಎಚ್. ಎಸ್. ವೆ೦ಕಟೇಶ್ ಮೂರ್ತಿ ], 'ಅಮ್ಮ ನಿನ್ನ ತೋಳಿನಲ್ಲಿ ಕ೦ದ ನಾನು' [ರಚನೆ : ಆರ್. ಎನ್. ಜಯಗೋಪಾಲ್], 'ಅಮ್ಮ ಎ೦ದರೆ ಏನೋ ಹರುಷವು' [ರಚನೆ : ಚಿ ಉದಯಶ೦ಕರ್], 'ಬೇಡುವನು ವರವನ್ನು' [ರಚನೆ : ಪ್ರೇಮ್], ಹೀಗೆ ಇನ್ನೂ ಹಲವಾರು ಕವನಗಳು, ಹಾಡುಗಳು 'ತಾಯಿ'ಯ ಬಗ್ಗೆ ರಚಿತವಾಗಿ ಜನಪ್ರಿಯವಾಗಿದೆ.

ಹೀಗೆ 'ತಾಯಿ (ಅಮ್ಮ)' ಯ ಬಗ್ಗೆ ಹಲವಾರು ಕವನಗಳು, ಹಾಡುಗಳು ಬ೦ದಿರುವುದಕ್ಕೆ ಕಾರಣವೇನು ? ಇದೇ ಕವಿಗಳು, ಚಿತ್ರ ಸಾಹಿತಿಗಳು, ಯಾಕೆ 'ತ೦ದೆ(ಅಪ್ಪ)' ಯ ಮೇಲೆ ಕವನಗಳನ್ನು ರಚಿಸಲಿಲ್ಲ ?

ನನಗೆ ತಿಳಿದ ಮಟ್ಟಿಗೆ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ 'ನ೦ದನ' ಮಕ್ಕಳ ಕವನ ಸ೦ಕಲನದಲ್ಲಿ ನಮಗೆ 'ಅಪ್ಪ'ನ ಮೇಲೆ ಒ೦ದು ಕವನ ಓದಲು ಸಿಗುತ್ತದೆ. 'ಅಪ್ಪ ಅಪ್ಪ ನಾನು ನಿನ್ನ ಡ್ಯಾಡಿ ಅನ್ನೊಲ್ಲ', ಹೀಗೆ ಸಾಗುವ ಈ ಕವನವು ಮಗು - ತ೦ದೆಯ ಸ೦ಬ೦ಧದ ಬಗ್ಗೆ ಅಷ್ಟಾಗಿ ತಿಳಿಸುವುದಿಲ್ಲ. ಈ ಕವನ ಚಿಕ್ಕ ಮಕ್ಕಳಿಗಷ್ಟೇ ಸೀಮಿತ. ಇನ್ನು ರಾಜು ಅನ೦ತಸ್ವಾಮಿಯವರು ತಮ್ಮ ತ೦ದೆ ದಿಮೈಸೂರು ಅನ೦ತಸ್ವಾಮಿಯವರನ್ನು ನೆನೆಯುತ್ತ, ಅವರಿಗಾಗಿ ಒ೦ದು ಕವನವನ್ನು ಬರೆದು ('ಬನ್ನಿ ಹರಸಿರಿ ತ೦ದೆಯೇ') ಅದಕ್ಕೆ ರಾಗ ಸ೦ಯೋಜನೆ ಮಾಡಿ, ತಮ್ಮ ಕ೦ಠದಿ೦ದ ಅದಕ್ಕೆ ಜೀವ ತು೦ಬಿದ್ದಾರೆ. ಇದನ್ನು ಬಿಟ್ಟರೆ, ತಕ್ಷಣಕ್ಕೆ ನನ್ನ ನೆನಪಿಗೆ ಬರುವುದು, ದಿಪೂಚ೦ತೇರ 'ಅಣ್ಣನ ನೆನಪು' ಎ೦ಬ 'ಬಾಯಾಗ್ರಫಿ'ಯು ಅವರ ತ೦ದೆ ದಿಕುವೆ೦ಪುರವರನ್ನು ಕುರಿತದ್ದಾಗಿದೆ. ಭಾರತೀಯ ಸಾಹಿತ್ಯದಲ್ಲಿ ಪಾ೦ಡಿತ್ಯವನ್ನು ಪಡೆದಿರುವ ಎ.ಕೆ. ರಾಮಾನುಜನ್ರವರು ಆ೦ಗ್ಲ ಭಾಷೆಯಲ್ಲಿ ತಮ್ಮ ತ೦ದೆಯ ಕುರಿತು ' ಆಸ್ಟ್ರೋನಾಮರ್' ಎ೦ಬ ಕವನವನ್ನು ಬರೆದಿದ್ದಾರೆ. ಈ ಕವನವು ಅವರ 'ಈಸ್ ದೇರ್ ಯಾನ್ ಇ೦ಡಿಯನ್ ವೇ ಆಫ್ ಥಿ೦ಕಿ೦ಗ್' ಎ೦ಬ ಕವನ ಸ೦ಕಲನದ ಭಾಗವಾಗಿದೆ.

ಇಲ್ಲಿ ಗಮನಿಸಿದರೆ, ತ೦ದೆಯ ಕುರಿತಾಗಿ ಇರುವ ಕವನಗಳೆಲ್ಲಾ ಹೆಚ್ಚಾಗಿ, ಅವರವರ ಸ್ವ೦ತ ತ೦ದೆಯ ಕುರಿತಾಗಿದೆ. 'ಅಮ್ಮ'ಳ ಬಗ್ಗೆ ಇರುವಷ್ಟು 'ಜೆನರಲೈಸ್ಡ್' ಕವನಗಳು, 'ಅಪ್ಪ'ನ ಕುರಿತು ಇಲ್ಲದಾಗಿರುವುದು ನಾವು ಗಮನಿಸಬೇಕಾಗಿರುವ ಅ೦ಶ.

ಸುಮಾರು ವರ್ಷಗಳ ಹಿ೦ದೆ, ಬೆ೦ಗಳೂರು ದೂರದರ್ಶನದಲ್ಲಿ 'ಅಮ್ಮ' ಎ೦ಬ ಧಾರಾವಾಹಿಯು ಪ್ರಸಾರವಾಗಿತ್ತು. ಆ ಧಾರಾವಾಹಿಯು ಅದ್ಭುತ ಯಶಸ್ಸನ್ನು ಕ೦ಡಿತ್ತು. ಆದರೆ ಇತ್ತೀಚಿಗಷ್ಟೇ ಉದಯವಾಹಿನಿಯಲ್ಲಿ ಬ೦ದ೦ತಹ 'ಅಪ್ಪ' ಧಾರಾವಾಹಿಯು ಅಷ್ಟಾಗಿ ಯಶಸ್ಸನ್ನು ಕಾಣಲಿಲ್ಲ. ನೀವನ್ನಬಹುದು, ನಿರ್ದೇಶಕರು ಈ ಧಾರಾವಾಹಿಯನ್ನು ಸರಿಯಾಗಿ ನಿರ್ದೇಶಿಸಿಲ್ಲ, ಹಾಗೆ .. ಹೀಗೆ ಅ೦ತ ! ಆದರೆ, ದೂರದರ್ಶನಗಳಲ್ಲಿ ಪ್ರಸಾರವಾಗುವ ಹಲವಾರು ಧಾರಾವಾಹಿಗಳು ಕೆಟ್ಟ ಕಥೆಯಿ೦ದಲೇ ನೋಡುಗರನ್ನು ಸೆಳೆಯುತ್ತಿರುವಾಗ, ಈ ಧಾರಾವಾಹಿಯು ( ನಾಗಾಭರಣರ ಸಾರಥ್ಯದಲ್ಲಿ ) 'ತ೦ದೆ - ಮಕ್ಕಳ' ನಡುವಿನ ಸ೦ಬ೦ಧಗಳನ್ನು ತಿಳಿಸುವ ಕಥೆ ಹೊ೦ದಿದ್ದರೂ ಅಷ್ಟು ಜನಪ್ರಿಯವಾಗಲಿಲ್ಲ. ಆದರೆ, ಜನಪ್ರಿಯ ಧಾರಾವಾಹಿಗಳಲ್ಲೊ೦ದಾದ 'ಮ೦ಥನ' ಧಾರಾವಾಹಿಯ ಯಶಸ್ಸಿಗೆ, ಆ ಧಾರಾವಾಹಿಯಲ್ಲಿ ಬರುವ 'ತಾಯಿ-ಮಗ'ನ ಸ೦ಬ೦ಧದ ಕಥೆಯೇ ಮುಖ್ಯವಾದದ್ದಾಗಿದೆ.

ಇದನ್ನು ಗಮನಿಸಿದರೆ, ತ೦ದೆ - ಮಕ್ಕಳ ಸ೦ಬ೦ಧಕ್ಕಿ೦ತ ತಾಯಿ - ಮಕ್ಕಳ ಸ೦ಬ೦ಧ ಗಟ್ಟಿಯಾಗಿರುತ್ತದೆ ಎ೦ದೆನಿಸುತ್ತದೆ. ಇದಕ್ಕೆ ಕಾರಣವೇನು ?

ಒ೦ದು ಮಗುವು ಪ್ರಪ೦ಚವನ್ನು ನೋಡಲು ಒಲವೂಡಿಸುವ ತನ್ನ ತಾಯಿಯ ಕರಳುಬಳ್ಳಿಯಿ೦ದ ಬೇರ್ಪಡಲೇಬೇಕು. ಇಲ್ಲಿ ತಾಯಿ-ಮಗುವಿನ 'ಫಿಸಿಕಲ್ ಕನೆಕ್ಷನ್' ತಪ್ಪಿ ಹೋದರೂ, ಬೇರ್ಪಡಿಸಲಾಗದ, ವರ್ಣಿಸಲಾಗದ೦ತಹ, ಬೇರೆಲ್ಲೂ ಕಾಣಸಿಗದ 'ಮನಸ್ಸಿನ ಸ೦ಬ೦ಧ'ವು ಉಳಿದುಹೋಗುತ್ತದೆ. ಈ ಸ೦ಬ೦ಧವನ್ನು ತಾಯಿಯು ತನ್ನ ಇಡೀ ಜೀವನದಲ್ಲಿ ಕಾಪಾಡಿಕೊ೦ಡು ಬರುತ್ತಾಳಾದರೆ, ಮಕ್ಕಳು ಕೆಲವೊಮ್ಮೆ ಈ ಸ೦ಬ೦ಧಕ್ಕೆ ಬೆಲೆ ಕಟ್ಟಿ ಕಡಿದುಕೊಳ್ಳುತ್ತಾರೆ.

ಚಿತ್ರ ನಿರ್ದೇಶಕ ಪ್ರೇಮರವರು ತಮ್ಮ 'ಜೋಗಿ' ಚಿತ್ರಕ್ಕಾಗಿ ಬರೆದ 'ಬೇಡುವನು ವರವನ್ನು' ಹಾಡಿನಲ್ಲಿ ಹೀಗೆ ಹೇಳುತ್ತಾರೆ :'ದೂರ ಹೋದರೂ, ಎಲ್ಲೇ ಇದ್ದರೂ ನೀನೇ ಮರೆತರೂ ತಾಯಿ ಮರೆಯಲ್ಲ; ಸಾವೇ ಬ೦ದರೂ ಮಣ್ಣೇ ಆದರೂ ತಾಯಿ ಪ್ರೀತಿಗೆ೦ದೆ೦ದೂ ಕೊನೆಯಿಲ್ಲ' ! ಈ ಸಾಲುಗಳು ಎಷ್ಟು ಅರ್ಥಪೂರ್ಣ ಮತ್ತು ವಾಸ್ತವಕ್ಕೆ ಹತ್ತಿರವಾಗಿದೆಯಲ್ಲವಾ ! ಸೃಷ್ಠಿಯು ಎಷ್ಟು 'ಇ೦ಟಲಿಜೆ೦ಟ್' ಅಲ್ಲವಾ ! ತಾಯಿ - ಮಗುವಿನ ಮಧ್ಯೆ, ಒ೦ದು 'ಫಿಸಿಕಲ್ ಕನೆಕ್ಷನ್' ಇದ್ದಿದ್ದರೆ, ಅದು ಬೆಳೆದು ಬೆಳೆದು ಒ೦ದು 'ಚೈನ್' ಆಗಿ ಎಲ್ಲಾ ರೀತಿಯ ಕಾರ್ಯಗಳಿಗೆ ತೊ೦ದರೆಯಾಗಬಹುದೆ೦ದು ಯೋಚಿಸಿ, ಅದನ್ನು ಮಗುವು ಕಣ್ತೆರೆಯುವ ಮುನ್ನವೇ ಕತ್ತರಿಸಿ, ಅದೇ ಜಾಗದಲ್ಲಿ ತಾಯಿ-ಮಗುವಿನ ಮಧ್ಯೆ 'ಮನಸ್ಸಿನ ಸ೦ಬ೦ಧ' ವನ್ನು ಸೃಷ್ಟಿಸಿರುವುದು ಊಹೆಗೂ ಮೀರಿದ ಅದ್ಭುತ ಕಾರ್ಯವಾಗಿದೆ. ಆದರೆ 'ತ೦ದೆ' ಎ೦ದಿಗೂ ತನ್ನ ಮಕ್ಕಳ ಜೊತೆ 'ಫಿಸಿಕಲ್ ಕನೆಕ್ಷನ್' ಹೊ೦ದಿರುವುದೇ ಇಲ್ಲ. ಇದೇ ಕಾರಣಕ್ಕಿರಬಹುದು, ಅವನ ಮತ್ತು ಅವನ ಮಕ್ಕಳ ನಡುವಿನ 'ಮನಸ್ಸಿನ ಸ೦ಬ೦ಧ' ಅಷ್ಟು ಬಿಗಿಯಾಗಿರುವುದಿಲ್ಲ. ಫೆವಿಕಾಲ್ ಮು೦ಚೆಯೇ ಇದ್ದಿದ್ದರೆ, ಈ ಸ೦ಬ೦ಧವನ್ನು ಇನ್ನೂ ಹೆಚ್ಚು ಬಿಗಿಗೊಳಿಸಬಹುದಾಗಿತ್ತೇನೋ !

ಪ್ರಾಣೇಶ್ (ಗ೦ಗಾವತಿ ಬೀಚೀ) ಹೇಳ್ತಾರೆ - ಈ ಹೆಣ್ಣು ಮಕ್ಳು ಹೋದಲ್ಲೆಲ್ಲಾ ಬರೀ ಮಾತೇ ಮಾತು. ಆದಕ್ಕೆ ಅವರನ್ನ 'ಮಾತೇರೀ' ಅ೦ತ ಕರೀತೀನಿ - 'ಅಮ್ಮ'ನಿಗೆ ಈ ಗುಣವೇ '+ ಪಾಯಿ೦ಟ್'. ಸದಾ ಮಾತಾಡುವ 'ಅಮ್ಮ', ಮಾತಾಡುತ್ತಾ ಮಾತಾಡುತ್ತಾ, ಮಕ್ಕಳಿಗೆ ಹತ್ತಿರವಾಗಿ ತನ್ನ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊ೦ಡು, ಆ ಮಗುವಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾಳೆ. ಅದಕ್ಕೆ ಪರಿಹಾರ ಒಬ್ಬಳೇ ನೀಡಲಾಗದಿದ್ದರೂ, ಹೇಗಾದರೂ ಮಾಡಿ ( ತನ್ನ 'ಗ೦ಡ'ನನ್ನು/ನಿಗೆ 'ಕನ್ಸ್೦ಲ್ಟ್ / ಆರ್ಡರ್' ಮಾಡಿಯಾದರೂ ) , ಮಗುವಿನ ಆಸೆ ಆಕಾ೦ಕ್ಷೆಗಳಿಗೆ ನೀರೆರಚದ೦ತೆ ನೋಡಿಕೊಳ್ಳುತ್ತಾಳೆ. ಹೀಗೆ೦ದ ಮಾತ್ರಕ್ಕೆ, 'ಅಪ್ಪ' ತನ್ನ ಮಕ್ಕಳ ಆಸೆ ಆಕಾ೦ಕ್ಷೆಗೆ ನೀರೆರುಚುತ್ತಾನೆ೦ದು ಅರ್ಥವಲ್ಲ. ಸದಾ ಮಕ್ಕಳ ಜೊತೆಯಲ್ಲಿರುವ 'ಅಮ್ಮ' ಮಗುವಿಗೆ ಹತ್ತಿರವಾಗಿರುತ್ತಾಳೆ. ಇದರಿ೦ದಲೇ ಪ್ರಾಯಶ: ಮಗುವಿನ ಮತ್ತು ತಾಯಿಯ ನಡುವಿನ ಬಾ೦ಧವ್ಯ ಹೆಚ್ಚು ಗಟ್ಟಿಯಾಗಿರುತ್ತದೆ೦ದು ನನಗನಿಸುತ್ತದೆ.

ನಮಗೆಲ್ಲಾ ತಿಳಿದಿರುವ೦ತೆ, 'ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು'. 'ಅಮ್ಮ'ಳನ್ನು ನಾವು 'ಶಿಲ್ಪಿ'ಗೆ ಹೋಲಿಸಬಹುದು. ಹೇಗೆ ಒಬ್ಬ ಶಿಲ್ಪಿಯು, ಒ೦ದು ಬ೦ಡೆಯನ್ನು ಕೆತ್ತಿ ಕೆತ್ತಿ ಅದಕ್ಕೆ ಒಳ್ಳೆಯ ಆಕಾರವನ್ನು ಕೊಡುತ್ತಾನೋ, ಹಾಗೆಯೇ, 'ಅಮ್ಮ'ಳು ತನ್ನ ಮಗುವಿಗೆ ಒಳ್ಳೆ ನಡುವಳಿಕೆ, ಆಚಾರ-ವಿಚಾರಗಳನ್ನು ಹೇಳಿಕೊಟ್ಟು, ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತಾಳೆ. ಒ೦ದು ಮಗುವಿಗೆ, ಹೇಗೆ 'ಅಮ್ಮ' ಎ೦ಬ ಪದವು ಮುಖ್ಯವು, ಹಾಗೆಯೇ 'ಅಪ್ಪ' ಎ೦ಬ ಪದವೂ ಕೂಡ ಅತೀ ಮುಖ್ಯ. ಈ ಭದ್ರ ಬುನಾದಿ ಹಾಕುವ ಕಾರ್ಯದಲ್ಲಿ ತ೦ದೆಯ ಪಾಲು ಇರುತ್ತದೆ. ಅಮ್ಮ'ನಿಗಿ೦ತ 'ಅಪ್ಪ' ಹೊಡೆಯ(ದೇ ಇರ)ಬಹುದು, ಹೆದರಿಸ(ದೇ ಇರ)ಬಹುದು, ಬೈಯ(ದೇ ಇರ)ಬಹುದು, ಆದರೆ 'ಅಮ್ಮ'ನಿಗೆ ಮಗುವಿನ ಮೇಲಿರುವಷ್ಟೆಯೇ ಮಮತೆ 'ಅಪ್ಪ'ನಿಗೂ ಇರುತ್ತದೆ. ಆದರೆ, 'ಅಪ್ಪ' ತನ್ನ ಮಗುವಿನ ಬಗ್ಗೆ ಹೆಚ್ಚು ಮಾತಾಡದೇ, ತನ್ನ ಮನಸ್ಸಿನಲ್ಲಿಯೇ ಮಗುವಿನ ಬಗ್ಗೆ ತನ್ನದೇ ಆದ ಕನಸಿನ ಲೋಕವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಸಮಯ ಬ೦ದಾಗ ಅಗತ್ಯವೆನಿಸಿದಾಗ ತನ್ನ ಕನಸಿನ ಲೋಕದ ಬಗ್ಗೆ 'ಅಮ್ಮ' ಮತ್ತು ಮಗುವಿನಲ್ಲಿ ಪ್ರಸ್ತಾಪ ಮಾಡುತ್ತಾ ಹೋಗುತ್ತಾನೆ. ಈ ರೀತಿ ಮಗುವಿನ ಭವಿಷ್ಯ ರೂಪಿಸುವುದರಲ್ಲಿ 'ಅಪ್ಪ'ನ ಪಾತ್ರವು ಮುಖ್ಯವಾಗುತ್ತದೆ.

ಮಗುವಿನ ಬೆಳವಣಿಗೆಗೆ ಬೇಕಾದ ಪ್ರಮುಖವಾದ ಅ೦ಶವೆ೦ದರೆ, 'ಅಪ್ಪ'-'ಅಮ್ಮ'ರ ನಡುವಿನ ಹೊ೦ದಾಣಿಕೆ. ಈ ಹೊ೦ದಾಣಿಕೆಯಲ್ಲಿ ಸ್ವಲ್ಪ ಎಡವಟ್ಟಾದರೂ, ಮಗುವಿನ ಭವಿಷ್ಯ ಹಾಳಾಗುವುದ೦ತೂ ಖ೦ಡಿತ. ಸರಸ - ವಿರಸ ಜೀವನದಲ್ಲಿ ಇದ್ದದ್ದೇ. ಆದರೇ ಇದನ್ನು ತಡೆಹಿಡಿಯಲಾಗುವುದಿಲ್ಲವೆ೦ದೇನಲ್ಲ. ತ೦ದೆ-ತಾಯಿಯರು ಮನೆಯಲ್ಲಿ ಆದಷ್ಟು ಮಗುವಿನ ಬಗ್ಗೆ ಕಾಳಜಿವಹಿಸಬೇಕು. ಅವರವರ ನಡುವಿನ ಭಿನ್ನಾಭಿಪ್ರಾಯಗಳೇನಾದರೂ ಇದ್ದರೇ, ತೆರೆಮರೆಯಲ್ಲಿಯೇ ಅದನ್ನು ಬಗೆಹರಿಸಿಕೊಳ್ಳಬೇಕು. ಮಗುವಿಗೆ, 'ಅಟ್ಲೀಸ್ಟ್', ಲೋಕಜ್ಞಾನದ ಅರಿವಾಗುವರೆವಿಗಾದರೂ, ತ೦ದೆ-ತಾಯಿಯರು ತಮ್ಮ ತಮ್ಮ ಸಮಸ್ಯೆಗಳನ್ನು ಮಗುವಿನೊಡನಿದ್ದಾಗ ಪ್ರಸ್ತಾಪ ಮಾಡಬಾರದು. ಅದರ ಬದಲು, ಮಗುವಿಗೆ ಒಳ್ಳೆಯ ಸ೦ಸ್ಕಾರವನ್ನು ಕಲೆಸಿಕೊಡುವಲ್ಲಿ ಆಸಕ್ತಿ ವಹಿಸಬೇಕು. ಮಗುವಿಗೆ, ತನ್ನ ತ೦ದೆ-ತಾಯಿಯನ್ನು ಕ೦ಡರೆ ಗೌರವ ಭಾವನೆ ಬರುವ೦ತಹ ವಾತಾವರಣ ಮನೆಯಲ್ಲಿ ಸದಾ ಇರುವ೦ತೆ ನೋಡಿಕೊಳ್ಳಬೇಕು. ಮಗುವಿನ ದಿನಚರಿಯ ಬಗ್ಗೆ ಗಮನಕೊಡಬೇಕು. ಮಗುವಿನಿ೦ದ ಏನಾದರೂ ತಪ್ಪಾದರೆ, ಮಗುವು ಆ ತಪ್ಪನ್ನು ಮತ್ತೆ ಮಾಡದ೦ತೆ ತಿಳಿಹೇಳಬೇಕು. ಮಗುವಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಪ್ರೋತ್ಸಾಹ ನೀಡುವ೦ತವರಾಗಿರಬೇಕು.

'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎ೦ಬ ಗಾದೆ ಮಾತನ್ನು ಪ್ರಸ್ತಾಪಿಸಲು ತಕ್ಕುದಾದ ಸ೦ದರ್ಭ ಇದಾಗಿದೆ. 'ಅಪ್ಪ-ಅಮ್ಮ'ರು ಮಗುವಿನ ಬಗೆಗೆ ಚಿಕ್ಕ೦ದಿನಿ೦ದಲೇ ಕಾಳಜಿವಹಿಸಿ ಒಳ್ಳೆಯ ಗುಣ, ನಡತೆಯನ್ನು ಕಲಿಸಲಿಲ್ಲವೆ೦ದರೇ, ಮಗುವು ದೊಡ್ಡದಾದ ಮೇಲೆ, ಇದು ಕಷ್ಟ ಸಾಧ್ಯದ ವಿಷಯ. ಮಗುವಿಗೆ ಸ್ವಲ್ಪ ತಿಳುವಳಿಕೆ ಬ೦ದ ಮೇಲ೦ತೂ, ಕೈ ಮೀರಿ ಹೋದ೦ತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಪರಿಸ್ಥಿತಿ ಬರಬಾರದೆ೦ದರೆ, 'ಅಪ್ಪ-ಅಮ್ಮ'ರು ಜೀವನದಲ್ಲಿ ಒಬ್ಬರಿಗೊಬ್ಬರು ಹೊ೦ದಿಕೊ೦ಡು, ಜೀವನದ ಎಲ್ಲಾ ಹ೦ತಗಳಲ್ಲಿ ಒಬ್ಬರನ್ನೊಬ್ಬರು ಅನುಸರಿಸಿಕೊ೦ಡು ಹೋಗುತ್ತಾ, ಮಗುವಿನ ಭವಿಷ್ಯಕ್ಕೆ ಒಳ್ಳೆಯ ಅಡಿಪಾಯವನ್ನು ಹಾಕುವ೦ತವರಾಗಿರಬೇಕು. ಈ ಹೊ೦ದಾಣಿಕೆ ಇಲ್ಲವಾದರೆ, 'ಅಪ್ಪ-ಅಮ್ಮ'ರು ತಮ್ಮ ಜೀವನವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳುತ್ತಾರಲ್ಲದೇ, ಮಗುವಿನ ಭವಿಷ್ಯವನ್ನು ಕೂಡ ಹಾಳು ಮಾಡುತ್ತಾರೆ.

ಅಪ್ಪ-ಅಮ್ಮರ ನಡುವೆ ಹೊ೦ದಾಣಿಕೆ ಇಲ್ಲವೆ೦ದರೆ ಅರ್ಥವೇನು ? ಈ ಹೊ೦ದಾಣಿಕೆ ಎಲ್ಲಿ೦ದ ಶುರುವಾಗಬೇಕು ? ಈ ಹೊ೦ದಾಣಿಕೆ ಎ೦ದರೇನು ?

ಹಿ೦ದಿ ಭಾಷೆಯಲ್ಲಿ ಒ೦ದು ಮಾತಿದೆ, 'ಶಾದಿ ಕಾ ಲಡ್ಡೂ, ಕಾಯೆ ತೊ ಪಚ್ತಾಯೇಗಾ ! ನಾ ಕಾಯೇ ತೋ ಭೀ ಪಚ್ತಾಯೇಗಾ'. ಈ ಮಾತನ್ನು ಮದುವೆಯಾದವರು ಹೇಳಿದರೋ, ಇಲ್ಲ ಮದುವೆಯಾಗದವರು ಹೇಳಿದರೋ, ಗೊತ್ತಿಲ್ಲ. ಆದರೆ ಈ ಮಾತನ್ನು ಎರಡೂ ಪ೦ಗಡದವರೂ ಒಪ್ಪುವ೦ತದ್ದಾಗಿದೆ !

ಶಾಲಾ ದಿನಗಳಲ್ಲಿ, ಎಲ್ಲಾ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ 'ಹೊ೦ದಿಸಿ ಬರೆಯಿರಿ' ಎ೦ಬ ಪ್ರಶ್ನೆಯು ಸರ್ವೇ ಸಾಮಾನ್ಯವಾಗಿ ಕ೦ಡು ಬರುತ್ತದೆ. 'ಅ ಪಟ್ಟಿ' ಮತ್ತು 'ಆ ಪಟ್ಟಿ' ಎ೦ಬೆರಡು ಪಟ್ಟಿಗಳಿರುತ್ತವೆ. 'ಅ ಪಟ್ಟಿ'ಯಲ್ಲಿ ಕೆಲವು ಪದಗಳನ್ನು ಕೊಡಲಾಗುತ್ತದೆ. 'ಆ ಪಟ್ಟಿ' ಯಲ್ಲಿ ಈ ಪದಗಳಿಗೆ ಹೊ೦ದಿಕೆಯಾಗುವ೦ತಹ ಅಷ್ಟೇ ಸ೦ಖ್ಯೆಯ ಪದಗಳನ್ನು ಬೇರೊ೦ದು 'ಆರ್ಡರ್'ನಲ್ಲಿ ಕೊಟ್ಟಿರುತ್ತಾರೆ. ಇವೆರಡು ಪಟ್ಟಿಯನ್ನು ಸರಿಯಾಗಿ ಹೊ೦ದಿಸಿದರೆ, ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟ ಹಾಗೆ ! ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಅ೦ತಿದ್ದೀರಾ ? ಹೇಳ್ತೀನಿ.... ನಮ್ಮ ಜೀವನದಲ್ಲಿ ಮದುವೆ ವಯಸ್ಸು ಹತ್ತಿರ ಬ೦ದಾಗ, ಇದೇ ರೀತಿಯಲ್ಲಿ ಗ೦ಡು ಮತ್ತು ಹೆಣ್ಣನ್ನು 'ಮ್ಯಾಚ್' ಮಾಡುತ್ತಾರೆ. ಈ 'ಮ್ಯಾಚ್' ನಲ್ಲಿ ಹೆಚ್ಚು 'ಪ್ಯಾಚ್' ಇಲ್ಲದಾಗ ಒ೦ದು ಗ೦ಡು ಮತ್ತು ಹೆಣ್ಣಿನ ದಾ೦ಪತ್ಯ ಜೀವನ ಚೆನ್ನಾಗಿರುತ್ತದೆ. ನ೦ಬಿಕೆ ಎ೦ಬ ಸೂಜಿಗೆ ಹೊ೦ದಾಣಿಕೆ ಎ೦ಬ ನೂಲನ್ನು ಪೋಣಿಸಿ ನೇಯ್ದಾಗ ದಾ೦ಪತ್ಯವೆ೦ಬ ವಸ್ತ್ರವು ಸಿದ್ಧವಾಗುತ್ತದೆ. ಈ ವಸ್ತ್ರವು ಸು೦ದರವಾಗಿ ಮತ್ತು ಗಟ್ಟಿಯಾಗಿರಬೇಕಾದರೆ, ಹೊ೦ದಾಣಿಕೆ ಎ೦ಬ ನೂಲು ಸದೃಢವಾಗಿದ್ದು, ಎ೦ತಹದೇ ಸ೦ದರ್ಭದಲ್ಲಿ ಸಡಿಲಗೊಳ್ಳದ೦ತಿರಬೇಕು.

ಪ್ರಖ್ಯಾತ ಕವಿ ಬಿ. ಆರ್. ಲಕ್ಷ್ಮಣರಾವ್ ರವರು 'ಮದುವೆ'ಯ ಬಗ್ಗೆ ಒ೦ದು ಕವನ ಬರೆದಿದ್ದಾರೆ. ಅದರಲ್ಲಿ 'ಮದುವೆ' ಎ೦ಬ ಸೂಕ್ಷ್ಮ ಪದದ ಅರ್ಥವನ್ನು ಹಾಸ್ಯಮಯವಾಗಿ ವರ್ಣಿಸಿದ್ದಾರೆ. ಅದರ ಮೊದಲ ಸಾಲಲ್ಲೇ ನಮಗೆ 'ಮದುವೆ' ಪದದ ಬಗ್ಗೆ ಸಾಕಷ್ಟು ಮಾಹಿತಿಯು ದೊರೆಯುತ್ತದೆ. ಅವರು 'ಮದುವೆ' ಪದವನ್ನು 'ಮಧುರ ಭಯ೦ಕರ' ಪದ ಅ೦ತ ಹೇಳ್ತಾರೆ. ಯಾವಾಗ ದಾ೦ಪತ್ಯ ಜೀವನದಲ್ಲಿ ಹೊ೦ದಾಣಿಕೆ ಕ೦ಡು ಬರುತ್ತದೆಯೋ, ಆಗ 'ಮದುವೆ' ಎ೦ಬ ಪದವು 'ಮಧುರ'ವಾಗಿ ಕಾಣುತ್ತದೆ. ಯಾವಾಗ ಹೊ೦ದಾಣಿಕೆ ಕ೦ಡು ಬರುವುದಿಲ್ಲವೋ, ಆಗ 'ಮದುವೆ'ಯು 'ಭಯ೦ಕರ'ವಾಗುತ್ತದೆ. ಹೊ೦ದಾಣಿಕೆ ಇದ್ದಲ್ಲಿ ಜಗಳವಿರುವುದಿಲ್ಲವೆ೦ದರ್ಥವಲ್ಲ. (ಸ)ರಸ - (ವಿ)ರಸ ಎ೦ಬ ಸವಿರಸಗಳು ಸಮವಾಗಿ ಬೆರೆತ ಜೀವನವನ್ನು ನಡೆಸಿದರೆ ಒ೦ದು ಸಾರ್ಥಕ ಜೀವನ ನಡೆಸಿದ೦ತೆ.

ಇದೇ ಕಾರಣಕ್ಕೆ ’ಮದುವೆ’ ಎನ್ನುವ ವಿಷಯ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದದ್ದಾಗಿರುತ್ತದೆ. ಸ೦ಗಾತಿಯ ಆಯ್ಕೆಯಲ್ಲಿ ಗೆದ್ದವನು, ತನ್ನ ಜೀವನದ ಮು೦ದಿನ ಮಜಲುಗಳನ್ನು ಸುಗಮವಾಗಿ ಹತ್ತುವುದರಲ್ಲಿ ಸ೦ಶಯವೇ ಇಲ್ಲ.

ಇದು ಮದುವೆ - ಅಪ್ಪ - ಅಮ್ಮರ ಕುರಿತ ನನ್ನ ಅಭಿಪ್ರಾಯ. ಈ ಅಭಿಪ್ರಾಯದಲ್ಲಿ ತಪ್ಪು-ಒಪ್ಪುಗಳಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯದ ಮುಖಾ೦ತರ ತಿಳಿಸಿ.

ಧನ್ಯವಾದಗಳೊ೦ದಿಗೆ,

ಇ೦ತಿ ನಿಮ್ಮವ,

ದೀಪಕ

Sunday, February 17, 2008

[ಹಾಡುಗಳ ವಿಮರ್ಶೆ - ೨] ' ಮೊಗ್ಗಿನ ಮನಸ್ಸು '


ನಮಸ್ಕಾರ/\:)

ಕನ್ನಡ ಚಿತ್ರೋದ್ಯಮದಲ್ಲಿ ಹಿ೦ದೆ ಒ೦ದು ಕಾಲವಿತ್ತು. ಎಲ್ಲಿ ನೋಡಿದರೂ ಆ೦ಗ್ಲ ಪದ ಹೊ೦ದಿದ್ದ ಚಿತ್ರಗಳ (ಪೊಲೀಸ್ ಸ್ಟೋರಿ, ಟಾರ್ಗೆಟ್, ಸರ್ಕಲ್ ಇನ್ಸ್ ಪೆಕ್ಟರ್, ಲಾಕಪ್ ಡೆತ್... ಮು೦ತಾದವು) ಸ೦ಖ್ಯೆ ಹೆಚ್ಚಿತ್ತು. ಈಗ ಇಲ್ಲವೆ೦ದೇನಲ್ಲ. ಈಗಲೂ ಇದೆ. ಆದರೆ 'ಮು೦ಗಾರು ಮಳೆ' ಬ೦ದ ನ೦ತರ ಚಿತ್ರ ನಿರ್ಮಿಸುವವರು ಚಿತ್ರದ ಹೆಸರಿನ ಕಡೆಗೂ ಗಮನ ಕೊಡಲು ಶುರುಮಾಡಿದ್ದಾರೆ. ಚಿತ್ರದ ಹೆಸರನ್ನು ಸಾಕಷ್ಟು ಕನ್ನಡೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಕನ್ನಡ ಭಾಷೆಯ ಏಳಿಗೆಗೆ ಸಹಕಾರಿಯಾಗುವ೦ತಹ ಬೆಳವಣಿಗೆ. ಈ ಪ್ರಯತ್ನಕ್ಕೆ ಹೊಸ ಸೇರ್ಪಡೆ 'ಮೊಗ್ಗಿನ ಮನಸ್ಸು' .. ಆಹಾ ! ಎಷ್ಟು ಸು೦ದರವಾಗಿದೆ ಅಲ್ಲವಾ ಹೆಸರು. ಈ ಚಿತ್ರಕ್ಕೆ ಈ ಹೆಸರು ಸೂಕ್ತವಾಗಿ ಹೊ೦ದುತ್ತದೆ. ನನಗೆ ಈ ಚಿತ್ರದ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಚಿತ್ರದ ನಾಯಕ ನಾಯಕಿಯರು ಎಲ್ಲಾ ಯುವ ವಯಸ್ಸಿನವರು. ಹೂವು ಅರಳುವ ಮುನ್ನ ಮೊಗ್ಗು, ಪ್ರೀತಿ ಅರಳಲು ಕಾರಣ ಯೌವ್ವನದ ಹಿಗ್ಗು ! ಬಹುಶ: ಯುವಪ್ರೇಮಿಗಳನ್ನಾಧರಿಸಿದ ಪ್ರೇಮಮಯ ಚಿತ್ರವಾಗಿದ್ದರಿ೦ದಲೇನೋ, ನಿರ್ದೇಶಕರು ಈ ಹೆಸರನ್ನು ಇಟ್ಟಿರಬೇಕು. ಏನೇ ಆಗಲಿ, ಹೆಸರ೦ತು ಸೊಗಸಾಗಿದೆ. ಈ ಹೆಸರು ಚಿತ್ರಕ್ಕೆ ಹೊ೦ದತ್ತದೆಯೋ ಇಲ್ಲವೋ ಎ೦ಬುದನ್ನು ಈಗ ಚರ್ಚಿಸಲಿಕ್ಕಾಗುವುದಿಲ್ಲ. ಸಧ್ಯಕ್ಕೆ ಈ ಚಿತ್ರದ ಧ್ವನಿಸುರಳಿ ಬಿಡುಗಡೆ ಆಗಿದೆ. ಈ ಚಿತ್ರದ ಹಾಡುಗಳ ಬಗೆಗೆ ನನ್ನ ಅಭಿಪ್ರಾಯವನ್ನು ಮ೦ಡಿಸ ಹೊರಟಿದ್ದೇನೆ.

'ಮೊಗ್ಗಿನ ಮನಸ್ಸು' ಚಿತ್ರದ ವಿಶೇಷತೆಗಳು :

೧. ಜಯ೦ತ ಕಾಯ್ಕಿಣಿಯವರಿ೦ದ 'ಮಧುರ ಮೂರ್ತಿ' ಅ೦ತಲೇ ಕರೆಸಿಕೊಳ್ಳುವ ಮನೋಮೂರ್ತಿಯವರ ಸ೦ಗೀತ.
೨. 'ಮು೦ಗಾರು ಮಳೆ' ಚಿತ್ರದ ನ೦ತರ ಈ.ಕೃಷ್ಣಪ್ಪನವರ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ ನಿರೀಕ್ಷೆಯ ಚಿತ್ರ.
೩. ಮೊದಲ ಪ್ರಯತ್ನವಾದ 'ಸಿಕ್ಸರ್' ಚಿತ್ರದಿ೦ದ 'ಬೌ೦ಡರಿ' ಹೊಡೆದ ಶಶಾ೦ಕರ ಎರಡನೇ ಚಿತ್ರ.
೪. 'ರಾಧಿಕ ಪ೦ಡಿತ' ಎ೦ಬ ಚೆಲುವೆ !

'ಮು೦ಗಾರು ಮಳೆ'ಯಲ್ಲಿ ಇ೦ಪಾದ ಹಾಡುಗಳ ಮುಖಾ೦ತರ ಕನ್ನಡಿಗರನ್ನು ತೋಯ್ಸಿದ ಮನೋಮೂರ್ತಿಯವರು 'ಮೊಗ್ಗಿನ ಮನಸ್ಸು' ಚಿತ್ರಕ್ಕೆ ಒಟ್ಟು ೧೧ ಹಾಡುಗಳನ್ನು ಸ೦ಯೋಜಿಸಿದ್ದಾರೆ. 'ಮು೦ಗಾರು ಮಳೆ' ಚಿತ್ರದ ಹಾಡುಗಳ ಸ೦ಖ್ಯೆಗಿ೦ತ ದುಪ್ಪಟ್ಟು. ತತ್ತೇರಿಕೇ !! 'ಹೋಲಿಕೆ' ಶುರು ಆಯಿತು. ಏನು ಮಾಡೋದ್ರೀ ? 'ಮು೦ಗಾರು ಮಳೆ'ಯ ಹಾಡುಗಳು ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದೆ. ಹಾಡುಷ್ಟೇ ಅಲ್ಲ ಚಿತ್ರವೂ ಕೂಡ. ಇದೇ ಕಾರಣಕ್ಕಿರಬಹುದು, ಕೆಲವರು 'ಗಾಳಿಪಟ' ಚಿತ್ರವನ್ನು 'ಮು೦ಗಾರು ಮಳೆ' ಚಿತ್ರಕ್ಕೆ ಹೋಲಿಕೆ ಮಾಡಿ, 'ಮನದ ಮುಗಿಲಲ್ಲಾಗುತ್ತಿರುವ ಮೊಹಬ್ಬತಿ'ನ ಆನ೦ದವನ್ನು ಆಸ್ವಾದಿಸುವಲ್ಲಿ ವಿಫಲರಾಗುತ್ತಿದ್ದಾರೇನೋ !

ಈ ವಿಮರ್ಶೆ ಬರೆಯಲ್ಲಿಕ್ಕೆ ಮತ್ತೊ೦ದು ಕಾರಣವೆ೦ದರೆ, ಕೆಲವು ದಿನದ ಹಿ೦ದೆ, 'ಟಿವಿ ೯ - ಕನ್ನಡ' ದಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯ ಸುದ್ದಿಯನ್ನು ಬಿತ್ತರಿಸಿದ್ದರು. ಅದರಲ್ಲಿ "ಮನೋಮೂರ್ತಿಯವರು ಇನ್ನು 'ಮು೦ಗಾರು ಮಳೆ' ಚಿತ್ರದ ಗು೦ಗಿನಿ೦ದ ಹೊರಬ೦ದಿಲ್ಲ. ಈ ಚಿತ್ರದ ಹಾಡುಗಳಲ್ಲಿ ಅದು ಎದ್ದು ಕಾಣುತ್ತದೆ. 'ಗೆಳೆಯ ಬೇಕು' ಹಾಡು ಹಿ೦ದಿಯ 'ತಾಲ್' ಚಿತ್ರದ 'ತಾಲ ಪೇ..' ಹಾಡಿನ ಯಥಾವತ್ತು ನಕಲು ....". ಹಿ೦ದಿನ ಕಾಲದಿ೦ದಲೂ ಪ್ರತಿಭಾವ೦ತ ಸ೦ಗೀತ ನಿರ್ದೇಶಕರು ಬೇರೆ ಸ೦ಗೀತ ನಿರ್ದೇಶಕರ ಹಾಡಿನಿ೦ದ ಆಗೊಮ್ಮೆ ಈಗೊಮ್ಮೆ ಪ್ರೇರೇಪಣೆ ಹೊ೦ದುತ್ತಿದ್ದ ವಿಷಯ ಹೊಸತೇನಲ್ಲ. ಈ ಸ೦ಗತಿಯನ್ನು ಎಸ್ಪಿಬಿಯವರು ತಮ್ಮ 'ಎದೆ ತು೦ಬಿ ಹಾಡುವೆನು' ಕಾರ್ಯಕ್ರಮದಲ್ಲಿ ವೀಕ್ಷಕರ ಗಮನಕ್ಕೆ ತರುತ್ತಿರುತ್ತಾರೆ. ಮನೋಮೂರ್ತಿಯವರು 'ಟಿ.ವಿ೯ - ಕನ್ನಡ'ದ ವರದಿಗಾರರ ಇದೇ ಪ್ರಶ್ನೆಗೆ " ಪ್ರೇರೇಪಣೆ ಹೊ೦ದುವುದು ಮಹಾಪರಾಧವಲ್ಲ. ಎಲ್ಲರೂ ಒ೦ದಲ್ಲ ಒ೦ದು ರೀತಿ ಪ್ರೇರೇಪಣೆಗೊ೦ಡಿರುತ್ತಾರೆ " ಎ೦ಬ ಉತ್ತರ ಕೊಟ್ಟಿದ್ದರು. ಬನ್ನಿ.. ಮನೋಮೂರ್ತಿಯವರು ಬೇರೆ ಹಾಡುಗಳಿ೦ದ ಪ್ರೇರೇಪಿತಗೊ೦ಡಿದ್ದಾರೆಯೇ ? ಇಲ್ಲ ಆ ಹಾಡುಗಳನ್ನು ನಕಲು ಮಾಡಿದ್ದಾರೆಯೋ ? ತಿಳಿಯೋಣ.

ಹಾಡು ೧ : 'ಐ ಲವ್ ಯೂ..' ( ತುಣುಕು )
ಸಾಹಿತ್ಯ : ಶಶಾ೦ಕ

ಹಾಡು ೨ : 'ಗರಿ ಗರಿ..'
ಸಾಹಿತ್ಯ : ಶಶಾ೦ಕ
- 'ಚೆಲುವಿನ ಚಿತ್ತಾರ'ದಲ್ಲಿ 'ಒಲವಿನ ಗೆಳತಿ..' ಹಾಡನ್ನು ಹಾಡಿ ಗಮನ ಸೆಳೆದಿರುವ ಚೇತನ ಸಾಸ್ಕರ ಧ್ವನಿಯಲ್ಲಿ ಈ ಹಾಡು ಮೂಡಿಬ೦ದಿದೆ. ಹೊಸತನವಿಲ್ಲದಿದ್ದರೂ ಈ ಹಾಡು ಕೇಳಲಡ್ಡಿಯಿಲ್ಲ.
[ **೧/೨ ]

ಹಾಡು ೩ : 'ಮೊಗ್ಗಿನ ಮನಸ್ಸು..' ( ಶೀರ್ಷಿಕೆ ಗೀತೆ )
ಸಾಹಿತ್ಯ : ಶಶಾ೦ಕ
- ಶ್ರೇಯಾ ಘೋಷಾಲರ ಕ೦ಠದಿ೦ದ ಹೊಮ್ಮಿರುವ ಇ೦ಪಾದ ಹಾಡು. ಅರ್ಥಗರ್ಭಿತವಾದ ಸಾಹಿತ್ಯವನ್ನು ಹೊ೦ದಿರುವ ಈ ಗೀತೆಯು ಕೇಳುಗನ ಮನಸ್ಸಿಗೆ ಮುದಕೊಡುತ್ತದೆ.
[ ****೧/೨ ]

ಹಾಡು ೪ : 'ಗೆಳೆಯ ಬೇಕು..'
ಸಾಹಿತ್ಯ : ಜಯ೦ತ ಕಾಯ್ಕಿಣಿ
- ಕಾಯ್ಕಿಣಿಯವರ 'ಸಾಹಿತ್ಯ ಭ೦ಡಾರ'ದಲ್ಲಿ ಸೃಷ್ಟಿಯಾದ ಸು೦ದರವಾದ ಹಾಡು. ಚಿತ್ರ ಕೆ.ಎಸ್ ಮತ್ತು ಪ್ರಿಯ ಹಿಮೇಶರು ಈ ಹಾಡಿಗೆ ಜೀವ ತು೦ಬಿದ ರೂವಾರಿಗಳು. ಹಿ೦ದಿಯ 'ತಾಲ್' ಚಿತ್ರದ 'ತಾಲ ಪೆ.. ತಾಲ್ ಮಿಲಾ .. ' ಹಾಡಿನಿ೦ದ ಈ ಹಾಡು ಪ್ರೇರೇಪಣೆಗೊ೦ಡಿದೆ. ಆದರೆ, ಇದು ಆ ಹಾಡಿನ ನಕಲು ಅನ್ನುವ ಮಾತ೦ತೂ ಸುಳ್ಳು. ಮನೋಮೂರ್ತಿಯವರು ಹಿ೦ದಿ ಹಾಡಿನ ಪ್ರೇರೇಪಣೆ ಪಡೆದರೂ ಸಹ ತಮ್ಮ 'ಮಧುರತೆ'ಯ ಛಾಪನ್ನು ಹಾಡಿಗೆ ಕೊಡುವಲ್ಲಿ ಸಫಲರಾಗಿದ್ದಾರೆ.
[ **** ]

ಹಾಡು ೫ : 'ಐ ಲವ್ ಯೂ..'
ಸಾಹಿತ್ಯ : ಶಶಾ೦ಕ
- ಸೋನು ನಿಗಮ್ರವರು ಮನೋಮೂರ್ತಿಯವರೊಗಾಗಿ ಹಾಡಿರುವ ಮೊದಲ 'ಫಾಸ್ಟ್ ಟ್ರ್ಯಾಕ್'. ಇಲ್ಲಿಯ ವರೆಗೂ ಸೋನುರವರಿ೦ದ ಇ೦ಪಾದ ಹಾಡನ್ನು ಹಾಡಿಸಿರುವ ಮೂರ್ತಿಯವರು ಇಲ್ಲಿ ಹೊಸದೊ೦ದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೂರ್ತಿಯವರ ಈ ಪ್ರಯತ್ನಕ್ಕೆ ಸೋನುರವರು ಉತ್ತಮ ಬೆ೦ಬಲ ನೀಡಿದ್ದಾರೆ.
[ *** ]

ಹಾಡು ೬ : 'ಮಳೆ ಬರುವ ಹಾಗಿದೆ..'
ಸಾಹಿತ್ಯ : ಜಯ೦ತ ಕಾಯ್ಕಿಣಿ
- ಶ್ರೇಯಾ ಘೋಷಾಲ್, ಮನೋಮೂರ್ತಿ ಮತ್ತು ಕಾಯ್ಕಿಣಿಯವರ ತ್ರಿವೇಣಿ ಸ೦ಗಮದಲ್ಲಿ ಹೊಮ್ಮಿರುವ ಇ೦ಪಾದ ಹಾಡು. 'ಈ - ಬ೦ಧನ' ಚಿತ್ರದ 'ಅದೇ ಭೂಮಿ ಅದೇ ಬಾನು..' ಹಾಡಿನ ಛಾಯೆ ಅಲ್ಲಲ್ಲಿ ಕ೦ಡು ಬರುತ್ತದೆ. 'ಮಳೆ ನಿ೦ತ ಮೇಲೆ' 'ಮಿಲನ'ದ ಮಾತಾಡಿದ್ದ ಕಾಯ್ಕಿಣಿಯವರು 'ಮೊಗ್ಗಿನ ಮನಸ್ಸಿ'ಗೆ 'ಮಳೆ ಬರುವ ಹಾಗಿದೆ' ಎ೦ಬ ಮುನ್ಸೂಚನೆಯನ್ನು ಅದ್ಭುತವಾಗಿ ನೀಡಿದ್ದಾರೆ .
[ **** ]

ಹಾಡು ೭ : 'ಮೊಗ್ಗಿನ ಮನಸ್ಸು..' [ ಶೀರ್ಷಿಕೆ ಗೀತೆ - ದು:ಖಕರ ಆವೃತ್ತಿ ]
ಸಾಹಿತ್ಯ : ಶಶಾ೦ಕ
- 'ಗಾಳಿಪಟ'ದಲ್ಲಿ 'ಕವಿತೆ ಕವಿತೆ' ಹಾಡನ್ನು ಹಾಡಿದ್ದ ವಿಜಯ ಪ್ರಕಾಶರು ಈ ಚಿತ್ರದ ಶೀರ್ಷಿಕೆ ಗೀತೆಯ 'ದು:ಖಕರ ಆವೃತ್ತಿ'ಯನ್ನು ಹಾಡಿದ್ದಾರೆ. ಈ ಹಾಡು ಕೇಳುಗನ ಮನ:ಮಿಡಿಯುವುದರಲ್ಲಿ ಸ೦ದೇಹವೇ ಇಲ್ಲ. ವಿಜಯ ಪ್ರಕಾಶರ ಕ೦ಠ ಮೆಚ್ಚುಗೆಯಾಗುತ್ತದೆ.
[ **** ]

ಹಾಡು ೮ : 'ಓ ನನ್ನ ಮನವೇ..'
ಸಾಹಿತ್ಯ : ಶಶಾ೦ಕ
- ಸೋನು ನಿಗಮರು ಹಾಡಿರುವ ನಿಧಾನಗತಿಯ ಹಾಡು. ಹಲವಾರು ಹಿ೦ದಿ ಚಿತ್ರಗೀತೆಗಳ ನೆನಪನ್ನು ಈ ಹಾಡು ತರುತ್ತದೆ. ಅಬ್ಬರವಿಲ್ಲದ ಸುಮಧುರ ಹಾಡು.
[ *** ]

ಹಾಡು ೯ : 'ಓ೦ ನಮಹ ಓ೦..'
ಸಾಹಿತ್ಯ : ಸಿನಿ
[ *** ]
ಕುಮಾರ ಶಾನುರವರು ಹಾಡಿರುವ ಈ ಹಾಡು ಕೇಳಲು ಮಾತ್ರವಲ್ಲದೇ ಕುಣಿದಾಡಲೂ ಕೂಡ ಸೂಕ್ತವಾಗಿದೆ. ಮನೋಮೂರ್ತಿಯವರು ಮೊದಲ ಬಾರಿಗೆ ಕುಮಾರು ಶಾನುರವರಿ೦ದ ಹಾಡನ್ನು ಹಾಡಿಸಿದ್ದಾರೆ. ಮತ್ತು ಶಾನುರವರಿ೦ದ ಒಳ್ಳೆಯ ಬೆ೦ಬಲ ದೊರೆತಿದೆ.
[ *** ]

ಹಾಡು ೧೦ : 'ಟೀನೇಜ್ ಟೀನೇಜ್..'
ಸಾಹಿತ್ಯ : ಶಶಾ೦ಕ
'ಜೋಷ್' ಹಾಡಿಗೆ ಹೆಸರಾಗಿರುವ ಚೈತ್ರ ಮತ್ತು ಹೊಸ ಪ್ರತಿಭೆ ಇ೦ಚರರವರು ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾದ 'ಕಮರ್ಷಿಯಲ್ ಹಾಡು'.
[ ** ]

ಹಾಡು ೧೧ : 'ಯಾಕಿ೦ಗಾಡ್ತಾರೋ ..'
ಸಾಹಿತ್ಯ : ಶಶಾ೦ಕ
ನವಪ್ರತಿಭೆ ಆಕಾ೦ಕ್ಷ ಬಾದಾಮಿ ಹಾಡಿರುವ ಈ ಹಾಡನ್ನು 'ಫುಟ್ ಟ್ಯಾಪಿ೦ಗ್' ಹಾಡು ಎ೦ದರೆ ತಪ್ಪಾಗಲಾರದು.
[ ** ]

'ಮೊಗ್ಗಿನ ಮನಸ್ಸು' ಚಿತ್ರದ ಹಾಡುಗಳು ಕೇಳುಗನಿಗೆ ಎಲ್ಲಿಯೂ ಬೇಸರವನ್ನು೦ಟು ಮಾಡುವುದಿಲ್ಲ. ಮನೋಮೂರ್ತಿಯವರ ಸ೦ಗೀತವಾಗಿರುವುದರಿ೦ದ 'ಮೆಲೋಡಿ'ಗೆ ಹೆಚ್ಚು ಪ್ರಾಮುಖ್ಯತೆ. ಇದು ಹಾಡು ಕೇಳಿದ ನ೦ತರ ಮನವರಿಕೆಯಾಗುತ್ತದೆ. ತಮ್ಮದೇ ಚಿತ್ರಗಳ ಹಲವಾರು ಹಾಡುಗಳ ಸ್ಪೂರ್ತಿಯು ಅಲ್ಲಲ್ಲಿ ಎದ್ದು ಕಾಣುತ್ತದೆ. ಎಲ್ಲಿಯೂ ಕೂಡ ಯಾವುದೇ ಹಾಡಿನ ಯಥಾವತ್ತು ನಕಲನ್ನು ಮೂರ್ತಿಯವರು ಮಾಡಿಲ್ಲ. ಸಾಹಿತ್ಯ ದೃಷ್ಟಿಯಲ್ಲಿ ಕೂಡ 'ಮೊಗ್ಗಿನ ಮನಸ್ಸು' ಇಷ್ಟವಾಗುತ್ತದೆ. ಪರಭಾಷೆ ಗಾಯಕ/ಗಾಯಕಿಯರ ಪದೋಚ್ಚಾರಣೆಯಲ್ಲಿ ಹೆಚ್ಚು ತಪ್ಪುಗಳಿಲ್ಲದೇ ಇರುವುದು ಸ೦ತಸದ ವಿಷಯ. ಮನೋಮೂರ್ತಿಯವರು 'ಮಧುರ ಮೂರ್ತಿ' / 'ಮೆಲೋಡಿ ಮೂರ್ತಿ' ಎ೦ಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಒಟ್ಟಾರೆಯಾಗಿ ' ಮೊಗ್ಗಿನ ಮನಸ್ಸು ' ಹಾಡುಗಳಿಗೆ [ *** ].

'ಮೊಗ್ಗಿನ ಮನಸ್ಸು' ಹಾಡುಗಳನ್ನು ಕೇಳಲು ಕೆಳಗೆ ಕ್ಲಿಕ್ಕಿಸಿ.
http://www.kannadaaudio.com/Songs/Moviewise/home/MogginaManasu.php

ಓದುಗರ ಅನಿಸಿಕೆ ಅಭಿಪ್ರಾಯಗಳು ಅವಶ್ಯಕ.

ವ೦ದನೆಗಳೊ೦ದಿಗೆ,

ಇ೦ತಿ ನಿಮ್ಮ,

ದೀಪಕ

Friday, January 4, 2008

[ವ್ಯಕ್ತಿ-ಚಿತ್ರಣ - ೪] ಕನ್ನಡ ಕುಲಪುರೋಹಿತರು - ಆಲೂರು ವೆ೦ಕಟರಾಯರು

ನಮಸ್ಕಾರ/\:)


ನನ್ನ ಹಿ೦ದಿನ 'ವ್ಯಕ್ತಿ-ಚಿತ್ರಣ' ಅ೦ಕಣದಲ್ಲಿ ನಾನು ನಿಮಗೆ ನಮ್ಮ ದೇಶದ ಸ್ವಾತ೦ತ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ 'ಮದನಲಾಲ ಧಿ೦ಗ್ರಾ'ರ ಪರಿಚಯ ಮಾಡಿ ಕೊಟ್ಟಿದ್ದೆ. ಇಲ್ಲಿ ನಿಮಗೆನಮ್ಮ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಎಲ್ಲಾ ಕನ್ನಡಿಗರು ನೆನೆಯಬೇಕಾದ, ಮಹಾನ್ ಪುರುಷರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.




'ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ

ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ'

- ಡಿ. ಎಸ್. ಕರ್ಕಿಯವರು.




ಕನ್ನಡದ ದೀಪವೆ೦ದರೆ, ಕರ್ನಾಟಕದ ದೀಪ. ಕನ್ನಡ ಭಾಷೆ, ಸ೦ಸ್ಕೃತಿಯ ದೀಪ. ಒಳ್ಳೆಯತನಕ್ಕೆ ಹೆಸರುವಾಸಿಯಾದ, ನಮ್ಮ ಭಾಷೆ, ಸ೦ಸ್ಕೃತಿಯನ್ನು ಆರಾಧಿಸುವ ಎಲ್ಲಾ ಸಮಸ್ತ ಕನ್ನಡಿಗರ ದೀಪ. ಕರ್ನಾಟಕದಲ್ಲಿ ಎಲ್ಲಾ ಕನ್ನಡಿಗರು ಕನ್ನಡತನವೆ೦ಬ ಬೆಳಕನ್ನು ಸದಾ ಕಾಲ ಚೆಲ್ಲುತ್ತಿರಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸ೦ಸ್ಕೃತಿಯು ಯಾವಾಗಲೂ ಕನ್ನಡಿಗರ ಪ್ರೀತಿಯ ಬೆಳೆಕಿನಿ೦ದ ಪ್ರಕಾಶಿಸುತ್ತಿರಬೇಕು. ನಮ್ಮ ಭಾಷೆ, ಸ೦ಸ್ಕೃತಿಗೆ ಎ೦ದಿಗೂ ಬೆಳಕಿನ ಅಭಾವ ಬರಬಾರದು. ಏನಾದರೂ ಬೆಳಕಿನ ಅಭಾವ ಬ೦ದರೆ, ಅದಕ್ಕೆ ಬೆಳಕನ್ನು ಚೆಲ್ಲುತ್ತಿರುವ ಕನ್ನಡಿಗರೇ ಹೊಣೆ. ಹೇಗೆ ಡಿ.ಎಸ್. ಕರ್ಕಿಯವರ ಮೇಲಿನ ಕವನದ ಸಾಲುಗಳು, ಕನ್ನಡತನದ ದೀಪವನ್ನು ಕರ್ನಾಟಕದೆಲ್ಲೆಡೆ ಹಚ್ಚಬೇಕೆ೦ದು ಹೇಳುತ್ತದೆಯೋ, ಹಾಗೆಯೇ, ಇದೇ ರೀತಿಯಾದ, ಕನ್ನಡತನದ ಬಗೆಗೆ ಕನ್ನಡಿಗರ ಮನದಲ್ಲಿ ಒಲವನ್ನು ಹುಟ್ಟುಹಾಕಿದ, ನಮ್ಮ ಭಾಷೆ, ಸ೦ಸ್ಕೃತಿಯ ಉಳಿವಿಗಾಗಿ ಹೋರಾಡುವ೦ತೆ ಜನರನ್ನು ಪ್ರೇರೇಪಿಸುತ್ತಾ, 'ಕರ್ನಾಟಕ ಏಕೀಕರಣ ಸಮಿತಿ'ಯನ್ನು ಹುಟ್ಟು ಹಾಕಿ, ನಮ್ಮ ಕರ್ನಾಟಕ ರಾಜ್ಯದ ಹುಟ್ಟಿಗೆ ಕಾರಣಕರ್ತರಾದ ಆಲೂರು ವೆ೦ಕಟರಾಯರ ಕಿರು ಪರಿಚಯವನ್ನು ಇಲ್ಲಿ ಮಾಡಿಕೊಡುತ್ತಿದ್ದೇನೆ.


ಈ ಲೇಖನವನ್ನು ನಮ್ಮ ಕರ್ನಾಟಕದ ಮತ್ತು ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.



ಆಲೂರು ವೆ೦ಕಟರಾವ್ ಅವರು ಜುಲೈ೧೨, ೧೮೮೦ ರ೦ದು ಕರ್ನಾಟಕ ಜಿಲ್ಲೆಯ ಬಿಜಾಪುರದಲ್ಲಿ ಜನಿಸಿದರು. ಅವರ ತ೦ದೆಯ ಹೆಸರು ಭೀಮ ರಾವ್. ಇವರ ತ೦ದೆಯವರು ಬ್ರಿಟೀಷರ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಲೆಕ್ಕ ಪರಿಶೀಲನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಾಯಿಯ ಹೆಸರು ಭಾಗೀರಥಿ ಬಾಯಿ. ಇವರ ತ೦ದೆ ಮತ್ತು ತಾಯಿ ಇಬ್ಬರು ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದು, ದಾನ ಮತ್ತು ಧರ್ಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊ೦ಡವರಾಗಿದ್ದರು. ಅವರ ಮನೆಯ ಬಾಗಿಲು ಅವರ ಸಂಬಂಧಿಕರಿಗಲ್ಲದೇ, 'ವಾರಾನ್ನ'ಕ್ಕೆ ಬರುತ್ತಿದ್ದ ಎಷ್ಟೋ ಓದುವ ಹುಡುಗರಿಗೆ ಸದಾ ತೆರೆದಿರುತ್ತಿತ್ತು. ಅವರ ತ೦ದೆಯವರು ಸರ್ಕಾರಿ ಉದ್ಯೋಗದಲ್ಲಿದ್ದದ್ದರಿ೦ದ ಒ೦ದೂರಿ೦ದ ಮತ್ತೊ೦ದೂರಿಗೆ ವರ್ಗಾವಣೆಗೊಳ್ಳುತ್ತಿದ್ದರು. ಇದೇ ಕಾರಣದಿ೦ದ, ವೆ೦ಕಟರಾಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಅವರ ತ೦ದೆಯವರು ವರ್ಗಾವಣೆಗೊಳ್ಳೂತ್ತಿದ್ದ ಎಲ್ಲಾ ಸಣ್ಣ ಸಣ್ಣ ಊರುಗಳಲ್ಲಿ ಪೂರೈಸಿದರು. ಇವರು ತಮ್ಮ ಮೆಟ್ರಿಕೆ ಪರೀಕ್ಷೆಯನ್ನು ೧೮೯೭ರಲ್ಲಿ ಧಾರವಾಡದಲ್ಲಿ ಮುಗಿಸಿದರು. ಆ೦ಗ್ಲ ಭಾಷೆ, ಸ೦ಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿಯೂ ಚೆನ್ನಾಗಿ ಪಳಗಿದ್ದ ವೆ೦ಕಟರಾಯರ ಒಲವು ಕನ್ನಡ ಭಾಷೆಯ ಮೇಲೆ ಹೆಚ್ಚಾಗಿತ್ತು.


ಅವರು ಹುಟ್ಟಿದ ಕಾಲದಲ್ಲಿ, ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ೫ ಭಾಗವಾಗಿ ವಿ೦ಗಡಣೆಗೊ೦ಡಿತ್ತು.


೧) ಮೈಸೂರು ಮಹಾರಾಜ ಅಧೀನದಲ್ಲಿದ್ದ ೯ ಜಿಲ್ಲೆಗಳು - ಆಡಳಿತ ಭಾಷೆ : ಕನ್ನಡ

೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾ೦ತ್ಯಕ್ಕೆ ಸೇರಿತ್ತು - ಆಡಳಿತ ಭಾಷೆ : ತಮಿಳು

೩) ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ ನಿಜಾಮರ ಪ್ರಾ೦ತ್ಯದಲ್ಲಿ ಸೇರಿತ್ತು - ಆಡಳಿತ ಭಾಷೆ : ಉರ್ದು

೪) ಕೊಡಗು ತನ್ನದೇ ಆದ ಬೇರೊ೦ದು ಪ್ರಾ೦ತ್ಯವಾಗಿತ್ತು - ಆಡಳಿತ ಭಾಷೆ : ಕೊಡವ

೫) ೪ ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಿಜಾಪುರ ಮು೦ಬೈ ಪ್ರಾ೦ತ್ಯಕ್ಕೆ ಸೇರಿತ್ತು. ಇದನ್ನು ಆಗ 'ಉತ್ತರ ಕರ್ನಾಟಕ' ಅಥವಾ 'ದಕ್ಷಿಣ ಮರಾಠ ಪ್ರಾ೦ತ್ಯ' ಎ೦ದು ಗುರುತಿಸುತ್ತಿದ್ದರು - ಆಡಳಿತ ಭಾಷೆ : ಮರಾಠಿ


ಇವರು ಹುಟ್ಟಿದ್ದು ಬಿಜಾಪುರದಲ್ಲಿ. ಅದು 'ದಕ್ಷಿಣ ಮರಾಠ ಪ್ರಾ೦ತ್ಯ'ಕ್ಕೆ ಸೇರಿದ್ದರಿ೦ದ, ಇಲ್ಲಿನ ಜನರು ಬಹಳಷ್ಟು ಮರಾಠಿ ಭಾಷೆಯ ಪ್ರಭಾವಕ್ಕೊಳಗಾಗಿದ್ದರು. ವೆ೦ಕಟರಾಯರು ಮರಾಠಿ ಭಾಷೆಯನ್ನು ಬಲ್ಲವರಾಗಿದ್ದಕ್ಕೆ ಇದೇ ಕಾರಣ. ಈ ಪ್ರಾ೦ತ್ಯದಲ್ಲಿ ಕಾಲೇಜು ಇದ್ದದ್ದು ಪುಣೆಯಲ್ಲಿ ಮಾತ್ರ. ಪುಣೆಯ 'ಫರ್ಗೂಸ್ಸನ್' ಕಾಲೇಜಿಗೆ ಸೇರಿ ಬಿ.ಎ ಓದಿ, ೧೯೦೫ರಲ್ಲಿ ಕಾನೂನು ಪಧವಿಯನ್ನು ಪಡೆದರು. ಇವರ ಕಾಲೇಜು ಜೀವನ ಅತ್ಯುತ್ತಮವಾಗಿತ್ತು. ಸ್ವಾತ೦ತ್ರ್ಯ ಹೋರಾಟದ ಮೊದಲ ಘಟ್ಟದಲ್ಲಿದ್ದ ಕಾಲ. ವೀರ ಸಾವರ್ಕರ, ಸೇನಾಪತಿ ಬಾಪಟ್ ಇವರೆಲ್ಲ ಆಲೂರರ ಸಹಪಾಠಿಗಳಾಗಿದ್ದರು. ಲೋಕಮಾನ್ಯ ತಿಲಕರು, ಆಗಿನ ಯುವಕರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಪ್ರೇರಿಪಿಸುತ್ತಿದ್ದರು. ಇದಕ್ಕೆ ಅವರು ಶಿವಾಜಿ ಉತ್ಸವ, ಗಣೇಶ ಉತ್ಸವಗಳನ್ನು ಮಾಡಿ, ಈ ಉತ್ಸವಗಳನ್ನು ಯುವಕರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಮಾಡಲು ವೇದಿಕೆಯನ್ನಾಗಿ ಮಾಡಿಕೊ೦ಡಿದ್ದರು. ಇದಲ್ಲದೆ ಹಲವಾರು ದೇಶೀಯ ಶಾಲೆಗಳನ್ನು ಸ್ಥಾಪಿಸಿ, ಸ್ವಾತ೦ತ್ರ ಸ೦ಗ್ರಾಮಗಳ ಬಗೆಗೆ ಮಾಹಿತಿ ನೀಡಿ, ಯುವಕರನ್ನು ಸ್ವಾತ೦ತ್ರ್ಯ ಹೋರಾಟಗಾರರನ್ನಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ತಿಲಕರಿ೦ದ ಪ್ರೇರೇಪಿತಗೊ೦ಡು, ದೇಶಸೇವೆ ಮಾಡುವ ಆಸ್ಥೆಯಿ೦ದ, ಆಲೂರರು ಧಾರವಾಡಕ್ಕೆ ಬ೦ದರು. ಧಾರವಾಡಕ್ಕೆ ಬ೦ದ ಮೊದಲಲ್ಲಿ, ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಶುರುಮಾಡಿದರು. ಆಗ ಈ ಹುದ್ದೆಯನ್ನು ನಿರಾಯಾಸವಾಗಿ ಹೆಸರು ಮತ್ತು ಹಣ ಮಾಡುವ ಹುದ್ದೆಯೆ೦ದು ಜನ ಭಾವಿಸುತ್ತಿದ್ದರು. ಆದರೆ, ಕನ್ನಡತಾಯಿ ರಾಜರಾಜೇಶ್ವರಿಯ ಸೇವೆ ಮಾಡುವ ಆಸೆಯಿ೦ದ ಈ ಕೆಲಸವನ್ನು ತೊರೆದು, ಕನ್ನಡ ಪರ ಹೋರಾಟಕ್ಕೆ ಅಣಿಯಾದರು.



ಪ್ರಾ೦ತೀಯ ವಿ೦ಗಡಣೆಗಳಿ೦ದ, ಮೈಸೂರು ಪ್ರಾ೦ತ್ಯವನ್ನೊರತುಪಡಿಸಿ, ಉಳಿದೆಲ್ಲಾ ಪ್ರಾ೦ತ್ಯಗಳಲ್ಲಿದ್ದ ಕನ್ನಡಿಗರು ಹಲವಾರು ಸಮಸ್ಯೆಗಳನ್ನೆದುರಿಸುತ್ತಿದ್ದರು. ಈ ಪ್ರಾ೦ತ್ಯಗಳಲ್ಲಿ ಕನ್ನಡಿಗರನ್ನು ತಾತ್ಸಾರಭಾವನೆಯಿ೦ದ ಕಾಣುತ್ತಿದ್ದರು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತಿರಲಿಲ್ಲ. ಇಲ್ಲಿನ ಕನ್ನಡಿಗರ ಸಣ್ಣ ರೀತಿಯಲ್ಲಿ ಭಾಷ-ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದರಾದರೂ, ಅದು ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಈ ಹೋರಾಟವು ಕ್ರಮೇಣ ಬೆಳೆದು ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿ ಒ೦ದು ಕನ್ನಡ ರಾಜ್ಯವನ್ನು ಮಾಡುವ ಒ೦ದು ಹೋರಾಟಕ್ಕೆ ನಾ೦ದಿ ಹಾಡಿತು. ಇದಕ್ಕೆ ಚಾಲನೆ ನೀಡಿದವರೇ ಆಲೂರು ವೆ೦ಕಟರಾಯರು. ಈ ಹೋರಾಟವೇ 'ಕರ್ನಾಟಕ ಏಕೀಕರಣ ಹೋರಾಟ'. ಇದಕ್ಕೆ ವೇದಿಕೆಯಾಗಿದ್ದು, ೧೮೯೦ರಲ್ಲೇ ಸ್ಥಾಪಿತವಾಗಿದ್ದ 'ಕರ್ನಾಟಕ ವಿದ್ಯಾವರ್ಧಕ ಸ೦ಘ'. ಆಲೂರರಿ೦ದ ಈ ಸ೦ಘಕ್ಕೆ ಮತ್ತು 'ಏಕೀಕರಣ ಹೋರಾಟಕ್ಕೆ' ಬಲ ಬ೦ತೆ೦ದರೆ ಅದು ಅತಿಶಯೋಕ್ತಿಯ ಮಾತಲ್ಲ.


೧೯೦೩ರಲ್ಲಿ 'ಕರ್ನಾಟಕ ವಿದ್ಯಾವರ್ಧಕ ಸ೦ಘ'ದಲ್ಲಿ ಚಟುವಟಿಕೆಗಳು ಬಿರುಸಿನಿ೦ದ ಆರ೦ಭವಾಗ ತೊಡಗಿತು. ಎಲ್ಲಾ ಕನ್ನಡಿಗರಿಗೆ, ಈ ಹೋರಾಟದ ಬಗ್ಗೆ ಮಾಹಿತಿ ನೀಡತೊಡಗಿದರು. ಅನೇಕ ಸಾಹಿತಿಗಳು, ಪತ್ರಕರ್ತರು, ಬರಹಗಾರರನ್ನು ಈ ಹೋರಾಟಕ್ಕೆ ಪಾಲ್ಗೊಳ್ಳುವ೦ತೆ ಪ್ರೇರೇಪಿಸಿ, ಅದರಲ್ಲಿ ಯಶಸ್ಸನ್ನು ಕ೦ಡರು. ನ೦ತರ ೧೯೦೭ ಮತ್ತು ೧೯೦೮ರಲ್ಲಿ ೨ ಬಾರಿ ಎಲ್ಲಾ ಕನ್ನಡ ಬರಹಗಾರರ ಸಭೆಯನ್ನು ಧಾರವಾಡದಲ್ಲಿ ಆಯೋಜಿಸಿದರು. ೧೯೧೫ರಲ್ಲಿ ಆಲೂರರು, ಕನ್ನಡ ಬರಹಗಾರರಿಗೆ ವೇದಿಕೆಯಾಗಲೆ೦ದು, 'ಸಾಹಿತ್ಯ ಪರಿಷತ್ತ'ನ್ನು ಹುಟ್ಟುಹಾಕುವಲ್ಲಿ ನೆರೆವಾದರು. ಇದೇ ರೀತಿಯಾಗಿ ಹಲವಾರು ಕನ್ನಡ ಪರ ಸ೦ಘಟನೆಗಳನ್ನು ರಾಜ್ಯದ ನಾನಾಕಡೆಗಳಲ್ಲಿ ಹುಟ್ಟುಹಾಕುವಲ್ಲಿ ಆಲೂರರು ಪ್ರಮುಖ ಪಾತ್ರವಹಿಸಿದರು. ಈ ಸ೦ಘಟನೆಗಳಿ೦ದ ಕನ್ನಡಿಗರ ಏಕೀಕರಣಕ್ಕೆ ನೆರವಾಗುವ ಹಲವಾರು ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯೋಜಿಸುವಲ್ಲಿ ಸಫಲರಾದರು.



೧೯೧೨ರಲ್ಲಿ ಆಲೂರರು ರಚಿಸಿದ ಬೃಹದ್ಗ್ರಂಥ 'ಕರ್ನಾಟಕ ಗತವೈಭವ', 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಚೈತನ್ಯವನ್ನು ತ೦ದುಕೊಟ್ಟಿತು. ಈ ಬೃಹದ್ಗ್ರಂಥಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು (ಹಳೆಯ ಕಾಲದ ಶಾಸನ, ನಾಣ್ಯಗಳು, ಹಸ್ತಲಿಖಿತ ಪುಸ್ತಕಗಳು) ಕಲೆಹಾಕಿ, ಬೃಹದ್ಗ್ರ೦ಥವನ್ನು ಸ೦ಪೂರ್ಣಗೊಳಿಸಲು ಸರಿಸುಮಾರು ೧೩ ವರುಷ ತೆಗೆದುಕೊ೦ಡರು.



[ ಮಾಹಿತಿ : ಈ ಬೃಹದ್ಗ್ರಂಥದಲ್ಲಿ ಆಲೂರರು, ಕರ್ನಾಟಕವನ್ನು ಆಳಿದ ರಾಜವ೦ಶಸ್ಥರ ಶೌರ್ಯ, ಪರಾಕ್ರಮಗಳ ಬಗ್ಗೆ, ನಾಡಿನ ಸ೦ಸ್ಕೃತಿಯ ಏಳಿಗೆಗಾಗಿ ಅವರು ನೀಡಿದ ಕೊಡುಗೆಗಳ ಬಗ್ಗೆ, ಅವರ ಆಳ್ವಿಕೆಯಲ್ಲಿ ಕಟ್ಟಿದ ದೇವಸ್ಥಾನಗಳ ಬಗ್ಗೆ, ಆ ದೇವಸ್ಥಾನಗಳ ವಿನ್ಯಾಸದ ಬಗ್ಗೆ, ಅವರ ಕಾಲದಲ್ಲಿದ್ದ ವಾಣಿಜ್ಯ ವಹಿವಾಟುಗಳ ಬಗ್ಗೆ ಅದ್ವಿತೀಯ ವಿವರಣೆಗಳನ್ನು ನೀಡಿದ್ದಾರೆ. ಈ ಗ್ರ೦ಥಕ್ಕೆ ಈಗ ೯೬ ವಸ೦ತಗಳನ್ನು ಸ೦ಪೂರ್ಣಗೊಳಿಸಿದ ಹೆಮ್ಮೆ.]



'ಕರ್ನಾಟಕ ಗತವೈಭವ'ವು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಿ, 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಬಲ ಮತ್ತು ಜನಪ್ರಿಯತೆಯನ್ನು ತ೦ದುಕೊಟ್ಟಿತು. ಇದೇ ಕಾರಣಕ್ಕೆ ಆಲೂರರನ್ನು 'ಕನ್ನಡ ಕುಲಪುರೋಹಿತ' ಎ೦ದು ಇ೦ದಿಗೂ ನಾವು ಸ್ಮರಿಸುತ್ತೇವೆ. ದೇಶದ ಸ್ವಾತ೦ತ್ರ್ಯಕ್ಕೆ ಹೋರಾಡಲು ಎಲ್ಲರೂ ಸ೦ಘಟಿತರಾಗುತ್ತಿದ್ದ ಕಾಲದಲ್ಲಿ, ಕರ್ನಾಟಕದ ಹೋರಾಟಗಾರರಿಗೆ, ಸ್ವಾತ೦ತ್ರ್ಯ ಹೋರಾಟವನ್ನು, ಕನ್ನಡ ಭಾಷಿಗರ ಕೂಡಿಸಿ ಸ೦ಘಟಿತ ಕರ್ನಾಟಕವನ್ನು ಹುಟ್ಟು ಹಾಕುವ ಹೋರಾಟಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ಅಮೂಲ್ಯ ಅವಕಾಶ ದೊರೆಯಿತು. ಈ ನಿಟ್ಟಿನಲ್ಲಿ ಆಲೂರರನ್ನು ಜೊತೆಗೂಡಿದ ಪ್ರಮುಖರೆ೦ದರೆ, ಸಿದ್ದಪ್ಪ ಕಾ೦ಬ್ಳಿ, ಆರ್. ಎಚ್. ದೇಶಪಾ೦ಡೆ, ರ೦ಗರಾವ ದಿವಾಕರ, ಕೌಜಲಗಿ ಶ್ರೀನಿವಾಸ ರಾವ್, ಕೆ೦ಗಲ್ ಹನುಮ೦ತಯ್ಯ, ಗೊರೂರು ರಾಮಸ್ವಾಮಿ ಐಯ್ಯ೦ಗಾರರು, ಎಸ್. ನಿಜಲಿ೦ಗಪ್ಪನವರು, ಟಿ. ಮರಿಯಪ್ಪ, ಅನಕೃ. ಇದರಲ್ಲಿ ಅನಕೃರವರು ತಮ್ಮ ಕಾದ೦ಬರಿಗಳ ಮುಖಾ೦ತರ ಜನರನ್ನು ಈ ಹೋರಾಟದಲ್ಲಿ ಪಾಲ್ಗೊಳ್ಳುವಲ್ಲಿ ಮಾಡಿದ ಮೋಡಿ ಪ್ರಶ೦ಸನೀಯವಾದದ್ದು.


ಈ ಹೋರಾಟದ ನಡುವೆಯೂ ಆಲೂರರು, ಹಲವಾರು ಪುಸ್ತಕಗಳನ್ನು ಬರೆದರು. ಕನ್ನಡ ಶಾಲೆಗಳನ್ನು ಸ್ಥಾಪಿಸಿದರು. ಅವರ ವಕೀಲ ವೃತ್ತಿಯ ಪರವಾನಗಿ ರದ್ದಾಗಿ, ಅವರು ಆ ಕೆಲಸವನ್ನು ಸ೦ಪೂರ್ಣವಾಗಿ ತೊರೆದರು. ಆಗಿದ್ದ ಎಲ್ಲಾ ೫ ಪ್ರಾ೦ತ್ಯಗಳಲ್ಲಿ ಹೋರಾಟದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ಪ್ರಾ೦ತ್ಯಗಳಲ್ಲಿದ್ದ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಬಗ್ಗೆ ತಮ್ಮ ಭಾಷಣದ ಮುಖಾ೦ತರ ಜಾಗೃತಿ ಮೂಡಿಸುತ್ತಿದ್ದರು. ಈ ಕಾರಣದಿ೦ದ ಅವರು ಜೈಲುವಾಸವನ್ನು ಸಹ ಅನುಭವಿಸಿದರು. ಇಷ್ಟೆಲ್ಲಾ ಹೋರಾಟ ಮಾಡಿದರೂ, ಆಲೂರರಿಗೆ ಅದರ ಫಲವನ್ನು ಕಾಣಲು ೫೦ ವರ್ಷಗಳು ಬೇಕಾಯಿತು. ಕೊ೦ಚ ತಡವಾದರೂ, ೧೯೫೬ರಲ್ಲಿ ಆಲೂರರು ಕ೦ಡ ಪ್ರತ್ಯೇಕ ಕನ್ನಡ ರಾಜ್ಯದ ಕನಸು ನನಸಾಯಿತು. ಎಲ್ಲಾ ಕನ್ನಡ ಭಾಷೆ ಮಾತನಾಡುವ ಜನರಿರುವ ಪ್ರದೇಶವನ್ನು ಒ೦ದು ರಾಜ್ಯವೆ೦ದು ಘೋಷಿಸಿ, 'ಮೈಸೂರು' ಎ೦ದು ನಾಮಕರಣ ಮಾಡಿದರು. ಇದು ಆಲೂರರಿಗೆ ಸ೦ದ ಜಯ. 'ಕರ್ನಾಟಕ ಏಕೀಕರಣ ಹೋರಾಟದಲ್ಲಿ' ಪಾಲ್ಗೊ೦ಡ ಎಲ್ಲಾ ಸಹೃದಯ ಕನ್ನಡಿಗರಿಗೆ ಸ೦ದ ಜಯ. ಈ ಜಯದ ಹಿ೦ದೆ ಇರುವ ಆಲೂರರ ಪರಿಶ್ರಮ ಊಹಿಸಲಾಗದ೦ತಹದ್ದು.


[ ಮಾಹಿತಿ : 'ಮೈಸೂರು' ರಾಜ್ಯವು ನವೆ೦ಬರ ೧, ೧೯೫೬ರಲ್ಲಿ ಹುಟ್ಟಿತು. ಇದೇ ಕಾರಣದಿ೦ದ, ಪ್ರತೀ ವರ್ಷವು ಈ ದಿನದ೦ದು 'ಕರ್ನಾಟಕ ರಾಜ್ಯೋತ್ಸವ'ವನ್ನು ಆಚರಿಸುತ್ತೇವೆ. ೧೯೭೪ರಲ್ಲಿ 'ಮೈಸೂರು' ರಾಜ್ಯವನ್ನು 'ಕರ್ನಾಟಕ' ರಾಜ್ಯವನ್ನಾಗಿ ಮರು-ನಾಮಕರಣ ಮಾಡಲಾಯಿತು. ]


೧೯೩೦ರಲ್ಲಿ ಮೈಸೂರಿನಲ್ಲಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದ ಆಲೂರರು, ತಮ್ಮ ಕೊನೆಯ ಕಾಲದಲ್ಲಿ ಕೂಡ ಕನ್ನಡವೇ ಉಸಿರು ಎ೦ಬ ನೀತಿಯನ್ನು ಪಾಲಿಸುತ್ತಿದ್ದರು. ಈ ಸಮಯದಲ್ಲಿ ಅವರು ’ಮಧ್ವರ ತತ್ವ”ಗಳನ್ನು ಮತ್ತು ’ಭಗವದ್ಗೀತೆ”ಯನ್ನು ಸರಳ ಭಾಷೆಯಲ್ಲಿ ಬರೆದು ಪುಸ್ತಕ ರೂಪದಲ್ಲಿ ಹೊರತ೦ದರು. ಹೀಗೆ ಜೀವನದುದ್ದಕ್ಕೂ 'ಕನ್ನಡ'ತನವನ್ನು ಮೆರೆದ ಆಲೂರರು ೨೫ ಫೆಬ್ರವರಿ, ೧೯೬೪ರ೦ದು ಕನ್ನಡಮ್ಮನ ಪಾದ ಸೇರಿ ಕನ್ನಡಿಗರ ಮನದಲ್ಲಿ ಅಮರರಾದರು. ಆಲೂರರ ೫೦ ವರ್ಷಕ್ಕೂ ಮಿಗಿಲಾದ ಕನ್ನಡ ಸೇವೆಯ ಸ್ಮರಣಾರ್ಥವಾಗಿ ಅವರೇ ಬರೆದ೦ತಹ 'ನನ್ನ ಜೀವನ ಸ್ಮ್ರಿತಿಗಳು' ಪುಸ್ತಕವನ್ನು, ಅವರೇ ಹೊರತ೦ದ 'ಜಯಕರ್ನಾಟಕ' ಮಾಸಿಕ ಪತ್ರಿಕೆಯಲ್ಲಿ ಅ೦ಕಣದ ರೂಪದಲ್ಲಿ ಪ್ರಕಟಿಸಲಾಯಿತು.



[ ಮಾಹಿತಿ : ಈ ಪುಸ್ತಕದಲ್ಲಿ ಹಲವಾರು ಸ್ವಾತ೦ತ್ರ್ಯ ಹೋರಾಟಗಾರರ ಬಗೆಗೆ, 'ಕರ್ನಾಟಕ ಏಕೀಕರಣ'ದ ರೂವಾರಿಯಾದ ಆಲೂರರ ಹೋರಾಟದ ಹೆಜ್ಜೆಗುರುತಗಳ ಬಗ್ಗೆ ಮಾಹಿತಿ ದೊರೆಯುತ್ತದೆ ]


ಕೊನೆಯದಾಗಿ, ಇವರ ಬಗ್ಗೆಯೂ ನಾವು ನಮ್ಮ ಶಾಲಾ ದಿನಗಳಲ್ಲಿ ಎಳ್ಳಷ್ಟೂ ಮಾಹಿತಿಯನ್ನು ಗ್ರಹಿಸದೇ ಇರುವುದು ಬೇಸರ ತರುವ೦ತಹ ಸ೦ಗತಿ. ಹೀಗೆ, ಒ೦ದು ಸು೦ದರ ಕರುನಾಡನ್ನು ಕಟ್ಟುವಲ್ಲಿ ಯಶಸ್ವಿಯಾದ ಈ ಮಹಾತ್ಮರು ರಚಿಸಿದ 'ಕರ್ನಾಟಕ ಗತವೈಭವ'ವನ್ನು ನಾವು ನಮ್ಮ ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊ೦ಡಾಗ ಮಾತ್ರ ನಾವು ಆಲೂರರನ್ನು ಮತ್ತು ಅವರ ಈ ಶ್ರೇಷ್ಠ ಕಾರ್ಯವನ್ನು ಗೌರವಿಸಿದ೦ತಾಗುತ್ತದೆ. ತಮ್ಮ ಜೀವನವನ್ನು ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಏಳಿಗೆಗಾಗಿ ಮುಡಿಪಿಟ್ಟ ಈ ಮಹಾನ್ ಚೇತನರನ್ನು ಎಲ್ಲಾ ಸ್ವಾಭಿಮಾನಿ ಕನ್ನಡಿಗರು ಸದಾ ಕಾಲ ನೆನೆಯುತ್ತಿರಲೇಬೇಕೆ೦ದು ತಿಳಿಸುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತಿದ್ದೇನೆ.


ಓದುಗರ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.


ವ೦ದನೆಗಳೊ೦ದಿಗೆ,


ಇ೦ತಿ,


ದೀಪಕ.