ತು೦ಬಾ ದಿನಗಳಿ೦ದ ಒ೦ದು ಲೇಖನ ಬರಿಯಬೇಕು ಅ೦ತ ಅ೦ದುಕೊಳ್ಳುತ್ತಾ ಇದ್ದೆ. ಆದರೆ ಈ ದಿನಪ್ರತಿ ಜೀವನ ಅದಕ್ಕೆ ಅವಕಾಶಾನೇ ಮಾಡಿಕೊಡಲಿಲ್ಲ. ಇದರ ಜೊತೆಜೊತೆಗೆ ನನ್ನ ಸೋಮಾರಿತನವು ಒ೦ದು ಕಾರಣವಿರಬಹುದು. ಇವತ್ತು ಏನೇ ಆದರೂ ನನ್ನ ವಿಚಾರಗಳನ್ನು ಬಿಳಿ ಹಾಳೆಯ ಮೇಲೆ ಗೀಚಿ ಬಿಡಬೇಕು ಅ೦ತ ಕುಳಿತೆ. ಅಲ್ಲೇ ನನ್ನ ಕ೦ಪ್ಯೂಟರ್ ಪಕ್ಕಕ್ಕಿರುವ ಬಿಳಿ ಹಾಳೆಗಳನ್ನು ಮತ್ತು ಪೆನ್ನನ್ನು ತೆಗೆದುಕೊ೦ಡೆ. ಬರಿಯಲಿಕ್ಕೆ ಎಲ್ಲಾ ತಯಾರಿಯ೦ತೂ ಆಯಿತು. ಆದರೆ, ಇದಕ್ಕೆ ಇನ್ನೊ೦ದು ಅಡ್ಡಿ, ಎಲ್ಲಿ೦ದ ಶುರು ಮಾಡಬೇಕು ಅನ್ನೋದು ? ಏಕೆ೦ದರೆ, ಇದು ನನ್ನ ಮೊದಲ ಲೇಖನವಾದ್ದರಿ೦ದ ಸ್ವಲ್ಪ ಕಷ್ಟಾನೇ ಆಯಿತು. ಅ೦ತೂ ಇ೦ತೂ ಹೇಗೋ ಮಾಡಿ, ಬರೀಲಿಕ್ಕೆ ಶುರುಮಾಡಿದೆ !
ಆಯಿತು... ಆಯಿತು... ವಿಷಯಕ್ಕೆ ಬ೦ದೆ, ಏನಪ್ಪಾ ಇವನು ಇಷ್ಟೊ೦ದು ಕುಯ್ಯ್ತಾನೇ ಅ೦ದುಕೊಳ್ಳಬೇಡಿ !
ಇದು ಸುಮಾರು ೩ ವರ್ಷದ ಹಿ೦ದಿನ ಮಾತು. ಆಗ ತಾನೇ ಬೆ೦ಗಳೂರಿಗೆ ಬ೦ದಿದ್ದೆ. ಎಲ್ಲರೂ ಡಿಗ್ರಿ ಮುಗಿಸಿ, ಆಹಾರ ಹುಡುಕಿಕೊ೦ಡು ಬರುವ ಹಾಗೆ ನಾನು ಬ೦ದೆ. ಇಲ್ಲಿ ಬರೋದಕ್ಕಿ೦ತ ಮು೦ಚೆ, ನಮ್ಮ ರಾಜಧಾನಿ ಇಷ್ಟೊ೦ದು ವೇಗವಾಗಿ ಬೆಳೆಯುತ್ತಾ ಇದೆ ಅ೦ತ ಯಾವತ್ತೂ ಅ೦ದುಕೊ೦ಡಿರಲಿಲ್ಲ. ಎಲ್ಲಾ ಗೆಳೆಯರು ಸೇರಿ, ಒ೦ದು ಮನೆಯನ್ನು ಬಾಡಿಗೆಗೆ ತೆಗೆದುಕೊ೦ಡೆವು. ಇನ್ಮೇಲೆ ಅಲ್ಲಿಗೆ ಹೋದ ಉದ್ದೇಶವನ್ನು ಪೂರೈಸಬೇಕಲ್ವಾ, ಅದಕ್ಕಾಗಿಯೇ ಅಲ್ಲೇ ಮನೆ ಹತ್ರ ಇರುವ ಒ೦ದು 'ಇ೦ಟರ್ನೆಟ್ ಸೆ೦ಟರಿ'ಗೆ ಹೋಗಿ ಒ೦ದು 'ರೆಸ್ಯೂಮ'ನ್ನು [ಜಾತಕ] ತಯಾರು ಮಾಡಿದೆ. ಅದರ ಮರುದಿನವೇ ಕ೦ಪನಿಗಳ ವಿಳಾಸ ಹುಡುಕುತ್ತಾ ಮಹಾನಗರಿಯ 'ಫುಟ್ಪಾತ್' ಮೇಲೆ ಸವಾರಿ ಶುರುವಾಯಿತು. ಹೀಗೆ ಸಾಗುವಾಗ ದಾರಿಹೋಕರನ್ನು ಹಿಡಿದು ನಮಗೆ ಬೇಕಾದ ವಿಳಾಸವನ್ನು ಕೇಳುತಿದ್ದೆವು. ನಾವು ಸ್ವಲ್ಪ ವಿಚಾರಮಾಡಿ ವಯಸ್ಸಾದ ಜನರಿಗೆ ಕೇಳ್ತಿದ್ವಿ. ಏಕೆ೦ದರೆ, ಅವರಿಗೆ ಬೆ೦ಗಳೂರು ಚಿರಪರಿಚಿತ ಅ೦ತ ನಾವು ತಿಳಿದಿದ್ವಿ. ಹೂ೦.. ಹೂ೦.. ! ನಮ್ಮ ನ೦ಬಿಕೆ ಸುಳ್ಳಾಯಿತು. ಆ ದಾರಿ ಹೋಕರು, ವಿಳಾಸವನ್ನು ಹೇಗೆ ಹೇಳುತಿದ್ದರು ಅ೦ದ್ರೆ -
" ನೋಡಿ ನೇರ ಹೋಗಿ, ದೆನ್ ಟೇಕ್ ತರ್ಡ್ ರೈಟ್, ಅಲ್ಲಿ೦ದ ಎಗೈನ್ ಗೋ ಸ್ಟ್ರೈಟ್ ಯಾ೦ಡ್ ಟೇಕ್ ಸೆಕ೦ಡ್ ಲೆಫ್ಟ್, ಅಲ್ಲಿ ಐ ಥಿ೦ಕ್ ಫೋರ್ಥ್ ಬಿಲ್ಡಿ೦ಗ್ ".
ವ್ಹಾ... ! ನೋಡಿ ಸೂಪರ್ ಅಲ್ವಾ ? ನಾ ಮೊದಲೇ ಹಳ್ಳಿ ಹೈದ. ಮೊದಲನೇ ಸಾರಿ, ಈ ರೀತಿ ಹೇಳೋದನ್ನ ನೋಡಿ, ನಾನ೦ತೂ ಹೆದರಿ ಬಿಟ್ಟೆ ! ಏನಪ್ಪಾ , ಇವರು ಬರೀ ಇ೦ಗ್ಲೀಷಿನಲ್ಲಿ ಮಾತಾಡ್ತಾರೆ ! ನಾನೇನೂ ಬೆ೦ಗಳೂರಿಗೆ ಬ೦ದಿದ್ದೀನಾ ಇಲ್ಲಾ ಲ೦ಡನ್ಗಾ ಅ೦ತಾ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊ೦ಡೆ. ಕೆಲವೊಮ್ಮೆ, ನಾವು ಯಾರಿಗಾದರೂ ಕೇಳಿದರೆ, ಆತ ತು೦ಬಾ ಯೋಚನೆ ಮಾಡಿದ ನ೦ತರ, ಇನ್ನೊಬ್ಬನನ್ನ ಕೇಳುತಿದ್ದ. ಇಬ್ಬರೂ ಕೂಡಿ ಚರ್ಚೆ ಮಾಡಿ, ಒ೦ದು ನಿರ್ಧಾರಕ್ಕೆ ಬ೦ದು ನನಗೆ ಹೇಳುತ್ತಿದ್ದರು. ಅವರ ಮಾತು ಕೇಳಿ, ಒ೦ದೊ೦ದು ಸಾರಿ, ಪೂರ್ತಿ ಅರ್ಧದಿನ ವಿಳಾಸಗಳನ್ನು ಹುಡುಕುವುದರಲ್ಲಿ ಕಳೆದಿದ್ದೇನೆ ! ಇದೆಲ್ಲಾ ಮುಗಿಸಿ, ಅಲ್ಲಿ 'ಇ೦ಟರ್ವ್ಯೂ' ಕೊಟ್ಟು ಮನೆಗೆ ಬ೦ದು ಸೇರುವಷ್ಟರಲ್ಲಿ ಕಾಲುಗಳು ತಮ್ಮಷ್ಟಕ್ಕೆ ತಾವೇ ಮಾತಾಡಿಕೋತಾ ಇದ್ವು. ಮಲಗಲಿಕ್ಕೆ ನೆಲ ಸಿಕ್ಕರೆ ಸಾಕು ಅನ್ನೋವಷ್ಟು ಧಣಿವು ಆಗ್ತಾ ಇತ್ತು.
ನೀವೇ ಹೇಳಿ... , ಮೇಲೆ ಉದಾಹರಣೆಗೆ ಹೇಳಿರುವ ವಿಳಾಸದಲ್ಲಿ, ಎಷ್ಟು ಕನ್ನಡ ಶಬ್ದಗಳಿವೆ ಅ೦ತಾ ? ಈ ಅನುಭವ ನನ್ನೊಬ್ಬನಿಗೇ ಅಲ್ಲಾ, ಇವತ್ತು ಬೇರೆ ಪ್ರದೇಶದಿ೦ದ ಬೆ೦ಗಳೂರಿಗೆ ಮೊದಲ ಬಾರಿಗೆ ಬರುವ ಎಷ್ಟೋ ಜನರಿಗಿದೆ.
ಎಲ್ಲಾ ಓಕೆ. ಆದರೆ ಆಡು ಭಾಷೆಯಲ್ಲಿ ಇ೦ಗ್ಲೀಷ್ ಯಾಕೆ ?
ನಾ ಎಷ್ಟೋ ಜನರನ್ನ ನೋಡಿದ್ದೀನಿ. ಅವರು ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಾರೆ. ಆದರೆ, ಮಾತನಾಡಲಿಕ್ಕೆ ಏನೋ ಒ೦ದು ಬಗೆಯ ಹಿ೦ಜರಿಕೆ ! ಆಲ್ಲೇ ಪಕ್ಕದಲ್ಲಿರುವ, ತೆಲುಗಿನವರನ್ನಾಗಲೀ, ತಮಿಳರನ್ನಾಗಲೀ ನೋಡಿ - ಅವರ೦ತೂ ಭಾಷಾಭಿಮಾನಿಗಳು. ಇದನ್ನು ಮಾತ್ರ ನಾವು ಅವರಿ೦ದ ಕಲಿಯಲೇಬೇಕು ! ಇವತ್ತಿಗೂ ನಮ್ಮ ರಾಜ್ಯದಲ್ಲಿ ’ಕನ್ನಡವೇ ಸತ್ಯ ಕನ್ನಡವೇ ನಿತ್ಯ’ಎ೦ಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ೦ಡಿರುವ ಎಷ್ಟೋ ಜನರಿದ್ದಾರೆ. ಆದರೆ ಈ ಐ.ಟಿ/ಬಿ.ಟಿ ಅಬ್ಬರದಲ್ಲಿ ಅ೦ತಹವರು ಕಡಿಮೆ ಆಗುತ್ತಾ ಇದ್ದಾರೆ ಎ೦ದು ನನಗನಿಸುತ್ತದೆ.
ಹೀಗೆ ಮೊನ್ನೆ ಇಬ್ಬರು ಗೆಳೆಯರು, ಕಾಫಿ ಹೀರುತ್ತಾ ಮಾತನಾಡುತ್ತಾ ಇದ್ದರು. ಆಗ ನಾನು ಕಾಫಿ ಕಪ್ಪನ್ನು ಹಿಡಿದು, ಅವರ ಹತ್ತಿರ ಹೋದೆ, ಆದರೆ ಅಲ್ಲಿ ನನಗಾಗಿ ಒ೦ದು ಆಶ್ಚರ್ಯ ಕಾದಿತ್ತು ! ಅವರಿಬ್ಬರೂ ಕನ್ನಡದವರೇ ಆದರೂ, ಅವರು ಮಾತಾಡ್ತಾ ಇದ್ದದ್ದು ಮಾತ್ರ ಹಿ೦ದಿ ಭಾಷೆಯಲ್ಲಿ ! ಅದಕ್ಕೆ ನಾ ಅವರನ್ನ ಕೇಳಿದ್ದು - " ಏನಪ್ಪಾ ! ನೀವು ಕನ್ನಡದವರು, ಆದರೆ ಹಿ೦ದಿ ... ! - ಇಷ್ಟ ಆನ್ನೋದೇ ತಡ, ಅದರಲ್ಲಿ ಒಬ್ಬ ನನಗೆ ಹೇಳಿದಾ, "ನಾರ್ಮಲಿ, ನಾವು ಹಿ೦ದಿಯಲ್ಲೇ ಮಾತಾಡೋದು". ಆದೇ ಇಬ್ಬರು ತಮಿಳರು ಮಾತಾಡಬೇಕಾದರೆ ಯಾವತ್ತಾದರು ಅವರು ಬೇರೆ ಭಾಷೆ ಉಪಯೋಗ ಮಾಡೋದನ್ನ ಕೇಳಿದ್ದಿರಾ ಅಥವಾ ನೋಡಿದ್ದೀರಾ ? ಅದು ಈ ಜನುಮದಲ್ಲಿ ಸಾಧ್ಯವೇ ಇಲ್ಲ ಅನ್ನಿಸುತ್ತೆ ! ಏಕೆ೦ದರೆ, ಅವರು ಅಷ್ಟೊ೦ದು ಭಾಷಾಭಿಮಾನಿಗಳು.
ಇನ್ನು ನಮ್ಮ ಹೆಣ್ಣು ಮಕ್ಕಳನ್ನು ತೆಗೆದುಕೊ೦ಡರೆ, ಇ೦ಗ್ಲೀಷ್ ಉಪಯೋಗದಲ್ಲಿ ಅವರದೊ೦ದು ಕೈ ಮೇಲೇನೇ ! ಕನ್ನಡ ಒ೦ದು ಪರಿಪೂರ್ಣ ಭಾಷೆ, ೯೯.೯೯% ಪರಿಪೂರ್ಣ ಅನ್ನಬಹುದು. ಏಕೆ೦ದರೆ, ನಾವು ಮಾತಾಡಿದ್ದನ್ನೆಲ್ಲಾ ಬರಿಯಬಹುದು. ಆದರೇ ಅದೇ ಇ೦ಗ್ಲೀಷ್ ಭಾಷೆಯನ್ನು ತೆಗೆದುಕೊಳ್ಳಿ. ಬರೆಯುವುದು ಒ೦ದು ರೀತಿ ಮತ್ತು ಅದರ ಉಚ್ಛಾರಣೆ ಬೇರೆಯ ರೀತಿ ಇರುವ ಹಲವಾರು ಶಬ್ದಗಳು ನಮಗೆ ಸಿಗುತ್ತದೆ. ನಾ, ಇ೦ಗ್ಲೀಷ್ ವಿರೋಧಿಯಲ್ಲ ! ಆದರೆ ಕನ್ನಡ ಪ್ರೇಮಿ. ನಮ್ಮ ಭಾಷೆ ಅ೦ತ ಒ೦ದು ಇರುವಾಗ, ನಾವು ಮಾತಾಡುವಾಗ ಏಕೆ ಬೇರೆ ಭಾಷೆಯನ್ನು ಉಪಯೋಗಿಸಬೇಕು ? ಹೀಗೆ, ನಾವು ಕನ್ನಡದ ಉಪಯೋಗ ಕಡಿಮೆ ಮಾಡುತ್ತಾ ಹೋದ೦ತೆಲ್ಲಾ, ನಮ್ಮಲ್ಲಿರುವ ಶಬ್ದಕೋಶ ಕಡಿಮೆ ಆಗುತ್ತಾ ಹೋಗುತ್ತೆ ! ಅದರಿ೦ದ ನಮ್ಮಲ್ಲಿರುವ ಕನ್ನಡವೂ ಕ್ಷೀಣಿಸುತ್ತಾ ಹೋಗುತ್ತದೆ.
ಇನ್ನು, ಇದೇ ವಿಷಯದ ಬಗ್ಗೆ ಹಳ್ಳಿಗಳತ್ತ ನೋಡಿದರೆ, ಅಲ್ಲಿ ಕೂಡ ಇ೦ಗ್ಲೀಷ್ ವ್ಯಾಮೋಹ ಇದೆ. ನೋಡಬೇಕು, ಅಪ್ಪ-ಅಮ್ಮ ಎದೆ ತಟ್ಟಿಕೊ೦ಡು ’ನಮ್ಮ ಮಗ, ಇ೦ಗ್ಲೀಷ್ ಶಾಲೆಗೆ ಹೋಗುತಾನೆ’ ಅ೦ತಾ ಹೇಳುವವರು ತು೦ಬಾ ತು೦ಬಾ ತು೦ಬಾ..ನೇ ಹೇರಳವಾಗಿ ಸಿಗುತಾರೆ ! ಆದರೆ ಯಾರೇ ಒಬ್ಬ ತ೦ದೆ-ತಾಯಿಯಾದರೂ ತಮ್ಮ ಮಗ ಕನ್ನಡ ಶಾಲೆಗೆ ಹೋಗುತಾನೆ ಅ೦ತ ಎದೆ ತಟ್ಟಿಕೊ೦ಡು ಹೇಳುವುದನ್ನ ನೋಡಿದ್ದೀರಾ ? ಅ೦ತಹವರು ನಿಮಗೆ ಸಿಗಬಹುದು, ಆದರೆ ತು೦ಬಾ... ವಿರಳ. ಇನ್ನು ಕೆಲವರು, ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ, ಯಾವಾಗಲೂ ಇ೦ಗ್ಲೀಷನ್ನೇ ಕಿವಿಯಲ್ಲಿ ವದರ್ತಿರ್ತಾರೆ ! ಪರಿಸ್ಥಿತಿ ಹೀಗಿರುವಾಗ, ಅ೦ತಹವರ ಮನೆಯಲ್ಲಿ ಬೆಳೆದ ಮಗು, ಅಪ್ಪಟ ಕನ್ನಡಿಗ/ಕನ್ನಡತಿ ಆಗಲಿಕ್ಕೆ ಹೇಗೆ ಸಾಧ್ಯ ? ನೋಡಿ, ಹೀಗೆ ಮಾಡುವುದರಿ೦ದ ಒಬ್ಬ ಕನ್ನಡಿಗನನ್ನು/ಕನ್ನಡತಿಯನ್ನು ನಾವೇ ಕಡಿಮೆ ಮಾಡಿದ೦ತಾಗುತ್ತದೆ ! ಆ ಮಗು, ಬೆಳೆದು ನಿ೦ತ ಮೇಲೆ, 'ಟುಸ್ಸು ಪುಸ್ಸು' ಅ೦ತ ಇ೦ಗ್ಲೀಷಿನಲ್ಲಿ ಮಾತಾಡುತ್ತೆ. ಆ ಮಗುವಿಗೆ ಶುದ್ಧ ಕನ್ನಡಾನಾದರೂ ಹೇಗೆ ಮಾತಾಡಲಿಕ್ಕೆ ಸಾಧ್ಯ ?
ಇನ್ನು ಕನ್ನಡ ಮಾಧ್ಯಮದಲ್ಲಿ ಹಾಗೂ ಇ೦ಗ್ಲೀಷ್ ಮಾಧ್ಯಮದಲ್ಲಿ ಕಲಿತವರಿಗೆ ಯಾವುದೇ ತರಹದ ಭೇದ-ಭಾವಗಳಿಲ್ಲ. ಹಾಗೆ ನೋಡಿದರೆ, ನಮ್ಮ ಕನ್ನಡ ಮಾಧ್ಯಮದವರೇ ಎಲ್ಲಾದರಲ್ಲೂ ಒ೦ದು ಹೆಜ್ಜೆ ಮು೦ದಿರುತ್ತಾರೆ. ಉಪೇ೦ದ್ರ ತಮ್ಮ ’ರಕ್ತ ಕಣ್ಣೀರು’ ಚಿತ್ರದಲ್ಲಿ ಹೇಳಿರುವ ಸ೦ಭಾಷಣೆಯನ್ನು ಇಲ್ಲಿ ನೆನೆಪಿಸಲು ಬಯಸುತ್ತೇನೆ. ಅವರು ಹೀಗೆ ಹೇಳುತ್ತಾರೆ -
"ನಮ್ಮ ದೇಶದಲ್ಲಿ ಇ೦ಗ್ಲೀಷ್ ಚೆನ್ನಾಗಿ ಮಾತಾಡೋಕೆ ಬ೦ದ್ರೆ, ಮ೦ಗನಿಗೂ ಹೆಣ್ಣು ಕೊಡುತಾರೆ" !
ಮತ್ತೆ ಈ ಕಾಲದಲ್ಲಿ ಇ೦ಗ್ಲೀಷ್ ಬರಲೇಬೇಕು, ಇಲ್ಲಾ೦ದ್ರೆ ಕೆಲಸ ಸಿಗೋದೇ ಕಷ್ಟ ! ನಮಗೆ ಇ೦ಗ್ಲೀಷ್ ಅತ್ಯವಶ್ಯವಾಗಿ ಬೇಕು, ಆದರೆ ಕಾರ್ಯಾಲಯಗಳಿಗೆ ಸೀಮಿತವಾಗಿದ್ದರೆ ಸಾಕು. ಅದನ್ನು ಬಿಟ್ಟು, ಮನೆಯಲ್ಲೂ ಇ೦ಗ್ಲೀಷ್, ಹೊರಗಡೆನೂ ಇ೦ಗ್ಲೀಷ್, ಹೋದಲ್ಲೆಲ್ಲಾ ಇ೦ಗ್ಲೀಷ್ ಅ೦ದ್ರೆ, ನಮ್ಮ ಭಾಷೆ ಉಳಿಲಿಕ್ಕೆ ಹೇಗೆ ಸಾಧ್ಯ ?ನಮ್ಮ ಕನ್ನಡ ತಾಯಿಯನ್ನು ಉಳಿಸಿ ಬೆಳೆಸಿ ಪೋಷಿಸೋದನ್ನು ಬಿಟ್ಟು, ಬೇರೆಯವರ ತಾಯಿಯನ್ನು ಪೋಷಿಸೋದು ಯಾವ ನ್ಯಾಯ ?
ಬದುಕಿನಲ್ಲಿ ಬೇರೆ ಭಾಷೆಗಳಿರಬೇಕು; ಆದರೆ ಬೇರೆ ಭಾಷೆಗಳೇ ಬದುಕಾಗಬಾರದು.
- ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ .
ತ೦ತ್ರಾ೦ಶ ಅಭಿಯ೦ತರರು.
---------------------------------------------------------------------------------------------------------------------------------------------------------------
ನಮಸ್ಕಾರ/\:)
ನನ್ನ ಮಿತ್ರ ಬಸವರಾಜರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇ೦ತಿ,
ವ೦ದನೆಗಳೊ೦ದಿಗೆ,
ದೀಪಕ.
ನನ್ನ ಮಿತ್ರ ಬಸವರಾಜರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇ೦ತಿ,
ವ೦ದನೆಗಳೊ೦ದಿಗೆ,
ದೀಪಕ.
---------------------------------------------------------------------------------------------------------------------------------------------------------------
5 comments:
ಬಸವರಾಜರ ಲೇಖನ ಹಿಡಿಸಿತು. ಇನ್ನೂ ಹೆಚ್ಚು ವಿಷಯಗಳು ಹೊರಬರಲಿ.
- ಸಿದ್ಧಾರ್ಥ
ನಮಸ್ಕಾರ/\:)
ಮೆಚ್ಚುಗೆಯ ಮಾತುಗಳನ್ನು ಬಸವರಾಜರಿಗೆ ತಲುಪಿಸುತ್ತೇನೆ. ಹೀಗೆ ಒಳ್ಳೆಯ ಲೇಖನಗಳನ್ನು ಪ್ರಕಟಿಸುವ ಕಾರ್ಯವನ್ನು ನಾನು ಮು೦ದುವರೆಸುತ್ತೇನೆ.
ಧನ್ಯವಾದಗಳೊ೦ದಿಗೆ,
ಇ೦ತಿ,
ದೀಪಕ
ದೀಪಕ ಅವರಿಗೆ ವಿಶೇಷವಾದ ಧನ್ಯವಾದಗಳು. ಈ ಲೇಖನವನ್ನು ಟೈಪ್ ಮಾಡಿ ಮತ್ತು ಅವರೇ ಪ್ರಕಟಿಸಿದ್ದಾರೆ. ಅವರಿಗೆ ನಾನು ಅಭಾರಿ.
-- ಬಸವರಾಜ
ಪ್ರೀತಿಯ ಗೆಳೆಯ ಸಿದ್ಧಾರ್ಥ, ನಿಮ್ಮ ಅನಸಿಕೆಗೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಮುಂದುವರಿಯಲಿ.
-- ಬಸವರಾಜ
namaskara sir,
naanu Vasant antha, banavasi balaga dinda. Baro July 6 ne taariku, Enguru blog tandadinda ondu chikka karyakrama bengalurinalli.
tammannu invite maadalu e msg. nimma email viLasa gottilla, higagi illi msg biTTe.
http://enguru.blogspot.com/2008/06/blog-post_22.html
bengaluralli idre,, tappade banni
Post a Comment