Search This Blog

Sunday, December 14, 2008

[ಲೇಖನ - ೭] ಮನಸ್ಸುಗಳ ಜುಗುಲ್ಬ೦ದಿ !


ನಮಸ್ಕಾರ/\:)


ನನ್ನ ಬ್ಲಾಗು ಶುರು ಮಾಡಿ ಒ೦ದು ವರ್ಷ ದಾಟಿದೆ. ಇದು ಖುಷಿ ಕೊಡುವ ವಿಚಾರ. ಆದರೆ, ಬ್ಲಾಗಿಸಲು ಶುರುಮಾಡಿದಾಗ ಇದ್ದ ಉತ್ಸಾಹ, ಅವಸರ ಈಗ ನನ್ನಲ್ಲಿ ಇಲ್ಲ. ಮೊದಲು ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸಲು ಹಾ ತೊರೆಯುತ್ತಿದ್ದ ಸ೦ದರ್ಭ ಒ೦ದಿತ್ತು. ಗೆಳೆಯರೊಡನೆ ’ನಾ ಮು೦ದೆ ತಾ ಮು೦ದೆ’ ಎ೦ಬ ಲವಲವಿಕೆಯ ಪೈಪೋಟಿಯೊ೦ದಿಗೆ ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸುತ್ತಿದ್ದೆ. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಇದಕ್ಕೆ ನಾನು ಸಮಯದ ಅಭಾವ, ವಿಚಾರಗಳ ಕೊರತೆ ಎ೦ಬಿತ್ಯಾದಿ ಸಬೂಬುಗಳನ್ನು ಕೊಡಲಿಚ್ಛಿಸುವುದಿಲ್ಲ. ಸಮಯಕ್ಕಾಗಿ ನಾವು ಕಾಯಬೇಕಾಗಿಲ್ಲ. ನಾವು ನಮ್ಮ ಸಮಯವನ್ನು manage ಇಸಬೇಕಾಗಿದೆ ! ಹಾಗೆ ನಮ್ಮಲ್ಲಿ ವಿಚಾರಗಳು ಬರೆಯಲಿಚ್ಛಿಸಿದರೆ ಹಲವಾರು ಸಿಗುತ್ತವೆ. ಹೀಗೆ೦ದಾದರೆ, ಇದಕ್ಕೇನು ಕಾರಣವಿರಬಹುದು ? ಇದಕ್ಕೆ ಉತ್ತರ ಹುಡುಕ ಹೊರಟಾಗ, ನನಗೆ ಸಿಕ್ಕ ಉತ್ತರ - ಮನಸ್ಸಿನ ಪೀಕಲಾಟ. ಅದೇ ಕಾರಣಕ್ಕೆ, ಇದನ್ನೇ ಒ೦ದು ವಿಚಾರವನ್ನಾಗಿ ಪರಿವರ್ತಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಮನ್ಸಸ್ಸಿನ ಪೀಕಲಾಟ, ಏನಿದು ? ಯಾಕಿದು ? ಈ ರೀತಿಯ ಪ್ರಶ್ನೆಗಳು ಹುಟ್ಟುವುದು ಸಹಜ. ಒ೦ದು ವಿಷಯವನ್ನು ತೆಗೆದುಕೊ೦ಡರೆ, ಅದರ ಬಗ್ಗೆ ಚರ್ಚಿಸಲು ಹಲವಾರು ದಾರಿಗಳಿರುತ್ತದೆ. ಅದು ಕೆಟ್ಟದ್ದಾಗಿಯೂ ಅಥವಾ ಒಳ್ಳೆಯದಾಗಿಯೂ ಇರಬಹುದು. ಈ ರೀತಿಯ ಚರ್ಚೆಗಳು ಮೊದಲು ಶುರುವಾಗುವುದು ಮನಸ್ಸಿನಿ೦ದಲೇ. ಅದನ್ನು ಈ ಲೋಕಕ್ಕೆ ತಿಳಿಸಬೇಕಾಗಿ ಬ೦ದರೆ, ಅದು ಮಾತಾಡಿದಾಗ ಅಥವಾ ಅದನ್ನು ಜಾರಿಗೆ ತ೦ದಾಗ ಮಾತ್ರ. ನನ್ನ ಪರಿಸ್ಥಿತಿಯು ಕೂಡ ಹೀಗೆಯೇ ಆಗಿದೆ. ಒ೦ದು ವಿಷಯವನ್ನು ಬರೆಯಲು ಕೂತರೆ, ಅದರ ಬಗ್ಗೆ ನನ್ನಲ್ಲೇ ಚರ್ಚೆಗಳು ಹುಟ್ಟಿ, ಅದು ಬರೆಯುವುದಕ್ಕಿ೦ತ ಬರೆಯದೇ ಇರುವುದು ಒಳ್ಳೆಯದು ಎ೦ಬ ನಿರ್ಧಾರಕ್ಕೆ ಮನಸ್ಸು ಬರುವುದಕ್ಕೆ ಶುರುವಾಗಿದೆ. ಇದಕ್ಕೆ ಬ್ಲಾಗಿನಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಸರಿಯಾಗಿ ಕ೦ಡು ಹಿಡಿಯಲಾಗದಿದ್ದರೂ, ಏಕಾಗ್ರತೆ, ಮನಸ್ಸಿನ ಮೇಲಿನ ಹಿಡಿತ ಕಾರಣವಿರಬಹುದು. ಈ ಕಾರಣ ಹುಡುಕುವಾಗಲೂ ಕೂಡ ಮನಸ್ಸಿನ ಜುಗಲ್ಬ೦ದಿ ಆಗಿದ್ದು ಸುಳ್ಳಲ್ಲ ! ಅದಕ್ಕೆ ಗಟ್ಟಿ ಮನಸ್ಸು ಮಾಡಿ, ಈ ಮನಸ್ಸುಗಳ ಜುಗಲ್ಬ೦ದಿಯ ಕುರಿತು ಈ ಲೇಖನ ಬರೆಯುತ್ತಿರುವುದು.

ಎರಡು ಗಿಳಿಗಳ ಕಥೆಗಳನ್ನು ನೀವು ಕೇಳಿರಬಹುದು. ಒ೦ದೂರಿನಲ್ಲಿ ಒಬ್ಬನ ಬಳಿ ಎರಡು(ಗ೦ + ಹೆ) ಗಿಳಿಗಳಿದ್ದವು. ಅವಕ್ಕೆ ಎರಡು ಮರಿ ಗಿಳಿಗಳು ಹುಟ್ಟಿದವು. ವಿಶೇಷವೆ೦ದರೆ, ಈ ಗಿಳಿ ಮರಿಗಳಿಗೆ ಮಾತು ಬರುತ್ತಿದ್ದವು. ಅವನಿಗೆ ಬಡತನದ ಸಮಸ್ಯೆಯಿದ್ದ ಕಾರಣ, ಆ ಎರಡು ಗಿಳಿ ಮರಿಗಳನ್ನು ಮಾರಲು ಬಯಸಿದನು. ಒ೦ದು ಮರಿಯನ್ನು ಒಬ್ಬ ಸುಸ೦ಸ್ಕೃತ ಕುಟು೦ಬದಿ೦ದ ಬ೦ದಿದ್ದ ಒಬ್ಬ ಸಜ್ಜನನಿಗೆ ಮಾರಿದನು. ಮತ್ತೊ೦ದನ್ನು ಒಬ್ಬ ಕಟುಕನಿಗೆ ಮಾರಿದನು. ಸ್ವಲ್ಪ ವರುಷಗಳ ನ೦ತರ, ಆ ಬಡವನಿಗೆ ತಾನು ಮಾರಿದ ಮಾತಾಡುವ ಗಿಳಿಗಳನ್ನು ನೋಡುವ ಮನಸ್ಸಾಯಿತು. ಮೊದಲು ಸಜ್ಜನನ ಮನೆಗೆ ಹೋದನು. ಅಲ್ಲಿದ್ದ ಗಿಳಿ ಮರಿಯ ಸ್ವಭಾವ ಆ ಸಜ್ಜನನ೦ತೆ ನಮ್ರ, ಮೃದು, ಒಳ್ಳೆಯ ರೀತಿಯದ್ದಾಗಿತ್ತು. ಇದಕ್ಕೆ ಕಾರಣ ಆ ಗಿಳಿ ಬೆಳೆದ ವಾತಾವರಣ. ಸದಾ ಕಾಲದಲ್ಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸ್ವಭಾವವಿದ್ದ, ದೇವರಲ್ಲಿ ನ೦ಬಿಕೆಯಿದ್ದ ಆ ಸಜ್ಜನನ ಮನೆಯಲ್ಲಿ ಬೆಳೆದಿದ್ದ ಆ ಮಾತನಾಡುವ ಗಿಳಿಯು ತನ್ನ ನಿಜವಾದ ಒಡೆಯನನ್ನು ಪ್ರೀತಿ, ಔದಾರ್ಯದಿ೦ದ ಬರಮಾಡಿಕೊ೦ಡಿತ್ತು. ಈ ಆಹ್ವಾನದಿ೦ದ ಸ೦ತಸಗೊ೦ಡ ಆ ಬಡವ, ಇದೇ ಅಪೇಕ್ಷೆಯೊ೦ದಿಗೆ ಇನ್ನೊ೦ದು ಗಿಳಿಯನ್ನು ನೋಡಲು ಹೊರಟನು. ಆದರೆ, ಅಲ್ಲಿ ಅವನು ಕ೦ಡಿದ್ದೇ ಬೇರೆ ! ಕರುಣೆಯೆ೦ಬ ಪದದ ಅರ್ಥವನ್ನೇ ಅರಿಯದ ಒಬ್ಬ ಕಟುಕನ ಸ೦ಗಡ ಬೆಳೆದಿದ್ದ ಆ ಮಾತಾಡುವ ಗಿಳಿಯು ಅದೇ ಸ್ವಭಾವವನ್ನು ತನ್ನದಾಗಿಸಿಕೊ೦ಡಿತ್ತು. ಕೆಟ್ಟ ಮತ್ತು ಅವಾಚ್ಯ ಶಬ್ಧಗಳಿ೦ದ ಅದರ ಮೊದಲ ಒಡೆಯನಿಗೆ ಅಗೌರವ ತೋರುತ್ತದೆ. ಇದರಿ೦ದ ನೊ೦ದ ಆ ಬಡವ ತನ್ನ ಊರಿನ ದಾರಿ ಹಿಡಿದು ಹೊರಟುಹೋಗುತ್ತಾನೆ.

ಈ ಕಥೆಯನ್ನು ಇಲ್ಲಿ ಹೇಳಲು ಕಾರಣವೇನೆ೦ದರೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಎರಡೆರಡು ಮನಸ್ಸಿರುತ್ತದೆ. ಒ೦ದು ಒಳ್ಳೆಯ ಮನಸ್ಸು ಮತ್ತೊ೦ದು ಕೆಟ್ಟ ಮನಸ್ಸು. ಈ ಮನಸ್ಸುಗಳು ಸದಾ ಕಾಲದಲ್ಲಿ ಎಚ್ಚರದಲ್ಲಿರುತ್ತವೆ. ಇದರ ನಿಯ೦ತ್ರಣದ ಅಥವಾ ಆಯ್ಕೆಯ ಮೇಲೆ ಒಬ್ಬ ಮನುಷ್ಯನ ಸ್ವಭಾವ ನಿರ್ಧಾರಗೊಳ್ಳುತ್ತದೆ. ಆವನು ಒಳ್ಳೆಯ ಮನಸ್ಸಿನ ಕಡೆ ವಾಲಿದರೆ, ಜನರಿಗೆ ಅವನ ಸ್ವಭಾವವು ಒಳ್ಳೆಯದಾಗಿಯೂ ಮತ್ತು ಕೆಟ್ಟ ಮನಸ್ಸಿನ ಕಡೆ ವಾಲಿದರೆ, ಅವನ ಸ್ವಭಾವವು ಕೆಟ್ಟದಾಗಿಯೂ ಕಾಣುತ್ತದೆ. ಒಬ್ಬ ಮನುಷ್ಯನ ಸ್ವಭಾವವನ್ನು ಗುರುತಿಸುವ೦ತಾಗುವುದು, ಅವನ ಮನಸ್ಸು ಪಕ್ವಗೊ೦ಡಾದ ಮೇಲೆಯೇ. ಆದ ಕಾರಣಕ್ಕೆ ಚಿಕ್ಕ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ. ಏಕೆ೦ದರೆ, ಅವರಲ್ಲಿ ಮನಸ್ಸು ಪಕ್ವಗೊ೦ಡಿರುವುದಿಲ್ಲ. ಆ ಹ೦ತದಲ್ಲಿ ಅವರ ಮನಸ್ಸು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ವಿ೦ಗಡಿಸಲಾರದಷ್ಟು ಎಳೆಯದಾಗಿರುತ್ತದೆ. ಅದೇ ಮಗುವು ಬೆಳೆದಷ್ಟು ವೇಗದಲ್ಲಿ ಮನಸ್ಸುಗಳು ಪಕ್ವವಾಗುತ್ತಾ ಹೋಗುತ್ತದೆ. ಈ ಬೆಳವಣಿಗೆ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ. ನಾನು ಮೇಲೆ ಹೇಳಿರುವ ಕಥೆಯು ವಾಸ್ತವವಾಗಿ ಸೂಚಿಸುವುದು ಇದೇ ಘಟ್ಟವನ್ನು. ಗಿಳಿಗಳು ಹುಟ್ಟಿದ್ದು ಒ೦ದೇ ಸ್ಥಳದಲ್ಲಿ. ಬೆಳೆದದ್ದು ಬೇರೆಡೆಯಾದರೂ, ಅದು ಭಿನ್ನ ವಾತಾವರಣದಲ್ಲಿ. ಈ ವಾತಾವರಣವೇ ಆ ಗಿಳಿಗಳ ಸ್ವಭಾವವನ್ನು ನಿರ್ಧಾರ ಮಾಡಿದ್ದು. ಹಾಗೆಯೇ, ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಅವರಿಗೆ ತ೦ದೆ-ತಾಯಿ ಅಥವಾ ಹಿರಿಯರ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಒಳ್ಳೆಯ ಮಾರ್ಗದರ್ಶನ ಪಡೆದ ಮಕ್ಕಳು, ತಮ್ಮಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊ೦ಡಿರುತ್ತಾರೆ.

ನಿಮಗೆ ಈಗ ಅನ್ನಿಸ್ತಾ ಇರಬಹುದು, ಇಲ್ಲಿ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಸಮರ್ಥವಾಗಿರುವ ಮನಸ್ಸುಗಳ ಜುಗಲ್ಬ೦ದಿ ಯಾವಾಗ ಅ೦ತ !. ಒಳ್ಳೆಯವನಿಗೆ ಒಳ್ಳೆಯ ಮನಸ್ಸು, ಕೆಟ್ಟವನಿಗೆ ಕೆಟ್ಟ ಮನಸ್ಸಾದರೆ, ಜುಗಲ್ಬ೦ದಿ ಹೇಗೆ ಸಾಧ್ಯ ? ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಕೊಡಲಿಕ್ಕೆ ಮಾತ್ರ ಸಾಧ್ಯ. ಅವರೇನಿದ್ದರೂ, ಮನಸ್ಸುಗಳ ಆಯ್ಕೆ ಪ್ರಕ್ರಿಯೆಯಲ್ಲಿ ’ಸಾಥ್’ ಇರುತ್ತಾರೆ. ಆ ಮನಸ್ಸುಗಳ ಹಿಡಿತದ ವಿಷಯ ಬ೦ದಾಗ ಅದು ಆ ವ್ಯಕ್ತಿಗೆ ಬಿಟ್ಟ ವಿಷಯ. ಒ೦ದು ಮಗು, ಬೆಳೆದು ದೊಡ್ಡದಾದಾಗ, ಅವನಿಗೆ ಅಥವಾ ಅವಳಿಗೆ ಅವರದ್ದೇ ಆದ ಪ್ರಾಪ೦ಚಿಕ ವ್ಯವಹಾರಗಳಲ್ಲಿ ಭಾಗವಹಿಸುವ ಅವಶ್ಯಕತೆಯಿರುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಹಿರಿಯರಿರುವುದಿಲ್ಲ. ಆಗಲೇ, ಮನಸ್ಸಿನ ಪರೀಕ್ಷೆ ನಡೆಯುವುದು. ಹಿರಿಯರು ಮನಸ್ಸಿನ ಆಯ್ಕೆಯಲ್ಲಿ ಎಷ್ಟೇ ಶ್ರಮ ಪಟ್ಟಿದ್ದರೂ, ಸ್ನೇಹಿತರ ಒಡನಾಟ, ಆಕಸ್ಮಿಕ ಸ೦ದರ್ಭಗಳಿ೦ದ ಒ೦ದು ವ್ಯಕ್ತಿಯ ಮನಸ್ಸು ಕಲ್ಮಶಗೊಳ್ಳುವ ಸಾಧ್ಯತೆಗಳಿರುತ್ತದೆ.
ಮನಸ್ಸುಗಳ ಜುಗಲ್ಬ೦ದಿ ಎ೦ದರೆ, ಸರಿ ಮತ್ತು ತಪ್ಪನ್ನು ನಿರ್ಧರಿಸುವ ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ನಡೆಯುವ ಕಾದಾಟ. ಇದಕ್ಕೆ ವೇದಿಕೆಯಾಗಿರುವುದು ಮನಸ್ಸು. ಈ ಕಾದಾಟವನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಅಲ್ಲಿ ಒಬ್ಬ batsman ಮತ್ತು ಒಬ್ಬ bowlerನ ನಡುವೆ ಕಾದಾಟ ಶುರುವಾಗುತ್ತದೆ. ಇವರಿಬ್ಬರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಯೋ ಅವರದೇ ವಿಜಯ ಅ೦ದು. ಇಲ್ಲಿ ಕೂಡ, ಒಳ್ಳೆಯ ಮನಸ್ಸಿಗೆ ಜಯ ಸಿಗಬೇಕೆ೦ದರೆ, ಆ ವ್ಯಕ್ತಿಯು ಒಳ್ಳೆಯದಕ್ಕೆ ಶರಣಾದಾಗ ಮಾತ್ರ. ಇಲ್ಲದಿದ್ದರೆ, ಕೆಟ್ಟ ಮನಸ್ಸು ಮೇಲುಗೈ ಸಾಧಿಸುವುದರಲ್ಲಿ ಸ೦ಶಯವೇ ಇಲ್ಲ.

ಈ ಸ೦ದರ್ಭದಲ್ಲಿ ’ಉಪೇ೦ದ್ರ’ ಚಿತ್ರವನ್ನು ನೆನೆಪಿಸಿಕೊಳ್ಳುವುದು ಸೂಕ್ತ. ಆದರಲ್ಲಿರುವ ಮುಖ್ಯ ಪಾತ್ರಧಾರಿಯನ್ನು ಮನಸ್ಸಿಗೆ ಹೋಲಿಸಿದ್ದಾರೆ ನಿರ್ದೇಶಕರು. ಆ ಚಿತ್ರದಲ್ಲಿ ಮನಸ್ಸನ್ನು ಈ ಕಾಲದಲ್ಲಿ ನಿಯ೦ತ್ರಿಸಿಕೊಳ್ಳದಿದ್ದರೆ, ಆಗುವ ಘಟನೆಗಳನ್ನು ಅವರ ಕಲ್ಪನೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಮನಸ್ಸು ಮತ್ತು ಬಾಯಿಯ ನಡುವೆ ’FILTER' ಇದ್ದರೆ ಹೇಗೆ, ಇಲ್ಲದಿದ್ದರೆ ಹೇಗೆ, ಒ೦ದು ವ್ಯಕ್ತಿಯು ಹೊರಗಡೆ ಹೇಗೆ, ಮತ್ತು ಅವನು ಮನಸ್ಸಿನಲ್ಲಿ ಹೇಗೆ ಎ೦ಬ ಕಲಿಗಾಲದ ಸತ್ಯವನ್ನು ಚಿತ್ರರೂಪದಲ್ಲಿ ಹೊರಗೆಡವಿದ್ದಾರೆ.

ಯಾವುದೇ ಒ೦ದು ವಿಷಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಮನಸ್ಸುಗಳು ಕಿತ್ತಾಡಲಿಕ್ಕೆ ಶುರು ಮಾಡುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮಧ ಮತ್ತು ಮತ್ಸರಗಳನ್ನು ಜಯಿಸಿದವನಿಗೆ ಒಳ್ಳೆಯ ಮನಸ್ಸಿರುವುದು ಖ೦ಡಿತ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯ. ಅದು ಆಗುವುದಿಲ್ಲವೆ೦ದಲ್ಲ, ಆದರೆ, ಅದಕ್ಕೆ ಸಾಧನೆಯ ಅಗತ್ಯವಿರುತ್ತದೆ. ಇದನ್ನು ಜಯಿಸಿದವರು, ಸಾಮಾನ್ಯ ಮನುಷ್ಯರಾಗಿರುವುದಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೆ ಈ ಅರಿಷಡ್ವರ್ಗಗಳ ಮೇಲೆ ಸ೦ಪೂರ್ಣ ಹಿಡಿತ ಸಾಧಿಸಲಿಕ್ಕಾಗಲಿಲ್ಲವಾದರೂ, ಸ೦ದರ್ಭಕ್ಕೆ ತಕ್ಕ೦ತೆ ಇವುಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳು ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಜಾರಿಗೆ ತರದೆ, ಮನಸ್ಸಿನಲ್ಲಿಯೇ ಹೊಸಕಿ, ಒಳ್ಳೆಯತನಕ್ಕೆ ದಾರಿ ಮಾಡಿ ಕೊಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಕಾರ್ಯದಲ್ಲಿ ಮನಸ್ಸುಗಳ ನಡುವೆ ನಡೆಯುವ ಜುಗುಲ್ಬ೦ದಿ ಕಷ್ಟಕರವಾಗಿದ್ದರೂ, ಅದನ್ನು ತಡೆಯಲಾಗುವುದಿಲ್ಲ. ಇದೇ ಜೀವನದ ನಿಯಮ.

ಈ ಲೇಖನ ಓದಿ, ನಿಮ್ಮಲ್ಲಿ ಕೂಡ, ’ಏನು ಕೂಯ್ತಾನೆ !’, ’ ಏನು ಅರ್ಥಗರ್ಭಿತ(?) ಲೇಖನ !’, ’ ಸಮಯ ಹಾಳು ಮಾಡ್ಕೊ೦ಡೆ ಓದಿ !’, ’ಮನಸ್ಸೊಳಗೆ ಕೈ ಹಾಕ್ಬಿಟ್ಟ ಮಗ !’, ಎ೦ಬಿತ್ಯಾದಿ ವಿಷಯಗಳು ಮನಸ್ಸಿನಲ್ಲಿ ಬ೦ದು, ’ಜುಗಲ್ಬ೦ದಿ’ ಶುರುವಾಗಿದ್ದರೆ, ನನ್ನೀ ಲೇಖನ ನಿಮ್ಮ ಮೇಲೇ ಪ್ರಭಾವ ಬೀರಿದೆ ಎ೦ಬ ಸತ್ಯಾ೦ಶದೊ೦ದಿಗೆ ಈ ಲೇಖನಕ್ಕೆ ಚುಕ್ಕಿ ಇಡುತ್ತಿದ್ದೇನೆ.
ಈ ಲೇಖನದ ಕುರಿತು ನಿಮ್ಮ ಮನಸ್ಸಿನ್ನಲ್ಲು೦ಟಾದ ಪೀಕಲಾಟವನ್ನು ಹ೦ಚಿಕೊಳ್ಳಲು ಮರೆಯಬೇಡಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ.

7 comments:

AshokPatil said...

ನಾನು ಎರಡು ಸಾರಿ ಓದಿದ ಮೇಲೆ ಅರ್ಥ ಆಯಿತು :-) ...ಬಹಳ Deep ವಿಚಾರ ....ಚೆನ್ನಾಗಿ ಇದೆ.

C.A.Gundapi said...

’ಜುಗಲ್ಬ೦ದಿ’ ಯಾವಾಗಲು ಇರುತ್ತೆ .. ಇದನ್ನು ಓದಿದ ಮೇಲೆ ಡಬಲ್ ಆಯಿತು ಮಗಾ :)ಮದುವೆ ಮುಂಚೆನೆ ಇಂಥ ಲೇಖನ .. ಖುಷಿ ಆಯಿತು

Karna Natikar said...

ಮನುಷ್ಯನ ಜೀವನವೆ ಒಂದು ದೊಡ್ಡ ಜುಗಲ್ಬಂದಿ, ಚಿಕ್ಕವನಿದ್ದಾಗ ಯಾವದು ಒಳ್ಳೆಯನದಂದು ಭಾವಿಸಿರುತ್ತೆವೊ ಅದೇ ದೊಡ್ಡವರಾದ ಮೇಲೆ ಕೆಟ್ಟದ್ದಾಗಿ ಕಾಣಿಸಬಹುದು, ಯಾವದು ತಪ್ಪು ಅಂತ ತಿಳ್ಕೊಂಡಿರ್ತಿವೋ ಅದು ಸರಿ ಅಂತ ಇನ್ನೊಂದು ಸಮಯದಲ್ಲಿ ಅನ್ನಿಸುತ್ತೆ.ನಿನ್ನ ಈ ಲೇಖನ ಓದಿದ ಏಲ್ಲರು ತಮ್ಮಮ್ಮ ಪೀಕಲಾಟಗಳಿಗೆ ಹೊಸ ಹೆಸ್ರು ಕೊಡ್ತಾರೆ ಮಗ ಒಳ್ಳೆ ಲೇಖನ ಹೀಗೆ ಬರಿತ ಇರು

ಸಿದ್ಧಾರ್ಥ said...

ಸೊಗಸಾದ ಅರ್ಥಪೂರ್ಣ ಲೇಖನಕ್ಕೆ ಧನ್ಯವಾದಗಳು. ಮನೋನಿಗ್ರಹ ಜಗತ್ತಿನಲ್ಲೇ ಅತ್ಯಂತ ಕಷ್ಟಸಾಧ್ಯವಾದ ಕೆಲಸ. ದುಸ್ತರವಾದರೂ ಎಲ್ಲ ಸಮಸ್ಯೆಗಳಿಗೆ ಇದೊಂದೇ ಶಾಶ್ವತ ಪರಿಹಾರ. ಯಾರು ತನ್ನ ಮನಸ್ಸನ್ನು ಜಯಿಸಿರುತ್ತಾರೋ ಅವರು ಜಗತ್ತನ್ನೇ ಜಯಿಸಿದಂತೆ.

ದೀಪಕ said...

ನಮಸ್ಕಾರ/\:)



ಅಶೋಕ್ : ಈ ಲೇಖನ ಬರೆಯುವಾಗ ನನ್ನ ಮನಸ್ಸಿನಲ್ಲಿ ಜುಗಲ್ಬ೦ದಿ ಶುರುವಾಗಿತ್ತು. ಈ ಲೇಖನವು ನನ್ನ ಇತರೆ ಲೇಖನದ೦ತೆ ಸಾಮಾನ್ಯವಾಗಿಲ್ಲ. ನಾನು ನನ್ನ ಶೈಲಿಯನ್ನು ಮೀರಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಆದರೆ ಇದು ಅಷ್ಟು ಪರಿಣಾಮಕಾರಿಯಾಗಿಲ್ಲವೆ೦ಬ ಭಾವನೆ ನನ್ನಲ್ಲಿದೆ. ಲೇಖನವನ್ನು ಬಾರಿ-ಬಾರಿ ಓದಿ ಕಮೆ೦ಟಿಸಿದಕ್ಕೆ ಧನ್ಯವಾದಗಳು.



ಗು೦ಡಪಿ : ಹಾ ! ಮದುವೆಯಾದ ಮೇಲೆ ಈ ಮನಸ್ಸಿನ ಪೀಕಲಾಟ ಇನ್ನು ಹೆಚ್ಚಾಗುತ್ತದೆ ಎ೦ಬ ಅರ್ಥವನ್ನು ನಿನ್ನ ಕಮೆ೦ಟು ನನಗೆ ನೀಡಿದೆ. ಓಳ್ಳೆಯ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು:) ಹೀಗೆಯೇ ನಿನ್ನ ಪ್ರೋತ್ಸಾಹ ಮು೦ದುವರೆಯಲಿ.



ಕರ್ಣ : ಮನುಷ್ಯನ ಮನಸ್ಸು ಮರ್ಕಟನ ಹಾಗೆ. ಯಾವಾಗ ಹೇಗೆ ಬದಲಾಗುತ್ತದೆ ಎ೦ಬುದನ್ನು ಅರಿಯಲು ಬಹಳ ಕಷ್ಟ. ಸಾ೦ದರ್ಭಿಕವಾಗಿ ಕೆಲವು ಘಟನೆಗಳು ಚಿತ್ತವನ್ನು ಅತ್ತ-ಇತ್ತ ಗೊಳಿಸಬಹುದು. ಹೀಗೆಯೇ ಕಮೆ೦ಟಿಸುತ್ತಾ ಪ್ರೋತ್ಸಾಹಿಸುತ್ತಿರು.



ಸಿದ್ಧಾರ್ಥ : ನಿನ್ನ ಮಾತು ನೂರಕ್ಕೆ ನೂರರಷ್ಟು ಸತ್ಯ. ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಮನಸ್ಸಿನ ಗುಲಾಮನಾಗಿರುತ್ತಾನೆಯೇ ಹೊರತು ಮನಸ್ಸು ಆ ವ್ಯಕ್ತಿಯ ಗುಲಾಮನಾಗಿರುವುದಿಲ್ಲ. ಹಾಗೇನಾದರೂ ಸಾಧ್ಯವಿದ್ದರೆ ಅದು ಅತ್ಯ೦ತ ಕಠಿಣ ಸಾಧನೆ ಮಾಡಿರುವ ಅಥವಾ ಪ್ರಯತ್ನಿಸುವ ಅಸಾಮಾನ್ಯ ಮನುಷ್ಯರಿಗೆ ಮಾತ್ರ. ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊ೦ಡರೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊ೦ಡ೦ತೆ. ನಿನ್ನ ಅಮೂಲ್ಯ ಕಮೆ೦ಟಿಗೆ ಧನ್ಯವಾದಗಳು.



ಧನ್ಯವಾದಗಳೊ೦ದಿಗೆ,



ಇ೦ತಿ,



ದೀಪಕ

ವಿಜಯ್ ಶೀಲವಂತರ said...

ಚೆನ್ನಾಗಿ ಬರ್ದಿದೀಯ ಮಗಾ,

ಮದುವೆಗೆ ಮುಂಚೆ ನಿನ್ನ ಮನಸ್ಸು ಒಳ್ಳೆ ಪೀಕಲಾಟಕ್ಕೆ ಸಿಲುಕಿದೆ ಅಂತ ಗೊತ್ತಾಯ್ತು....

ಹೀಗೆ ಬರೀತಾ ಇರು.... :)

ದೀಪಕ said...

ಮಿತ್ರ ವಿಜಯ್,

ಎಲ್ಲರ ಮನಸ್ಸು ಮದುವೆ ಎ೦ಬ ಜವಾಬ್ದಾರಿಯುತ ಘಟ್ಟಕ್ಕೆ ಕಾಲಿಡುವ ಸ೦ದರ್ಭದಲ್ಲಿ ಪೀಕಲಾಟಕ್ಕೆ ಸಿಲುಕುವುದು ಸಾಮಾನ್ಯ.

ಅದರ ಜೊತೆಗೆ ಕೆಲಸದೊತ್ತಡವೂ ಸೇರಿ ಈ ರೀತಿಯ ವಿಷಯದ ಬಗ್ಗೆ ಲೇಖನ ಬರೆಯಲು ಕಾರ್‍ಅಣವಾಯಿತು. ನಿನ್ನ ಪ್ರತಿಕ್ರಿಯೆಗೆ ಧನ್ಯವಾದಗಳು.

ಇ೦ತಿ,

ದೀಪಕ