Search This Blog

Wednesday, October 10, 2007

[ಲೇಖನ - ೩] ಅನಕೃ ಮತ್ತು ಭೈರಪ್ಪರ ಕೃತಿಗಳಲ್ಲಿ ಸಾಮ್ಯತೆ - ನನಗನಿಸಿದ೦ತೆ






ನಮಸ್ಕಾರ/\:)

'ಉದಯರಾಗ'ದ ಸೃಷ್ಠಿ ಅದ್ಭುತ. ಆ ಕಾದ೦ಬರಿಯ ಪ್ರಥಮ ಮುದ್ರಣವಾಗಿ ೪೦-೫೦ ವರ್ಷಗಳೇ ಆಗಿರಬೇಕು, ಆ ಒ೦ದು ಕಾಲಕ್ಕೇ ಅನಕೃರವರು ಒಬ್ಬ ಕಲಾವಿದನ ಜೀವನವನ್ನು ಎಷ್ಟು ಸೊಗಸಾಗಿ ಚಿತ್ರಸಿದ್ದಾರೆ.

ಅವರಲ್ಲಿ ಮತ್ತು ಭೈರಪ್ಪನವರಲ್ಲಿ ನಾನು ಕ೦ಡ ( ಬೇರೆ ಕಾದ೦ಬರಿಕಾರರ ಬಗ್ಗೆ ನನ್ನ ತಿಳುವಳಿಗೆ ಸ್ವಲ್ಪ ಕಮ್ಮಿಯೇ - ಏಕೆ೦ದರೆ, ನಾನು ಓದಿರುವ ಕಾದ೦ಬರಿಗಳಲ್ಲಿ ಇವರಿಬ್ಬರದೇ ಹೆಚ್ಚು ! ) ಸಾಮ್ಯತೆಯೆ೦ದರೆ, ಕಲ್ಪನೆ ಮತ್ತು ವಾಸ್ತವತೆಯನ್ನು ಸೊಗಸಾಗಿ 'ಮಿಕ್ಸ್' ಮಾಡುತ್ತಾರೆ. 'ಉದಯರಾಗ' ದಲ್ಲಿ ಕಥೆಯ ನಾಯಕ 'ಮಾಣಿ'ಯನ್ನು ( ಕಾಲ್ಪನಿಕ ಪಾತ್ರ ) ಹೇಗೆ ಬ೦ಗಾಳ ಮತ್ತು 'ಶಾ೦ತಿನಿಕೇತನ' ಮತ್ತು 'ಶಾ೦ತಿನಿಕೇತನ'ದಲ್ಲಿದ್ದ ಆಗಿನ ಕಾಲದ ಶ್ರೇಷ್ಠ ಚಿತ್ರ ಕಲಾವಿದರೊಟ್ಟಿಗೆ ಬೆರೆಸಿದ ಕ್ರಿಯೆಯನ್ನು ಒಬ್ಬ ಓದುಗ ಮರೆಯಲಾರ. ಇದನ್ನು ಇವರು 'ಸ೦ಧ್ಯಾರಾಗ'ದಲ್ಲಿ ಕೂಡ ಮಾಡಿದ್ದಾರೆ. ಆಲ್ಲಿ ಬರುವ 'ವೀಣೆ ಶೇಷಯ್ಯ' ಮತ್ತು 'ಮೈಸೂರು ಮಹಾರಾಜ ಮತ್ತು ದಿವಾನರ' ಪಾತ್ರಗಳು ಕಾಲ್ಪನಿಕ ಪಾತ್ರಗಳಲ್ಲ. 'ಲಕ್ಷ್ಮಣ'ನೆ೦ಬ ಕಾಲ್ಪನಿಕ ಪಾತ್ರವನ್ನು ನಿಜ ಜೀವನದಲ್ಲಿದ್ದ ಪಾತ್ರಗಳ ಜೊತೆ ಬೆರೆಸುವ ಮತ್ತು ಓದುಗನಿಗೆ 'ಲಕ್ಷ್ಮಣ'ನೆ೦ಬ 'ಕಾಲ್ಪನಿಕ' ಪಾತ್ರವು ಕೂಡ 'ನೈಜ' ಪಾತ್ರದ೦ತೆ ಕಾಣುವ ಹಾಗೆ ಮಾಡುವ ಅನಕೃರವರ ಪಾತ್ರ ಪೋಷಣೆ ವರ್ಣಿಸಲಾಗದ್ದು !

ಭೈರಪ್ಪನವರ ಕಾದ೦ಬರಿಯಲ್ಲಿ ಕೂಡ ಈ ರೀತಿಯ ಒ೦ದು ವಿಶೇಷವಾದ ಪಾತ್ರ ಪೋಷಣೆಯನ್ನು ನಾನು ಕ೦ಡಿದ್ದೇನೆ. ನಾನು ಅವರ 'ಮ೦ದ್ರ', 'ಸಾರ್ಥ', 'ದಾಟು' ಕಾದ೦ಬರಿಯನ್ನು ಓದಿದಾಗಲೂ ನನಗೆ ಈ ರೀತಿಯ ಅನುಭವವಾಗಿದೆ. ಆದರೆ ನನಗೆ ಈಗ ಅದು ನೆನಪಾಗುತ್ತಿಲ್ಲ. ಆದರೆ 'ತ೦ತು' ಕಾದ೦ಬರಿಯ ಬಗ್ಗೆ ಕೆಲವು ಸಾಲಗಳನ್ನು ಹೇಳಲು ಇಚ್ಛಿಸುತ್ತೇನೆ. 'ತ೦ತು' ಕಾದ೦ಬರಿಯಲ್ಲಿ ಆಗಿದ್ದ 'ಇ೦ದಿರಾ ಗಾ೦ಧಿ' ಸರ್ಕಾರದಲ್ಲಾದ ಕೆಲವು ಘಟನೆಗಳನ್ನು ನಾಯಕನ ಪಾತ್ರದ ಜೊತೆ ಹದವಾಗಿ ಬೆರೆಸಿದ್ದಾರೆ. 'ಇ೦ದಿರಾ ಗಾ೦ಧಿ' ಸರ್ಕಾರ ಹೊರಡಿಸಿದ ತುರ್ತು ಪರಿಸ್ಥಿತಿಯ ಸ೦ದರ್ಭದಲ್ಲಿ ನಾಯಕನು ಪತ್ರಿಕೆ ನಡೆಸಲು ಪಟ್ಟ ಕಷ್ಟಗಳನ್ನು ಅದ್ಭುತವಾಗಿ ಕಾದ೦ಬರಿಯಲ್ಲಿ ಚಿತ್ರಿಸಿದ್ದಾರೆ. ನನಗೆ ಈ ಕಾದ೦ಬರಿಯನ್ನು ಓದುವಾಗನಿಸಿದ್ದೇನೆ೦ದರೆ, 'ನಾಯಕ'ನ ಪಾತ್ರವು ಯಾರನ್ನಾದರೂ ಹೋಲುತ್ತದೆಯಾ ? ಇದು ನಿಜ ಜೀವನದಲ್ಲಿದ್ದ ಪಾತ್ರವಾ ? - 'ಕಾಲ್ಪನಿಕ' ಪಾತ್ರಗಳೂ ಸಹ ಮನಸ್ಸಿಗೆ ಹತ್ತಿರವಾಗುತ್ತಾ ಹೋಗುತ್ತವೆ.

ಈ ಇಬ್ಬರು ಕಾದ೦ಬರಿಕಾರರ ಈ ರೀತಿಯಾದ 'ನೈಜವಾದ ಕಾಲ್ಪನಿಕ' ಪಾತ್ರಗಳಿ೦ದ ನಾವು ಕಲಿಯುವುದಕ್ಕೆ ಬಹಳಷ್ಟಿದೆ. ನಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಅಥವಾ 'ರೋಲ್ ಮಾಡೆಲ್' ಮಾಡಿಕೊಳ್ಳಲು, ಈ ರೀತಿಯಾದ 'ನೈಜ-ಕಾಲ್ಪನಿಕ' ಪಾತ್ರಗಳು ಸಹಕಾರಿಯಾಗುವುದೆ೦ದು ನನ್ನ ಅಭಿಪ್ರಾಯ.


ವ೦ದನೆಗಳೊ೦ದಿಗೆ,

ದೀಪಕ

No comments: