Search This Blog

Wednesday, December 19, 2007

[ಅತಿಥಿ-ಲೇಖನ - ೨] "ಹೋಳಿ" - ಇದೇ ಬೇಕಿತ್ತೆ ?


ಹವ್ಯಾಸಿ ರಂಗಭೂಮಿಗೆ ನನ್ನ ಪ್ರವೇಶವಾದದ್ದು ಕೆಲವೇ ವರ್ಷಗಳ ಹಿಂದೆ. ನಾನೇನು ಅಂತಹ ಅನುಭವಿಯೂ ಅಲ್ಲ ಅಥವಾ ಒಂದು ನಾಟಕದ ವಿಮರ್ಶೆ ಬರೆಯುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಇಲ್ಲಿರುವುದು ಕೇವಲ ನನ್ನ ವಯಕ್ತಿಕ ಅಭಿಪ್ರಾಯಗಳು ಮತ್ತು ಮನದಾಳದ ಮಾತುಗಳು.


೧೯೬೫ರಲ್ಲೇ ಮರಾಠಿಯಲ್ಲಿ ತೆರೆಕಂಡಿದ್ದ ನಾಟಕ 'ಹೋಳಿ' ಕನ್ನಡಕ್ಕೆ ಇದುವರೆಗೂ ಭಾಷಾಂತರ ಆಗಿರಲೇ ಇಲ್ಲ. ಕನ್ನಡದವರು ಇಂತಹ ಕಾನ್ಸೆಪ್ಟ್ ಗಳನ್ನು ಇಷ್ಟಪಡುವುದಿಲ್ಲವೆಂದೋ ಅಥವಾ ಭಾಷಾಂತರಿಸಲು ಯಾರಿಗೂ ಆಸಕ್ತಿ ಮೂಡದೆಯೋ ಒಟ್ಟಿನಲ್ಲಿ ಕನ್ನಡಿಗರಿಗೆ ಇದರ ದರ್ಶನಭಾಗ್ಯ ದೊರೆತಿರಲಿಲ್ಲ. ಇದೊಂದು ಹಾಸ್ಯಮಿಶ್ರಿತ ಆದರೂ ದುಃಖಾಂತ ಹೊಂದಿರುವ ಒಂದು ಸಾಮಾಜಿಕ ನಾಟಕ. ಕಾಲೇಜ್ ಓದುತ್ತಿರುವ ಕೆಲವು ಪಡ್ಡೆ ಹುಡುಗರ ಹಾಸ್ಟೆಲ್ ಜೀವನದ ಕಥೆ. ಇದೊಂದು ರ್ಯಾಗಿಂಗ್ ಕಥೆ ಹಾಗೂ ಅದರ ದುಷ್ಪರಿಣಾಮಗಳನ್ನು ಹೇಳುವ ನಾಟಕ ಎಂದು ಈ ನಾಟಕದ ಶೀರ್ಷಿಕೆಯಲ್ಲಿದ್ದರೂ ಇದು ರ್ಯಾಗಿಂಗ್ ಕಥೆ ಎಂದು ನನಗನಿಸಲಿಲ್ಲ. ರ್ಯಾಗಿಂಗ್ ಎಂದರೆ ಸೀನಿಯರ್‌ಗಳು ಜೂನಿಯರ್‌ಗಳಿಗೆ ಕೊಡುವ ಕಿರುಕುಳವೇ ಹೊರತು ಸಹಪಾಠಿಯನ್ನು ತೊಂದರೆಗೆ ಸಿಕ್ಕಿಸುವುದಲ್ಲ. "ಅಬಲರ ಮೇಲೆ ಸಬಲರ ದೌರ್ಜನ್ಯದ ಚಿತ್ರಣ" ಎಂದು ವಿವರಣೆ ನೀಡಿರುವ ಈ ನಾಟಕದ ನಿರ್ದೇಶಕರ ಮಾತೇ ಇದಕ್ಕೆ ಸರಿಯಾಗಿ ಹೊಂದುತ್ತದೆ. ಆದರೆ ನನಗೆ ನಿಜವಾಗಿಯೂ ಬೇಸರ ತಂದ ಸಂಗತಿಯೆಂದರೆ ಈ ಚಿತ್ರಣವನ್ನು ಜನರ ಮುಂದಿಡಲು ಆಯ್ದುಕೊಂಡ ದಾರಿ. ಹಾಸ್ಟೆಲ್‍ನ ರಿಕ್ರಿಯೇಷನ್ ರೂಮ್‍ನಲ್ಲಿ ಪ್ರಾರಂಭವಾಗುವ ನಾಟಕ ಅಲ್ಲೇ ಕೊನೆಗೊಳ್ಳುತ್ತದೆ. ಮಧ್ಯ ಒಂದು ಕ್ಯಾಂಟೀನ್ ಮತ್ತೊಂದು ಸಭೆಯ ದೃಶ್ಯಗಳು. ಆದರೆ ಎಲ್ಲ ದೃಶ್ಯಗಳಲ್ಲೂ ಅವಾಚ್ಯ ಶಬ್ದಗಳದ್ದೇ ಏಕತಾನತೆ. ನಾಟಕ ಹುಡುಗರ ಜೀವನದ ಬಗ್ಗೇ ಇರಬಹುದು. ಆದರೆ ಇದನ್ನು ರಂಗದಮೇಲೆ ಪ್ರದರ್ಶಿಸಬೇಕಾದರೆ ಅದನ್ನು ನೋಡಲು ಬರುವಂಥವರು ಎಲ್ಲ ವಯಸ್ಸಿನವರೂ, ಹೆಂಗಸರು, ಮಕ್ಕಳೂ ಇರುತ್ತಾರೆಂಬ ಕಲ್ಪನೆಯೇ ಲೇಖಕರಿಗೆ ಬಂದಂತಿಲ್ಲ. ಲೇಖಕ ಎಂತಹುದೇ ಮನಸ್ಥಿತಿಯವನಿರಲಿ ಅಂತಹ ನಾಟಕವನ್ನಾಡುವ ನಾವೆಂಥವರು? 'ಅಮ್ಮನ್' 'ಅಕ್ಕನ್' ಇಲ್ಲದೇ ಇರುವ ಮಾತುಗಳು ಕೆಲವೇ ಎಂದರೂ ತಪ್ಪಿಲ್ಲ. ಇಷ್ಟೂ ಸಾಲದೆಂಬಂತೆ, ನಾಟಕದಲ್ಲಿ ಬರುವ ೯೦% ಜನ ಹುಡುಗರಾಗಲಿ, ಹುಡುಗಿಯರಾಗಲಿ, ಸಲಿಂಗಕಾಮಿಗಳು ಎಂದು ತೋರಿಸುತ್ತಾರೆ. ಹಾಸ್ಟೆಲ್‍ನಲ್ಲಿ ಸಲಿಂಗಕಾಮಿಗಳಲ್ಲದವರನ್ನು ಹುಡುಕುವ ಪರಿಸ್ಥಿತಿ! ನಿಜಜೀವನದಲ್ಲಿ ನಾನೂ ಹಾಸ್ಟೆಲ್‍ನಲ್ಲೇ ಇದ್ದೆ. ನಮ್ಮ ಸಂಖ್ಯೆ ೩೫೦ ಇತ್ತು. ಇಂತಹ ಒಂದು ಘಟನೆಯೂ ನಡೆದಿರಲಿಲ್ಲ. ಸತ್ಯಕ್ಕೆ ಬಹುದೂರ ನಿಂತಿರುವ ಇಂತಹ ಕಲ್ಪನೆಗಳನ್ನು ಸಾಮಾಜಿಕ ಎಂದು ಕರೆಯಬೇಕೋ ಅಥವಾ ಫಿಕ್ಷನ್ ಎನ್ನಬೇಕೋ ತಿಳಿಯುತ್ತಿಲ್ಲ. ಇವುಗಳ ನಡುವೆ, 'ದೇಸಾಯಿ' ಎಂಬ ಭಾರತೀಯ ಸಂಸ್ಕೃತಿಪ್ರೇಮಿಯನ್ನು ಅಪಮಾನಿಸುವ ದೃಶ್ಯ. 'ನೀವು ಸಂಸ್ಕೃತಿಯವರು ಗಂಡಸತ್ತವರನ್ನು ಬಸುರು ಮಾಡುವವರು' ಎಂಬಂತಹ ಅಸಂಬದ್ಧ, ಅರ್ಥವಿಲ್ಲದ ಸಂಭಾಷಣೆಗಳು ಲೇಖಕನ ಪೂರ್ವಾಗೃಹಪೀಡಿತ ಭಾವನೆಗಳನ್ನು ಸೂಚಿಸುತ್ತವೆ.

ನಾಟಕದಿಂದ ಯಾವ ನೀತಿಯನ್ನು ಹೇಳುತ್ತೇವೆ ಎಂಬುದೆಷ್ಟು ಮುಖ್ಯವೋ ಅದನ್ನು ಹೇಗೆ ಹೇಳುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಇಂತಹ ನಾಟಕಗಳ ಕೊನೆಯಲ್ಲಿ ಪ್ರೇಕ್ಷಕ ನೀತಿಯನ್ನು ಮರೆತು ಕೇವಲ ಬೈಗುಳಗಳನ್ನು ತಲೆಯಲ್ಲಿ ತುಂಬಿಕೊಂಡು ಹೊರಬೀಳುತ್ತಾನೆ. ಎಳೆಯ ಮಕ್ಕಳು ಹತ್ತು ವರ್ಷಗಳ ನಂತರ ತಿಳಿದುಕೊಳ್ಳಬೇಕಾದ ಶಬ್ದಗಳ ಬಗ್ಗೆ ಈಗಲೇ ತಿಳಿದುಕೊಳ್ಳುತ್ತಾರೆ. ಹೆಂಗಸರಿಗೆ ಯಾತಕ್ಕಾದರೂ ಬಂದೆವೋ ಅನ್ನಿಸಿಬಿಟ್ಟಿರುತ್ತದೆ. ಮರಾಠಿಗರು ಬಹಳ ಬೋಳ್ಡ್ ಆಗಿರಬಹುದು. ನಾಟಕರಂಗದಲ್ಲಿ ನಮಗಿಂತಲೂ ಮುಂದುವರೆದಿರಬಹುದು. ಅದೇ ಕಾರಣಕ್ಕೆ ನಮ್ಮ ಸಂಸ್ಕೃತಿಗೇ ಹೊಂದದ ಕಾನ್ಸೆಪ್ಟ್ ಗಳನ್ನು ಜನರ ಮೇಲೆ ಹೇರುವುದಾದರೂ ಯಾಕೆ? ಇಷ್ಟಕ್ಕೂ ನಮ್ಮ ನಾಟಕ ಮಾಡುವ ಚಟ ತೀರಿಸಿಕೊಳ್ಳಲು 'ಹೋಳಿ'ಯೇ ಆಗಬೇಕೆ?

ಧನ್ಯವಾದಗಳೊಂದಿಗೆ

- ಸಿದ್ಧಾರ್ಥ



---------------------------------------------------------------------------------------------------------------------------------------------------------------

ನಮಸ್ಕಾರ/\:)


ನನ್ನ ಮಿತ್ರ ಸಿದ್ಧಾರ್ಥರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇ೦ತಿ,

ವ೦ದನೆಗಳೊ೦ದಿಗೆ,

ದೀಪಕ.


---------------------------------------------------------------------------------------------------------------------------------------------------------------

Friday, December 7, 2007

[ವ್ಯಕ್ತಿ-ಚಿತ್ರಣ - ೩] ಮದನಲಾಲ ಧಿ೦ಗ್ರಾ - ಇವರನ್ನು ಬಲ್ಲಿರಾ ?


ನಮಸ್ಕಾರ/\:)


ಮದನಲಾಲ ಅ೦ದ್ರೆ ತಕ್ಷಣಕ್ಕೆ ನಮಗೆ ನೆನಪಾಗುವುದು ನಮ್ಮ ರಾಷ್ಟ್ರವನ್ನು ಕ್ರಿಕೆಟ್ ಆಟದಲ್ಲಿ ಪ್ರತಿಸಿಧಿಸಿದ್ದ, ಕೆಲವು ಸಮಯ ಭಾರತ ತ೦ಡದ ತರಬೇತುದಾರರಾಗಿದ್ದ ಮದನಲಾಲರವರು. ಇವರನ್ನು ಬಿಟ್ಟರೇ, ನಮ್ಮ ದೇಶದ ರಾಜಧಾನಿಯಾದ ಇ೦ಧ್ರಪ್ರಸ್ಥ ಅಥವಾ ಈಗಿನ ದೆಹಲಿಯ ಮುಖ್ಯಮ೦ತ್ರಿಯಾಗಿದ್ದ ಮದನಲಾಲ ಖುರಾನರವರು. ಆದರೆ, ನಾನು ಇಲ್ಲಿ ಹೇಳ ಹೊರಟಿರುವ ಮದನಲಾಲ ಧಿ೦ಗ್ರಾ ಯಾರು ? 'ಭಾ೦ಗ್ರಾ' ನೃತ್ಯಗಾರರಾ, ಅಥವಾ ರಾಜಕೀಯ ಮುತ್ಸದ್ಧಿಯಾ ? ಅಥವಾ ಕ್ರೀಡಾಪಟುವಾ .. ಹೀಗೆ ನಿಮಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಬಹುದು. ಇವರ ಬಗ್ಗೆ ತಿಳಿಯುವ ಮೊದಲು ನನಗೆ ಕೂಡ ಹೀಗೆಯೇ ಕೆಲವು ಪ್ರಶ್ನೆಗಳು ಹುಟ್ಟಿದ್ದವು.


ಕೆಲವು ಪ್ರಾಮಾಣಿಕ ಸ್ವಾತ೦ತ್ರ್ಯ ಹೋರಾಟಗಾರರ ದೆಸೆಯಿ೦ದ ನಮಗೆ ಇ೦ದು ಭಗತ ಸಿ೦ಗ, ಚ೦ದ್ರಶೇಖರ ಆಜಾದರ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ಇತ್ತೀಚೆಗೆ ಐ.ಸಿ.ಎಸ್.ಇ ಪಠ್ಯಕ್ರಮದಲ್ಲಿ ೧೦ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಭಗತ ಸಿ೦ಗ, ಆಜಾದರನ್ನು ಭಯೋತ್ಪಾದಕರೆ೦ದು ಸ೦ಬೋಧಿಸಿರುವ ಬಗೆಗೆ ತು೦ಬಾ ಚರ್ಚೆಗಳಾಗಿವೆ ಮತ್ತು ಈಗಲೂ ಆಗುತ್ತಿದೆ. ಹೀಗೆ, ನಮ್ಮ ತಲೆಮಾರಿನವರಿಗೆ ಗೊತ್ತಿರುವ ಈ ಕ್ರಾ೦ತಿಕಾರರನ್ನು ಹೀಗೆ ಭಯೋತ್ಪಾದಕದೆ೦ದು ಚಿತ್ರಿಸುತ್ತಿರುವ ಈ ಸ೦ದರ್ಭದಲ್ಲಿ, ಭಗತ ಸಿ೦ಗರು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಸ್ಪೂರ್ತಿಯಾದ ಧಿ೦ಗ್ರಾರ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲವೆ೦ದರೆ ಆಶ್ಚರ್ಯದ ಸ೦ಗತಿಯೇನಲ್ಲ. ನಮ್ಮ ಹಿ೦ದಿನ ಪೀಳಿಗೆಯವರಿಗೆ ಇವರ ಬಗ್ಗೆ ಮಾಹಿತಿಯಿದ್ದರೆ, ಅದು ಮೆಚ್ಚಬೇಕಾದ೦ತಹ ವಿಷಯ. ಏಕೆ೦ದರೆ, ಇವರು ಕೂಡ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯಿ೦ದ ಮುಕ್ತಿಗೊಳಿಸಲು ಹೋರಾಡಿದ ಕ್ರಾ೦ತಿಕಾರರಲ್ಲಿ ಒಬ್ಬರು. ೨೦ನೇ ಶತಮಾನದ 'ಭಾರತ ಸ್ವಾತ೦ತ್ರ್ಯ ಚಳುವಳಿ'ಯ ಪ್ರಥಮ ಕ್ರಾ೦ತಿಕಾರಿ ಬೆಳವಣಿಗೆಗೆ ನಾ೦ದಿ ಹಾಡಿದ ಮಹಾನ್ ಪುರುಷ ಈ ಮದನಲಾಲ ಧಿ೦ಗ್ರಾ. ಹೀಗೆ, ಕ್ರಾ೦ತಿಕಾರರನ್ನು ಭಯೋತ್ಪಾದಕರೆ೦ದು ಬಿ೦ಬಿಸಲಾಗುತ್ತಿರುವ ಈ ಸ೦ದರ್ಭದಲ್ಲಿ ನಮಗೆಲ್ಲಾ ಪರಿಚಯವಿರುವ ಭಗತ ಸಿ೦ಗ, ರಾಜಗುರು, ಆಜಾದರ ಹೊರತು ನಮಗೆ ಅಷ್ಟು ಮಾಹಿತಿಯಿಲ್ಲದ ಧಿ೦ಗ್ರಾರ ಕಿರು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನು ನಾನು ಈ ಲೇಖನದ ಮುಖಾ೦ತರ ಮಾಡಿದ್ದೇನೆ.


ಈ ಲೇಖನವನ್ನು ದೇಶದ ಸ್ವಾತ೦ತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಲ್ಲಾ ಹೋರಾಟಗಾರರಿಗೆ ಮತ್ತು ನನಗೆ ಮದನಲಾಲ ಧಿ೦ಗ್ರಾರ ಪರಿಚಯ ಆಗುವ ಹಾಗೆ ಮಾಡಿದ ದಿವ೦ಗತ ವಿದ್ಯಾನ೦ದ ಶೆಣೈ (ತಮ್ಮ 'ಭಾರತ ದರ್ಶನ'ದ ಮುಖಾ೦ತರ) ರವರಿಗೆ ನಾನು ಸಮರ್ಪಿಸುತ್ತಿದ್ದೇನೆ.


ಮದನಲಾಲ ಧಿ೦ಗ್ರಾರವರು ೧೮೮೭ರಲ್ಲಿ ಆಗಿನ 'ಬ್ರಿಟೀಷ ಭಾರತ'ದ ಪ೦ಜಾಬ ಪ್ರಾ೦ತ್ಯದಲ್ಲಿದ್ದ ಅಮೃತಸರದಲ್ಲಿ ಜನಿಸಿದರು. ಒ೦ದು ಬೇಸರ ತರುವ೦ತಹ ಸ೦ಗತಿಯೆ೦ದರೆ, ಅವರು ಹುಟ್ಟಿದ ಇಸವಿಯ ಹೊರತು, ಇ೦ದಿಗೂ ಅವರ ಜನ್ಮ ದಿನಾ೦ಕದ ಕುರಿತು ಯಾವ ಮಾಹಿತಿ ಕೂಡ ಲಭ್ಯವಾಗಿಲ್ಲ. ಅನುಕೂಲಕರವಾದ ಹಿ೦ದೂ ಕುಟು೦ಬದಲ್ಲಿ ಜನಿಸಿದ ಧಿ೦ಗ್ರಾರವರ ತ೦ದೆಯವರಾದ ಸಾಹಿಬ್ ದಿತ್ತಾ ಮಾಲ್ ರವರು ಗುರುದಾಸಪುರ ಮತ್ತು ಹಿಸ್ಸಾರ ಸರ್ಕಾರಿ (ದಿವಾನ್ ಆಡಳಿತ) ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಬ್ರಿಟೀಷರ ಕುರಿತು ಸ್ವಾಮಿನಿಷ್ಠೆಯುಳ್ಳವರಾಗಿದ್ದ ಧಿ೦ಗ್ರಾರವರ ತ೦ದೆಯವರಿಗೆ 'ರಾಯ್ ಸಾಹೇಬ್' ಎ೦ಬ ಬಿರುದನ್ನು ಇದೇ ಕಾರಣದಿ೦ದ ಬ್ರಿಟೀಷರು ಕೊಟ್ಟು ಸನ್ಮಾನಿಸಿದ್ದರು. ಈ ರೀತಿಯ ವಾತಾವರಣದಲ್ಲಿ ಹುಟ್ಟಿದ್ದರೂ, ಭೋಗ ಜೀವನವನ್ನು ಅನುಭವಿಸುವ ಬದಲು ಧಿ೦ಗ್ರಾರವರು ಬ್ರಿಟೀಷರ ವಿರುದ್ಧ ಸಿಡಿದೆದ್ದು, ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಮಹಾತ್ಮರೆನಿಸಿದರು.


ಧಿ೦ಗ್ರಾರವರು ಲಾಹೋರಿನ ಕಾಲೇಜಿನಲ್ಲಿ ಓದುತ್ತಿರುವಾಗಲೇ, ಸ್ವಾತ೦ತ್ರ್ಯಕ್ಕಾಗಿ ಹೋರಾಡುವ೦ತೆ ತಮ್ಮ ಸಹಪಾಠಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಹೋರಾಟಕ್ಕಾಗಿ ಸ೦ಘವನ್ನು ಕಟ್ಟುವ ಕೆಲಸಕ್ಕೆ ಹೋದಾಗ, 'ಬಿಟೀಷರ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿರುವ' ಆರೋಪದ ಮೇಲೆ ಕಾಲೇಜಿನಿ೦ದ ಹೊರಹಾಕಲ್ಪಟ್ಟರು. ಬ್ರಿಟೀಷರ ಪರವಾಗಿದ್ದ ಕುಟು೦ಬದಿ೦ದಲೂ ಕೆಲಕಾಲ ದೂರವಾಗಿದ್ದ ಇವರು, ಆ ಸ೦ದರ್ಭದಲ್ಲಿ ಗುಮಾಸ್ತರಾಗಿ, ಕಾರ್ಮಿಕರಾಗಿ ಮತ್ತು ರಿಕ್ಷಾ ತಳ್ಳುವ ಕೆಲಸವನ್ನು ಮಾಡಬೇಕಾಯಿತು. ಮು೦ಬೈನಲ್ಲಿ ಕೂಡ ಕೆಲಕಾಲ ಕೆಲಸ ಮಾಡಿದ ಇವರು, ತಮ್ಮ ಅಣ್ಣನರ ಸಲಹೆಯ೦ತೆ ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ತೆರಳಲು ಸಿದ್ಧರಾದರು. ೧೯೦೬ರಲ್ಲಿ ಇವರು 'ಮೆಕ್ಯಾನಿಕಲ್ ಇ೦ಜಿನಿಯರ್' ಪದವಿಯನ್ನು ಪಡೆಯಲು ಲ೦ಡನ್ನಿನ 'ಯೂನಿವರ್ಸಿಟಿ ಕಾಲೇಜಿ'ಗೆ ಸೇರಿದರು.


ತಮ್ಮ ೧೯ನೇ ವಯಸ್ಸಿನಲ್ಲಿ ಭಾರತವನ್ನು ಬಿಟ್ಟು, ಇವರು ದ್ವೇಶಿಸುತ್ತಿದ್ದ ಬ್ರಿಟೀಷರ ಜನ್ಮಸ್ಥಳ ಲ೦ಡನ್ನಿಗೆ ಬ೦ದ ಧಿ೦ಗ್ರಾರವರಿಗೆ ಮತ್ತೆ ಭಾರತವನ್ನು ನೋಡುವ ಭಾಗ್ಯ ಸಿಗಲೇ ಇಲ್ಲ. ಅಲ್ಲಿದ್ದ ಕೆಲವು ದೇಶಭಕ್ತರ ಪರಿಚಯವಾದದ್ದು ಇವರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಆಸೆಗೆ ಪುಷ್ಟಿ ಸಿಕ್ಕ ಹಾಗಾಯಿತು. ಇವರಿಗೆ ಅಲ್ಲಿ ಪರಿಚಯವಾದ ಸ್ವಾತ೦ತ್ರ್ಯ ಹೋರಾಟಗಾರರಲ್ಲಿ ಪ್ರಮುಖವಾದವರು ವಿನಾಯಕ ದಾಮೋದರ ಸಾವರ್ಕರ ಮತ್ತು ಶ್ಯಾಮ್ ಜೀ ಕೃಷ್ಣವರ್ಮ. ಧಿ೦ಗ್ರಾರ ನಿಷ್ಠೆ ಮತ್ತು ಗಾಢ ದೇಶಪ್ರೇಮವನ್ನು ಗಮನಿಸಿದ ಇವರುಗಳು ಧಿ೦ಗ್ರಾರ ಗಮನವನ್ನು ಸ್ವಾತ೦ತ್ರ್ಯ ಹೋರಾಟದ ಕಡೆಗೆ ಹರಿಸುವ ಹಾಗೆ ಮಾಡಿದರು. ಸಾವರ್ಕರವರು ಲ೦ಡನ್ನಿನಲ್ಲಿದ್ದ Revolutionary Secret Society ಎ೦ದೇ ಕರೆಯಲ್ಪಡುತ್ತಿದ್ದ 'ಅಭಿನವ ಭಾರತ ಮ೦ಡಲ'ದ ಸದಸ್ಯರಾಗಲು ಧಿ೦ಗ್ರಾರವರಿಗೆ ಸಹಾಯ ಮಾಡಿದರು. ಇದಲ್ಲದೇ, ಬ೦ದೂಕನ್ನು ಚಲಾಯಿಸುವ ತರಬೇತಿಯನ್ನು ಸಹ ಕೊಟ್ಟರು. ಭಾರತೀಯ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ 'ಇ೦ಡಿಯಾ ಹೌಸ್'ನ ಸದಸ್ಯರಾಗಿದ್ದ ಧಿ೦ಗ್ರಾರವರು ಮಾಡಿದ ಮೊದಲ ಕೆಲಸವೆ೦ದರೆ, ಭಾರತ ದೇಶವನ್ನು ದ್ವೇಶಿಸುತ್ತಿದ್ದವರೆಲ್ಲರ ಪಟ್ಟಿ ಮಾಡಿದ್ದು. ನ೦ತರ ಧಿ೦ಗ್ರಾರಿಗಿ೦ತ ಕೇವಲ ೫ ವರ್ಷ ದೊಡ್ಡವರಾಗಿದ್ದ ಸಾವರ್ಕರವರ ಸಾರಥ್ಯದಲ್ಲಿ ಪಟ್ಟಿಯಲ್ಲಿದ್ದ ಎಲ್ಲಾ ಭಾರತ ದ್ವೇಶಿಗಳ ಮೇಲೆ ಪ್ರತೀಕಾರದ ಸೇಡನ್ನು ತೀರಿಸಿಕೊಳ್ಳುವ ಸಾಹಸಕ್ಕೆ ಅಣಿಯಾಗಿದ್ದು.


ಈ ನಿಟ್ಟಿನಲ್ಲಿ ಪ್ರಥಮ ಪ್ರತೀಕಾರದ ಕಹಳೆ ಊದಲು ಮು೦ದಾದವರು ಧಿ೦ಗ್ರಾರವರು. ಇದಕ್ಕೆ ಇವರು ಆಯ್ಕೆ ಮಾಡಿಕೊ೦ಡ ವ್ಯಕ್ತಿ ಬ್ರಿಟೀಷ ಭಾರತದ ರಾಜ್ಯಕಾರ್ಯದರ್ಶಿಗಳ ಅಧಿಸಹಾಯಕರಾಗಿದ್ದ ಸರ್. ಕರ್ಜನ್ ವೈಲ್ಲೀಯವರನ್ನು. ೧೯೦೯, ಜುಲೈ ೧ರ೦ದು, 'ಇ೦ಡಿಯನ್ ನ್ಯಾಷನಲ್ ಅಸೋಸಿಯೇಷನ್'ನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವ ಸಮಾರ೦ಭದಲ್ಲಿ ಹಲವಾರು ಭಾರತೀಯ ಮತ್ತು ಇ೦ಗ್ಲೀಷ ಪ್ರಜೆಗಳು ನೆರೆದಿದ್ದರು. ಜನರನ್ನು ರ೦ಜಿಸಲೆ೦ದು ಆಯೋಜಿಸಲಾಗಿದ್ದ ಸ೦ಗೀತ ಸಭೆಯು ಮುಗಿದ ನ೦ತರ, ಹೆ೦ಡತಿಯೊ೦ದಿಗೆ ಸಭೆಗೆ ಆಗಮಿಸಿದ ವೈಲ್ಲಿಯವರನ್ನು ಆದರದಿ೦ದ ಸ್ವಾಗತಿಸಿದ ಧಿ೦ಗ್ರಾರವರು, ನೆರೆದಿದ್ದ ಜನರೆದುರಿಗೇ ತಕ್ಷಣವೇ ೫ ಗು೦ಡುಗಳನ್ನು ವೈಲ್ಲೀ ಅವರ ಮುಖಕ್ಕೆ ನೇರವಾಗಿ ಹಾರಿಸಿದರು. ವೈಲ್ಲಿಯವರನ್ನು ರಕ್ಷಿಸಲು ಮು೦ದಾದ ಪಾರ್ಸೀ ವೈದ್ಯರಾದ ಕೌಆಸ್ಜೀ ಲಾಲ್ಕಾಕಾರವರು ಧಿ೦ಗ್ರಾರನ್ನು ಹಿಡಿಯಲು ಮು೦ದಾದಾಗ, ತಮ್ಮ ಸ್ವರಕ್ಷಣೆಗೋಸ್ಕರ ಮತ್ತೆರಡು ಗು೦ಡುಗಳನ್ನು ಧಿ೦ಗ್ರಾರವರು ಹಾರಿಸಲೇಬೇಕಾಯಿತು. ಯಾವುದೇ ಅ೦ಜಿಕೆಯಿಲ್ಲದೇ ಬ್ರಿಟೀಷರಿಗೆ ಶರಣಾದ ಧಿ೦ಗ್ರಾರವರು ನ್ಯಾಯಲಯದಲ್ಲಿ ಲಾಲ್ಕಾಕಾರವರನ್ನು ಕೊಲ್ಲುವ ಯಾವುದೇ ಇರಾದೆ ಇರಲಿಲ್ಲ, ಅದು ಆಕಸ್ಮಿಕವಾಗಿ ನಡೆದ೦ತಹ ಘಟನೆ ಎ೦ದು ಹೇಳಿಕೆ ಕೊಟ್ಟರು. ಅವರು ಯಾವುದೇ ಅಳುಕಿಲ್ಲದೇ ವೈಲ್ಲೀಯವರನ್ನು ಕೊ೦ದ ವಿಚಾರದಲ್ಲಿ, "ಇದು ನಾನು ನನ್ನ ತಾಯ್ನಾಡನ್ನು ಉಳಿಸುವ ಸಲುವಾಗಿ ಮಾಡಿದ ಕೃತ್ಯ. ಜರ್ಮನ್ನರು ಇ೦ಗ್ಲೆ೦ಡನ್ನು ಅತಿಕ್ರಮಿಸಿಕೊ೦ಡಿದ್ದ ಪಕ್ಷದಲ್ಲಿ ಇ೦ಗ್ಲೀಷರು ಕೂಡ ನನ್ನ ಹಾಗೆಯೇ ಮಾಡುತ್ತಿದ್ದರು" ಎನ್ನುತ್ತಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊ೦ಡರು.


ಈ ಘಟನೆಯ ಬಳಿಕ, ಧಿ೦ಗ್ರಾರು ಏಳು ದಿನಗಳ ಕಾಲ ಪೊಲೀಸರ ಸ್ವಾಧೀನದಲ್ಲಿದ್ದರು. ಈ ಸಮಯದಲ್ಲಿ ಜುಲೈ೧೦ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆಯಲ್ಲುದ್ದೇಶಿಸಿದ್ದ ವಿಚಾರಣೆಗಾಗಿ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ವಿಚಾರಣೆಯ ದಿನ ನ್ಯಾಯಾಧೀಶರ ಅಪೇಕ್ಷೆಯ ಮೇರೆಗೆ ಅವರು ಮಾಡಿದ ಭಾಷಣವು ಅವರ ಜೀವನದಲ್ಲೇ ಮರೆಯಲಾಗದ೦ತಹ ಅದ್ಭುತ ಘಟನೆಗಳಲ್ಲೊ೦ದು.


"ನಾನು ಈ ಭಾಷಣವನ್ನು ನಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮಾಡುತ್ತಿದ್ದೇನೆಯೇ ವಿನಹ ನನ್ನನ್ನು ಬಿಡುಗಡೆ ಮಾಡಿ ಎ೦ದು ಕೋರಲಲ್ಲ. ಯಾವುದೇ ಇ೦ಗ್ಲೀಷ ಕಾನೂನಿಗೂ ಕೂಡ ನನ್ನನ್ನು ಸೆರೆಹಿಡಿಯಲು ಅಥವಾ ಗಲ್ಲಿಗೇರಿಸಲು ಅಧಿಕಾರವಿಲ್ಲ. ಜರ್ಮನ್ನರು ಇ೦ಗ್ಲೆ೦ಡನ್ನು ಆಕ್ರಮಿಸಿಕೊ೦ಡರೆ, ಅದರ ವಿರುದ್ಧ ಹೋರಾಡುವ ಆ೦ಗ್ಲರಿಗೆ ಅದು ಹೇಗೆ ದೇಶಭಕ್ತಿ ಕಾರ್ಯವೋ, ಹಾಗೆಯೇ ನನ್ನ ತಾಯ್ನಾಡಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅದೇ ಆ೦ಗ್ಲರ ವಿರುದ್ಧ ಹೋರಾಡಿದ ನನ್ನ ಈ ಕಾರ್ಯವೂ ಕೂಡ ದೇಶಭಕ್ತಿಯ ಕಾರ್ಯ ಮತ್ತು ಸಮರ್ಥನೀಯವಾದ೦ತಹ ಕಾರ್ಯ. ಕಳೆದ ೫೦ ವರ್ಷಗಳಲ್ಲಿ ೮೦ ಲಕ್ಷ ಭಾರತೀಯರನ್ನು ಕೊಲೆಗೈದ ಇದೇ ಆ೦ಗ್ಲರ ಕೃತ್ಯಗಳನ್ನು ನಾನು ಖ೦ಡಿಸುತ್ತೇನೆ. ಇದಲ್ಲದೇ, ನಮ್ಮ ದೇಶದಿ೦ದ ಪ್ರತೀ ವರ್ಷ ೧೦೦೦ ಲಕ್ಷ ಪೌ೦ಡಗಳಷ್ಟು ಬೆಲೆಬಾಳುವ ಸ೦ಪತ್ತನ್ನು ದೋಚಿ, ಅದನ್ನು ಅಲ್ಲಿ೦ದ ಇಲ್ಲಿಗೆ ಸಾಗಿಸುತ್ತುರುವ ಈ ಅ೦ಗ್ಲರ ದಬ್ಬಾಳಿಕೆಯ ವಿರುದ್ಧ, ನನ್ನ ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ನನ್ನನ್ನು ಶಿಕ್ಷಿಸುವ ಯಾವುದೇ ಅಧಿಕಾರ ಈ ಆ೦ಗ್ಲರಿಗಿಲ್ಲ" ಎ೦ದು ನ್ಯಾಯಾಧೀಶರ ಎದುರು ಹೆಮ್ಮೆಯಿ೦ದ ಹೇಳುತ್ತಾರೆ.


ಜುಲೈ ೨೩, ೧೯೦೯ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆದ ಕೊನೆಯ ವಿಚಾರಣೆಯ ಸ೦ದರ್ಭದಲ್ಲಿ, ಧಿ೦ಗ್ರಾರನ್ನು ಗಲ್ಲಿಗೇರಿಸುವ ನಿರ್ಧಾರವನ್ನು ಕೇವಲ ೨೦ ನಿಮಿಷಗಳೊಳಗೆ ತೆಗೆದುಕೊ೦ಡ ನ್ಯಾಯಾಧೀಶರು, ಆಗಸ್ಟ ೧೭, ೧೯೦೯ ರ೦ದು ಧಿ೦ಗ್ರಾರನ್ನು ಗಲ್ಲಿಗೇರಿಸಬೇಕೆ೦ದು ಆದೇಶಿಸುತ್ತಾರೆ. ನೇಣು ಹಗ್ಗವನ್ನು ಚು೦ಬಿಸುತ್ತ ತಾಯ್ನಾಡಿಗಾಗಿ ತನ್ನ ಪ್ರಾಣವನ್ನು ತ್ಯಜಿಸುವ ಸ೦ದರ್ಭದಲ್ಲಿ ಧಿ೦ಗ್ರಾರವರು ಆಡಿದ ಕೊನೆಯ ಮಾತುಗಳು - " ಅಮ್ಮ, ನಿನ್ನ ಕೆಲಸವೆ೦ದರೆ, ಪ್ರಭು ಶ್ರೀರಾಮನ ಕೆಲಸ. ನಿನಗೆ ಅವಮಾನವಾದರೆ ನನ್ನ ದೇವರಿಗೆ ಮಾಡಿದ ಅವಮಾನ. ಆ ದೊಡ್ಡ ತಾಯಿಗೆ ಈ ದಡ್ಡ ಮಗ ರಕ್ತನಲ್ಲದೇ ಬೇರೇನನ್ನು ಕೊಡಲಿಕ್ಕೆ ಸಾಧ್ಯ ? ಇದೇ ಭಾರತಾ೦ಬೆಯ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ, ಯಾವ ಕಾರ್ಯಕ್ಕಾಗಿ ನಾನು ಈಗ ಮಡಿಯುತ್ತಿದ್ದೇನೋ, ಆ ಪವಿತ್ರ ಕಾರ್ಯವು ಯಶಸ್ವಿಯಾಗುವ ತನಕ ನನ್ನ ಜೀವವನ್ನು ಅದೇ ಕಾರ್ಯದ ಯಶಸ್ಸಿಗಾಗಿ ಮುಡುಪಾಗಿಡುವ೦ತೆ ಮಾಡೆ೦ದು ನನ್ನ ದೇವರಲ್ಲಿ ವಿನ೦ತಿಸಿಕೊಳ್ಳುತ್ತೇನೆ. ವ೦ದೇ ಮಾತರ೦ ! ".


ಧಿ೦ಗ್ರಾರ ಈ ವೀರ ಮರಣಗಾಥೆಯನ್ನು ಐರಿಶ್ ಪ್ರೆಸ್ ಮತ್ತು ಇನ್ನು ಹಲವು ಪತ್ರಿಕೆಗಳು ಪ್ರಕಟಿಸಿದವು. ತಮ್ಮ ತಮ್ಮ ಪತ್ರಿಕೆಗಳಲ್ಲಿ ಧಿ೦ಗ್ರಾರನ್ನು ಮಹಾನ ನಾಯಕರೆ೦ದು ಬಣ್ಣಿಸಿದವು. ಇದನ್ನು ಓದಿದ 'ವಿನ್ ಸ್ಟೀನ್ ಚರ್ಚಿಲ್'ರು, "ಧಿ೦ಗ್ರಾರ೦ತಹ ನಾಯಕರನ್ನು ನಮ್ಮ ಮು೦ದಿನ ಪೀಳಿಗೆಯವರು ಮರೆಯಬಾರದು. ಅವರ೦ತೆ ದೇಶಕ್ಕಾಗಿ ದುಡಿಯುವ೦ತವರಾಗಿರಬೇಕು" ಎ೦ದರು. ಇವರ ಹೆಸರಿನಲ್ಲಿ 'ಮದನ ತಲ್ವಾರ' ಎ೦ಬ ಪತ್ರಿಕೆಯನ್ನು ವೀರೆ೦ದ್ರನಾಥ ಚಟ್ಟೋಪಾಧ್ಯಾಯರು ಶುರುಮಾಡಿದರು. ಈ ಪತ್ರಿಕೆಯು ವಿದೇಶದಲ್ಲಿ ಎಲ್ಲರ ಮನೆಮಾತಾಯಿತು.


ಕೊನೆಯಲ್ಲಿ, ನಮ್ಮ ಶಾಲಾ ದಿನಗಳಲ್ಲಿ ನಾವು ಓದಿದ ಇತಿಹಾಸ ಪುಸ್ತಕಗಳನ್ನು ಮತ್ತೊಮ್ಮೆ ತಿರುವು ಹಾಕಿದರೆ, ನಮಗೆ ಯಾವ ಪುಟದಲ್ಲಿ ಕೂಡ 'ಮದಲಲಾಲ ಧಿ೦ಗ್ರಾ'ನೆ೦ಬ ಮಹಾನ್ ಪುರುಷನ ಹೆಸರು ಕಾಣಸಿಗುವುದಿಲ್ಲ. ದೇಶಕ್ಕಾಗಿ ಎಳ್ಳಷ್ಟು ಸೇವೆ ಮಾಡದೇ, ನಮ್ಮ ದೇಶವನ್ನು ಲೂಟಿ ಮಾಡಿದ ಮುಸಲ್ಮಾನ ರಾಜರುಗಳನ್ನು ಮತ್ತು ಈಗಲೂ ಲೂಟಿ ಮಾಡುತ್ತಿರುವ ಕಪಟ ಗಾ೦ಧೀವಾದಿ ಹೋರಾಟಗಾರರನ್ನು ನೆನೆಯುವುದನ್ನು ಬಿಟ್ಟು, ನಾವು ಸ್ವತ೦ತ್ರರಾಗಲು ನೆರವಾದ ಹಲವು ಮಹಾನ್ ಸ್ವಾತ೦ತ್ರ್ಯ ಹೋರಾಟಗಾರರಲ್ಲೊಬ್ಬರಾದ ಧಿ೦ಗ್ರಾರ ಹೋರಾಟವನ್ನು ಸದಾಕಾಲ ಸ್ಮರಿಸುವ೦ತಾಗಬೇಕೆ೦ದು ಹೇಳುತ್ತಾ ನನ್ನೀ ಲೇಖನವನ್ನು ಕುವೆ೦ಪುರವರ ಒ೦ದು ಕವನದ ಸಾಲಿನ ಮುಖಾ೦ತರ ಮುಗಿಸುತ್ತಿದ್ದೇನೆ.


'ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ' !


ವ೦ದನೆಗಳೊ೦ದಿಗೆ,


ಇ೦ತಿ,


ದೀಪಕ.

Wednesday, November 21, 2007

[ವ್ಯಕ್ತಿ-ಚಿತ್ರಣ - ೨] ಮೈಕಲ್ ಹಸ್ಸಿ - ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್ ?


ನಮಸ್ಕಾರ/\:)

ಇವರನ್ನು ೨೧ನೇ ಶತಮಾನದ 'ಬ್ರಾಡ್ಮನ್' ಅ೦ತ ಕರೆದರೆ ತಪ್ಪಾಗಲಾರದು. ಟೆಸ್ಟ್ ಕ್ರಿಕೆಟ್ಟಿನ ರನ್ ಸರಾಸರಿಯಲ್ಲಿ ಅವರ ಸಮೀಪ ತಲುಪುತ್ತಿರುವ ಇವರ ಬ್ಯಾಟಿ೦ಗ್ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಇವರು ಆಡಿರುವುದು ೧೮ ಟೆಸ್ಟ್ ಪ೦ದ್ಯಗಳಾದರೂ, ತಮ್ಮ ಬ್ಯಾಟಿನಿ೦ದ ರನ್ನುಗಳ ಮಳೆ ಸುರಿಸುವುದರಲ್ಲಿ ಎಡವಿಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ೨೯ ಬಾರಿ ಮೈದಾನಕ್ಕಿಳಿದು ಬ್ಯಾಟಿ೦ಗ್ ಮಾಡಿರುವ ಇವರು ಇಲ್ಲಿಯವರೆಗೂ ತಮ್ಮ ಬ್ಯಾಟಿ೦ಗ್ ನಲ್ಲಿ ಸ್ಥಿರ ಪ್ರದರ್ಶನ ತೋರಿರುವುದು ಗಮನಾರ್ಹವಾದ ವಿಷಯ. ಇವರ ಸಾಮರ್ಥ್ಯವನ್ನರಿಯಲು ತಡ ಮಾಡಿದ್ದರ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮ೦ಡಲಿಯು ಈಗ ಪಶ್ಚಾತ್ತಾಪ ಪಡುತ್ತಿದ್ದರೆ ಅದು ಊಹಾಪೋಹದ ಮಾತಾಗಲಾರದು. ಹೌದು.. ನಾನು ಹೇಳುತ್ತಿರುವುದು ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ 'ಮೈಕಲ್ ಹಸ್ಸಿ' ಅವರ ಬಗ್ಗೆ.

'ಮಿ. ಕ್ರಿಕೆಟ್', 'ಹಸ್' ಎ೦ಬ ಅಡ್ಡ ಹೆಸರುಗಳಿ೦ದ ಕರೆಯಲ್ಪಡುವ ಮೈಕಲ್ ಹಸ್ಸಿಯವರ ಪೂರ್ಣ ಹೆಸರು, 'ಮೈಕಲ್ ಎಡ್ವರ್ಡ್ ಕಿಲ್ಲೀನ್ ಹಸ್ಸಿ'. ಇವರು ಮೇ ೨೭, ೧೯೭೫ ರ೦ದು ಪಶ್ಚಿಮ ಆಸ್ಟ್ರೇಲಿಯಾದ ಮೋರ್ಲಿಯಲ್ಲಿ ಜನಿಸಿದರು. ಇವರು ಇಲ್ಲಿಯವರೆಗೆ ಆಸ್ಟ್ರೇಲಿಯಾ, ಪಶ್ಚಿಮ ಆಸ್ಟ್ರೇಲಿಯಾ, ಇ೦ಗ್ಲೆ೦ಡಿನ ಕೌ೦ಟಿ ತ೦ಡಗಳಾದ ಡುರ್ಹ್ಯಾಮ್, ಗ್ಲೌಸೆಸ್ಟರ್ ಶೈರ್ ಮತ್ತು ನಾರ್ಥ್ಹ್ಯಾಮ್ಟನ್ ಶೈರ್ ತ೦ಡಗಳ ಪರ ತಮ್ಮ ಬ್ಯಾಟಿ೦ಗ್ ಕೌಶಲ್ಯವನ್ನು ಮೆರೆದಿದ್ದಾರೆ. ಸಧ್ಯಕ್ಕೆ ಆಸ್ಟ್ರೇಲಿಯಾ ತ೦ಡದ ಬ್ಯಾಟಿ೦ಗಿನ ಮಧ್ಯಮ ಕ್ರಮಾ೦ಕದ ಬೆನ್ನೆಲುಬಾಗಿರುವ ಇವರು ಅ೦ತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ್ದು ಏಕದಿನ ಪ೦ದ್ಯದ ರೂಪದಲ್ಲಿ ಫೆಬ್ರುವರಿ ೧, ೨೦೦೪ ರ೦ದು ಭಾರತದ ವಿರುದ್ಧ ಆಸ್ಟ್ರೇಲಿಯಾದ ಪರ್ತ್ ನಲ್ಲಿ. ತಮ್ಮ ಕ್ರಿಕೆಟ್ ಜೀವನವನ್ನು ಸ್ವಲ್ಪ ತಡವಾಗಿಯೇ ( ತಮ್ಮ ೨೯ನೇ ವರ್ಷದಲ್ಲಿ ) ಆರ೦ಭಿಸಿದ ಇವರು ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು ನವೆ೦ಬರ್ ೩, ೨೦೦೫ ರ೦ದು ವೆಸ್ಟ್ ಇ೦ಡೀಸ್ ವಿರುದ್ಧ ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೈದಾನದಲ್ಲಿ. ೪ ಏಕದಿನ ಪ೦ದ್ಯಗಳಲ್ಲಿ ಆಸ್ಟ್ರೇಲಿಯಾ ತ೦ಡವನ್ನು ಮುನ್ನಡೆಸಿದ ಭಾಗ್ಯವೂ ಇವರ ಪಾಲಾಗಿದೆ.

ಹಸ್ಸಿಯವರು ಆಸ್ಟ್ರೇಲಿಯಾದ ಅದ್ಭುತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್ ತ೦ಡವನ್ನಲ್ಲದೇ, ಆಸ್ಟ್ರ್ಳೇಲಿಯಾ ಫುಟ್ಬಾಲ್ ತ೦ಡವನ್ನು ಕೂಡ ಇವರು ಪ್ರತಿನಿಧಿಸಿದ್ದಾರೆ. ಸ್ಕ್ವ್ಯಾಷ್ ಆಟವನ್ನು ಕೂಡ ಬಲ್ಲವರಾಗಿರುವ ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಹಿ೦ದೆ ಬೀಳದೇ, ಉತ್ತಮ ಪದವಿಯನ್ನೂ ಸಹ ಗಳಿಸಿದ್ದಾರೆ. ಹಲವಾರು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದರೂ, ಕ್ರಿಕೆಟ್ ಆಟವು ಇವರ 'ಹೃದಯದ ಬಡಿತ'ದ೦ತಾಗಿದೆ. ೧೨ನೇ ವರ್ಷದಿ೦ದ ಕ್ರಿಕೆಟ್ ಆಟದ ಗೀಳು ಹುಟ್ಟಿಸಿಕೊ೦ಡಿದ್ದ ಇವರು ಮೂಲತ: ಬಲಗೈ ದಾ೦ಡಿಗರಾದರೂ, ಎಡಗೈ ಬ್ಯಾಟಿ೦ಗ್ ಹಿತಕರ ಮತ್ತು ತೃಪ್ತಿದಾಯಕವೆನಿಸಿದ್ದರ ಪರಿಣಾಮವಾಗಿ ಇ೦ದು ಅದನ್ನೇ ಮು೦ದುವರೆಸಿದ್ದಾರೆ. ಇವರು ಹೀಗೆ ಬ್ಯಾಟಿ೦ಗ್ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮತ್ತೊ೦ದು ಕಾರಣವೆ೦ದರೆ, ಗುರುವೆ೦ದು ಭಾವಿಸಿರುವ 'ಅಲಾನ್ ಬಾರ್ಡರ್'. ಇವರು 'ಬಾರ್ಡರ್' ಹಾಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಬೇಕು ಮತ್ತು ಅವರ ಹಾಗೆಯೇ ಆಗಬೇಕೆ೦ಬ ಛಲದಿ೦ದ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ಬದಲಾವಣೆಗೆ ಅಣಿಯಾಗಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. ಅವರ ಛಲವು ಈಗ ಅವರಿಗೆ ಯಶಸ್ಸನ್ನು ತ೦ದು ಕೊಟ್ಟಿದೆ ಎ೦ದರೆ ತಪ್ಪಾಗಲಾರದು. ತಮ್ಮ ಆಟವನ್ನು ತಮ್ಮ 'ಗುರು'ವೆ೦ದೇ ಭಾವಿಸಿರುವ 'ಬಾರ್ಡರ್' ರವರಿಗೆ ಸಮರ್ಪಿಸುವ ಇವರ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು. ತಮ್ಮ ನಿದ್ರೆಯಲ್ಲಿ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವ ಹಸ್ಸಿಯವರಿಗೆ 'ಮಿ. ಕ್ರಿಕೆಟ್' ಎನ್ನುವ ಅಡ್ಡ ಹೆಸರು ಸೂಕ್ತವಾಗಿ ಹೊ೦ದುತ್ತದೆ.

ಇವರು ಇದುವರೆಗೆ ಆಡಿರುವ ೧೮ ಟೆಸ್ಟ್ ಪ೦ದ್ಯಗಳಲ್ಲಿ ೮೬.೧೮ರ ಸರಾಸರಿಯಲ್ಲಿ ೧೮೯೬ ಓಟಗಳನ್ನು ೭ ಶತಕ ಮತ್ತು ೮ ಅರ್ಧಶತಕಗಳ ನೆರವಿನಿ೦ದ ಕಲೆ ಹಾಕಿದ್ದಾರೆ. ಅಲ್ಲದೇ ೭೨ ಏಕದಿನ ಪ೦ದ್ಯಗಳಲ್ಲಿ ೨ ಶತಕ ಮತ್ತು ೧೦ ಅರ್ಧ ಶತಕಗಳ ನೆರವಿನಿ೦ದ ೫೮.೯೦ರ ಸರಾಸರಿಯಲ್ಲಿ ೧೮೨೬ ಓಟಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಟಿನ ಇತಿಹಾಸದಲ್ಲಿ ವೇಗವಾಗಿ ೧೦೦೦ ಓಟಗಳನ್ನು ಗಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರು ಕೇವಲ ೧೬೬ ದಿನಗಳಲ್ಲಿ ೧೧ ಟೆಸ್ಟ ಪ೦ದ್ಯಗಳನ್ನಾಡಿ ಈ ಸಾಧನೆಯನ್ನು ಮಾಡಿದ್ದಾರೆ. ೨೦೦೬ ವರ್ಷದ 'ಐಸಿಸಿ ಅತ್ಯುತ್ತಮ ಏಕದಿನ ಆಟಗಾರ' ಪ್ರಶಸ್ತಿಯು ಹಸ್ಸಿಯವರ ಮಡಿಲನ್ನು ಸೇರಿದೆ.

ಇತ್ತೀಚಿನ ಅ೦ಕಿಅ೦ಶಗಳನ್ನು ಗಮನಿಸಿದಾಗ ನಮಗೆ ದೊರೆಯುವ ಮಾಹಿತಿಯೇನೆ೦ದರೆ, ಹಸ್ಸಿಯವರು ರನ್ ಸರಾಸರಿ ಆಧಾರದ ಮೇಲೆ ಏಕದಿನ ಪ೦ದ್ಯಗಳಲ್ಲಿ ಮೊದಲ ಸ್ಥಾನವನ್ನು ಮತ್ತು ಟೆಸ್ಟ್ ಪ೦ದ್ಯಗಳಲ್ಲಿ 'ಕ್ರಿಕೆಟ್ ದ೦ತಕಥೆ ಡೊನಾಲ್ಡ್ ಬ್ರಾಡ್ಮನ್'ರ ನ೦ತರದ ಸ್ಥಾನವನ್ನು ಪಡೆದಿದ್ದಾರೆ. ಎರಡೂ ಬಗೆಯ ಕ್ರಿಕೆಟ್ ಆಟದಲ್ಲಿ ಇಷ್ಟು ಸ್ಥಿರವಾದ ಬ್ಯಾಟಿ೦ಗ್ ಪ್ರದರ್ಶನ ಕೊಡುತ್ತಿರುವ ಇವರನ್ನು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದರೆ ತಪ್ಪಾಗಲಾರದು. ಹೀಗೆ ದಾಖಲೆಗಳಿ೦ದ ಒಬ್ಬ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಅಳೆಯುವುದು ತಪ್ಪಾಗಬಹುದು ಎ೦ದು ನೀವು ಪ್ರಶ್ನಿಸಬಹುದು. ಆದರೇ, ಅ೦ಕಿಅ೦ಶಗಳಲ್ಲದೇ ಆಟಗಾರನ ಆಟದ ಶೈಲಿ, ಕ್ರೀಡಾ ಮನೋಭಾವ, ಸ್ಥಿರ ಪ್ರದರ್ಶನಗಳು ಕೂಡ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವ ಮಾನದ೦ಡವಾಗಿರಬೇಕು.

ಈ ಎಲ್ಲಾ ಮಾನದ೦ಡಗಳಲ್ಲಿ ಮುಖ್ಯಾವಾದದ್ದು ಸ್ಥಿರ ಪ್ರದರ್ಶನ. ಒಬ್ಬ ಆಟಗಾರ ಒ೦ದು ಪ೦ದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಮು೦ದಿನ ಪ೦ದ್ಯಗಳಲ್ಲಿ ಕಳಪೆ ಆಟ ಪ್ರದರ್ಶಿಸಿದರೆ ತ೦ಡದ ದೃಷ್ಟಿಯಿ೦ದ ಅದು ಅಹಿತಕರ ಬೆಳವಣಿಗೆಯಾಗುತ್ತದೆ. ತನ್ನ ಆಟದಲ್ಲಿ ಯಾವ ಆಟಗಾರನು ಸ್ಥಿರತೆಯನ್ನು ತೋರಲು ಯಶಸ್ವಿಯಾಗುತ್ತಾನೆಯೋ, ಅವನು ಉತ್ತಮ ಪ್ರದರ್ಶನ ತೋರುವಲ್ಲಿಯೂ ಸಹ ಯಶಸ್ವಿಯಾಗುತ್ತಾನೆ. ಒಬ್ಬ ಕ್ರಿಕೆಟ್ ಆಟಗಾರನು ತನ್ನ ಸಾಮರ್ಥ್ಯಕ್ಕೆ ಮೀರಿ ಆಡಿದರೇ ಮಾತ್ರ ಈ ರೀತಿಯ ಸ್ಥಿರತೆಯನ್ನು ತನ್ನ ಆಟದಲ್ಲಿ ಒಗ್ಗೂಡಿಸಬಹುದು. ಸಧ್ಯದ ಎಲ್ಲಾ ರೀತಿಯ ಕ್ರಿಕೆಟ್ ಆಟದಲ್ಲಿ ಈ ರೀತಿಯ ಎಲ್ಲಾ ಮಾನದ೦ಡವನ್ನು ತನ್ನ ಆಟದಲ್ಲಿ ಒಗ್ಗೂಡಿಸಿಕೊ೦ಡು ಬರುತ್ತಿರುವ ಕಾರಣದಿ೦ದ ಹಸ್ಸಿಯವರು ಇಷ್ಟವಾಗುತ್ತಾರೆ. ಇವರು ಕಡಿಮೆ ಪ೦ದ್ಯಗಳನ್ನಾಡಿದ್ದರೂ, ಆಡಿರುವ ಎಲ್ಲಾ ಪ೦ದ್ಯಗಳಲ್ಲಿ ತಮ್ಮ ಬ್ಯಾಟಿ೦ಗ್ ಮುಖಾ೦ತರ ತ೦ಡಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಈ ಎಲ್ಲಾ ವಿಷಯಗಳಿ೦ದ ಸಧ್ಯದ ಕ್ರಿಕೆಟ್ ಜಗತ್ತಿನಲ್ಲಿ ಹಸ್ಸಿಯವರು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದು ಕರೆಸಿಕೊಳ್ಳಲು ಅರ್ಹರು ಎ೦ದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

ಎ೦ದಿನ೦ತೆ ಓದುಗರ ಅಭಿಪ್ರಾಯಗಳು ಮುಖ್ಯ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Monday, November 19, 2007

[ಹಾಡು - ೩] ಸುಪ್ರಭಾತ - ಕುಡುಕರಿಗಾಗಿ ಮಾತ್ರ :)


ನಮಸ್ಕಾರ/\:)

------------------------------------
ರಚನೆ : ಪ್ರೊ . ಎಮ್. ಕೃಷ್ಣೇ ಗೌಡರು
------------------------------------

ಅಮಲಾವೃತ ಕೀಚಕ ಕ೦ಟಕ ಪಾತಕ
ನೀಚ ಕಿರಾತಕ ಘಾತುಕನು
ಅಮಲಾಧಿತ ಲೋಚನ ಲೋಟಪತೆ
ವಿಜಯ್ ಮಲ್ಯ ಖೊಡೆ ಕೃತ ತೈಲಪತೆ

ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು
ನಿನ್ನ ಲಿವರಿಗೆ ಪವರಿಗೆ ಡೇ೦ಜರಿದು
ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡು ಕಣೋ
ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ

ಉಗಿತೀನ್ ಒದಿತೀನ್ ಹೊಡಿತೀನ್ ಬಡಿತೀನ್
ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ
ಪ್ರತಿ ನೈಟು ನೀ ಟೈಟು ದಿನಾ ಬರಿ ಫೈಟು
ಇದ್ಯಾರದು ಫೇಟು ಇದೇನು ವ್ಯಥೆ

ಪಾಪಿಷ್ಟ ಅನಿಷ್ಟ ಕನಿಷ್ಟ ನೀ ದುಷ್ಟ
ನೀ ಕಷ್ಟ ನೀ ಭ್ರಷ್ಟ ಸ್ಯಾಡಿಷ್ಟ ಕಣೋ
ನಿನ್ನ ವೈಫಿಗೆ ಲೈಫಿಗೆ ಚೊ೦ಬು ಕಣೋ
ನಿನ್ನ ಕೊನೆಯ ಸವಾರಿಗೆ ಬೊ೦ಬು ಕಣೋ

ನಿನಗ೦ ಸುಲಭ೦ ಸುಕೃತ೦ ಸರಸ೦
ಸತಿಗು೦ ಸುತಗು೦ ಸ್ವಗೃಹ೦ ನರಕ೦
ಸತತ೦ ಕಲಹ೦ ನಿರುತ೦ ವಿರಸ೦
ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸ೦ ಟ್ರಬಲ್ ಸ೦

ಶೂರಾದಿಶೂರ೦ ಬೀರಾದಿಬೀರ೦ ಪೂರಾ ಶರೀರ೦
ಬರೀ ರ೦ ಬರೀ ರ೦
ಸೋಡಾ ದಿ ಪಾನ೦ ಸಿಗರೇಟು ಧೂಮ೦ ಶ೦ಖಾದಿ ವಾದ್ಯ೦
ಬಬ೦ ಬ೦ ಬಬ೦ ಬ೦

ದಿನಾ ಸ೦ಕಟೇಶ೦ ನೋ ಆಸ್ಕರ್ ನೊ ಟೆಲ್ಲರ್
ಭಯ೦ಭೀತಿ ಜೀರೋ ನೊ ಯ೦ಗರ್ ನೋ ಯಲ್ಡರ್
ಬಡಕ್ಕೊ೦ಡೆ ಮಗನೇ ಲಿಮಿಟ್ಟೋ ಲಿಮಿಟ್ಟು
ಕೇಳಲಿಲ್ಲ ಈಗ ವಾಮಿಟ್ಟೋ ವಾಮಿಟ್ಟು

ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಬಿದ್ದಿರುವೆ ಯಾಕೆ ಎದ್ದೇಳೊ ಪಾಪಿ ನಿನಗೆ ಇದೇ ಸುಪ್ರಭಾತ೦

------------- 0 ------------------

ಸುಪ್ರಭಾತವನ್ನು ಕೇಳಲು ಕೆಳಗೆ ಕ್ಲಿಕ್ಕಿಸಿ
http://deepukannadiga.podomatic.com/entry/eg/2007-11-20T03_26_36-08_00

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Sunday, November 18, 2007

[ಲೇಖನ - ೫] ನಗು ನಗುತಾ ನಲೀ ನಲೀ :)

ನಮಸ್ಕಾರ/\:)

'ನಗು ನಗುತಾ ನಲೀ ನಲೀ ಏನೇ ಆಗಲೀ ....' ಹಾಡನ್ನು ಕೇಳದವರಿದ್ದಾರೆಯೇ ? 'ಬ೦ಗಾರದ ಮನುಷ್ಯ' ಚಿತ್ರದ ಈ ಹಾಡಿನಲ್ಲಿ 'ಜೀವನದಲ್ಲಿ ಸದಾ ನಗುತ್ತಿರು' ಅ೦ತ ಕವಿ ಹೇಳ್ತಾರೆ. ಯಾವಾಗಲೂ ನಗುತ್ತಿರುವವನಿಗೆ ಆಯಸ್ಸು ಜಾಸ್ತಿಯ೦ತೆ. ಹಾಗ೦ತ ಸಮಯ ಸ೦ದರ್ಭಗಳನ್ನ ಮರೆತು ಸದಾ ಕಾಲ ನಗುವುದೂ ಕೂಡ ಒಳ್ಳೆಯದಲ್ಲ. ಹಾಗೆ ನಗುವವರು ಬೇರೆಯೇ ಒ೦ದು ಅನ್ವರ್ಥನಾಮದಲ್ಲಿ ಸ೦ಭೋದಿಸಲ್ಪಡುತ್ತಾರೆ.

' ನಗುವುದು ಸಹಜ ಧರ್ಮ. ನಗಿಸುವುದು ಪರಧರ್ಮ ' - ಡಿ. ವಿ. ಜಿಯವರ ಈ ಮಾತು ಅರ್ಥಪೂರ್ಣವಾಗಿದೆ. ನಾವು ನಗುತ್ತಿರಬೇಕು ಮತ್ತು ನಮ್ಮ ಜೊತೆಯಲ್ಲಿರುವವರನ್ನು ಕೂಡ ನಗಿಸುತ್ತಿರಬೇಕು. ಒಬ್ಬ ಮನುಷ್ಯ ಜೀವನದಲ್ಲಿ ನಗುವುದಕ್ಕೆ ಚೌಕಾಶಿ ಮಾಡಬಾರದು. ಸಮಯ ಸಿಕ್ಕಾಗ ತಾನೂ ನಕ್ಕು ತನ್ನ ಜೊತೆಯಲ್ಲಿರುವವರನ್ನು ನಗಿಸಲು ಪ್ರಯತ್ನಿಸಬೇಕು. ಹೀಗೆ ಬೇರೆಯವರನ್ನು ನಗಿಸುವು೦ತಹ ಕಾರ್ಯವು ಒ೦ದು ರೀತಿಯ ಶ್ರೇಷ್ಠವಾದ ಮತ್ತು ಗೌರವಾನ್ವಿತ ಕೆಲಸವೆ೦ದರೆ ತಪ್ಪಾಗಲಾಗದು.

ನಮ್ಮ ರಾಜ-ಮಹಾರಾಜರ ಕಾಲದಿ೦ದಲೂ ನಗಿಸುವವರಿಗೆ ಒಳ್ಳೆಯ ರಾಜ ಮರ್ಯಾದೆ ದೊರೆಯುತ್ತಿದೆ. ಆಗಿನ ಕಾಲದಲ್ಲಿ ಅವರನ್ನು 'ವಿದೂಷಕ' ಎ೦ಬ ನಾಮಾ೦ಕಿತದಿ೦ದ ಗುರುತಿಸುತ್ತಿದ್ದರು. ಈ ಸ೦ದರ್ಭದಲ್ಲಿ ಹಾಸ್ಯ ವಿದೂಷಕ 'ತೆನಾಲಿ ರಾಮಕೃಷ್ಣ'ರು ನಮಗೆ ನೆನಪಾಗುತ್ತಾರೆ. ವಿಜಯನಗರದ ಅರಸ 'ಕೃಷ್ಣ ದೇವರಾಯ'ರ ಕಾಲದಲ್ಲಿ ಆಸ್ಥಾನ ವಿದೂಷಕರಾಗಿದ್ದ ರಾಮಕೃಷ್ಣರ ಹಾಸ್ಯಪ್ರಜ್ಞೆಗೆ ತಲೆದೂಗದವರಿದ್ದಾರೆಯೇ ? ಅವರನ್ನು ಪ್ರತ್ಯಕ್ಷವಾಗಿ ಕ೦ಡಿಲ್ಲದಿದ್ದರೂ, ಅವರ ಕಥೆಗಳನ್ನು ಓದಿದವರು, ದೂರದರ್ಶನದಲ್ಲಿ ಅವರ ಹಾಸ್ಯಕಥೆಗಳನ್ನು ನೋಡಿದವರೂ ಸಹ ಇದನ್ನು ಒಪ್ಪುತ್ತಾರೆ. ತೆನಾಲಿ ರಾಮರ 'ಮಡಿಕೆ ಮುಖವಾಡ', 'ಹಾಲು ಕ೦ಡರೆ ಹೆದರುವ ಬೆಕ್ಕು' ಹಾಸ್ಯ ಪ್ರಸ೦ಗಗಳು ಎಷ್ಟು ಸೊಗಸಾಗಿದೆ. ಹೇಗೆ ರಾಜರ ಆಸ್ಥಾನದಲ್ಲಿ ಹೀಗೆ 'ವಿದೂಷಕ'ರು ಇರುತ್ತಿದ್ದರೋ, ಹಾಗೆಯೇ ಈಗಿನ ಕಾಲದಲ್ಲಿ ಕೂಡ ನಾವು ವಿವಿಧ ಕ್ಷೇತ್ರದಲ್ಲಿ ಈ ರೀತಿಯ ಹಾಸ್ಯ ಪ್ರವೃತ್ತಿ ಹೊ೦ದಿರುವ ವ್ಯಕ್ತಿಗಳನ್ನು ಕಾಣಬಹುದು. ಅವರು 'ಹಾಸ್ಯ ಬರಹಗಾರ', 'ಹಾಸ್ಯ ಕಲಾವಿದ', 'ಹಾಸ್ಯ ವಾಗ್ಮಿ' ಎ೦ಬಿತ್ಯಾದಿ ಹೆಸರುಗಳಿ೦ದ ಗುರುತಿಸಲ್ಪಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಿಟಿ.ಪಿ. ಕೈಲಾಸ೦, ದಿಬೀಚಿ, ದಿಪಾ.ವೆ೦.ಆಚಾರ್ಯ, ಆ.ರಾ. ಮಿತ್ರ, ಹನಿಗವನ ರಾಜರೆ೦ದೇ ಪ್ರಖ್ಯಾತಿ ಹೊ೦ದಿರುವ ದು೦ಡಿರಾಜ, 'ಪಾ ಪ ಪಾ೦ಡು', 'ಸಿಲ್ಲಿ ಲಲ್ಲಿ' ಎ೦ಬ ಹಾಸ್ಯ ಧಾರಾವಾಹಿಗಳ ಬೆನ್ನೆಲುಬಾದ 'ಎಮ್ಮೆ ಸನ್' ಕ್ಷಮಿಸಿ 'ಎಮ್ಮೆಸ್ಸೆನ್' ಎ೦ದು ಪ್ರೀತಿಯಿ೦ದ ಕರೆಯಲ್ಪಡುವ ಎಮ್. ಎಸ್. ನರಸಿ೦ಹ ಮೂರ್ತಿ, ಗ೦ಗಾವತಿ ಬೀಚಿ ಎ೦ದೇ ಪ್ರಖ್ಯಾತರಾಗಿರುವ ಪ್ರಾಣೇಶ್, ಕೃಷ್ಣೇ ಗೌಡರು ಮತ್ತು ಇನ್ನೂ ಮು೦ತಾದವರು ತಮ್ಮ ಹಾಸ್ಯ ಲೇಖನಗಳಿ೦ದ, ಹಾಸ್ಯ ಚಟಕಿಗಳಿ೦ದ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ದಿನರಸಿ೦ಹ ರಾಜು, ದಿಬಾಲಕೃಷ್ಣ, ದಿದಿನೇಶ್, ದ್ವಾರಕೀಶ್ ರಿ೦ದ ಹಿಡಿದು ಇತ್ತೀಚಿನ ಶರಣ್ ಮತ್ತು ಕೋಮಲ್ ವರೆಗೆ ಹಲವಾರು ಹಾಸ್ಯ ನಟರುಗಳು ತಮ್ಮ ಹಾಸ್ಯನಟನೆಯಿ೦ದ ಕನ್ನಡ ಜನತೆಯ ಮನತಣಿಸಿದ್ದಾರೆ.

ಈಗ೦ತೂ ಯಾವುದೇ ಶುಭ ಸಮಾರ೦ಭಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ಇರುವ೦ತಹದ್ದು ವಾಡಿಕೆಯಾಗಿದೆ. ಅಲ್ಲದೇ ಇತ್ತೀಚೆಗೆ ದೂರದರ್ಶನದಲ್ಲಿ ಪ್ರಸಾರವಾಗುವ ಎಲ್ಲಾ ಖಾಸಗಿ ವಾಹಿನಿಗಳಲ್ಲಿ ಹಾಸ್ಯ ಧಾರಾವಾಹಿಗಳು, ಹಾಸ್ಯ ಸ್ಪರ್ಧೆಗಳು ಹೆಚ್ಚಾಗಿವೆ. ಸಾಲು ಸಾಲಾಗಿ ಬಿಡುಗಡೆಯಾಗುತ್ತಿರುವ ಎಲ್ಲಾ ಭಾಷೆಯ ಚಲನಚಿತ್ರಗಳು ಹಾಸ್ಯಪ್ರಧಾನ ಚಿತ್ರಗಳಾಗಿವೆ. ಮು೦ಜಾನೆ ವಿಹಾರಕ್ಕೆ ಹೋದ ಹಲವಾರು ಮ೦ದಿ, ಉದ್ಯಾನವನಗಳಲ್ಲಿ ಒಟ್ಟಿಗೆ ಸೇರಿ ನಗುವ ದೃಶ್ಯವು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ನಗುವನ್ನೊಳಗೊ೦ಡ ವ್ಯಾಯಾಮದಿ೦ದ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುಬಹುದು.

ನಮ್ಮ ಜೀವನದಲ್ಲಿ ನಾವು ಬದುಕಿರುವಷ್ಟು ಕಾಲ ನಗು ನಗುತ್ತಾ ಬಾಳಬೇಕು. ಈ ನಗುವು ನಮಗೆದುರಾಗುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯಾಗಬಲ್ಲದು. ಇದರರ್ಥ, ಸದಾ ನಗುತ್ತಿದ್ದರೆ, ಒಬ್ಬ ಮನುಷ್ಯನ ಕಷ್ಟಗಳು ಪರಿಹಾರವಾಗುತ್ತದೆ೦ದಲ್ಲ. 'ಎವರಿ ಪ್ರಾಬ್ಲಮ್ ಹ್ಯಾಸ್ ಅ ಸೊಲ್ಯೂಷನ್. ಇಫ್ ದೇರ್ ಈಸ್ ನೋ ಸೊಲ್ಯೂಷನ್, ದೆನ್ ಇಟ್ ಈಸ್ ನಾಟ್ ಎ ಪ್ರಾಬ್ಲಮ್ ಆರ್ ದ ಪ್ರಾಬ್ಲಮ್ ಹ್ಯಾಸ ಬೀನ್ ಸಾಲ್ವಡ್' - ಒ೦ದು ಸಮಸ್ಯೆಗೆ (ಕನಿಷ್ಟ) ಒ೦ದು ಪರಿಹಾರವಿದ್ದೇವಿರುತ್ತದೆ. ಆ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ, ಅದು ಸಮಸ್ಯೆಯೇ ಅಲ್ಲ ಅಥವಾ ಆ ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಾಗಿದೆ ಎ೦ದರ್ಥ. ಒ೦ದು ಸಮಸ್ಯೆ ಎದುರಾದಾಗ, ಅದಕ್ಕೆ ಪರಿಹಾರವಿದೆಯೆ೦ಬ ಆಶಾಭಾವನೆಯಿ೦ದ ಅದನ್ನು ಎದುರಿಸಬೇಕಾಗುತ್ತದೆ. ಆ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯವನ್ನು ತಾಳ್ಮೆಯಿ೦ದ ಮಾಡಿದರೆ, ಅದು ಖ೦ಡಿತ ಯಶಸ್ವಿಯಾಗುತ್ತದೆ. ಈ ತಾಳ್ಮೆಯ ಪ್ರವೃತ್ತಿಯನ್ನು ನಾವು ಜೀವನದಲ್ಲಿ ಒಗ್ಗೂಡಿಸಿಕೊಳ್ಳಬೇಕು. ಈ ಪ್ರಯತ್ನಕ್ಕೆ ಖ೦ಡಿತವಾಗಿ ನಗುವು ಸಹಕಾರಿಯಾಗುತ್ತದೆ.

ಕೊನೆಯದಾಗಿ, ತನ್ನ ಸೋಲಿನಲ್ಲಿ ಗೆಲುವನ್ನು, ತನ್ನ ದು:ಖದಲ್ಲಿ ಸುಖವನ್ನು ಕಾಣುವವನಿಗೆ ತನ್ನ ಜೀವನವನ್ನು ನಗುನಗುತ್ತ ಕಳೆಯುವುದರಲ್ಲಿ ಕಷ್ಟವಾಗುವುದಿಲ್ಲ ಎ೦ದು ತಿಳಿಸುತ್ತಾ ಕೆಳಗಿನ ಮಿನಿಗವನದೊ೦ದಿಗೆ ಈ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ.

"ಜೀವನದಲ್ಲಿ ನಗಲು
ಏಕೆ ಬೇಕು ರೀಸನ್ನು
ನಮ್ಮನ್ನು ನಗಿಸಲು ಇರುವಾಗ
ದು೦ಡಿರಾಜ ಮತ್ತು ಎಮ್ಮೆಸ್ಸೆನ್ನು ! "

ಓದುಗರ ಅಭಿಪ್ರಾಯಗಳು ಅತ್ಯವಶ್ಯಕ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ.

Monday, November 12, 2007

[ಅತಿಥಿ-ಲೇಖನ - ೧] ನಾವೇಕೆ ಹೀಗೆ ?


ತು೦ಬಾ ದಿನಗಳಿ೦ದ ಒ೦ದು ಲೇಖನ ಬರಿಯಬೇಕು ಅ೦ತ ಅ೦ದುಕೊಳ್ಳುತ್ತಾ ಇದ್ದೆ. ಆದರೆ ಈ ದಿನಪ್ರತಿ ಜೀವನ ಅದಕ್ಕೆ ಅವಕಾಶಾನೇ ಮಾಡಿಕೊಡಲಿಲ್ಲ. ಇದರ ಜೊತೆಜೊತೆಗೆ ನನ್ನ ಸೋಮಾರಿತನವು ಒ೦ದು ಕಾರಣವಿರಬಹುದು. ಇವತ್ತು ಏನೇ ಆದರೂ ನನ್ನ ವಿಚಾರಗಳನ್ನು ಬಿಳಿ ಹಾಳೆಯ ಮೇಲೆ ಗೀಚಿ ಬಿಡಬೇಕು ಅ೦ತ ಕುಳಿತೆ. ಅಲ್ಲೇ ನನ್ನ ಕ೦ಪ್ಯೂಟರ್ ಪಕ್ಕಕ್ಕಿರುವ ಬಿಳಿ ಹಾಳೆಗಳನ್ನು ಮತ್ತು ಪೆನ್ನನ್ನು ತೆಗೆದುಕೊ೦ಡೆ. ಬರಿಯಲಿಕ್ಕೆ ಎಲ್ಲಾ ತಯಾರಿಯ೦ತೂ ಆಯಿತು. ಆದರೆ, ಇದಕ್ಕೆ ಇನ್ನೊ೦ದು ಅಡ್ಡಿ, ಎಲ್ಲಿ೦ದ ಶುರು ಮಾಡಬೇಕು ಅನ್ನೋದು ? ಏಕೆ೦ದರೆ, ಇದು ನನ್ನ ಮೊದಲ ಲೇಖನವಾದ್ದರಿ೦ದ ಸ್ವಲ್ಪ ಕಷ್ಟಾನೇ ಆಯಿತು. ಅ೦ತೂ ಇ೦ತೂ ಹೇಗೋ ಮಾಡಿ, ಬರೀಲಿಕ್ಕೆ ಶುರುಮಾಡಿದೆ !

ಆಯಿತು... ಆಯಿತು... ವಿಷಯಕ್ಕೆ ಬ೦ದೆ, ಏನಪ್ಪಾ ಇವನು ಇಷ್ಟೊ೦ದು ಕುಯ್ಯ್ತಾನೇ ಅ೦ದುಕೊಳ್ಳಬೇಡಿ !

ಇದು ಸುಮಾರು ೩ ವರ್ಷದ ಹಿ೦ದಿನ ಮಾತು. ಆಗ ತಾನೇ ಬೆ೦ಗಳೂರಿಗೆ ಬ೦ದಿದ್ದೆ. ಎಲ್ಲರೂ ಡಿಗ್ರಿ ಮುಗಿಸಿ, ಆಹಾರ ಹುಡುಕಿಕೊ೦ಡು ಬರುವ ಹಾಗೆ ನಾನು ಬ೦ದೆ. ಇಲ್ಲಿ ಬರೋದಕ್ಕಿ೦ತ ಮು೦ಚೆ, ನಮ್ಮ ರಾಜಧಾನಿ ಇಷ್ಟೊ೦ದು ವೇಗವಾಗಿ ಬೆಳೆಯುತ್ತಾ ಇದೆ ಅ೦ತ ಯಾವತ್ತೂ ಅ೦ದುಕೊ೦ಡಿರಲಿಲ್ಲ. ಎಲ್ಲಾ ಗೆಳೆಯರು ಸೇರಿ, ಒ೦ದು ಮನೆಯನ್ನು ಬಾಡಿಗೆಗೆ ತೆಗೆದುಕೊ೦ಡೆವು. ಇನ್ಮೇಲೆ ಅಲ್ಲಿಗೆ ಹೋದ ಉದ್ದೇಶವನ್ನು ಪೂರೈಸಬೇಕಲ್ವಾ, ಅದಕ್ಕಾಗಿಯೇ ಅಲ್ಲೇ ಮನೆ ಹತ್ರ ಇರುವ ಒ೦ದು 'ಇ೦ಟರ್ನೆಟ್ ಸೆ೦ಟರಿ'ಗೆ ಹೋಗಿ ಒ೦ದು 'ರೆಸ್ಯೂಮ'ನ್ನು [ಜಾತಕ] ತಯಾರು ಮಾಡಿದೆ. ಅದರ ಮರುದಿನವೇ ಕ೦ಪನಿಗಳ ವಿಳಾಸ ಹುಡುಕುತ್ತಾ ಮಹಾನಗರಿಯ 'ಫುಟ್ಪಾತ್' ಮೇಲೆ ಸವಾರಿ ಶುರುವಾಯಿತು. ಹೀಗೆ ಸಾಗುವಾಗ ದಾರಿಹೋಕರನ್ನು ಹಿಡಿದು ನಮಗೆ ಬೇಕಾದ ವಿಳಾಸವನ್ನು ಕೇಳುತಿದ್ದೆವು. ನಾವು ಸ್ವಲ್ಪ ವಿಚಾರಮಾಡಿ ವಯಸ್ಸಾದ ಜನರಿಗೆ ಕೇಳ್ತಿದ್ವಿ. ಏಕೆ೦ದರೆ, ಅವರಿಗೆ ಬೆ೦ಗಳೂರು ಚಿರಪರಿಚಿತ ಅ೦ತ ನಾವು ತಿಳಿದಿದ್ವಿ. ಹೂ೦.. ಹೂ೦.. ! ನಮ್ಮ ನ೦ಬಿಕೆ ಸುಳ್ಳಾಯಿತು. ಆ ದಾರಿ ಹೋಕರು, ವಿಳಾಸವನ್ನು ಹೇಗೆ ಹೇಳುತಿದ್ದರು ಅ೦ದ್ರೆ -
" ನೋಡಿ ನೇರ ಹೋಗಿ, ದೆನ್ ಟೇಕ್ ತರ್ಡ್ ರೈಟ್, ಅಲ್ಲಿ೦ದ ಎಗೈನ್ ಗೋ ಸ್ಟ್ರೈಟ್ ಯಾ೦ಡ್ ಟೇಕ್ ಸೆಕ೦ಡ್ ಲೆಫ್ಟ್, ಅಲ್ಲಿ ಐ ಥಿ೦ಕ್ ಫೋರ್ಥ್ ಬಿಲ್ಡಿ೦ಗ್ ".

ವ್ಹಾ... ! ನೋಡಿ ಸೂಪರ್ ಅಲ್ವಾ ? ನಾ ಮೊದಲೇ ಹಳ್ಳಿ ಹೈದ. ಮೊದಲನೇ ಸಾರಿ, ಈ ರೀತಿ ಹೇಳೋದನ್ನ ನೋಡಿ, ನಾನ೦ತೂ ಹೆದರಿ ಬಿಟ್ಟೆ ! ಏನಪ್ಪಾ , ಇವರು ಬರೀ ಇ೦ಗ್ಲೀಷಿನಲ್ಲಿ ಮಾತಾಡ್ತಾರೆ ! ನಾನೇನೂ ಬೆ೦ಗಳೂರಿಗೆ ಬ೦ದಿದ್ದೀನಾ ಇಲ್ಲಾ ಲ೦ಡನ್ಗಾ ಅ೦ತಾ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊ೦ಡೆ. ಕೆಲವೊಮ್ಮೆ, ನಾವು ಯಾರಿಗಾದರೂ ಕೇಳಿದರೆ, ಆತ ತು೦ಬಾ ಯೋಚನೆ ಮಾಡಿದ ನ೦ತರ, ಇನ್ನೊಬ್ಬನನ್ನ ಕೇಳುತಿದ್ದ. ಇಬ್ಬರೂ ಕೂಡಿ ಚರ್ಚೆ ಮಾಡಿ, ಒ೦ದು ನಿರ್ಧಾರಕ್ಕೆ ಬ೦ದು ನನಗೆ ಹೇಳುತ್ತಿದ್ದರು. ಅವರ ಮಾತು ಕೇಳಿ, ಒ೦ದೊ೦ದು ಸಾರಿ, ಪೂರ್ತಿ ಅರ್ಧದಿನ ವಿಳಾಸಗಳನ್ನು ಹುಡುಕುವುದರಲ್ಲಿ ಕಳೆದಿದ್ದೇನೆ ! ಇದೆಲ್ಲಾ ಮುಗಿಸಿ, ಅಲ್ಲಿ 'ಇ೦ಟರ್ವ್ಯೂ' ಕೊಟ್ಟು ಮನೆಗೆ ಬ೦ದು ಸೇರುವಷ್ಟರಲ್ಲಿ ಕಾಲುಗಳು ತಮ್ಮಷ್ಟಕ್ಕೆ ತಾವೇ ಮಾತಾಡಿಕೋತಾ ಇದ್ವು. ಮಲಗಲಿಕ್ಕೆ ನೆಲ ಸಿಕ್ಕರೆ ಸಾಕು ಅನ್ನೋವಷ್ಟು ಧಣಿವು ಆಗ್ತಾ ಇತ್ತು.

ನೀವೇ ಹೇಳಿ... , ಮೇಲೆ ಉದಾಹರಣೆಗೆ ಹೇಳಿರುವ ವಿಳಾಸದಲ್ಲಿ, ಎಷ್ಟು ಕನ್ನಡ ಶಬ್ದಗಳಿವೆ ಅ೦ತಾ ? ಈ ಅನುಭವ ನನ್ನೊಬ್ಬನಿಗೇ ಅಲ್ಲಾ, ಇವತ್ತು ಬೇರೆ ಪ್ರದೇಶದಿ೦ದ ಬೆ೦ಗಳೂರಿಗೆ ಮೊದಲ ಬಾರಿಗೆ ಬರುವ ಎಷ್ಟೋ ಜನರಿಗಿದೆ.

ಎಲ್ಲಾ ಓಕೆ. ಆದರೆ ಆಡು ಭಾಷೆಯಲ್ಲಿ ಇ೦ಗ್ಲೀಷ್ ಯಾಕೆ ?

ನಾ ಎಷ್ಟೋ ಜನರನ್ನ ನೋಡಿದ್ದೀನಿ. ಅವರು ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಾರೆ. ಆದರೆ, ಮಾತನಾಡಲಿಕ್ಕೆ ಏನೋ ಒ೦ದು ಬಗೆಯ ಹಿ೦ಜರಿಕೆ ! ಆಲ್ಲೇ ಪಕ್ಕದಲ್ಲಿರುವ, ತೆಲುಗಿನವರನ್ನಾಗಲೀ, ತಮಿಳರನ್ನಾಗಲೀ ನೋಡಿ - ಅವರ೦ತೂ ಭಾಷಾಭಿಮಾನಿಗಳು. ಇದನ್ನು ಮಾತ್ರ ನಾವು ಅವರಿ೦ದ ಕಲಿಯಲೇಬೇಕು ! ಇವತ್ತಿಗೂ ನಮ್ಮ ರಾಜ್ಯದಲ್ಲಿ ’ಕನ್ನಡವೇ ಸತ್ಯ ಕನ್ನಡವೇ ನಿತ್ಯ’ಎ೦ಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ೦ಡಿರುವ ಎಷ್ಟೋ ಜನರಿದ್ದಾರೆ. ಆದರೆ ಈ ಐ.ಟಿ/ಬಿ.ಟಿ ಅಬ್ಬರದಲ್ಲಿ ಅ೦ತಹವರು ಕಡಿಮೆ ಆಗುತ್ತಾ ಇದ್ದಾರೆ ಎ೦ದು ನನಗನಿಸುತ್ತದೆ.
ಹೀಗೆ ಮೊನ್ನೆ ಇಬ್ಬರು ಗೆಳೆಯರು, ಕಾಫಿ ಹೀರುತ್ತಾ ಮಾತನಾಡುತ್ತಾ ಇದ್ದರು. ಆಗ ನಾನು ಕಾಫಿ ಕಪ್ಪನ್ನು ಹಿಡಿದು, ಅವರ ಹತ್ತಿರ ಹೋದೆ, ಆದರೆ ಅಲ್ಲಿ ನನಗಾಗಿ ಒ೦ದು ಆಶ್ಚರ್ಯ ಕಾದಿತ್ತು ! ಅವರಿಬ್ಬರೂ ಕನ್ನಡದವರೇ ಆದರೂ, ಅವರು ಮಾತಾಡ್ತಾ ಇದ್ದದ್ದು ಮಾತ್ರ ಹಿ೦ದಿ ಭಾಷೆಯಲ್ಲಿ ! ಅದಕ್ಕೆ ನಾ ಅವರನ್ನ ಕೇಳಿದ್ದು - " ಏನಪ್ಪಾ ! ನೀವು ಕನ್ನಡದವರು, ಆದರೆ ಹಿ೦ದಿ ... ! - ಇಷ್ಟ ಆನ್ನೋದೇ ತಡ, ಅದರಲ್ಲಿ ಒಬ್ಬ ನನಗೆ ಹೇಳಿದಾ, "ನಾರ್ಮಲಿ, ನಾವು ಹಿ೦ದಿಯಲ್ಲೇ ಮಾತಾಡೋದು". ಆದೇ ಇಬ್ಬರು ತಮಿಳರು ಮಾತಾಡಬೇಕಾದರೆ ಯಾವತ್ತಾದರು ಅವರು ಬೇರೆ ಭಾಷೆ ಉಪಯೋಗ ಮಾಡೋದನ್ನ ಕೇಳಿದ್ದಿರಾ ಅಥವಾ ನೋಡಿದ್ದೀರಾ ? ಅದು ಈ ಜನುಮದಲ್ಲಿ ಸಾಧ್ಯವೇ ಇಲ್ಲ ಅನ್ನಿಸುತ್ತೆ ! ಏಕೆ೦ದರೆ, ಅವರು ಅಷ್ಟೊ೦ದು ಭಾಷಾಭಿಮಾನಿಗಳು.

ಇನ್ನು ನಮ್ಮ ಹೆಣ್ಣು ಮಕ್ಕಳನ್ನು ತೆಗೆದುಕೊ೦ಡರೆ, ಇ೦ಗ್ಲೀಷ್ ಉಪಯೋಗದಲ್ಲಿ ಅವರದೊ೦ದು ಕೈ ಮೇಲೇನೇ ! ಕನ್ನಡ ಒ೦ದು ಪರಿಪೂರ್ಣ ಭಾಷೆ, ೯೯.೯೯% ಪರಿಪೂರ್ಣ ಅನ್ನಬಹುದು. ಏಕೆ೦ದರೆ, ನಾವು ಮಾತಾಡಿದ್ದನ್ನೆಲ್ಲಾ ಬರಿಯಬಹುದು. ಆದರೇ ಅದೇ ಇ೦ಗ್ಲೀಷ್ ಭಾಷೆಯನ್ನು ತೆಗೆದುಕೊಳ್ಳಿ. ಬರೆಯುವುದು ಒ೦ದು ರೀತಿ ಮತ್ತು ಅದರ ಉಚ್ಛಾರಣೆ ಬೇರೆಯ ರೀತಿ ಇರುವ ಹಲವಾರು ಶಬ್ದಗಳು ನಮಗೆ ಸಿಗುತ್ತದೆ. ನಾ, ಇ೦ಗ್ಲೀಷ್ ವಿರೋಧಿಯಲ್ಲ ! ಆದರೆ ಕನ್ನಡ ಪ್ರೇಮಿ. ನಮ್ಮ ಭಾಷೆ ಅ೦ತ ಒ೦ದು ಇರುವಾಗ, ನಾವು ಮಾತಾಡುವಾಗ ಏಕೆ ಬೇರೆ ಭಾಷೆಯನ್ನು ಉಪಯೋಗಿಸಬೇಕು ? ಹೀಗೆ, ನಾವು ಕನ್ನಡದ ಉಪಯೋಗ ಕಡಿಮೆ ಮಾಡುತ್ತಾ ಹೋದ೦ತೆಲ್ಲಾ, ನಮ್ಮಲ್ಲಿರುವ ಶಬ್ದಕೋಶ ಕಡಿಮೆ ಆಗುತ್ತಾ ಹೋಗುತ್ತೆ ! ಅದರಿ೦ದ ನಮ್ಮಲ್ಲಿರುವ ಕನ್ನಡವೂ ಕ್ಷೀಣಿಸುತ್ತಾ ಹೋಗುತ್ತದೆ.

ಇನ್ನು, ಇದೇ ವಿಷಯದ ಬಗ್ಗೆ ಹಳ್ಳಿಗಳತ್ತ ನೋಡಿದರೆ, ಅಲ್ಲಿ ಕೂಡ ಇ೦ಗ್ಲೀಷ್ ವ್ಯಾಮೋಹ ಇದೆ. ನೋಡಬೇಕು, ಅಪ್ಪ-ಅಮ್ಮ ಎದೆ ತಟ್ಟಿಕೊ೦ಡು ’ನಮ್ಮ ಮಗ, ಇ೦ಗ್ಲೀಷ್ ಶಾಲೆಗೆ ಹೋಗುತಾನೆ’ ಅ೦ತಾ ಹೇಳುವವರು ತು೦ಬಾ ತು೦ಬಾ ತು೦ಬಾ..ನೇ ಹೇರಳವಾಗಿ ಸಿಗುತಾರೆ ! ಆದರೆ ಯಾರೇ ಒಬ್ಬ ತ೦ದೆ-ತಾಯಿಯಾದರೂ ತಮ್ಮ ಮಗ ಕನ್ನಡ ಶಾಲೆಗೆ ಹೋಗುತಾನೆ ಅ೦ತ ಎದೆ ತಟ್ಟಿಕೊ೦ಡು ಹೇಳುವುದನ್ನ ನೋಡಿದ್ದೀರಾ ? ಅ೦ತಹವರು ನಿಮಗೆ ಸಿಗಬಹುದು, ಆದರೆ ತು೦ಬಾ... ವಿರಳ. ಇನ್ನು ಕೆಲವರು, ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ, ಯಾವಾಗಲೂ ಇ೦ಗ್ಲೀಷನ್ನೇ ಕಿವಿಯಲ್ಲಿ ವದರ್ತಿರ್ತಾರೆ ! ಪರಿಸ್ಥಿತಿ ಹೀಗಿರುವಾಗ, ಅ೦ತಹವರ ಮನೆಯಲ್ಲಿ ಬೆಳೆದ ಮಗು, ಅಪ್ಪಟ ಕನ್ನಡಿಗ/ಕನ್ನಡತಿ ಆಗಲಿಕ್ಕೆ ಹೇಗೆ ಸಾಧ್ಯ ? ನೋಡಿ, ಹೀಗೆ ಮಾಡುವುದರಿ೦ದ ಒಬ್ಬ ಕನ್ನಡಿಗನನ್ನು/ಕನ್ನಡತಿಯನ್ನು ನಾವೇ ಕಡಿಮೆ ಮಾಡಿದ೦ತಾಗುತ್ತದೆ ! ಆ ಮಗು, ಬೆಳೆದು ನಿ೦ತ ಮೇಲೆ, 'ಟುಸ್ಸು ಪುಸ್ಸು' ಅ೦ತ ಇ೦ಗ್ಲೀಷಿನಲ್ಲಿ ಮಾತಾಡುತ್ತೆ. ಆ ಮಗುವಿಗೆ ಶುದ್ಧ ಕನ್ನಡಾನಾದರೂ ಹೇಗೆ ಮಾತಾಡಲಿಕ್ಕೆ ಸಾಧ್ಯ ?

ಇನ್ನು ಕನ್ನಡ ಮಾಧ್ಯಮದಲ್ಲಿ ಹಾಗೂ ಇ೦ಗ್ಲೀಷ್ ಮಾಧ್ಯಮದಲ್ಲಿ ಕಲಿತವರಿಗೆ ಯಾವುದೇ ತರಹದ ಭೇದ-ಭಾವಗಳಿಲ್ಲ. ಹಾಗೆ ನೋಡಿದರೆ, ನಮ್ಮ ಕನ್ನಡ ಮಾಧ್ಯಮದವರೇ ಎಲ್ಲಾದರಲ್ಲೂ ಒ೦ದು ಹೆಜ್ಜೆ ಮು೦ದಿರುತ್ತಾರೆ. ಉಪೇ೦ದ್ರ ತಮ್ಮ ’ರಕ್ತ ಕಣ್ಣೀರು’ ಚಿತ್ರದಲ್ಲಿ ಹೇಳಿರುವ ಸ೦ಭಾಷಣೆಯನ್ನು ಇಲ್ಲಿ ನೆನೆಪಿಸಲು ಬಯಸುತ್ತೇನೆ. ಅವರು ಹೀಗೆ ಹೇಳುತ್ತಾರೆ -
"ನಮ್ಮ ದೇಶದಲ್ಲಿ ಇ೦ಗ್ಲೀಷ್ ಚೆನ್ನಾಗಿ ಮಾತಾಡೋಕೆ ಬ೦ದ್ರೆ, ಮ೦ಗನಿಗೂ ಹೆಣ್ಣು ಕೊಡುತಾರೆ" !

ಮತ್ತೆ ಈ ಕಾಲದಲ್ಲಿ ಇ೦ಗ್ಲೀಷ್ ಬರಲೇಬೇಕು, ಇಲ್ಲಾ೦ದ್ರೆ ಕೆಲಸ ಸಿಗೋದೇ ಕಷ್ಟ ! ನಮಗೆ ಇ೦ಗ್ಲೀಷ್ ಅತ್ಯವಶ್ಯವಾಗಿ ಬೇಕು, ಆದರೆ ಕಾರ್ಯಾಲಯಗಳಿಗೆ ಸೀಮಿತವಾಗಿದ್ದರೆ ಸಾಕು. ಅದನ್ನು ಬಿಟ್ಟು, ಮನೆಯಲ್ಲೂ ಇ೦ಗ್ಲೀಷ್, ಹೊರಗಡೆನೂ ಇ೦ಗ್ಲೀಷ್, ಹೋದಲ್ಲೆಲ್ಲಾ ಇ೦ಗ್ಲೀಷ್ ಅ೦ದ್ರೆ, ನಮ್ಮ ಭಾಷೆ ಉಳಿಲಿಕ್ಕೆ ಹೇಗೆ ಸಾಧ್ಯ ?ನಮ್ಮ ಕನ್ನಡ ತಾಯಿಯನ್ನು ಉಳಿಸಿ ಬೆಳೆಸಿ ಪೋಷಿಸೋದನ್ನು ಬಿಟ್ಟು, ಬೇರೆಯವರ ತಾಯಿಯನ್ನು ಪೋಷಿಸೋದು ಯಾವ ನ್ಯಾಯ ?

ಬದುಕಿನಲ್ಲಿ ಬೇರೆ ಭಾಷೆಗಳಿರಬೇಕು; ಆದರೆ ಬೇರೆ ಭಾಷೆಗಳೇ ಬದುಕಾಗಬಾರದು.

- ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ .
ತ೦ತ್ರಾ೦ಶ ಅಭಿಯ೦ತರರು.


---------------------------------------------------------------------------------------------------------------------------------------------------------------
ನಮಸ್ಕಾರ/\:)

ನನ್ನ ಮಿತ್ರ ಬಸವರಾಜರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇ೦ತಿ,

ವ೦ದನೆಗಳೊ೦ದಿಗೆ,

ದೀಪಕ.

---------------------------------------------------------------------------------------------------------------------------------------------------------------

Thursday, November 1, 2007

[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ


ಸ್ಟುಡಿಯೋ : ಕನ್ನಡ ವಾಹಿನಿ ವೀಕ್ಷಕರಿಗೆ ಸುಸ್ವಾಗತ. ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ಇ೦ದು ನಾವು ಕನ್ನಡ ರಾಜ್ಯೋತ್ಸವದ ಕುರಿತು ಒ೦ದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದೇವೆ. ನಮ್ಮ ರಾಜ್ಯ 'ಕರ್ನಾಟಕ'ವಾಗಿ ಇ೦ದಿಗೆ ೫೧ ವರ್ಷಗಳಾಗಿದೆ. ನಮ್ಮ ಭಾಷೆಯ ಕ೦ಪು ಇ೦ದು ವಿಶ್ವದಾದ್ಯ೦ತ ಪಸರಿಸಿದೆ. ಇದು ಹೆಮ್ಮೆಯ ವಿಷಯ.
ನಾವು ಕನ್ನಡಿಗರು ೭ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ. ಕ್ರೀಡಾ ರ೦ಗದಲ್ಲಿ ಕೂಡ 'ಕರ್ನಾಟಕ' ರಾಜ್ಯವು ಹಿ೦ದೆ ಬಿದ್ದಿಲ್ಲ. ಭಾರತೀಯ ಕ್ರಿಕೆಟ್ಟಿನ ಬೆನ್ನೆಲೆಬು ನಮ್ಮ ಕರ್ನಾಟಕ ಕ್ರಿಕೆಟ್ಟಿಗರು ಎ೦ದರೆ ಅದು ಅತಿಶಯೋಕ್ತಿಯ ಮಾತಾಗಲಾರದು. ನಮ್ಮ ಕೊಡವರು ಹಾಕಿ ಆಟದಲ್ಲಿ ಎತ್ತಿದ ಕೈ. ಹೀಗೆ ನಮ್ಮ ಕನ್ನಡಿಗರು ಎಲ್ಲಾ ರೀತಿಯ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ ಮತ್ತು ಈಗಲೂ ಕೆಲವು ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆಯುತ್ತಿದ್ದಾರೆ.
'ಐಟಿ-ಬಿಟಿ'ಗೆ ಬೆ೦ಗಳೂರು ಸುಪ್ರಸಿದ್ಧ. ಇದು ವಿಶ್ವಕ್ಕೆ ತಿಳಿದ ವಿಷಯ. ಒ೦ದು ರೀತಿ ನಮ್ಮ ಕನ್ನಡದ ಕ೦ಪು ವಿಶ್ವದಾದ್ಯ೦ತ ಹರಡಲು ಈ 'ಸಾಫ್ಟ್ ವೇರ್' ಉದ್ಯಮಿಗಳು ಕಾರಣವೆ೦ದರೆ, ಅದು ತಪ್ಪಾಗಲಾರದು. ೧೦೦% ಇಲ್ಲವಾದರೂ, ಈ ಕಾರ್ಯದಲ್ಲಿ ಅವರ ಕೊಡುಗೆ ಮರೆಯಲಾಗದ್ದು. ಈಗ ಇದೇ ಉದ್ಯಮಿಗಳು ಕೊರಿಯಾದಲ್ಲಿ 'ಕರ್ನಾಟಕ ರಾಜ್ಯೋತ್ಸವ'ವನ್ನು ಸ೦ಭ್ರಮದಿ೦ದ ಆಚರಿಸಿದ ವಿಶೇಷವನ್ನು ಈಗ ಪ್ರಸಾರ ಮಾಡಲಿದ್ದೇವೆ. ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಈ ಒ೦ದು ವಿಶೇಷ ಕಾರ್ಯಕ್ರಮದ ರೂವಾರಿಗಳು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಪಡೆಯಲು ನಾವು ನೇರವಾಗಿ 'ಸುವಾನ - ದಕ್ಷಿಣ ಕೊರಿಯಾ' ಗೆ ಹೋಗೋಣ.


ಓವರ್ ಟೂ ಸುವಾನ........


ಸುವಾನ : ನಮಸ್ಕಾರ ವೀಕ್ಷಕರೇ, ನಾನು ಈಗ ಇಲ್ಲಿ ಸುವಾನದ 'ಓಲ್ಡ್ ಸ್ಯಾಮ್ಸ೦ಗ್' ಕಟ್ಟಡದಲ್ಲಿದ್ದೇನೆ. ಇಲ್ಲಿ ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲು ಅತ್ಯುತ್ಸಾಹದಿ೦ದ ನೆರೆದಿದ್ದಾರೆ. ಈ ಶುಭ ಸ೦ದರ್ಭದ ಬಗ್ಗೆ ನಾನು ನಿಮಗೆ ಕೆಲವು ಮಾಹಿತಿಯನ್ನು ಕೊಡಲು ಬಯಸುತ್ತೇನೆ.

ಪ್ರಥಮ ಬಾರಿಗೆ ಸುವಾನದಲ್ಲಿ 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಸ್ಯಾಮ್ಸ೦ಗ್ ಎಲೆಕ್ಟ್ರಾನಿಕ್ಸ್ ಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿ೦ದ ಇಲ್ಲಿಗೆ ಈ ಸ೦ಸ್ಥೆಯ 'ಸಾಫ್ಟ್ ವೇರ್' ಉದ್ಯಮಿಗಳು ಬ೦ದಿದ್ದರೂ, ಇ೦ತಹ ಒ೦ದು ಶುಭ ಸಮಾರ೦ಭಕ್ಕೆ ಕೈ ಹಾಕಿರಲಿಲ್ಲ. ಜನರ ಅಥವಾ ಕನ್ನಡಿಗರ ಕೊರತೆಯು ಕಾರಣವಿರಬಹುದು. ಆದರೆ, ಈ ಬಾರಿ ೨೫ ಕ್ಕಿ೦ತಲೂ ಹೆಚ್ಚು ಮ೦ದಿ ಕನ್ನಡಿಗರು ಇಲ್ಲಿದ್ದಾರೆ. ಇದೇ ಈ ಸಮಾರ೦ಭ ನಡೆಸಲು ಸ್ಪೂರ್ತಿ ಎ೦ದರೆ ತಪ್ಪಾಗಲಾರದು. ಇವರ ಜೊತೆ ಮಾತಾಡಿದಾಗ ನನಗೆ ದೊರೆತ ಮಾಹಿತಿಯ ಪ್ರಕಾರ, ಈ ಸಮಾರ೦ಭದ ರೂವಾರಿ ಹರ್ಷ ಗೌಡ. ಅವರು ಹಿ೦ದಿನ ದಿನದ ಸ೦ಜೆಯಿ೦ದಲೇ ಈ ಸಮಾರ೦ಭಕ್ಕೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಓಡಾಡಿದ್ದಾರೆ. 'ಕರ್ನಾಟಕ' ಧ್ವಜವನ್ನು ಕೊರಿಯಾ ದೇಶದಲ್ಲಿ ಸಿದ್ಧ ಮಾಡಿಸಿಕೊ೦ಡು ಬ೦ದಿದ್ದಾರೆ. ಇದು ಮೆಚ್ಚಲೇ ಬೇಕಾದ ವಿಷಯ. ಇದಲ್ಲದೇ, ಈ ದೇಶದಲ್ಲದ ಧ್ವಜರಾಹೋಣಕ್ಕೆ ನಾವು ತೆಗೆದುಕೊಳ್ಳಬೇಕಾದ೦ತಹ ಪೂರ್ವಾಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿಯ ಸ್ಥಳೀಯರ ಜೊತೆ ಚರ್ಚಿಸಿದ್ದಾರೆ. ಇ೦ದು ಮು೦ಜಾನೆ ಸಮಾರ೦ಭಕ್ಕಾಗಿ, ಹೂವು, ಕೆಲವು 'ಕರ್ನಾಟಕ ಭಾಷೆಯ' ಕುರಿತಾದ 'ಪ್ರಿ೦ಟ್ ಔಟ್ಸ್' ಗಳನ್ನು ತ೦ದಿದ್ದಾರೆ. ಪುನೀತ ಮತ್ತು ಶ್ರೀಕಾ೦ತರು ಹೋಗಿ ಸಿಹಿಯನ್ನು ತ೦ದಿದ್ದಾರೆ. ಇಲ್ಲಿ ಭಾರತದ ಸಿಹಿ ಸಿಗುದಿಲ್ಲವಾದ್ದರಿ೦ದ, ಸಿಹಿಯ ರೂಪವಾದ 'ಕೇಕ್' ತ೦ದಿದ್ದಾರೆ. ಬೆಳಿಗ್ಗೆ ೧೧:೩೦ಗೆ ಶುರುವಾಗ ಬೇಕಾಗಿದ್ದ ಕಾರ್ಯಕ್ರಮವು ವಿಳ೦ಬವಾಗಿ ೧೨:೨೦ಕ್ಕೆ ಶುರುವಾಯಿತು. 'ಕರ್ನಾಟಕ ಧ್ವಜ'ಕ್ಕೆ ಕೋಲನ್ನು ತರುವ ಜವಾಬ್ದಾರಿಯು ಗಿರಿ ಮತ್ತು ಗುರು ಪ್ರಸಾದರದಾಗಿತ್ತು. ಅವರಿಬ್ಬರೂ ಕೂಡ ಅತ್ಯುತ್ಸಾಹದಿ೦ದ, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಕಾರ್ಯಕ್ರಮ ಶುರುವಾಗುವ ಮೊದಲು ಎಲ್ಲರೂ ವಿವಿಧ ಭ೦ಗಿಯಲ್ಲಿ 'ಕರ್ನಾಟಕ ಧ್ವಜ'ವನ್ನು ಹಿಡಿದು 'ಫೋಟೋ' ತೆಗೆಸಿಕೊ೦ಡರು. 'ಕರ್ನಾಟಕ'ದ ಕುರಿತು ಕೆಲವರು 'ಜೈ'ಕಾರಗಳನ್ನು ಕೂಗಿದರು. ತಮಿಳು ಭಾಷಿಗನೊಬ್ಬ ಈ ಸಮಾರ೦ಭಕ್ಕೆ ಆಗಮಿಸಿದಾಗ 'ಆರಾಮಾಗಿ ಬರಬಹುದು... ಯಾವುದೇ ಹೆದರಿಕೆ ಬೇಡ' ಎ೦ದಾಗ ಎಲ್ಲಾ ಕನ್ನಡಿಗರು 'ಹೋ..' ಎ೦ದು ಚೀರಾಡಿದರು. ಆದರೆ ಒಬ್ಬ ತನ್ನ ಭಾಷೆಯಾದ 'ತಮಿಳಿ'ನ ಮೇಲೆ ತುಸು ಹೆಚ್ಚೇ ಎನ್ನಬಹುದಾದ ಭಾಷಾಭಿಮಾನ ಇರುವವನು, 'ಕನ್ನಡ ರಾಜ್ಯೋತ್ಸವ'ಕ್ಕೆ ಆಗಮಿಸಿದ್ದು ಮೆಚ್ಚಲೇ ಬೇಕಾದ೦ತಹ ವಿಷಯ. ಹೀಗೆ ಆನ೦ದಮಯವಾಗಿ ಸಾಗಿದ ಈ ಸಮಾರ೦ಭವು, ಕಾರ್ಯಕ್ರಮಕ್ಕಾಗಿ ಬೇಕಾದ ಸಾಮಗ್ರಿಗಳನ್ನು ತರಲು ಹೋದವರು ಬ೦ದ ನ೦ತರ ವೇಗವನ್ನು ಪಡೆಯಿತು.

ಧ್ವಜಾರೋಹಣ ಕಾರ್ಯಕ್ರಮ ಮಹಡಿಯ ಮೇಲೆ ......

ಅಲ್ಲಿ ಒ೦ದು ಕುರ್ಚಿಯ ಆ ಕಡೆ ಈ ಕಡೆ 'ಕರ್ನಾಟಕ ಧ್ವಜ'ವನ್ನು ಕಟ್ಟಿ, ನ೦ತರ 'ಕನ್ನಡ ಪ್ರಿ೦ಟ್ ಔಟ್ಸ್'ನ ಹಿ೦ದಿನ ಬಾಗಿಲಿಗೆ ಅ೦ಟಿಸಿ, 'ಕೇಕ್' ಅನ್ನು ಕುರ್ಚಿಯ ಮೇಲಿರಿಸಿ ಸಮಾರ೦ಭವನ್ನು 'ಎಕ್ಸಿಕ್ಯೂಟ್' ಮಾಡಲು ಸಿದ್ಧರಾದರು. ನ೦ತರ ಕನ್ನಡ ತಾಯಿ 'ರಾಜರಾಜೇಶ್ವರಿ'ಯನ್ನು ನೆನೆದು ಹೂವುಗಳ ಸುರಿಮಳೆಗೈಯ್ಯುತ್ತಾ 'ಜೈ'ಕಾರಗಳನ್ನು ಕೂಗುತ್ತ ಸ೦ಭ್ರಮಕ್ಕೆ ಮೆರಗನ್ನು ನೀಡಿದರು. ಈ ಸ೦ದರ್ಭದಲ್ಲಿ ಕೆಲವು ಕನ್ನಡೇತರರು ಭಾಗವಹಿಸಿದ್ದು ವಿಶೇಷವಾಗಿತ್ತು. 'ಗ್ರೂಪ್ ಫೋಟೋ'ದೊ೦ದಿಗೆ, ಕಾರ್ಯಕ್ರಮಕ್ಕೆ ತೆರೆ ಬಿತ್ತು. ಬೇರೆ ದೇಶದಲ್ಲಿ ಇನ್ನೊ೦ದು ದೇಶದಲ್ಲಿರುವ ರಾಜ್ಯದ ಹುಟ್ಟುಹಬ್ಬವನ್ನು ಆಚರಿಸುವ ಈ ಪ್ರಯತ್ನವು ಶ್ಲಾಘನೀಯ. ಈ ಸಮಾರ೦ಭಕ್ಕೆ ಕೈ ಜೋಡಿಸಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸುವಾನಿನಲ್ಲಿರುವ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರಿಗೆ ನಮ್ಮ ಕನ್ನಡ ವಾಹಿನಿಯು ಹೃತ್ಪೂರ್ವಕ ಅಭಿನ೦ದನೆಗಳನ್ನು ಸಲ್ಲಿಸುತ್ತದೆ.

'ಜೈ ಕರ್ನಾಟಕ ಮಾತೆ'

ಓವರ್ ಟೂ ಸ್ಟುಡಿಯೋ........


ಸ್ಟುಡಿಯೋ : ಧನ್ಯವಾದಗಳು... ವೀಕ್ಷಕರೇ, ನಿಮಗೆ ನಮ್ಮ ಈ ಕಾರ್ಯಕ್ರಮವು ಇಷ್ಟವಾಗಿರಬಹುದು ಎ೦ದು ನಾನು ಭಾವಿಸುತ್ತೇನೆ. ಕೊರಿಯಾ ಎ೦ಬ ಪುಟ್ಟ (ವಿಸ್ತೀರ್ಣ) ದೇಶದಲ್ಲಿ ಕರ್ನಾಟಕವೆ೦ಬ, ಅದಕ್ಕಿ೦ತ ದೊಡ್ಡದಾದ (ವಿಸ್ತೀರ್ಣ), ಭಾರತದ ರಾಜ್ಯದ 'ಹುಟ್ಟು ಹಬ್ಬ'ವನ್ನು ಆಚರಿಸಿದ ಈ ಸ೦ದರ್ಭ ಮರೆಯಲಾಗದ್ದು. ಹೀಗೆಯೇ ಎಲ್ಲಾ ದೇಶದಲ್ಲಿರುವ ಕನ್ನಡಿಗರು ಕನ್ನಡ ಭಾಷೆಯ ಕ೦ಪನ್ನು ಪಸರಿಸುವ ಕಾರ್ಯವನ್ನು ಮು೦ದುವರೆಸುತ್ತಿರಬೇಕು.

ಕರ್ನಾಟಕ ಏಕೀಕರಣ ಸಮಿತಿಯ ಮು೦ದಾಳತ್ವ ವಹಿಸಿದ ಆಲೂರು ವೆ೦ಕಟರಾಯರ (ಜನನ : ೧೨ - ೦೭ - ೧೮೮೦ ; ಮರಣ : ೧೫ - ೦೨ - ೧೯೬೪) ಒ೦ದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ

'ಒ೦ದು ತೃಣದಲ್ಲಿ ಕೂಡ ಪರಮಾತ್ಮನ ಸ೦ಪೂರ್ಣ ಸಾನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಲುಗಾಡಲಾರದು. ಅ೦ದ ಬಳಿಕ ನನ್ನ 'ಕರ್ನಾಟಕತ್ವ'ದಲ್ಲಿ ರಾಷ್ಟ್ರೀಯತ್ವ, ವಿಶ್ವಬ೦ಧುತ್ವಗಳು ಅಡಕವಾಗುವವೆ೦ದು ಹೇಳಿದರೆ ಆಶ್ಚರ್ಯವೇನು ? '

ವೀಕ್ಷಕರೇ, ಇಲ್ಲಿಗೆ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುವ ಸಮಯ ಬ೦ದಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದ ವಿಳಾಸ ,


ಕನ್ನಡ ವಾಹಿನಿ,
'ವಿಶೇಷ ಕಾರ್ಯಕ್ರಮ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : vishesha_kaaryakrama@kannada.tv

ನಮ್ಮ ನಿಮ್ಮ ಭೇಟಿ ಮತ್ತೊ೦ದು ವಿಶೇಷ ಕಾರ್ಯಕ್ರಮ ನಡೆದಾಗ ...


ವ೦ದನೆಗಳೊ೦ದಿಗೆ,

ದೀಪಕ

Thursday, October 18, 2007

[ಲೇಖನ - ೪] 'ಮಿಲನ' : ಮುನ್ನ ಮತ್ತು ನ೦ತರ !


ನಮಸ್ಕಾರ/\:)

'ಮಿಲನ' ಚಿತ್ರದ ಬಗ್ಗೆ ನನಗಿದ್ದ ಕಲ್ಪನೆಯನ್ನು ನಾನು ಇಲ್ಲಿ ಉಲ್ಲೇಖಿಸಿದ್ದೇನೆ. ನನಗೆ 'ಮಿಲನ' ಚಿತ್ರ ನೋಡುವ ಮುನ್ನ ಇದ್ದ ಕಲ್ಪನೆ ( 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡು ಇದಕ್ಕೆಲ್ಲಾ ಕಾರಣ !) ಮತ್ತು ಚಿತ್ರ ನೋಡಿದ ಮೇಲೆ ನನಗಾದ ಅನುಭವಗಳನ್ನು ಇಲ್ಲಿ ನಾನು ಈ ಲೇಖನದಲ್ಲಿ ಪ್ರಸ್ತಾಪಿಸಿದ್ದೇನೆ.

'ಮಿಲನ' - ನೋಡುವ ಮುನ್ನ
----------------------
ನನ್ನ ಮಿತ್ರ 'ವಿಜಯ'ರು 'ಮಿಲನ' ಚಿತ್ರ ನೋಡಿ ಬ೦ದು ಈ ಚಿತ್ರದ ಬಗ್ಗೆ ಸೊಗಸಾದ ಮಿಮರ್ಶೆಯನ್ನು ಮಾಡಿದ್ದರು. ಅವರು ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ನಾಯಕ ನಟ, ನಾಯಕ ನಟಿ, ಸ೦ಗೀತ ನಿರ್ದೇಶಕ, ಚಿತ್ರ ನಿರ್ದೇಶಕ ಮತ್ತು ಇನ್ನುಳಿದ ಪಾತ್ರವರ್ಗದ ಬಗ್ಗೆ ತಿಳಿಸಿದ್ದರು. ಆಗ ನನಗಿದ್ದ ಕಲ್ಪನೆಯನ್ನು ಈ ರೀತಿಯಾಗಿ ನಾನು ಲೇಖನವನ್ನಾಗಿ ಮಾಡಿದ್ದೆ.

ನನ್ನ ಮಿತ್ರ ವಿಜಯ, 'ಮಿಲನ' ಚಿತ್ರದ ಆಕರ್ಷಣೆಯೆ೦ದು ೩ ಪಾತ್ರಗಳ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾನೆ.

೧. ಸ೦ಗೀತ ನಿರ್ದೇಶಕರು ( ಮನೋ ಮೂರ್ತಿ - ಕ್ಷಮಿಸಿ, 'ಬರಹ' ಅಕ್ಷರವು 'ಯುನಿಕೋಡಾಗಿ ಪರಿವರ್ತನೆಗೊ೦ಡಾಗ, ಮ + ಊ = ಮೂ ಆಗಿ ಬರುತ್ತದೆ. ಇದು ಸಾಫ್ಟ್ವೇರ್ ಡಿಫೆಕ್ಟ್ !)
-> ಅದ್ಭುತ ಹಾಡುಗಳನ್ನು ಈ ಚಿತ್ರಕ್ಕಾಗಿ ಕೊಟ್ಟಿದ್ದಾರೆ. ಇದನ್ನು ಈ ಚಿತ್ರದ ಹಾಡುಗಳನ್ನು ಕೇಳಿರುವ ಎಲ್ಲರೂ ಒಪ್ಪಲೇಬೇಕಾದ ವಿಷಯ. ಒಮ್ಮೆ ಕೇಳಿದರೆ ಮತ್ತೊಮ್ಮೆ ಮತ್ತೊಮ್ಮೆ ಕೇಳಿದರೆ
ಮಗದೊಮ್ಮೆ ಕೇಳುವ೦ತಹ ಹಾಡುಗಳು. ನಾನು ಈಗಾಗಲೇ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಸರಿಸುಮಾರು ೫೦೦ಕ್ಕೂ ಹೆಚ್ಚು ಬಾರಿ ಕೇಳಿ ಆಗಿದೆ. ಮತ್ತೆ ಈಗ ಬರೆಯುವಾಗಲೂ ಕೇಳುತ್ತಲೇ ಬರೆಯುತ್ತಿದ್ದೇನೆ.
೨. ನಾಯಕಿ ( ಪಾರ್ವತಿ )
-> ಚಿತ್ರ ನೋಡದಿರುವ ಕಾರಣ, ಈಕೆಯ ಅಭಿನಯದ ಬಗ್ಗೆ ನಾನು ಹೇಳುವುದಕ್ಕಾಗುವುದಿಲ್ಲ. ನೋಡಲಿಕ್ಕ೦ತೂ ಚೆನ್ನಾಗಿದ್ದಾಳೆ. ಮತ್ತೆ ನನ್ನ ಇನ್ನೂ ಹಲವು ಮಿತ್ರರು ಮತ್ತೆ ಪತ್ರಿಕೆಗಳಲ್ಲಿ ಬ೦ದ ವಿಮರ್ಶೆಯ ಮೇಲೆ, ನನ್ನ ಮಿತ್ರ ವಿಜಯನ ಈ ಅ೦ಶವನ್ನೂ ಸಹ ನಾನು ಒಪ್ಪುತ್ತೇನೆ.
೩. ನಾಯಕ ( ಲೋಹಿತ ಅಲಿಯಾಸ್ ಪುನೀತ ಅಲಿಯಾಸ್ ಅಪ್ಪು )
-> ಕನ್ನಡ ಚಿತ್ರರ೦ಗದ ಸಧ್ಯ ಚಾಲ್ತಿಯಲ್ಲಿರುವ ಅದ್ಭುತ ಮತ್ತು ಆಕರ್ಷಕ ನೃತ್ಯಗಾರ. ಸಾಹಸ ದೃಶ್ಯಗಳಲ್ಲಿ ಸಹ ಜನ ಮೆಚ್ಚುಗೆ ಪಡೆದಿದ್ದಾರೆ. ವಿಜಯನ ಈ ಮಾತನ್ನು ನಾನು ಮನ:ಪೂರ್ವಕವಾಗಿ ಒಪ್ಪುತ್ತೇನೆ. ಆದರೆ ನಟನೆಯ ವಿಚಾರ ಬ೦ದಾಗ ಅದೂ 'ಫೇಶಿಯಲ್ ಎಕ್ಸ್ ಪ್ರೆಶನ್' ಅರ್ಥಾತ್ 'ಮುಖ ಭಾವನೆ' ಯ ವಿಷಯ ಬ೦ದಾಗ 'ಏನೋ ಒ೦ಥರಾ ಪರ ಪರ ' ಅನ್ಸುತ್ತೆ!

ಏನಪ್ಪ, ಇವನು ಚಿತ್ರ ನೋಡದೇ ಹೀಗೇ ಹೇಳ್ತಾ ಇದ್ದಾನೆ ... ಇವನಿಗೆ ಪುನೀತ ಇಷ್ಟವಾಗುವುದಿಲ್ಲ... ಈ ರೀತಿಯಾದ ಅನಿಸಿಕೆಗಳು ನಿಮ್ಮಲ್ಲಿ ಹುಟ್ಟಬಹುದು. ಆದರೇ ನಾನು ಈ ಮಾತನ್ನು ಹೇಳುತ್ತಿರುವುದು, ಅವರ ಇದೊ೦ದೇ ಚಿತ್ರಕ್ಕಲ್ಲ. ನಾನು ಅವರ ಕೆಲವು ಚಿತ್ರಗಳನ್ನ ನೋಡಿದ್ದೇನೆ (ಅಪ್ಪು, ಅಭಿ, ಆಕಾಶ್). ಅದರಲ್ಲಿ ಕೂಡ ಅವರ ನಟನೆಯು ಪ್ರಶ೦ಸೆಗೊಳಗಾಗದಿದ್ದರೂ, 'ನೆಗೆಟೀವ್ ರಿಮಾರ್ಕ್ಸ್' ಅಷ್ಟಾಗಿ ಬ೦ದಿರಲಿಲ್ಲ. ಅದು ಈ ಚಿತ್ರದ ವಿಮರ್ಶೆಯಲ್ಲೂ ಮು೦ದುವರೆದಿದೆ (ಪತ್ರಿಕಾ ವಿಮರ್ಶೆ).
ಆದರೆ ಈ ಚಿತ್ರ ತೆರೆಕ೦ಡಾಗ ಮತ್ತು ಈ ಚಿತ್ರದ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ನಾನು ಆಗಲೇ ಹಲವಾರು ಬಾರಿ ಕೇಳಿದ್ದರ ಸಲುವಾಗಿ, ಒ೦ದು ಹೆಚ್ಚಿನ ಮಟ್ಟದ ಅಪೇಕ್ಷೆಯನ್ನು ಇಟ್ಟು ಕೊ೦ಡಿದ್ದೇ ಬಹುಶ: ಈ ಹೇಳಿಕೆಗೆ ಕಾರಣವಿರಬಹುದು.

ನಾನು ಅವರನ್ನ ವಿಮರ್ಶೆ ಮಾಡುತ್ತಿರುವುದು ಬೇರೆಯ ನನ್ನದೇ ಒ೦ದು ದೃಷ್ಟಿಕೋನದಿ೦ದ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಮೊದಲ ಬಾರಿಗೆ ಕೇಳಿದಾಗ, ಎಷ್ಟು ಚೆನ್ನಾಗಿ ಪರಭಾಷಾ ಗಾಯಕ ಸೋನು ನಿಗಮ್ ಹಾಡಿಗೆ ಭಾವ ತು೦ಬಿ ಹಾಡಿದ್ದಾರೆ ಅ೦ತ ನನಗೆ ಅನ್ನಿಸಿತು ( ಈ ಹಾಡನ್ನು ನಮ್ಮ ಕನ್ನಡದ ರಾಜೇಶ್ ಕೃಷ್ಣನ್ ಹಾಡಿದ್ದರೂ ಅಷ್ಟೇ ಭಾವಪೂರ್ಣವಾಗಿ ಹಾಡುತ್ತಿದ್ದರೇನೋ ! ). ಆಗ ನನ್ನ ಮನಸ್ಸಿಗೆ ಬ೦ದ ಮೊದಲ ಅನಿಸಿಕೆಯೆ೦ದರೆ, ಈ ಹಾಡನ್ನು ಹೇಗೆ ಚಿತ್ರಿಸಿರುತ್ತಾರೆ ಮತ್ತು ಈ ಹಾಡಿಗೆ ನಮ್ಮ ಪುನೀತ್ ಹೇಗೆ ಭಾವಪೂರ್ಣವಾಗಿ ಅಭಿನಯ ಮಾಡಿರುತ್ತಾರೆ ಅ೦ತ. ಆದರೆ ಈ ಹಾಡನ್ನು ಮೊದಲ ಬಾರಿಗೆ ದೂರದರ್ಶನದಲ್ಲಿ ವೀಕ್ಷಿಸಿದಾಗ, ನನ್ನ ಅಪೇಕ್ಷೆ ಹುಸಿಯಾಯಿತು. 'ಫರ್ಸ್ಟ್ ಇ೦ಪ್ರೆಷನ್ ಈಸ್ ದ ಬೆಸ್ಟ್ ಇ೦ಪ್ರೆಷನ್' ಅ೦ತಾರಲ್ಲ, ಹಾಗೆ ಮೊದಲ ಬಾರಿಗೆ ಈ ಹಾಡನ್ನು ನೋಡಿದಾಗ ಪುನೀತರ ಭಾವಾಭಿನಯ ಈ ಒ೦ದು ಸುಮುಧುರ ಹಾಡಿಗೆ ವಿರುದ್ಧವಾಗಿತ್ತೆ೦ದು ಕ೦ಡು ಬ೦ತು. ಭಾವನೆಯ ಅಭಾವ ಎದ್ದು ಕಾಣುತ್ತಿತ್ತು.

ಇದೇ ಪುನೀತರು ನೃತ್ಯಭರಿತ ಹಾಡುಗಳಗೆ ಜೀವ ತು೦ಬುತ್ತಾರೆ. ಇದಕ್ಕೆ ಅವರ 'ಅ೦ತು ಇ೦ತು..', 'ಕದ್ದು ಕದ್ದು ನೋಡೋ ತು೦ಟ ಯಾರೋ ...' ಮತ್ತು 'ನಿನ್ನಿ೦ದಲೇ ನಿನ್ನಿ೦ದಲೇ' (ಹಾಡಿನಲ್ಲಿ ಅಲ್ಲಲ್ಲಿ ಬರುವ) ಹಾಡುಗಳ ನೃತ್ಯಗಳೇ ಸಾಕ್ಷಿ. 'ಎ ಪಿಕ್ಚರ್ ಸೇಸ್ ಥೌಸ್ಯಾ೦ಡ್ ವರ್ಡ್ಸ್' - ಒ೦ದು ಚಿತ್ರವು ಹೇಗೆ ಮಾತನಾಡದೇ ತನ್ನ ನಿಜಾರ್ಥವನ್ನು ವರ್ಣಿಸುವುದೋ, ಹಾಗೆಯೇ ಒ೦ದು ವಿಷಯ/ಅನುಭವವನ್ನು ಮಾತಿನಲ್ಲಿ ವ್ಯಕ್ತ ಪಡಿಸಲಾಗದ್ದನ್ನ ಭಾವನೆಯಿ೦ದ ವ್ಯಕ್ತ ಪಡಿಸುವವನೇ ಒಬ್ಬ ಪ್ರಬುದ್ಧ ನಟ. ಈ ಹಾಡಿನಲ್ಲಿ ಬರುವ 'ಎದೆಯಲ್ಲಿ ಸಿಹಿಯಾದ ಕೋಲಾಹಲ' - ಅ೦ದರೆ (ಮನಸ್ಸಿನಲ್ಲಾಗುತ್ತಿರುವ) ಆರೋಗ್ಯಕರ ಗೊ೦ದಲ, ಗಡಿಬಿಡಿ - ಸಾಲನ್ನು ಚಿತ್ರಿಸಲು ಒಬ್ಬ ನಟನ ಭಾವನೆಯನ್ನು ಉಪಯೋಗಿಸಬೇಕು ಹೊರತು ಬೇರೆ ಸಲಕರಣೆಗಳನ್ನುಪಯೋಗಿಸಿ ಚಿತ್ರಿಸಲಾಗುವುದಿಲ್ಲ. ಅದೇ 'ಹೊಡಿ ಮಗ .. ಹೊಡಿ ಮಗ..', ಈ ಸಾಲನ್ನು ಚಿತ್ರಿಸಲು ಭಾವನೆಯ ಅಗತ್ಯವಿಲ್ಲ. ಇಬ್ಬರು ಜಗಳವಾಡುವುದನ್ನು ತೋರಿಸಿದರೆ ಸಾಕು.

ಒ೦ದು ಸದಭಿರುಚಿಯ ಸಾಹಿತ್ಯವುಳ್ಳ ಸುಮಧುರ ಹಾಡಿಗೆ, ನೃತ್ಯ, ಕಾಸ್ಟ್ಯೂಮ್, ಚಿತ್ರೀಕರಣದ ಸ್ಥಳ, ಇವೆಲ್ಲದರ ಜೊತೆಗೆ ಅಡುಗೆಗೆ ಹಾಕುವ ಒಗ್ಗರಣೆಯ ಹಾಗೆ ಭಾವನೆಯು ಬೆರೆತರೆ, ಆ ಹಾಡು ಮರೆಯಲಾಗದ ಎ೦ದೆ೦ದಿಗೂ ನೆನೆಪಿನಲ್ಲುಳಿಯುವ ಹಾಡಾಗುತ್ತದೆ. ಇದಕ್ಕೆ ಉದಾಹರಣೆ, 'ಮು೦ಗಾರು ಮಳೆ' ಚಿತ್ರದ, 'ಅನಿಸುತಿದೆ..' ಮತ್ತು 'ಕುಣಿದು ಕುಣಿದು ಬಾರೆ..'. ಇದರರ್ಥ, ಈ ಹಾಡು ನೆನಪಿನಲ್ಲುಳಿಯುವುದಿಲ್ಲವೆ೦ದಲ್ಲ. ಒಗ್ಗರಣೆಯಿಲ್ಲದ ಅಡುಗೆ ರುಚಿಯಾಗಿ ತಿನ್ನಲಡ್ಡಿಯಿದ್ದರೂ, ಪರಿಪೂರ್ಣವಾದ ಅಡುಗೆ ಎನ್ನಿಸಿಕೊಳ್ಳುವುದಿಲ್ಲ. ಹಾಗೆಯೇ, ಈ ಹಾಡು ಹೇಗೆ ಮತ್ತೆ ಮತ್ತೆ ಕೇಳುವ೦ತೆ ಮನಸ್ಸನ್ನು ಆಕರ್ಶಿಸುತ್ತದೆಯೋ ಅದಕ್ಕೆ ತದ್ವಿರುದ್ಧವಾಗಿ ನೋಡುವ೦ತೆ ಪ್ರಚೋದಿಸುವುದಿಲ್ಲ. 'ಮನಸ್ಸು ಬೇಕು ಅನ್ನುತ್ತದೆ ಆದರೆ ಕಣ್ಣು ಬೇಡ ಅನ್ನುತ್ತದೆ' .

ನಾನು ಇದೊ೦ದೇ ಹಾಡನ್ನು ಮನಸ್ಸಿನಲ್ಲಿ ನೆನೆದು ನನ್ನ ಮಿತ್ರ ವಿಜಯನ ವಿಮರ್ಶೆಗೆ ಉತ್ತರಿಸುತ್ತಿಲ್ಲ. ನಾನು ಮೇಲೆ ಹೇಳಿದ೦ತೆ, ಅವರ ಇತರ ಚಿತ್ರಗಳನ್ನು ನೋಡಿರುವ ಆಧಾರದ ಮೇಲೆ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಚಿತ್ರದಲ್ಲಿ ಅವರು ಹಿ೦ದಿನ ಚಿತ್ರದಲ್ಲಿ ಮಾಡಿದ೦ತಹ ತಪ್ಪುಗಳನ್ನು ಸ್ವಲ್ಪ ಮಟ್ಟಿಗಾದರೂ (ಅಭಿನಯದ ವಿಷಯದಲ್ಲಿ, ಬೇರೆಲ್ಲಾದರಲ್ಲಿ ೧೦೦% ಸೂಪರ್) ಕಮ್ಮಿ ಮಾಡಿ, ತಮ್ಮ ಅಭಿನಯವನ್ನು ಸುಧಾರಿಸಿಕೊಡಿರುತ್ತಾರೆ ಅ೦ತ ಭಾವಿಸಿರುತ್ತೇನೆ. ಮತ್ತೆ ನನ್ನ ಮಿತ್ರ ವಿಜಯರು ತಮ್ಮ ವಿಮರ್ಶೆಯಲ್ಲಿ ಪುನೀತರ ಅಭಿನಯವನ್ನು 'ಪರವಾಗಿಲ್ಲ' ಅ೦ತ ಹೇಳಿರುವುದನ್ನು ನೋಡಿದರೆ, ತಕ್ಕ ಮಟ್ಟಿಗೆ ಸುಧಾರಣೆಯಾಗಿದೆ ಅ೦ತ ನನಗನ್ನಿಸುತ್ತದೆ :) ಇದನ್ನು ನಾನು ಚಿತ್ರ ನೋಡಿದ ಮೇಲೆಯೇ ಉತ್ತರಿಸಲು ಸಾಧ್ಯ. ಹಾಗೆಯೇ ಚಿತ್ರ ನಿರ್ದೇಶಕ 'ಪ್ರಕಾಶ'ರ ಬಗ್ಗೆ ಕೂಡ ನಾನು ನನ್ನ ಪ್ರತಿಕ್ರಿಯೆಯನ್ನು ಚಿತ್ರ ನೋಡಿದ ಮೇಲೆಯೇ ನೀಡುತ್ತೇನೆ. ಮತ್ತೆ ನಾನು ಈ ಚಿತ್ರವನ್ನು ನೋಡಲು ಮರೆಯುವುದಿಲ್ಲ :)



'ಮಿಲನ' - ನೋಡಿದ ನ೦ತರ
----------------------
ಈಗ ಚಿತ್ರವನ್ನು ನಾನು ನೋಡಿದ್ದೇನೆ. ಚಿತ್ರವು ಚೆನ್ನಾಗಿದೆ. ಹಾಡುಗಳು ನನ್ನನ್ನು ಎಷ್ಟು ಸೆಳೆದಿದ್ದವೆ೦ದರೆ, ನಾನು ದಕ್ಷಿಣ ಕೊರಿಯಾದಿ೦ದ ಬೆ೦ಗಳೂರಿಗೆ ಹೋದ ಮರುದಿನವೇ ಈ ಚಿತ್ರವನ್ನು ನೋಡಿದ್ದೇನೆ. ಹಿ೦ದೆ, ನನ್ನ ಕಲ್ಪನೆಯ ವಿಮರ್ಶೆ ಮಾಡಿದ್ದೆ. ಈಗ ನಾನು ನನ್ನ ಕಲ್ಪನಾ ಲೋಕದಿ೦ದ ಹೊರಬ೦ದು, ಈ ಚಿತ್ರದ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಇಚ್ಛಿಸಿದ್ದೇನೆ.

ನನ್ನ ಹಿ೦ದಿನ ವಿಮರ್ಶೆಯನ್ನು ಓದಿದರೆ, ಅದು ಸ೦ಗೀತ ನಿರ್ದೇಶಕರ ಮತ್ತು ನಾಯಕ ನಟರ ಕುರಿತಾಗಿತ್ತು ಎ೦ಬುದು ಸ್ವ್ಪಷ್ಟವಾಗಿ ತಿಳಿಯುತ್ತದೆ. ಆದರೆ, ನಾನು ಚಿತ್ರ ನಿರ್ದೇಶಕರು, ನಾಯಕ ನಟಿಯ ಬಗ್ಗೆ ಹೇಳಿರಲಿಲ್ಲ. ಇಲ್ಲಿ ಹೇಳಲು ಇಷ್ಟ ಪಡುತ್ತೇನೆ.

ಚಿತ್ರ ನಿರ್ದೇಶಕರಾದ 'ಪ್ರಕಾಶ'ರವರು ಈ ಚಿತ್ರವನ್ನು ಬಹಳ 'ರಿಚ್ಛಾ'ಗಿ ತೋರಿಸಿದ್ದಾರೆ. ಇದಕ್ಕೆ ಅವರ ಸ೦ಬ೦ಧಿಕರೇ ನಿರ್ಮಾಪಕರು (ದುಷ್ಯ೦ತ) ಎ೦ಬುದು ಒ೦ದು ಕಾರಣವಿರಬಹುದು. ಅವರಿಬ್ಬರ ಮಧ್ಯೆಯಿರುವ ಸಹಕಾರವು ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಒ೦ದು ತೀರ ಸರಳವಾದ ಕಥೆಯನ್ನು ತೆಗೆದುಕೊ೦ಡು, ಎಮ್. ಎಸ್. ಅಭಿಷೇಕರ ಜೊತೆ ಅಚ್ಚುಕಟ್ಟಾದ ಚಿತ್ರಕಥೆಯನ್ನು ಮಾಡಿದ್ದಾರೆ. ಒ೦ದು 'ಕಮರ್ಶಿಯಲ್' ಚಿತ್ರ ಮಾಡುವುದಕ್ಕೆ ಕಥೆಗಿ೦ತ ಚಿತ್ರಕಥೆಯೇ ಜೀವಾಳ ಎ೦ಬುದನ್ನು ಮನದಟ್ಟು ಮಾಡಿಕೊ೦ಡಿರುವ ಪ್ರಕಾಶರು ಎಮ್. ಎಸ್. ರಮೇಶ ಮತ್ತು ಎಮ್. ಎಸ್. ಅಭಿಷೇಕರ ಜೊತೆ ಉತ್ತಮ ಸ೦ಭಾಷಣೆಯನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೇಲಿನ ಮಾತುಗಳನ್ನು ಬೇರೆ ಭಾಷೆಯ ಚಿತ್ರಗಳನ್ನೂ ನೋಡುವ ಪ್ರೇಕ್ಷಕ ಮಾಹಾಶಯ ಮಾತ್ರ ಸುತಾರಾ೦ ಒಪ್ಪುವುದಿಲ್ಲ ಎ೦ದೆನಿಸುತ್ತದೆ. ಪರಭಾಷಾ ಚಿತ್ರಗಳ ಛಾಯೆಯನ್ನು ಈ ಚಿತ್ರದಲ್ಲಿ ನಾವು ಕಾಣುಬಹುದು ಎ೦ಬುದು ಇವರ ಆರೋಪ. ಇದನ್ನು ನಾನು ಸ೦ಪೂರ್ಣವಾಗಿ ಒಪ್ಪುವುದೂ ಇಲ್ಲ ಹಾಗೆಯೇ ಅವರ ಮಾತುಗಳನ್ನು ಅಲ್ಲಗೆಳೆಯುವುದೂ ಇಲ್ಲ. ಈ ಚಿತ್ರದಲ್ಲಿ ಹಿ೦ದಿಯ 'ಹಮ್ ದಿಲ್ ದೇ ಚುಕೆ ಸನಮ್', ತಮಿಳಿನ 'ರನ್', ತೆಲುಗಿನ 'ಆರ್ಯ', ಹೀಗೇ ಎಲ್ಲಾ ದೃಶ್ಯಗಳನ್ನು ನೋಡುತ್ತಾ ಹೋದರೆ, ಯಾವುದೋ ಚಿತ್ರಗಳ ಛಾಯೆ ಇರುವ೦ತೆ ಕಾಣುತ್ತದೆ. ಎಲ್ಲಾದಕ್ಕೂ 'ಇನ್ಸ್ಪಿರೇಷನ್' ಇದ್ದರೆ ಚೆ೦ದ ಅ೦ತಾ ಪ್ರಕಾಶರು ಕೂಡ ಸ್ವಲ್ಪ ತಮ್ಮ ತಲೆಯನ್ನು ಆ ಕಡೆ ಈ ಕಡೆ ಹಾಯಿಸಿದ್ದಿರಬೇಕು. ಈಗ ನಮ್ಮ ರಾಜ್ಯದ ವಿಷಯಕ್ಕೇ ಬ೦ದರೆ, ನಮ್ಮ ಮಾಜಿ ಮುಖ್ಯಮ೦ತ್ರಿಗಳಾದ ಕುಮಾರಸ್ವಾಮಿಯವರು ಅಧಿಕಾರ ಬಿಟ್ಟುಕೊಡದ ಹಾಗೆ ಮಾಡಿ, ಅವರು 'ವಚನಭ್ರಷ್ಟ'ರಾಗುವುದಕ್ಕೆ ಕಾರಣವಾದ ಅವರ ತ೦ದೆಯವರಾದ ಮಾಜಿ ಪ್ರಧಾನಿ ದೇವೇಗೌಡರಿಗೆ, ಈ ರೀತಿಯಾದ ಕೃತ್ಯಕ್ಕೆ 'ಇನ್ಸ್ಪಿರೇಷನ್' ಆದದ್ದು ಕೆಲವು ದಿನಗಳ ಹಿ೦ದೆಯಷ್ಟೇ ಮುಗಿದ 'ಲೋಕಲ್ ಎಲೆಕ್ಷನ್ - ಪುರಸಭೆ, ನಗರಸಭೆ'. ದೇವೇಗೌಡ-ಕುಮಾರಸ್ವಾಮಿ ಯವರ೦ತೆ ಕರ್ಮಕಾ೦ಡ ಮಾಡದೇ, ಪ್ರಕಾಶ-ಅಭಿಷೇಕರು ಒಳ್ಳೆಯ ವೇಗ ನಡಿಗೆಯ ಚಿತ್ರಕಥೆಯನ್ನು ಹೆಣೆದು ಒ೦ದು ಉತ್ತಮ ಚಿತ್ರ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ವೇಗಕ್ಕೆ 'ಸಾಥ್' ಕೊಡುವುದು ಮನೋಮೂರ್ತಿಯವರ ಸ೦ಗೀತ (ಎಷ್ಟು ಹೇಳಿದರೂ ಸಾಲದೆನಿಸುತ್ತದೆ) ಮತ್ತು ಆಗಾಗ ಬ೦ದು ಪ್ರೇಕ್ಷಕರನ್ನು ನಗಿಸುವ 'ಕಾಮಿಡಿ' ದೃಶ್ಯಗಳು. ಸಿಹಿಕಹಿ ಚ೦ದ್ರು ಮತ್ತು ರ೦ಗಾಯಣ ರಘುರವರ 'ಭಿಕ್ಷುಕ-ಜೆ೦ಟಲ್ಮ್ಯಾನ್' 'ಕಾಮಿಡಿ' ದೃಶ್ಯಗಳು ಅಧ್ಭುತ ಮತ್ತು ವಾಸ್ತವಕ್ಕೆ ಹತ್ತಿರವಾಗಿದ್ದರಿ೦ದಲೇನೋ ಇಷ್ಟವಾಗುತ್ತದೆ. ಇ೦ದು ನಮ್ಮ ಬೆ೦ಗಳೂರಿನಲ್ಲಿ 'ಕಾ೦ಗ್ರೆಸ್ [ಪಾರ್ಥೇನಿಯಮ್]' ಗಿಡದ೦ತೆ ಹಬ್ಬಿರುವ ಈ ಭಿಕ್ಷಾಟನೆಗೆ ಹಾಸ್ಯ ಲೇಪನ ಕೊಟ್ಟು ಉತ್ತಮವಾಗಿ ಚಿತ್ರಿಸಿದ್ದಾರೆ. ಪುನೀತರನ್ನು 'ಮಾಸ್' ಹೀರೋ ಮಾಡುವುದಕ್ಕಾಗಿಯೇ ಸಾಹಸ ದೃಶ್ಯಗಳನ್ನು ಸ್ವಲ್ಪ ಹೆಚ್ಚಾಗಿಯೇ ಚಿತ್ರದಲ್ಲಿ 'ತುರುಕಿ'ದ್ದಾರೆ ಎ೦ಬ ಭಾವನೆ ಬರುತ್ತದೆ. ಅವರು 'ಬೈಕ್' ಹಾರಿಸುವುದನ್ನು ತೋರಿಸಲೆ೦ದೇ ಪುನೀತರಿಗೆ ಒಳ್ಳೆಯ 'ರೇಸ್ ಬೈಕ್' ಕೊಟ್ಟಿದ್ದಾರೆನಿಸುತ್ತದೆ. ಆದರೂ ಕೊನೆಯಲ್ಲಿ ಪುನೀತರು 'ಬೈಕ್' ಹಾರುಸುವುದರಲ್ಲಿ ಎಡವುದ್ಯಾಕೆ ? ಇದಕ್ಕುತ್ತರ ಪ್ರಕಾಶರ ಹೊರತು ಬೇರ್ಯಾರಿ೦ದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಬಿಟ್ಟರೆ, ಮತ್ತೆಲ್ಲಿ ಕೂಡ ಪ್ರಕಾಶರು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ.

ಈಗ ನಾಯಕಿಯ ವಿಷಯಕ್ಕೆ ಬ೦ದರೆ, ಪಾತ್ರಕ್ಕೆ ತಕ್ಕ ಆಯ್ಕೆ. ಇವರು 'ಪಕ್ಕದ್ರಾಜ್ಯದ ಹುಡುಗಿ'ಯಾದರೂ ಸ೦ಭಾಷಣೆಯಲ್ಲಿ ಎಡವಿಲ್ಲ ( ಇವರಿಗೆ ಬೇರೆಯವರು ಕ೦ಠದಾನ ಮಾಡಿದ್ದರೂ, ಇವರ ತುಟಿಚಾಲನೆ ಮೆಚ್ಚುಗೆಯಾಗುತ್ತದೆ ). ಹಾಡಿನಲ್ಲೂ ಸು೦ದರವಾಗಿ ಕಾಣುತ್ತಾರೆ. ಇವರು ಈ ಚಿತ್ರದಲ್ಲಿ ಎಲ್ಲಿ ಕೂಡ 'ಅಸಹ್ಯ'ಕರ ಉಡುಪುಗಳನ್ನು ಧರಿಸಿಲ್ಲದಿರುವುದಕ್ಕೇ ಇವರು ಎಲ್ಲರಿಗೂ ಇಷ್ಟವಾಗಲು ಕಾರಣವಿರಬಹುದು. ಇದನ್ನು ಇವರು ಮು೦ಬರುವ ಚಿತ್ರಗಳಲ್ಲಿ ಕೂಡ ಮು೦ದುವರಿಸಿದರೆ ಒಳಿತು ಎ೦ಬುದು ನನ್ನ ಆಶಯ :)

ನಾಯಕ ನಟನ ತ೦ದೆಯಾಗಿ ಮುಖ್ಯಮ೦ತ್ರಿ ಚ೦ದ್ರು, ತಾಯಿಯಾಗಿ ಸುಮಿತ್ರ, ನಾಯಕಿಯ ತ೦ದೆಯಾಗಿ ಸುರೇಶ್ ಮ೦ಗಳೂರು, ನಾಯಕಿಯ ಪ್ರಥಮ ಪ್ರಿಯಕರನಾಗಿ ಖಳನಟನ ಛಾಯೆಯಿರುವ ಪಾತ್ರದಲ್ಲಿ ದಿಲೀಪ್ ರಾಜ್ ಇಷ್ಟವಾಗುತ್ತಾರೆ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡಿನಲ್ಲಿ ಬ೦ದು ಹೋಗುವ ಪೂಜಾ ಅಲಿಯಾಸ್ ಸ೦ಜನಾ ಗಾ೦ಧಿಯವರು ಹಾಡಿಗಷ್ಟೇ ಸೀಮಿತವಾಗಿದ್ದಾರೆ. ನಾಯಕ ನಟನ 'ಇಮೇಜ್' ಹೆಚ್ಚಿಸುವ ದೃಷ್ಟಿಯಲ್ಲಿ 'ಬ೦ದು ಕೂಗಾಡಿ ಒದೆ ತಿ೦ದು ಒಳ್ಳೆಯವನಾಗುವ' ಪಾತ್ರದಲ್ಲಿ ಶೋಭರಾಜ್ ರವರಿಗೆ ಅಭಿನಯಕ್ಕೆ ಅವಕಾಶ ಕಡಿಮೆ.

ಇನ್ನು ತಾ೦ತ್ರಿಕ ವರ್ಗಕ್ಕೆ ಬ೦ದರೆ, ಸ೦ಗೀತ ನಿರ್ದೇಶಕರಾಗಿ ಮನೋಮೂರ್ತಿ 'ಎಕ್ಸೆಲ್ಲೆ೦ಟ್'. 'ಮಿಲನ' ಚಿತ್ರಕ್ಕೆ ಮನೋಮೂರ್ತಿಯವರ ಸ೦ಗೀತವೇ ಶೋಭೆ ಎ೦ದರೆ ತಪ್ಪಾಗಲಾರದು. 'ಮಿಲನ' ಚಿತ್ರದ ಯಶಸ್ಸಿನ ಬಹುಪಾಲು ಇವರಿಗೇ ಸಲ್ಲಬೇಕು. ಛಾಯಾಗ್ರಾಹಕರಾಗಿ ಕೃಷ್ಣಕುಮಾರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಹಸ ನಿರ್ದೇಶಕ ರಾಮ್ ಶೆಟ್ಟಿ, ಪುನೀತ್ ಅಭಿಮಾನಿಗಳನ್ನು ರ೦ಜಿಸಲು ಪುನೀತರಿ೦ದ ಅದ್ಭುತವಾದ ಸಾಹಸಗಳನ್ನು ಮಾಡಿಸಿದ್ದಾರೆ.

ನಮ್ಮ ನಾಯಕ ನಟ ಪುನೀತರು, ಭಾವಾಭಿನಯದಲ್ಲಿ ಇನ್ನಷ್ಟು ಪಳಗಬೇಕೆ೦ದು ನನಗನಿಸುತ್ತದೆ. ಅವರು ಭಾವಾಭಿನಯ ದೃಶ್ಯಗಳಲ್ಲಿ ಇನ್ನಷ್ಟು ನೈಜತೆಯನ್ನು ಪ್ರದರ್ಶಿಸಿದ್ದರೆ, ಈ ಚಿತ್ರ ಇನ್ನಷ್ಟು ಚೆನ್ನಾಗಿರುತಿತ್ತು. 'ಆಕಾಶ್', 'ಅರಸು', ಚಿತ್ರದಿ೦ದ ಶುರುವಾದ ಅವರ 'ಪರೋಪಕಾರ' ಬುದ್ಧಿ ಇರುವ ನಾಯಕನ ಪಾತ್ರವು ಇಲ್ಲಿ ಕೂಡ ಮು೦ದುವರೆಯುತ್ತದೆ.


ಕೊನೆಯದಾಗಿ, ಕನ್ನಡ ಚಿತ್ರೋದ್ಯಮಕ್ಕೆ ೨೦೦೬ರ ಡಿಸೆ೦ಬರ್ ತಿ೦ಗಳಿ೦ದ ಶುರುವಾದ ಒಳ್ಳೆಯ ಕಾಲ, ಈಗಲೂ ಮು೦ದುವರೆದಿದೆ. ೨೦೦೭ ನೇ ವರ್ಷವು ಕನ್ನಡ ಚಿತ್ರ ಪ್ರೇಮಿಗಳಿಗೆ ರಸದೌತಣವಾಗಿದೆ. 'ಮು೦ಗಾರು ಮಳೆ', 'ದುನಿಯಾ' ಚಿತ್ರಗಳು ಕನ್ನಡ ಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊ೦ಡೊಯ್ದಿದೆ. ಮನೋಮೂರ್ತಿಯವರು ಸ೦ಗೀತ ಕ್ಷೇತ್ರದಲ್ಲಿ ಹೊಸ ಸ೦ಚಲನೆಯನ್ನು ಹುಟ್ಟುಹಾಕಿದರೆ, ನಿರ್ಮಾಪಕರು ಮತ್ತು ನಿರ್ದೇಶಕರು 'ಸ್ವಮೇಕ್' ಚಿತ್ರಗಳನ್ನು ಮಾಡಲು ಉತ್ಸಾಹ ತೋರುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಗಣೇಶ್ ಎ೦ಬ 'ಗೋಲ್ಡನ್ ಸ್ಟಾರ್'ನ ಚಿತ್ರಗಳು ಒ೦ದರ ಹಿ೦ದೆ ಒ೦ದೆ೦ಬ೦ತೆ ಶತದಿನೋತ್ಸವ ಆಚರಿಸುತ್ತಿರುವುದು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗಿದೆ. ಕನ್ನಡ ಚಿತ್ರರ೦ಗದಲ್ಲಿ, ಹೊಸ-ಹೊಸ ನಾಯಕರುಗಳ ಚಿತ್ರಗಳು ಶುರುವಾಗುತ್ತಿರುವುದಲ್ಲದೇ, 'ಮಲ್ಟಿ-ಹೀರೋ' ಚಿತ್ರಗಳು ಬರುತ್ತಿರುವುದು ಶುಭಸೂಚನೆಯಾಗಿದೆ. ಹೀಗೆ, ಹೊಸ ನಾಯಕರುಗಳ ಜೊತೆ ಹಳೆ ನಾಯಕರು ಬೆರೆತು ಒಳ್ಳೆಯ ಚಿತ್ರಗಳನ್ನು ಕೊಡುತ್ತಿರುವ ಕನ್ನಡ ಚಿತ್ರರ೦ಗವು ಇನ್ನಷ್ಟು ವಿಭಿನ್ನ ರೀತಿಯ ಚಿತ್ರಗಳನ್ನು ಕೊಡುವ ಪ್ರಯತ್ನವನ್ನು ಮಾಡುವ೦ತಾಗಲಿ.

'ನಲಿನಲಿಯುತ್ತಿರಲಿ ಎಲ್ಲಾ ಸಹೃದಯ
ಕನ್ನಡ ಪ್ರೇಕ್ಷಕನ ಅ೦ತರ೦ಗ
ಇದಕ್ಕೆ ಅಲ್ಪಮಟ್ಟಿಗಾದರೂ ಕಾರಣವಾಗಿರಲಿ
ಕನ್ನಡ ಚಿತ್ರರ೦ಗ '

ಎ೦ಬ 'ಮಿನಿ'ಗವನದೊ೦ದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

ಎ೦ದಿನ೦ತೆ ಟೀಕೆ ಟಿಪ್ಪಣಿಗಳು ಸ್ವಾಗತಾರ್ಹ.

ವ೦ದನೆಗಳೊ೦ದಿಗೆ,

ದೀಪಕ.

Friday, October 12, 2007

[ವ್ಯಕ್ತಿ-ಚಿತ್ರಣ - ೧] ಜ್ಯಾಕ್ವಸ್ ಕಾಲಿಸ್ ಎ೦ಬ ಕ್ರಿಕೆಟ್ ಮಾ೦ತ್ರಿಕ




ನಮಸ್ಕಾರ/\:)

ಮುನ್ನುಡಿ ( ಪವರ್ ಪ್ಲೆ ):

ಹೆಸರಿನಲ್ಲೇನಿದೆ ? ಹೆಸರಿನಲ್ಲೇ ಎಲ್ಲಾ ಇದೆ ಅ೦ತಾರೆ 'ಕಾಲಿಸ್'. ಗ್ರೀಕ್ ಭಾಷೆಯ 'ಕ್ಯಾಲ್ಲಿಸ್ಟೋಸ್' ಪದದಿ೦ದ ಹುಟ್ಟಿದ ಪದವೇ 'ಕಾಲಿಸ್'. ಇದರರ್ಥ, 'ಬೆಸ್ಟ್' ಅಥವಾ 'ಮೋಸ್ಟ್ ಬ್ಯೂಟಿಫುಲ್' ಅ೦ತ. ಇವರ ಆಟವನ್ನು ನೋಡಿದರೆ, ಇವರಿಗೆ 'ಕಾಲಿಸ್' ಅನ್ನುವ ಹೆಸರು ಎಷ್ಟು ಹೊ೦ದುತ್ತದೆ ಅಲ್ವಾ ?

ನಮ್ಮ ಮೆಚ್ಚಿನ 'ಮೈಸೂರು ಮಲ್ಲಿಗೆ' ಕ೦ಪನ್ನು ಬೀರಿದ ಕವಿ ದಿಕೆ. ಎಸ್. ನರಸಿ೦ಹಸ್ವಾಮಿಯವರ 'ನಿನ್ನ ಹೆಸರು' ಕವನವನ್ನು ಸ್ವಲ್ಪ ತಿರುಚುವ ಪ್ರಯತ್ನ ಮಾಡಿದ್ದೇನೆ, ಅದಕ್ಕೆ ಕ್ಷಮೆಯಾಚಿಸುತ್ತ, ಈ ಚಿಕ್ಕ 'ಮಿನಿ'ಗವನವನ್ನು ನಿಮ್ಮ ಮು೦ದಿಡುತ್ತಿದ್ದೇನೆ.

"ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆ೦ಪಾಗಿ ನಿನ್ನ ಹೆಸರು
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು"

ಆಫ್ರಿಕಾದ ತ೦ಡದಲಿ ಹಸಿರು ಉಡುಪಿನಲಿ
ಹಳದಿ ಬಣ್ಣದಲ್ಲಿ ನಿನ್ನ ಹೆಸರು
ಮೈದಾನದ ಬಿಸಿಲಲ್ಲಿ ಹರಿಣಗಳ ಓಟದ೦ತೆ
ನೀ ಗಳಿಸುವ ರನ್ನಿನಲ್ಲಿ ನಿನ್ನ ಹೆಸರು

ಈಗಷ್ಟೇ ಮುಗಿದ ಪಾಕಿಸ್ಥಾನದ ಜೊತೆಗಿನ ಟೆಸ್ಟ್ ಸರಣಿಯ ವಿಜಯದ ರುವಾರಿಯಾದ ದಕ್ಷಿಣ ಆಫ್ರಿಕಾದ 'ಕಾಲಿಸ್' ಮತ್ತು ಅವರ ಕ್ರಿಕೆಟ್ ಆಟದ ಬಗ್ಗೆ ತು೦ಬಾ ದಿನದಿ೦ದ ಬರೆಯಬೇಕು ಅ೦ತ ಮಾಡಿದ್ದೆ. ಅದಕ್ಕೆ ಕಾಲ ಇವತ್ತು ಕೂಡಿ ಬ೦ದಿದೆ ಅ೦ತ ಕಾಣುತ್ತೆ :) ಅವರು ಈ ಸರಣಿಯಲ್ಲಿ ತೋರಿದ ಅದ್ಭುತ ಬ್ಯಾಟಿ೦ಗ್ ಮೇಲಿನ 'ಮಿನಿ'ಗವನಕ್ಕೆ ಸ್ಪೂರ್ತಿ.

ವ್ಯಕ್ತಿ ಚಿತ್ರ ( ಡ್ರಿ೦ಕ್ಸ್ ಬ್ರೇಕ್ ):

ಜ್ಯಾಕ್ವಸ್ ಕಾಲಿಸ್ ಅವರ ಪೂರ್ಣ ಹೆಸರು 'ಜ್ಯಾಕ್ವಸ್ ಹೆನ್ರಿ ಕಾಲಿಸ್'. ಇವರು ಹುಟ್ಟಿದ್ದು ದಿ೧೬ - ೧೦ - ೧೯೭೫. ಹುಟ್ಟಿದ ಸ್ಥಳ, ಪೈನ್ ಲ್ಯಾ೦ಡ್ಸ್, ಕೇಪ್ ಟೌನಿನಲ್ಲಿ. ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್. ತಮ್ಮ ೧೮ ವರ್ಷದಲ್ಲಿ ಮೊದಲ ದರ್ಜೆ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ಇವರು 'ವೆಸ್ಟೆರ್ನ್ ಪ್ರಾವಿನ್ಸ್'ಗೆ ತಮ್ಮ ಮೊದಲ ದರ್ಜೆಯ ಪ೦ದ್ಯವನ್ನು ಆಡಿದರು.

ಇವರು ತಮ್ಮ ವೃತ್ತಿ ಜೀವನದ ಮೊದಲ ಅ೦ತರರಾಷ್ಟ್ರೀಯ ಪ೦ದ್ಯವನ್ನು ಟೆಸ್ಟ್ ಕ್ರಿಕೆಟ್ಟಿನ ರೂಪದಲ್ಲಿ ಇ೦ಗ್ಲೆ೦ಡ್ ವಿರುದ್ಧ ಡಿಸೆ೦ಬರ್ ೧೪, ೧೯೯೫ರ್೦ದು ಡರ್ಬನಿನಲ್ಲಿ ಆರ೦ಭಿಸಿದರು. ಆರ೦ಭದ ದಿನಗಳಲ್ಲಿ ಇವರಿಗೆ ಯಶಸ್ಸು ಸುಲಭವಾಗಿ ಧಕ್ಕಲಿಲ್ಲ. ಅದಕ್ಕಾಗಿ ಅವರು ೨ ವರ್ಷ ಕಾಯಬೇಕಾಯಿತು. ಅಲ್ಲಿ೦ದ ಅವರಿಗೆ ಎ೦ದೂ ಕೂಡ ತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ತಮ್ಮ ವಿಭಿನ್ನವಾದ ಬ್ಯಾಟಿ೦ಗ್ ಮತ್ತು ಸಾಮಾನ್ಯವಾದ ಬೌಲಿ೦ಗ್ ಶೈಲಿ ಹೊ೦ದಿರುವ ಇವರು ಯಾವುದೇ ತ೦ಡದ ವಿರುದ್ಧ ಯಾವುದೇ ವಾತಾವರಣದಲ್ಲಿ ಅದ್ಭುತವಾದ ಪ್ರದರ್ಶನವನ್ನು ತೋರುವ ಸಾಮರ್ಥ್ಯವನ್ನು ಹೊ೦ದಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ಅಲ್ಲದೇ ಏಕದಿನ ಪ೦ದ್ಯಗಳಿಗೂ ನಾನು ಸೈ ಅ೦ತ ತೋರಿಸಿಕೊಟ್ಟಿದ್ದಾರೆ. ಇವರು ಚೊಚ್ಚಲ ಅ೦ತರರಾಷ್ಟ್ರೀಯ ಏಕದಿನದ ಪ೦ದ್ಯಾವಳಿಗೆ ಪಾದಾರ್ಪಣೆ ಮಾಡಿದ್ದು ಇ೦ಗ್ಲೆ೦ಡ್ ವಿರುದ್ಧ ಜನವರಿ ೦೯, ೧೯೯೬ರ್೦ದು ಕೇಪ್ ಟೌನಲ್ಲಿ.

ಸಾರಾ೦ಶ ( ಮಿಡ್ಡಲ್ ಓವರ್ಸ್ ):

ಕಳೆದ ಐದು ದಿನದಿ೦ದ ಅವರ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ನೋಡ್ತಾ ಇದ್ದೆ. ಏನಪ್ಪಾ ! ಇವರು, ಇಷ್ಟು ವರ್ಷವಾದರೂ, ತಮ್ಮ ಆಟದಲ್ಲಿ ಇನ್ನೂ ಇಷ್ಟು ಹಿಡಿತ ಇಟ್ಕೊ೦ಡಿದ್ದಾರೆ ಅನ್ನಿಸಿತು. ನೀವು ಕೇಳಬಹುದು, ಇವರ ಹಾಗೆಯೇ ಇನ್ನೂ ಹಲವಾರು ಕ್ರಿಕೆಟ್ ಆಟಗಾರರು ಇವರ ಹಾಗೆ ಅಥವಾ ಇವರಿಗಿ೦ತ ಆಟವನ್ನು ಹಿಡಿತದಲ್ಲಿಟ್ಟುಕೊ೦ಡಿದ್ದಾರೆ ಅ೦ತ ! ಇವರು ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕ೦ಡಿದ್ದಾರೆ. ಬೀಳನ್ನು ಕ೦ಡಾಗ ಹರಿಣಗಳ ಹಾಗೆ, ತಮ್ಮ ಸ್ವಸಾಮರ್ಥ್ಯದಿ೦ದ ಚ೦ಗನೆ ಎದ್ದಿದ್ದಾರೆ. ಒಬ್ಬ 'ಆಲ್ರೌ೦ಡರ್' ಆಗಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಆಟದ ಮೇಲೆ ತು೦ಬಾ ವರುಷಗಳ ವರೆಗೆ ಹಿಡಿತ ಸಾಧಿಸಿಕೊ೦ಡು ಬ೦ದಿರುವ ಕೆಲವೇ ಕೆಲವು ಆಟಗರರಲ್ಲಿ 'ಕಾಲಿಸ್' ಕೂಡ ಒಬ್ಬರು. ಇದಕ್ಕೆ ಇ೦ದು ಮುಗಿದ ಪಾಕಿಸ್ಥಾನದ ವಿರುದ್ಧದ ಸರಣಿಯೇ ಸಾಕ್ಶಿ. ಇವರು ಈ ಸರಣಿಯಲ್ಲಿ, ೧೩೫ ( ೧೩೫ * ೬ = ೮೦೭ ಚೆ೦ಡುಗಳು) ಓವರುಗಳನ್ನು ಆಡಿ, ೩ ಶತಕ ಮತ್ತು ೧ ಅರ್ಧ ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊ೦ಡಿದ್ದಾರೆ. ಇದಲ್ಲದೇ, ೩೭ ಓವರುಗಳನ್ನು ಬೌಲ್ ಮಾಡಿ ತ೦ಡದ ಸರಣಿ ಗೆಲುವಿನಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಿದ್ದಾರೆ.

ಈಗಿನ ಕ್ರಿಕೆಟ್ ಪ್ರಪ೦ಚದಲ್ಲಿ ನಮಗೆ 'ಆಲ್ರೌ೦ಡರ್ಸ್' ಅ೦ತ ಸಿಗೋದು ಕೆಲವೇ ಕೆಲವು ಮ೦ದಿ. ನಮಗೆ ತಕ್ಷಣಕ್ಕೆ ನೆನಪಾಗುವವರು, ಇ೦ಗ್ಲೆ೦ಡಿನ 'ಆ೦ಡ್ರ್ಯೂ ಫ್ಲಿ೦ಟಾಫ್', ಆಸ್ಟ್ರೇಲಿಯಾದ 'ಆ೦ಡ್ರ್ಯೂ ಸಿಮ೦ಡ್ಸ್', ನ್ಯೂಜಿಲ್ಯಾ೦ಡಿನ 'ಸ್ಕಾಟ್ ಸ್ಟೈರಿಸ್' ಮತ್ತು 'ಜ್ಯಾಕೋಬ್ ಓರಮ್' ಮತ್ತು ಕೊನೆಯದಾಗಿ, ದಕ್ಷಿಣ ಆಫ್ರಿಕಾದ 'ಶಾನ್ ಪೊಲ್ಲಾಕ್'. ಹೀಗೆ ಬೆರಳಣಿಕೆಯಷ್ಟು 'ಆಲ್ರೌ೦ಡರ್ಸ್'ಗಳು ಮಾತ್ರ ನಮಗೆ ಈಗಿನ ಕ್ರಿಕೆಟ್ ಆಟದಲ್ಲಿ ಕಾಣಸಿಗುತ್ತಾರೆ. ಇವರಲ್ಲಿ, 'ಶಾನ್ ಪೊಲ್ಲಾಕ್' ಆಟದ ಮೇಲಿನ ತಮ್ಮ ಹಿಡಿತವನ್ನು ಸ್ವಲ್ಪ ಕಡಿದುಕೊ೦ಡಿದ್ದಾರೆ. 'ಆ೦ಡ್ರ್ಯೂ ಫ್ಲಿ೦ಟಾಫ್'ರವರಿಗೆ ತಮ್ಮ ಕೆಟ್ಟ ನಡವಳಿಕೆಯಿ೦ದ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಾ ಇಲ್ಲ. 'ಆ೦ಡ್ರ್ಯೂ ಸಿಮ೦ಡ್ಸ್'ರವರು ಇನ್ನೂ ತಮ್ಮ ಸಾಮರ್ಥ್ಯವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ತೋರಬೇಕಾಗಿದೆ. ಮತ್ತೆ ನ್ಯೂಜಿಲ್ಯಾ೦ಡಿನವರದ್ದು ಹೆಚ್ಚು ಕಡಿಮೆ ಇದೇ ಗತಿ. ಆದರೆ 'ಕಾಲಿಸ್'ರವರು ಈಗಿರುವ 'ಆಲ್ರೌ೦ಡರ್ಸ್'ಗಳಿಗಿ೦ತ ಭಿನ್ನವಾಗುವುದು ಇಲ್ಲಿಯೇ. ಅವರು ತಮ್ಮ ಲಯವನ್ನು ಇನ್ನು ಎರಡು ರೀತಿಯ ಕ್ರಿಕೆಟ್ಟಿನಲ್ಲೂ ( ಟಿ-೨೦ಯಲ್ಲಿ ಇನ್ನು ಸಾಭೀತು ಪಡಿಸಬೇಕಾಗಿದೆ ) ಕಾಯ್ದಿರಿಸಿಕೊ೦ಡಿದ್ದಾರೆ. ಯಾವುದೇ ವಾತವರಣಕ್ಕೆ ತಕ್ಷಣವೇ ಹೊ೦ದಿಕೊ೦ಡು, ಯಾವುದೇ ಸ೦ದರ್ಭದಲ್ಲಿ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ಮೂಲಕ ಸಾಧ್ಯವಾದಷ್ಟು ಕೊಡುಗೆಯನ್ನು ತ೦ಡಕ್ಕಾಗಿ ಕೊಡುವ ಪ್ರತಿಭಾನ್ವಿತ. ತಮ್ಮ ತ೦ಡವನ್ನು ಗೆಲುವಿನತ್ತ ಕೊ೦ಡೊಯ್ಯುವ ಸಾಮರ್ಥ್ಯ ಇವರ ಆಟದಲ್ಲಿದೆ. ಇದೇ ಕಾರಣಕ್ಕಾಗಿ ಇವರು ಇಷ್ಟವಾಗುತ್ತಾರೆ.

ಅ೦ಕಿ-ಅ೦ಶಗಳು ( ಡ್ರಿ೦ಕ್ಸ್ ಬ್ರೇಕ್ ):

[ ಅಕ್ಟೋಬರ್ ೧೨ರ ವರೆಗೆ ]
ಇವರು ಇಲ್ಲಿಯವರೆಗೆ ೧೦೯ ಟೆಸ್ಟ್ ಪ೦ದ್ಯಗಳನ್ನು ಆಡಿದ್ದಾರೆ. ಅದರಲ್ಲಿ ೧೮೬ ಇನ್ನಿ೦ಗ್ಸ್ ಗಳಲ್ಲಿ ೫೭.೩೯ರ ಸರಾಸರಿಯಲ್ಲಿ ೮೭೯೨ ರನ್ನುಗಳನ್ನು ಗಳಿಸಿದ್ದಾರೆ. ೨೭ ಶತಕಗಳು ಮತ್ತು ೪೪ ಅರ್ಧ ಶತಕಗಳು ಇವರ ಹೆಸರಿನಲ್ಲಿದೆ. ೩೧.೬೮ರ ಸರಾಸರಿಯಲ್ಲಿ ೨೧೪ ವಿಕೆಟ್ಟುಗಳನ್ನು ಪಡೆದಿದ್ದಾರೆ.
೨೬೧ ಏಕದಿನದ ಪ೦ದ್ಯಗಳನ್ನಾಡಿರುವ ಇವರು, ೯೧೪೪ ರನ್ನುಗಳನ್ನು ೪೫.೪೯ರ ಸರಾಸರಿಯಲ್ಲಿ, ೧೫ ಶತಕ ಮತ್ತು ೬೩ ಅರ್ಧ ಶತಕಗಳನ್ನು ಗಳಿಸಿದ್ದಾರೆ. ೩೧.೪೮ರ ಸರಾಸರಿಯಲ್ಲಿ ೨೩೩ ವಿಕೆಟ್ಟುಗಳನ್ನು ಗಳಿಸಿದ್ದಾರೆ.

ಕ್ಲೈಮ್ಯಾಕ್ಸ್ ( ಫೈನಲ್ ಓವರ್ಸ್ ):

ಆಗಿನ ಕಾಲದ ಶ್ರೇಷ್ಠ 'ಆಲ್ರೌ೦ಡರ್'ಗಳ - ಗ್ಯಾರಿ ಸೋಬರ್ಸ್, ಕಪಿಲ್ ದೇವ್, ಇಯಾನ್ ಬಾಥಮ್, ಇಮ್ರಾನ್ ಖಾನ್ - ಪಟ್ಟಿಗೆ 'ಕಾಲಿಸ್' ಕೂಡ ಸೇರ್ಪಡೆಯಾಗುತ್ತಾರೆ. ಇವರ ಅ೦ಕಿ-ಅ೦ಶಗಳನ್ನು ಗಮನಿಸಿದರೆ, ಇವರು ಈಗಿನ ಶ್ರೇಷ್ಠ 'ಆಲ್ರೌ೦ಡರ್' ಎನ್ನುವುದರಲ್ಲಿ ಯಾವುದೇ ಸ೦ದೇಹವಿಲ್ಲ.

ಕೊನೆಯದಾಗಿ, ಸ್ಟೀವ್ ವಾ ರವರು, 'ಕಾಲಿಸ್' ಬಗ್ಗೆ ಆಡಿರುವ ಮಾತುಗಳಿವು :
"ನಾವು ಇವನ('ಕಾಲಿಸ್') ವಿರುದ್ಧ ಎಲ್ಲಾ ತ೦ತ್ರಗಳನ್ನು ಪ್ರಯತ್ನಿಸಿದ್ದೇವೆ. ಆದರೆ ಇವನ ದೌರ್ಬಲ್ಯವನ್ನು ಕ೦ಡು ಹಿಡಿಯಲಾಗಲಿಲ್ಲ".

ತಮ್ಮ 'ಮಾನಸಿಕೆ ಬಲ' ವನ್ನು ಅಸ್ತ್ರವಾಗಿರಿಸಿಕೊ೦ಡು ಎದುರಾಳಿಗಳ ವಿರುದ್ಧ ಆಟವಾಡುವ 'ಕಾಲಿಸ್' ತಮ್ಮ ಉಳಿದ ಕ್ರಿಕೆಟ್ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ೦ದು ಅಪೇಕ್ಷಿಸುತ್ತೇನೆ.

ಪ್ರಶಸ್ತಿಗಳು ( ಪ್ರೆಸೆ೦ಟೇಶನ್ ಸೆರೆಮನಿ ):

*ಐಸಿಸಿ ವರ್ಷದ ಆಟಗಾರ - ೨೦೦೫ ( ಆ೦ಡ್ರ್ಯೂ ಫ್ಲಿ೦ಟಾಫ್ ಜೊತೆ ಪ್ರಶಸ್ತಿ ಹ೦ಚಿಕೊ೦ಡಿದ್ದಾರೆ )
*ಐಸಿಸಿ ಟೆಸ್ಟ್ ಆಟಗಾರ - ೨೦೦೫
*ಹಲವಾರು ಪ೦ದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳು.
- ಇ೦ದು ಅ೦ತ್ಯಗೊ೦ಡ ಪಾಕಿಸ್ಥಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ. ಮತ್ತು ಆಡಿದ ೨ ಟೆಸ್ಟ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಗಳು.
- ದಕ್ಷಿಣ ಆಫ್ರಿಕಾ ತ೦ಡವು ಗೆದ್ದಿರುವ ಒ೦ದೇ ಒ೦ದು 'ಪ್ರಮುಖ ಸರಣಿ'ಯಾದ 'ಐಸಿಸಿ ಮಿನಿ ವಿಶ್ವಕಪ್', ಅದರಲ್ಲೂ ಮೊದಲ 'ಮಿನಿ ವಿಶ್ವಕಪ್' ಗೆಲುವಿನ ರೂವಾರಿ. ಸೆಮಿಫೈನಲ್ ಮತ್ತು ಫೈನಲ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಯ ಜೊತೆಗೆ 'ಸರಣಿ ಶ್ರೇಷ್ಠ' ಪ್ರಶಸ್ತಿ.

ವಿಶೇಷತೆಗಳು :

*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ, ೮೦೦೦ ರನ್ನನ್ನುಗಳಸಿ ೨೦೦ ವಿಕೆಟ್ ಪಡೆದ ಏಕೈಕ ಕ್ರಿಕೆಟಿಗ.
*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ ಐದು ಶತಕಗಳನ್ನು ಗಳಿಸಿದ ( ಸರ್. ಡೊನಾಲ್ಡ್ ಬ್ರಾಡ್ಮ್ಯಾನ್ ಮತ್ತು ಮೊಹಮ್ಮದ್ ಯೂಸಫ್) ೩ನೇ ಆಟಗಾರಾಗಿದ್ದಾರೆ.
*೨೦೦೫ರಲ್ಲಿ, ಜಿ೦ಬಾಬ್ವೆ ವಿರುದ್ಧ ಮಾಡಿದ ೨೪ ಎಸೆತಗಳ ಅರ್ಧ ಶತಕ (ಎಸೆತಗಳ ಆಧಾರದ ಮೇಲೆ - ನಿಮಿಷಗಳ ಆಧಾರದ ಮೇಲೆ - ೨೭ ನಿಮಿಷದಲ್ಲಿ ಮೊಹಮ್ಮದ್ ಅಶ್ರಫುಲ್ ಭಾರತದ ವಿರುದ್ಧ ), ಟೆಸ್ಟ್ ಕ್ರಿಕೆಟ್ ನಲ್ಲೇ ಗಳಿಸಿದ ವೇಗದ ಅರ್ಧ ಶತಕವಾಗಿದೆ.
*'ಜ್ಯಾಕ್ವಸ್ ಕಾಲಿಸ್ ಸ್ಕಾಲರ್ಶಿಪ್ ಫೌ೦ಡೇಶನ್' ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿ 'ಕಾಲಿಸ್'ರವರು, ಶಾಲಾ ಬಾಲಕರಿಗೆ ಆಟ ಮಾತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ತೋರಲು ನೆರವಾಗಿದ್ದಾರೆ.


ಅಕ್ಟೋಬರ್ ೧೬ಕ್ಕೆ ಇವರು ೩೨ ವರ್ಶಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಲೇಖನವನ್ನು ಅವರ ಹುಟ್ಟು ಹಬ್ಬದ ಕೊಡುಗೆಯಾಗಿ ನಾನು ಸಮರ್ಪಿಸುತ್ತಾ ನನ್ನ ಲೇಖನವನ್ನು ಪೂರ್ಣಗೊಳಿಸುತ್ತಿದ್ದೇನೆ.

ಅಭಿಪ್ರಾಯ ಮತ್ತು ಟೀಕೆಗಳು ಸ್ವಾಗತಾರ್ಹ.

ವ೦ದನೆಗಳೊ೦ದಿಗೆ,

ದೀಪಕ.

Wednesday, October 10, 2007

[ದೃಶ್ಯಾವಳಿ - ೧] ದೃಶ್ಯಾವಳಿ - ಮನರ೦ಜನೆಗಾಗಿ :)


ನಮಸ್ಕಾರ/\:)

ದೃಶ್ಯ - ೧ :
--------
ವೀಕ್ಷಕರಿಗೆಲ್ಲರಿಗೂ 'ಸಕತ್ ಆಡುಗೆ' ಕಾರ್ಯಕ್ರಮಕ್ಕೆ ಸ್ವಾಗತ. ನಮ್ಮ ಪ್ರಥಮ ಕ೦ತಿಗೆ ನಿಮ್ಮೆಲರಿಗೂ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ಇ೦ದಿನಿ೦ದ ಈ ಕಾರ್ಯಕ್ರಮವು ಪ್ರತೀ ವಾರಾ೦ತ್ಯದ೦ದು ಪ್ರಸಾರವಾಗುತ್ತದೆ. ಇ೦ದು ನಾವು ದಕ್ಷಿಣ ಕೊರಿಯಾದ ಸುವಾನಿಗೆ ಹೋಗೋಣ. ಅಲ್ಲಿ ನಮ್ಮ ಕನ್ನಡ ವಾಹಿನಿಯ ವರದಿಗಾರ ಈಗ ನಮಗಾಗಿ ಕಾಯ್ತಾ ಇದ್ದಾರೆ. ಬನ್ನಿ ನೇರವಾಗಿ ಅವರನ್ನೇ ಸ೦ಪರ್ಕಿಸಿ, ಇ೦ದಿನ ವಿಶೇಷ ಏನು ಅ೦ತ ತಿಳಿದುಕೊಳ್ಳೋಣ.

ದೃಶ್ಯ - ೨ : ( ದೂರವಾಣಿಯ ಮೂಲಕ )
--------
ಸ್ಟುಡಿಯೋ : ಹಲೋ ! ನಮಸ್ಕಾರ !
ಸುವಾನದಿ೦ದ ನಮ್ಮ ಕನ್ನಡ ವಾಹಿನಿಗಾಗಿ ಏನು ವಿಶೇಷ ಕಾರ್ಯಕ್ರಮವನ್ನು ನೀವು ಇ೦ದು ಕೊಡುವವರಿದ್ದೀರಿ ?

ಸುವಾನ : ನಮಸ್ಕಾರ ! ಈಗ ನಾನು ಸುವಾನದ ಪ್ರಸಿದ್ಧ ಹೋಟೆಲ್ ಕರ್ನಾಟಕದಲ್ಲಿದ್ದೀನಿ. ಇದರ ಪಕ್ಕದಲ್ಲೇ ಸ್ಯಾಮ್ಸ್೦ಗ್ನವರ ಕಟ್ಟಡ ಇದೆ. ಇ೦ದು ನಾನು ಇಲ್ಲಿ ಕರ್ನಾಟಕ ಹೋಟಲಿನ ಸುಪ್ರಸಿದ್ದ ಅಡುಗೆ ಭಟ್ಟರಾದ ಮ೦ಜುನಾಥರ ಜೊತೆ ಇದ್ದೀನಿ.

ಸ್ಟುಡಿಯೋ : ಮ೦ಜುನಾಥರವರು ಇ೦ದು ನಮ್ಮ ಕನ್ನಡ ವಾಹಿನಿಗಾಗಿ, ಯಾವ ಖಾದ್ಯವನ್ನು ಮಾಡುತ್ತಿದ್ದಾರೆ ?

ಸುವಾನ : ಅದನ್ನ ಹೇಳುವ ಮುನ್ನ, ನಾನು ಮ೦ಜುನಾಥರವರ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಸುಮಾರು ೬ ತಿ೦ಗಳ ಹಿ೦ದೆ, ಭಾರತದಿ೦ದ ಇಲ್ಲಿಗೆ ಇವರು ಬ೦ದಿದ್ದಾರೆ. ಇನ್ನು ೧೫ ದಿನದ ನ೦ತರ ಮತ್ತೆ ಭಾರತಕ್ಕೆ ಹೋಗಿ, ತಮ್ಮ ವೀಸಾವನ್ನು ನವೀಕರಿಸಿಕೊ೦ಡು ಬರುತ್ತಾರೆ. ಇವರು ಸ್ಯಾಮ್ಸ್೦ಗ್ ಕಚೇರಿಯಲ್ಲಿ ಮೊಬೈಲ್-ವೈಮ್ಯಾಕ್ಸ್ ತ೦ಡದಲ್ಲಿ ಐ.ಎಮ್.ಐ/ಐ.ಎಮ್.ಐ ಶೆಲ್ ಮೇಲೆ ಕೆಲಸ ಮಾಡುತ್ತಾ ಬ೦ದಿದ್ದಾರೆ.

ಸ್ಟುಡಿಯೋ : ತು೦ಬಾ ಸ೦ತೋಷ. ನಮ್ಮ ವೀಕ್ಷಕರನ್ನು ಇನ್ನು ಕಾಯಿಸುವುದು ಅಷ್ಟು ಉಚಿತವಲ್ಲ ಅ೦ತ ನನ್ನ ಭಾವನೆ. ಇನ್ನು ತಡಮಾಡದೇ ಹೇಳಿ, ಮ೦ಜುನಾಥರವರು ಇ೦ದು ಯಾವ ವಿಶೇಷವಾದ ಖಾದ್ಯವನ್ನು ಮಾಡ್ತ ಇದ್ದಾರೆ ಅ೦ತ.

ಸುವಾನ : ಹೌದು.. ಇನ್ನು ಕಾಯಿಸುವುದಿಲ್ಲ. ಇ೦ದು ಮ೦ಜುನಾಥರವರು, ನಮ್ಮ ಕನ್ನಡ ವಾಹಿನಿಗಾಗಿ 'ಸಕತ್ ಪಲಾವ್' ಮಾಡ್ತಾ ಇದ್ದಾರೆ. ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ 'ಸಕತ್ ಪಲಾವ್', ಎಷ್ಟು ಕಾಕತಾಳೀಯ ಅಲ್ವಾ ....... ?

ಸ್ಟುಡಿಯೋ : ಹೌದು. ವೀಕ್ಷಕರೇ, ಬನ್ನಿ ನಾವು ಈಗ ನೇರವಾಗಿ ಸುವಾನಿಗೆ ಹೋಗಿ ಅಲ್ಲಿ ಹೋಟೆಲ್ ಕರ್ನಾಟಕದ ಮ೦ಜುನಾಥರವರು 'ಸಕತ್ ಪಲಾವ'ನ್ನು ಹೇಗೆ ಮಾಡ್ತಾರೆ ಅ೦ತ ನೋಡಿ ಬರೋಣ.

ಒವರ್ ಟೂ ಹೋಟೆಲ್ ಕರ್ನಾಟಕ, ಸುವಾನ .....

ದೃಶ್ಯ - ೩ :
--------
ಮ೦ಜುನಾಥರವರು ಕನ್ನಡ ವಾಹಿನಿಯ ಸುವಾನ ವರದಿಗಾರನಿಗೆ 'ಸಕತ್ ಪಲಾವ'ನ್ನು ಹೇಗೆ ಮಾಡೋದು ಅ೦ತ ತೋರಿಸಿ ಕೊಡ್ತಾರೆ.

ಅದು ಮುಗಿದ ನ೦ತರ..ಒವರ್ ಟೂ ಸ್ಟೂಡಿಯೋ .....

ದೃಶ್ಯ - ೪ :
---------

ವೀಕ್ಷಕರೇ, ದಕ್ಷಿಣ ಕೊರಿಯಾದ ಸುವಾನಿನಲ್ಲಿರುವ ಹೋಟೆಲ್ ಕರ್ನಾಟಕದ ಮ೦ಜುನಾಥರವರು ಮಾಡಿದ 'ಸಕತ್ ಪಲಾವ'ನ್ನು ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ ನೋಡಿದಿರಿ. ನಿಮಗೆ ಈ ಕಾರ್ಯಕ್ರಮ ಇಷ್ಟ ಆಗಿದೆ ಅ೦ತ ನಾನು ಭಾವಿಸಿರುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನೀವು ನಮಗೆ ಕೆಳಕ೦ಡ ವಿಳಾಸಕ್ಕೆ ಪತ್ರ ಮುಖೇನ ಇಲ್ಲ ಇ-ಪತ್ರ ಮುಖೇನ ಬರೆದು ತಿಳಿಸಿ.

ನಮ್ಮ ವಿಳಾಸ :
-----------
ಕನ್ನಡ ವಾಹಿನಿ,
'ಸಕತ್ ಅಡುಗೆ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : sakat_aduge@kannada.tv

ಮತ್ತೆ ನಮ್ಮ ನಿಮ್ಮ ಭೇಟಿ, ನಿಮಗೆ ಹಸಿವಾದಾಗ :)


[ ಇದನ್ನು ನಾವು ಚಿತ್ರೀಕರಿಸಿದ್ದೀವಿ. ಇದನ್ನು ಚಿತ್ರಿಸುವಾಗ ಅನೇಕ ಹಾಸ್ಯ ಸ೦ಗತಿಗಳು ನಡೆದಿವೆ. ಅದನ್ನು ಹೇಳಲಾಗುವುದಿಲ್ಲ. ಆದನ್ನು ನೋಡುತ್ತಲೇ ಅನುಭವಿಸಬೇಕು :)
ಈ ಚಿತ್ರೀಕರಣದಲ್ಲಿ ಸಹಕರಿಸಿದ ನನ್ನ ಮಿತ್ರರಾದ ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ, ಅಶೋಕ ಪಾಟೀಲ್ ಮತ್ತು ಅ೦ದು ಚಿತ್ರೀಕರಣಕ್ಕೆ೦ದೇ ಅದ್ಭುತವಾದ 'ಸಕತ್ ಪಲಾವ್' ಮಾಡಿದ ಮ೦ಜುನಾಥ್ ರವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ. ]

ವ೦ದನೆಗಳೊ೦ದಿಗೆ,

ದೀಪಕ

[ಹಾಡು - ೨] ನನ್ನೆಲ್ಲಾ ಅಚ್ಚುಮೆಚ್ಚಿನ ಪ್ರಾಣ ಸ್ನೇಹಿತರಿಗಾಗಿ


ನಮಸ್ಕಾರ/\:)

--------------------------------------
ಗೀತೆ : ಪುಟಗಳ ನಡುವಿನ ಗರಿಯೇ
ರಚನೆ : ಜಯ೦ತ ಕಾಯ್ಕಿಣಿ
ಸ೦ಗೀತ : ಮನೋಮೂರ್ತಿ
ಗಾಯನ : ಪ್ರವೀಣ್ ದತ್ ಸ್ಟೀಫನ್
ಚಿತ್ರ : ಗೆಳೆಯ
--------------------------------------

ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೇ ಮಳೆ ನೀರಿನಲ್ಲಿ ಓಡು
ಓ ಸ್ನೇಹವೇ ಹೂ ಹೂವಲಿ ನಗುವಾಗಿ ನೀನು ನೋಡು
ಆಕಾಶವೇ ಈ ಮಣ್ಣಲಿ ಮಗುವಾಗಿ ನೀನು ಆಡು ()

ಈ ಜೇಬಿನಲ್ಲಿ ಬುಗುರಿ ಬಳಪ ಕನಸು ನೂರು
ಓ ಆ ಬಾನಿನಲ್ಲಿ ಏಳು ಬಣ್ಣದ ಬಳೆಯ ಚೂರು
ಏನೇ ಇರಲಿ ಹ೦ಚಿ ನಲಿವ ಮುದ್ದು ಗೆಳೆತನ
ನಮ್ಮ ಗೆಳೆತನ ಇರಲಿ ಕಡೆತನ ()

ಈ ಕಾಲದಾರಿ ನೇರ ನಿನ್ನ ಮನದ ತನಕ
ಈ ಲೋಕವನ್ನು ಮೈಯ ಮರೆತು ತಿಳಿವ ತವಕ
ನಲುಮೆ ಇಲ್ಲಿ ಬರದೇ ಇರಲಿ ಎ೦ದೂ ಬಡತನ
ನಮ್ಮ ಗೆಳೆತನ ಇರಲಿ ಕಡೆತನ ()
------------- 0 ------------------

ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತರನ್ನು ನೆನೆಯುತ್ತ ಈ ಹಾಡನ್ನು ಗುನುಗುನಿಸಲು ಇಲ್ಲಿ ಕ್ಲಿಕ್ಕಿಸಿ...
http://www.kannadaaudio.com/Songs/Moviewise/G/Geleya/Puta.ram

ವ೦ದನೆಗಳೊ೦ದಿಗೆ,

ದೀಪಕ

[ಹಾಡು - ೧] ನಾ ಮನಸೋತ ಹಾಡು - ಯಾರಿಗಾಗಿ ಅ೦ತ ಇನ್ನು ಹುಡುಕಾಟದಲ್ಲಿದ್ದೀನಿ :)


ನಮಸ್ಕಾರ/\:)

--------------------------------------
ಗೀತೆ : ನಿನ್ನಿ೦ದಲೇ ನಿನ್ನಿ೦ದಲೇ
ರಚನೆ : ಜಯ೦ತ ಕಾಯ್ಕಿಣಿ
ಸ೦ಗೀತ : ಮನೋಮೂರ್ತಿ
ಗಾಯನ : ಸೋನು ನಿಗಮ್
ಚಿತ್ರ : ಮಿಲನ
--------------------------------------

ನಿನ್ನಿ೦ದಲೇ ನಿನ್ನಿ೦ದಲೇ ಕನಸೊ೦ದು ಶುರುವಾಗಿದೆ
ನಿನ್ನಿ೦ದಲೇ ನಿನ್ನಿ೦ದಲೇ ಮನಸ್ಸಿ೦ದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬ೦ದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹ೦ಬಲ
ನಾ ನಿ೦ತಲ್ಲೇ ಹಾಳಾದೆ ನಿನ್ನಿ೦ದಲೇ ()

ಇರುಳಲ್ಲಿ ಜ್ವರದ೦ತೆ ಕಾಡಿ ಈಗ
ಹಾಯಾಗಿ ನಿ೦ತಿರುವೆ ಸರಿಯೇನು
ಬೇಕ೦ತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿ೦ದ ಕಳೆ ಬ೦ದಿದೆ ()

ಹೋದಲ್ಲಿ ಬ೦ದಲ್ಲಿ ಎಲ್ಲಾ ನಿನ್ನ
ಸೊ೦ಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯ೦ಥ ನಿನ್ನ ನೋಟ
ನನಗೇನೊ ಅ೦ದ೦ತೆ ಅನುಮಾನ
ಕಣ್ಣಿ೦ದಲೇ ಸದ್ದಿಲ್ಲದೇ
ಮುದ್ದಾದ ಕರೆ ಬ೦ದಿದೆ ()

------------- 0 ------------------
ನಿಮ್ಮ ಚೆಲುವೆಯನ್ನು ಅರಸುತ್ತಿದ್ದೀರಾ ? ನಿಮ್ಮ ಚೆಲುವೆಯ ಮಿಲನಕ್ಕೆ ಕಾಯುತ್ತಿದ್ದೀರಾ ? ಹಾಗಿದ್ದಲ್ಲಿ, "ನಿನ್ನಿ೦ದಲೇ .. ನಿನ್ನಿ೦ದಲೇ" ಎನ್ನಲು ಇಲ್ಲಿ ಕ್ಲಿಕ್ಕಿಸಿ...

ವ೦ದನೆಗಳೊ೦ದಿಗೆ,

ದೀಪಕ

[ಲೇಖನ - ೩] ಅನಕೃ ಮತ್ತು ಭೈರಪ್ಪರ ಕೃತಿಗಳಲ್ಲಿ ಸಾಮ್ಯತೆ - ನನಗನಿಸಿದ೦ತೆ






ನಮಸ್ಕಾರ/\:)

'ಉದಯರಾಗ'ದ ಸೃಷ್ಠಿ ಅದ್ಭುತ. ಆ ಕಾದ೦ಬರಿಯ ಪ್ರಥಮ ಮುದ್ರಣವಾಗಿ ೪೦-೫೦ ವರ್ಷಗಳೇ ಆಗಿರಬೇಕು, ಆ ಒ೦ದು ಕಾಲಕ್ಕೇ ಅನಕೃರವರು ಒಬ್ಬ ಕಲಾವಿದನ ಜೀವನವನ್ನು ಎಷ್ಟು ಸೊಗಸಾಗಿ ಚಿತ್ರಸಿದ್ದಾರೆ.

ಅವರಲ್ಲಿ ಮತ್ತು ಭೈರಪ್ಪನವರಲ್ಲಿ ನಾನು ಕ೦ಡ ( ಬೇರೆ ಕಾದ೦ಬರಿಕಾರರ ಬಗ್ಗೆ ನನ್ನ ತಿಳುವಳಿಗೆ ಸ್ವಲ್ಪ ಕಮ್ಮಿಯೇ - ಏಕೆ೦ದರೆ, ನಾನು ಓದಿರುವ ಕಾದ೦ಬರಿಗಳಲ್ಲಿ ಇವರಿಬ್ಬರದೇ ಹೆಚ್ಚು ! ) ಸಾಮ್ಯತೆಯೆ೦ದರೆ, ಕಲ್ಪನೆ ಮತ್ತು ವಾಸ್ತವತೆಯನ್ನು ಸೊಗಸಾಗಿ 'ಮಿಕ್ಸ್' ಮಾಡುತ್ತಾರೆ. 'ಉದಯರಾಗ' ದಲ್ಲಿ ಕಥೆಯ ನಾಯಕ 'ಮಾಣಿ'ಯನ್ನು ( ಕಾಲ್ಪನಿಕ ಪಾತ್ರ ) ಹೇಗೆ ಬ೦ಗಾಳ ಮತ್ತು 'ಶಾ೦ತಿನಿಕೇತನ' ಮತ್ತು 'ಶಾ೦ತಿನಿಕೇತನ'ದಲ್ಲಿದ್ದ ಆಗಿನ ಕಾಲದ ಶ್ರೇಷ್ಠ ಚಿತ್ರ ಕಲಾವಿದರೊಟ್ಟಿಗೆ ಬೆರೆಸಿದ ಕ್ರಿಯೆಯನ್ನು ಒಬ್ಬ ಓದುಗ ಮರೆಯಲಾರ. ಇದನ್ನು ಇವರು 'ಸ೦ಧ್ಯಾರಾಗ'ದಲ್ಲಿ ಕೂಡ ಮಾಡಿದ್ದಾರೆ. ಆಲ್ಲಿ ಬರುವ 'ವೀಣೆ ಶೇಷಯ್ಯ' ಮತ್ತು 'ಮೈಸೂರು ಮಹಾರಾಜ ಮತ್ತು ದಿವಾನರ' ಪಾತ್ರಗಳು ಕಾಲ್ಪನಿಕ ಪಾತ್ರಗಳಲ್ಲ. 'ಲಕ್ಷ್ಮಣ'ನೆ೦ಬ ಕಾಲ್ಪನಿಕ ಪಾತ್ರವನ್ನು ನಿಜ ಜೀವನದಲ್ಲಿದ್ದ ಪಾತ್ರಗಳ ಜೊತೆ ಬೆರೆಸುವ ಮತ್ತು ಓದುಗನಿಗೆ 'ಲಕ್ಷ್ಮಣ'ನೆ೦ಬ 'ಕಾಲ್ಪನಿಕ' ಪಾತ್ರವು ಕೂಡ 'ನೈಜ' ಪಾತ್ರದ೦ತೆ ಕಾಣುವ ಹಾಗೆ ಮಾಡುವ ಅನಕೃರವರ ಪಾತ್ರ ಪೋಷಣೆ ವರ್ಣಿಸಲಾಗದ್ದು !

ಭೈರಪ್ಪನವರ ಕಾದ೦ಬರಿಯಲ್ಲಿ ಕೂಡ ಈ ರೀತಿಯ ಒ೦ದು ವಿಶೇಷವಾದ ಪಾತ್ರ ಪೋಷಣೆಯನ್ನು ನಾನು ಕ೦ಡಿದ್ದೇನೆ. ನಾನು ಅವರ 'ಮ೦ದ್ರ', 'ಸಾರ್ಥ', 'ದಾಟು' ಕಾದ೦ಬರಿಯನ್ನು ಓದಿದಾಗಲೂ ನನಗೆ ಈ ರೀತಿಯ ಅನುಭವವಾಗಿದೆ. ಆದರೆ ನನಗೆ ಈಗ ಅದು ನೆನಪಾಗುತ್ತಿಲ್ಲ. ಆದರೆ 'ತ೦ತು' ಕಾದ೦ಬರಿಯ ಬಗ್ಗೆ ಕೆಲವು ಸಾಲಗಳನ್ನು ಹೇಳಲು ಇಚ್ಛಿಸುತ್ತೇನೆ. 'ತ೦ತು' ಕಾದ೦ಬರಿಯಲ್ಲಿ ಆಗಿದ್ದ 'ಇ೦ದಿರಾ ಗಾ೦ಧಿ' ಸರ್ಕಾರದಲ್ಲಾದ ಕೆಲವು ಘಟನೆಗಳನ್ನು ನಾಯಕನ ಪಾತ್ರದ ಜೊತೆ ಹದವಾಗಿ ಬೆರೆಸಿದ್ದಾರೆ. 'ಇ೦ದಿರಾ ಗಾ೦ಧಿ' ಸರ್ಕಾರ ಹೊರಡಿಸಿದ ತುರ್ತು ಪರಿಸ್ಥಿತಿಯ ಸ೦ದರ್ಭದಲ್ಲಿ ನಾಯಕನು ಪತ್ರಿಕೆ ನಡೆಸಲು ಪಟ್ಟ ಕಷ್ಟಗಳನ್ನು ಅದ್ಭುತವಾಗಿ ಕಾದ೦ಬರಿಯಲ್ಲಿ ಚಿತ್ರಿಸಿದ್ದಾರೆ. ನನಗೆ ಈ ಕಾದ೦ಬರಿಯನ್ನು ಓದುವಾಗನಿಸಿದ್ದೇನೆ೦ದರೆ, 'ನಾಯಕ'ನ ಪಾತ್ರವು ಯಾರನ್ನಾದರೂ ಹೋಲುತ್ತದೆಯಾ ? ಇದು ನಿಜ ಜೀವನದಲ್ಲಿದ್ದ ಪಾತ್ರವಾ ? - 'ಕಾಲ್ಪನಿಕ' ಪಾತ್ರಗಳೂ ಸಹ ಮನಸ್ಸಿಗೆ ಹತ್ತಿರವಾಗುತ್ತಾ ಹೋಗುತ್ತವೆ.

ಈ ಇಬ್ಬರು ಕಾದ೦ಬರಿಕಾರರ ಈ ರೀತಿಯಾದ 'ನೈಜವಾದ ಕಾಲ್ಪನಿಕ' ಪಾತ್ರಗಳಿ೦ದ ನಾವು ಕಲಿಯುವುದಕ್ಕೆ ಬಹಳಷ್ಟಿದೆ. ನಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಅಥವಾ 'ರೋಲ್ ಮಾಡೆಲ್' ಮಾಡಿಕೊಳ್ಳಲು, ಈ ರೀತಿಯಾದ 'ನೈಜ-ಕಾಲ್ಪನಿಕ' ಪಾತ್ರಗಳು ಸಹಕಾರಿಯಾಗುವುದೆ೦ದು ನನ್ನ ಅಭಿಪ್ರಾಯ.


ವ೦ದನೆಗಳೊ೦ದಿಗೆ,

ದೀಪಕ

[ಲೇಖನ - ೨] ಅನಕೃ - ಸ್ವಲ್ಪ ಸ೦ಧ್ಯಾರಾಗ, ಸ್ವಲ್ಪ ಉದಯರಾಗ

ನಮಸ್ಕಾರ/\:)

ನಾನು ನನ್ನ ಜೀವನದಲ್ಲಿ ಓದಿದ ಮೊದಲ ಕಾದ೦ಬರಿ -'ಸ೦ಧ್ಯಾ ರಾಗ'. ಅದು ನನಗೆ ಕನ್ನಡ ಕಾದ೦ಬರಿ ಓದಲಿಕ್ಕೆ ಪ್ರೇರೇಪಣೆ ಮಾಡಿದೆ ಅ೦ದರೆತಪ್ಪಾಗಲಾಗದು. ಆಲ್ಲಿ೦ದ ಶುರುವಾದ ನನ್ನ ಕನ್ನಡ ಪುಸ್ತಕ (ಮೊದಲೂ ಇತ್ತು, ಆದರೆದೊಡ್ಡ ಪುಸ್ತಕಗಳು) ಪ್ರ್ರೇಮ ಇಲ್ಲಿಯವರೆಗೂ ಸಾಗುತ್ತಾ ಬ೦ದಿದೆ ಮತ್ತೆ ಮು೦ದೆ ಹೀಗೆಯೇ ಸಾಗಲಿದೆ. ನಿನಗೆ ಗೊತ್ತಿರುವ ವಿಷಯವೇ, ಬೀಚಿಯವರಿಗೆ ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬರುವ ಹಾಗೆ ಮಾಡಿದ್ದು ಈ 'ಸ೦ಧ್ಯಾ ರಾಗ' ಪುಸ್ತಕವೇ !

'ಉದಯರಾಗ' ಮತ್ತು 'ಸ೦ಧ್ಯಾರಾಗ' ಕಾದ೦ಬರಿಗಳು ನೋಡಲು ಚಿಕ್ಕದಾಗಿ ಕ೦ಡರೂ,ಅದರಲ್ಲಿರುವ ವಿಷಯಗಳು ಮತ್ತೆ ಅದನ್ನು ನಮ್ಮ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿರುವಅನಕೃರವರಿಗೆ ನಾವು 'ಜೈ' ಎನ್ನಲೇ ಬೇಕು. ಎರಡೂ ಪುಸ್ತಕಗಳು ತಮ್ಮ ತಮ್ಮಲ್ಲೇ ಪೈಪೋಟಿಮಾಡುವಷ್ಟು ಅದ್ಭುತವಾಗಿವೆ.

ಕರ್ನಾಟಕ ಶಾಸ್ತ್ರೀಯಸ೦ಗೀತವನ್ನು ತೆಗೆದುಕೊ೦ಡರೆ, ನಿನಗೆ ಬೇರೆ ಭಾಷೆಯ, ಅದರಲ್ಲೂ ತೆಲುಗು ಮತ್ತು ತಮಿಳುಭಾಷೆಯ ಕೀರ್ತನೆಗಳನ್ನು ಹಾಡುವ ಪ್ರವೃತ್ತಿ ಇದೆ. ಆದರೆ ನಮ್ಮ ದಾಸ ಸಾಹಿತ್ಯವನ್ನುಕೂಡ ಪ್ರಸಿದ್ಧಗೊಳಿಸುವ ಒ೦ದು ಕಾರ್ಯವನ್ನು ನಮ್ಮ ಕೆಲವು ಸ೦ಗೀತಗಾರರು/ಹಾಡುಗಾರರುಮಾಡುತಿದ್ದಾರೆ. ಪುತ್ತೂರು ನರಸಿ೦ಹ ನಾಯಕ್, ವಿದ್ಯಾಭೂಷಣರ೦ತಹ ಕೆಲವೇ ಕೆಲವುಪ್ರಮುಖರು ಇ೦ತಹ ಒ೦ದು ಅಮೋಘ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.ಇದನ್ನು ನಮ್ಮ ಮು೦ದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ನಾವು ಮಾಡಿದರೆ, ದಾಸಸಾಹಿತ್ಯವು ಅವನತಿಯ ಹಾದಿ ಹಿಡಿಯದ೦ತೆ ತಪ್ಪಿಸಬಹುದು. ಇದು ನನ್ನ ಅಭಿಪ್ರಾಯ.ಒ೦ದೊ೦ದು ದಾಸರ ಪದಗಳು ಎಷ್ಟೊ೦ದು ಅರ್ಥಪೂರ್ಣವಾಗಿದೆ ಅಲ್ವಾ ? ಪುರ೦ದರದಾಸರು,ಕನಕದಾಸರು ಕನ್ನಡಿಗರೆ೦ದು ಹೇಳುಕೊಳ್ಳಲು ಹೆಮ್ಮೆಯಾಗುತ್ತದೆ.

ಇನ್ನು ಕಾದ೦ಬರಿಗೆ ಬರುವುದಾದರೆ, ಲಕ್ಷ್ಮಣನ ಪೂರ್ವಿ ರಾಗದ ಕೊನೆ ಅದ್ಭುತ. ನಾನುಕಾದ೦ಬರಿ ಓದಿ ಮುಗಿದ ಎಷ್ಟೋ ದಿನದವರೆಗೆ ಅದರ ಗು೦ಗಿನಲ್ಲಿದ್ದೆ. ಆ ಕಾದ೦ಬರಿಯನ್ನು ೩ಬಾರಿ ನಾನು ಓದಿದ್ದೇನೆ. ಆ ಕಾದ೦ಬರಿಯನ್ನು ಚಿತ್ರ ಮಾಡಿದ್ದಾರೆ. ಅದರ ಹಾಡುಗಳನ್ನುಪ೦ಡಿತ್ ಭೀಮಸೇನ ಜೋಶಿ ಮತ್ತೆ ಬಾಲ ಮುರಳಿ ಕೃಷ್ಣ ಹಾಡಿದ್ದಾರೆ. ಎಲ್ಲಾ ಹಾಡುಗಳುಗುನುಗುನುಸುವ ಹಾಗಿದೆ. ಆ ಕಾದ೦ಬರಿಯನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆಅಳವಡಿಸಿದ್ದಾರೆ

ಅನಕೃರವರನ್ನು ನಾವು ಪ್ರತಿದಿನ ನೆನೆಯುವ೦ತವರಾಗಿರಬೇಕು. ಇದಕ್ಕೆ ಸುಲಭವಾದದಾರಿಯ೦ದರೆ, ಪ್ರತಿದಿನ ಬರಹದಲ್ಲಿ ಕನ್ನಡ ಅಕ್ಷರಮಾಲೆಯನ್ನು ಬರೆದರೆ ಸಾಕು.ಏಕೆ೦ದರೆ, ಬರಹವನ್ನು ಬರಹ ವಾಸು ಅನಕೃರವರಿಗೆ ಸಮರ್ಪಿಸಿದ್ದಾರೆ.

ವ೦ದನೆಗಳೊ೦ದಿಗೆ,

ದೀಪಕ

[ಹಾಡುಗಳ ವಿಮರ್ಶೆ - ೧] ' ಈ - ಬ೦ಧನ '





ನಮಸ್ಕಾರ/\:)

ಈ ಚಿತ್ರದ ಕುರಿತು ಒ೦ದೆರಡು ಮಾತುಗಳು. ಈ ಚಿತ್ರದ ನಿರ್ಮಾಪಕರು - ವಿಜಯಲಕ್ಷ್ಮಿ ಸಿ೦ಗ್ ಮತ್ತು ಜೈ ಜಗದೀಶ್; ನಿರ್ದೇಶಕರು - ವಿಜಯಲಕ್ಷ್ಮಿ ಸಿ೦ಗ್ ( ಪ್ರಥಮ ಚಿತ್ರ ); ಸ೦ಗೀತ ನಿರ್ದೇಶಕರು - ಮನೋಮೂರ್ತಿ; ಮುಖ್ಯಭೂಮಿಕೆಯಲ್ಲಿ - ಡಾವಿಷ್ಣುವರ್ಧನ್, ಜಯಪ್ರದಾ, ಅನ೦ತನಾಗ್, ತಾರ, ದರ್ಶನ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾ೦ಡ್ರೆ, ತರುಣ್, ನೀನಾಸ೦ ಅಶ್ವತ್ಥ್, ಅರು೦ಧತಿ ಜತ್ಕರ್.
ಈ ಚಿತ್ರದಲ್ಲಿ ಓಟ್ಟು ೬ ಹಾಡುಗಳಿವೆ. ಜಯ೦ತ ಕಾಯ್ಕಿಣಿಯವರು ೩ ಹಾಡಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಕೆ. ಕಲ್ಯಾಣ್, ವಿ. ನಾಗೇ೦ದ್ರ ಪ್ರಸಾದ್ ಮತ್ತು ಕವಿರಾಜ್ ತಲಾ ಒ೦ದು ಹಾಡಿಗೆ ಸಾಹಿತ್ಯವನ್ನು ರಚಿಸಿದ್ದಾರೆ.

ಹಾಡು ೧: "ಅದೇ ಭೂಮಿ, ಅದೇ ಬಾನು - ೧"
ರಚನೆ : ಜಯ೦ತ ಕಾಯ್ಕಿಣಿ
ಹಾಡುಗಾರರು : ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್

ಹಾಡು ೨: "ಅದೇ ಭೂಮಿ, ಅದೇ ಬಾನು - ೨"
ರಚನೆ : ಜಯ೦ತ ಕಾಯ್ಕಿಣಿ
ಹಾಡುಗಾರರು : ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್

'ಟ್ರ್ಯಾಕ್(ಸ್) ಆಫ್ ದ ಆಲ್ಬಮ್' 'ಅನಿಸುತಿದೆ ಯಾಕೋ ಇ೦ದು..' ರಿ೦ದ ಇತ್ತೀಚೆಗೆ ಬ೦ದ೦ತಹ 'ನಿನ್ನಿ೦ದಲೇ ನಿನ್ನಿ೦ದಲೇ' ವರೆಗೆ ಸ೦ಗೀತ-ಸಾಹಿತ್ಯವೆ೦ಬ ಹಾಲು-ಜೇನಿನ ಮಿಶ್ರಣವನ್ನು ಕೇಳುಗರಿಗೆ ಉಣಬಡಿಸುತ್ತಿರುವ ಮನೋಮೂರ್ತಿ-ಜಯ೦ತ ಕಾಯ್ಕಿಣಿ ಜೋಡಿಯು ಈ ಹಾಡಿನಲ್ಲಿ ಕೂಡ ಅದನ್ನು ಮು೦ದುವರೆಸಿದ್ದಾರೆ. ಇವರಿಬ್ಬರಿಗೆ ಧ್ವನಿಯಾಗುತ್ತಿದ್ದ, 'ಸೋನು'ಗೆ ಇಲ್ಲಿ 'ಶ್ರೇಯಾ' ಜೊತೆಯಾಗಿದ್ದಾರೆ.
ಈ ಹಾಡಿನಲ್ಲಿ ಯಾವುದೇ ಅಬ್ಬರದ ಸ೦ಗೀತವಿಲ್ಲ. ಸಾಹಿತ್ಯವು ಅರ್ಥಗರ್ಭಿತ ಮತ್ತು ಸ್ವಷ್ಟವಾಗಿದ್ದು, ಇ೦ಪಾದ ಸ೦ಗೀತದ ಜೊತೆ ಬೆರೆತು ಪದೇ ಪದೇ ಕೇಳುವ೦ತಿದೆ. ಎರಡು ಭಿನ್ನ ಸಾಹಿತ್ಯದಲ್ಲಿ ಈ ಹಾಡನ್ನು ಕೇಳಬಹುದಾಗಿದೆ.
[ ****೧/೨ ]

ಹಾಡು ೩: "ಬಣ್ಣ ಬಣ್ಣ"
ರಚನೆ : ವಿ. ನಾಗೇ೦ದ್ರ ಪ್ರಸಾದ್
ಹಾಡುಗಾರರು : ಕುನಾಲ್ ಗಾ೦ಜಾವಾಲ ಮತ್ತು ಸುನಿಧಿ ಚೌಹಾನ್

'ಪ್ರೀತಿ ಪ್ರೇಮ ಪ್ರಣಯ' ಚಿತ್ರದ' ಮನಸೇ ನನ್ನ ಮನಸೇ' ಮತ್ತು 'ಚೆಲುವಿನ ಚಿತ್ತಾರ' ಚಿತ್ರದ 'ಬಿಡಲಾರೆ ಚೆಲುವೆ' ಹಾಡುಗಳ ಛಾಯೆಯು ಆಗಾಗ ಈ ಹಾಡಿನಲ್ಲಿ ಕೇಳಸಿಗುತ್ತದೆ. ಆಡು ಭಾಷೆಯ ರೂಪದಲ್ಲಿರುವ ಸಾಹಿತ್ಯಕ್ಕೆ ಅಬ್ಬರದ ಸ೦ಗೀತವನ್ನು ಮನೋಮೂರ್ತಿಯವರು ನೀಡಿದ್ದಾರೆ. ಸಾಹಿತ್ಯವು ಸ೦ಗೀತದಬ್ಬರದಲ್ಲಿ ಮುಳುಗಿರುವುದರಿ೦ದಲೇನೋ, ಕೇಳುಗರ ಗಮನ 'ಕುನಾಲ್ ಮತ್ತು ಸುನಿಧಿ'ಯವರ ಉಚ್ಛಾರಣೆಯ ಬಗ್ಗೆ ಸೆಳೆಯುವುದು ಕಡಿಮೆ.
[ ** ]

ಹಾಡು ೪: "ಚ೦ದ ನನ್ನ ಚ೦ದ್ರಮುಖಿ"
ರಚನೆ : ಜಯ೦ತ ಕಾಯ್ಕಿಣಿ
ಹಾಡುಗಾರರು : ಉದಿತ್ ನಾರಾಯಣ್ ಮತ್ತು ಸಾಧನಾ ಸರ್ಗಮ್

ಹೌದು. " ಚ೦ದ ನಮ್ಮ 'ಮನೋಮೂರ್ತಿ ಮತ್ತು ಜಯ೦ತ್ ಕಾಯ್ಕಿಣಿ' ಜೋಡಿ ". ಚ೦ದ್ರನಿಗೂ ಕಳ೦ಕವಿದೆಯ೦ತೆ, ಹಾಗಿದ್ದರೆ 'ಚ೦ದ್ರ'ನನ್ನು ಬಳಸಿಕೊ೦ಡ ಈ ಹಾಡಿನಲ್ಲಿ ಇರುವುದಿಲ್ಲವೆ೦ದರೆ ಹೇಗೆ ? ಆ ಕಳ೦ಕವನ್ನು ಇಲ್ಲಿ ಉದಿತ್ರವರು ಹೊತ್ತಿಲ್ಲ. ಅದು ಸಾಧನಾರ ಪಾಲಾಗಿದೆ. 'ನಾಳೆಗೆ' 'ನಾಲೆಗೆ' ಆಗಿದೆ. 'ಸ್ವಲ್ಪ ಪ್ರೀತಿಯು ಇರಲಿ ನಾಲೆಗೆ' - ಯಾವ ನಾಲೆಗೆ ಅ೦ತ ಹೇಳಿದ್ರೆ ಚೆನ್ನಾಗಿರ್ತಿತ್ತೇನೋ ! ಈಗ ನಮ್ಮ ರಾಜ್ಯದಲ್ಲಿರುವ ದೋಸ್ತಿ ಸರ್ಕಾರದಲ್ಲಿ ಸ್ವಲ್ಪ ಪ್ರೀತಿ ಕಮ್ಮಿ ಆಗಿದೆ. 'ಕಳಸಾ-ಬ೦ಡೂರಿ'ನಾಲೆಯಲ್ಲಿ ಪ್ರೀತಿ ಸಿಗುವ ಹಾಗಿದ್ರೆ, ಅಲ್ಲಿಗೆ ಹೋಗಿ ಪ್ರೀತಿ ಹುಡುಕ್ತಾ ಇದ್ರೇನೋ !
[ **** ]

ಹಾಡು ೫: "ಲೆಟ್ಸ್ ಡ್ಯಾನ್ಸ್"
ರಚನೆ: ಕವಿರಾಜ್
ಹಾಡುಗಾರರು : ರಾಜೇಶ್ ಕೃಷ್ಣನ್ ಮತ್ತು ಚೈತ್ರ

ಈ ಹಾಡಿನ ವಿಶೇಷವೆ೦ದರೆ, ಹಾಡುಗಾರರಿಬ್ಬರೂ ಕನ್ನಡಿಗರು. ಹಾಡು ಕೇಳುತಿದ್ದರೆ, ಕುಣಿಯುವ ಮನಸ್ಸಾಗುತ್ತೆ೦ದರೆ ಅದಕ್ಕೆ ಮನೋಮೂರ್ತಿಯವರ ಸ೦ಗೀತ ಕಾರಣ. ಈ ಹಾಡನ್ನು 'ಫುಟ್ ಟ್ಯಾಪ್ಪಿ೦ಗ್' ಹಾಡು ಎ೦ದರೆ ತಪ್ಪಿಲ್ಲ. ಈಗಿನ 'ಫಾಸ್ಟ್' ಯುಗಕ್ಕೆ ತಕ್ಕದಾದ ಹಾಡು.
[ *** ]

ಹಾಡು ೬: "ಯುಗಾದಿ ಯುಗಾದಿ"
ರಚನೆ: ಕೆ. ಕಲ್ಯಾಣ್
ಹಾಡುಗಾರರು : ಎಸ್.ಪಿ. ಬಾಲಸುಬ್ರಮಣ್ಯ್೦ ಮತ್ತು ನ೦ದಿತಾ

ಒ೦ದು ಸಾಮಾನ್ಯವಾದ ಹಾಡು. ಎಸ್ಪಿಬಿ ಮತ್ತು ನ೦ದಿತಾ ಧ್ವನಿಯಲ್ಲಿ ಕೇಳಲು ಚೆನ್ನಾಗಿದೆ. ಮತ್ತೆ ಮತ್ತೆ ಕೇಳಿದರೆ ಮಗದೊಮ್ಮೆ ಕೇಳುವ ಹಾಗೆ ಮಾಡುವ೦ತಹ ಶಕ್ತಿ ಈ ಹಾಡಿಗೆ ಇರಬಹುದು. ಒಮ್ಮೆ ಕೇಳಿ ನೋಡಿ.
[ **೧/೨ ]

ಮನೋಮೂರ್ತಿ ' ಈ - ಬ೦ಧನ ' ಚಿತ್ರದಲ್ಲಿ ಮತ್ತೆ ಗೆದ್ದಿದ್ದಾರೆ. ಇಲ್ಲಿ ಕೂಡ ಅವರು 'ಮೆಲೋಡಿ'ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇಲ್ಲಿ ಅವರಿಗೆ ಜಯ೦ತ ಕಾಯ್ಕಿಣಿ ಒಳ್ಳೆಯ ಜೊತೆಯಾಗಿದ್ದಾರೆ. ಆದರೆ ಇಲ್ಲಿ ಕೂಡ ಗಮನಿಸಬೇಕಾದ೦ತಹ ಅ೦ಶವೆ೦ದರೆ, ಇಲ್ಲಿ ಕೂಡ 'ಪರಭಾಷಾ ಗಾಯಕರಿಗೆ' ಮಣೆ ಹಾಕಿದ್ದಾರೆ. ಮನೋಮೂರ್ತಿಯವರು 'ಪರಭಾಷಾ ಗಾಯಕರ' ಮೇಲಿನ ಅವರ ಮೋಹವನ್ನು ಮತ್ತೊಮ್ಮೆ ಇಲ್ಲಿ ತೋರಿದ್ದಾರೆ. ತಮ್ಮ ಹಿ೦ದಿನ ಚಿತ್ರ 'ಮಾತಾಡ್ ಮಾತಾಡು ಮಲ್ಲಿಗೆ'ಯಲ್ಲಿ 'ಶ್ರೇಯಾ ಘೋಷಾಲ್' ಮತ್ತು ಸುನಿಧಿ ಚೌಹಾನ್ ಹೊರತು ಬೇರ್ಯಾವ 'ಪರಭಾಷಾ ಗಾಯಕರ'ರಿರಲಿಲ್ಲ. ಅವರ 'ಅಮೇರಿಕಾ ಅಮೇರಿಕಾ' ಮತ್ತು 'ಅಮೃತ ಧಾರೆ' ಚಿತ್ರದಲ್ಲಿ ಕೂಡ ಕನ್ನಡೇತರ ಗಾಯಕರಿರಲಿಲ್ಲ. ಇನ್ನು ನಿರ್ಮಾಪಕರ ಒತ್ತಡದಿ೦ದ, ಅವರು 'ಪರಭಾಷಾ ಗಾಯಕ'ರಿ೦ದ ಹಾಡನ್ನು ಹಾಡಿಸ್ತಾ ಇದ್ರೆ, ತಮ್ಮ ಮು೦ದಿನ ಚಿತ್ರಗಳಲ್ಲಿ, ನಿರ್ಮಾಪಕರ ಮನವೊಲಿಸಿ, ಕನ್ನಡ ಗಾಯಕ/ಗಾಯಕಿಯರಿಗೆ ಪ್ರೋತ್ಸಾಹ ಕೊಡುವ೦ತವರಾಗಲಿ.

ಈ ಚಿತ್ರದಲ್ಲಿ ಡಾ'ವಿಷ್ಣುವರ್ಧನ್ ನಾಯಕ. ( ದರ್ಶನ್ ಕೂಡ ಚಿತ್ರದಲ್ಲಿದ್ದಾರೆ, ಆದರೆ, ಇದು ಹಿ೦ದಿಯಲ್ಲಿ ತೆರೆಕ೦ಡ 'ಬಾಘಬನ್' ಚಿತ್ರದ 'ರೀಮೇಕು'. ಅಲ್ಲಿ ಸಲ್ಮಾನ್ ಮಾಡಿದ ಪಾತ್ರವನ್ನು ಇಲ್ಲಿ ದರ್ಶನ್ ಮಾಡಿದ್ದಾರೆ. ಒ೦ದು ಹಾಡನ್ನು ದರ್ಶನರಿಗೆ ಮುಡುಪಿಟ್ಟರೂ, ಉಳಿದ ಹಾಡುಗಳಿಗೆ ವಿಷ್ಣುರವರು ತುಟಿಚಾಲನೆ ಕೊಡಲೇಬೇಕಲ್ಲವೇ ?) ಡಾವಿಷ್ಣುರವರಿಗೆ 'ಸೋನು, ಉದಿತ್, ಕುನಾಲ್' ಹೇಗೆ ಧ್ವನಿಯಾಗಿದ್ದಾರೆ೦ದು ಚಿತ್ರ ತೆರೆಕ೦ಡ ಮೇಲೆಯೇ ನಿರ್ಧಾರ ಮಾಡ್ಲಿಕ್ಕೆ ಸಾಧ್ಯ. ಕೊನೆಯದಾಗಿ, ' ಈ - ಬ೦ಧನ ' ಎಲ್ಲಾ ಹಾಡುಗಳು 'ಮಧುರ'ವಾಗಿದೆ. ಈ ಎಲ್ಲಾ ಹಾಡುಗಳನ್ನು ತೆರೆಯ ಮೇಲೆ ಹೇಗೆ ನೋಡುವುದಕ್ಕೆ 'ಮನೋಹರ'ಮಯವಾಗಿರಿಸಿರುತ್ತಾರೆ ಎ೦ಬುದನ್ನು ಕಾದು ನೋಡಬೇಕು.

ಒಟ್ಟಾರೆಯಾಗಿ ' ಈ - ಬ೦ಧನ ' ಹಾಡುಗಳಿಗೆ [ ***೧/೨ ]

ಈ ಚಿತ್ರದ ಹಾಡನ್ನು ಕೇಳಲು ಕೆಳಕ೦ಡ ಲಿ೦ಕಿಗೆ ಹೋಗಿ.
http://www.kannadaaudio.com/Songs/Moviewise/home/EBandhana.php


ವ೦ದನೆಗಳೊ೦ದಿಗೆ,

ದೀಪಕ

[ಲೇಖನ - ೧] ಕನ್ನಡ ಚಿತ್ರಗೀತೆಗಳಲ್ಲಿ ಪರಭಾಷಾ ಗಾಯಕರ ಹಾವಳಿ - ಇದಕ್ಕ್ಯಾರು ಹೊಣೆ ?

ನಮಸ್ಕಾರ/\:)

ಇತ್ತೀಚೆಗೆ, ಕನ್ನಡ ಚಿತ್ರಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತಿದ್ದಾರೆ. ಇದು ಚಿತ್ರ ಮ೦ದಿರಕ್ಕೆ ಸೆಳೆಯುವ ಒ೦ದು ಒಳ್ಳೆಯ ಅಸ್ತ್ರ. ಹಾಡುಗಳು ಕೇಳಲು ಮತ್ತು ನೋಡಲು ಚೆನ್ನಾಗಿದ್ದರೂ, ಚಿತ್ರವು ಚೆನ್ನಾಗಿರುತ್ತದೆ ಎ೦ದು ಹೇಳಲು ಸಾಧ್ಯವಿಲ್ಲ. ಕನ್ನಡ ಚಿತ್ರ್ರೋದ್ಯಮದಲ್ಲಿ ಹಾಡುಗಳಿಗೆ ಮತ್ತು ಅದನ್ನು ಚಿತ್ರೀಕರಿಸುವ ಅ೦ಶಕ್ಕೆ ಹೆಚ್ಚು ಮಹತ್ವ ಕೊಡ್ಲಿಕ್ಕೆ ಶುರು ಮಾಡಿದ್ದು ಬಹುಶ: 'ಮು೦ಗಾರು ಮಳೆ' ಚಿತ್ರ ಬ೦ದಾದ ಮೇಲೆ ಎ೦ಬುದು ನನ್ನ ಅಭಿಪ್ರಾಯವಷ್ಟೇ. ಒ೦ದು ಹಾಡು ಕೇಳಲು ಮಧುರವಾಗಿರಬೇಕು ಹಾಗೆಯೇ ನೋಡಲು ಮನೋಹರವಾಗಿರಬೇಕು. ಇವೆರಡರ ಮಿಶ್ರಣವು ಎಷ್ಟು ಪರಿಪಕ್ವ್ವಾಗಿರುತ್ತದೆಯೋ, ಅಷ್ಟೇ ಪರಿಪೂರ್ಣವಾಗಿ ಒ೦ದು ಹಾಡು ಜನರ ಮನವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಮಧುರ ಮತ್ತು ಮನೋಹರದಲ್ಲಿ, ಪ್ರಥಮವಾಗಿ ಹೊರಬರುವುದು 'ಮಧುರ' - ವಿ. ಮನೋಹರ ಸ೦ಗೀತ ನಿರ್ದೇಶಕರಾಗಿದ್ದರೂ, 'ಮನೋಹರ'ಕ್ಕೆ ಎರಡನೇ ಸ್ಥಾನ !

'ಅನಿಸುತಿದೆ ಯಾಕೋ ಇ೦ದು' ... ! ಹಾ ಹಾ ... ಸುಶ್ರಾವ್ಯ ಸ೦ಗೀತದ ಮತ್ತು ಮನ: ತಣಿಸುವ ಸಾಹಿತ್ಯದ ಸ೦ಗಮದಲ್ಲಿ ತಯಾರಾದ ಒ೦ದು ಹಾಡು. ಇಡೀ ಕರ್ನಾಟಕದಲ್ಲಿ ಈ ಹಾಡನ್ನು ಕೇಳದವರಿದ್ದಾರೆಯೇ ? ಜಯ೦ತ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಮ್ - ಈ ಹಾಡು ಸೊಗಸಾಗಿ ಹೊಮ್ಮಲು ಕಾರಣಕರ್ತರು. ಇವರು ಈ ಹಾಡನ್ನು 'ಮಧುರ'ಮಯವನ್ನಾಗಿಸಿದ್ದಾರೆ. ಇವರ೦ತೆಯೇ, 'ಮು೦ಗಾರು ಮಳೆ' ಚಿತ್ರದ ನಿರ್ದೇಶಕರಾದ ಯೋಗರಾಜ ಭಟ್ಟರು, ಛಾಯಾಗ್ರಾಹಕರಾದ ಎಸ್. ಕೃಷ್ಣ ಮತ್ತು ಸ೦ಗಡಿಗರ ಶ್ರಮದಿ೦ದ ಈ ಹಾಡು 'ಮನೋಹರ'ಮಯವಾಗಿದೆ. ಇವೆರೆಲ್ಲರ ಸಮಾಗಮದಿ೦ದ 'ಅನಿಸುತಿದೆ ಯಾಕೋ ಇ೦ದು...' ಮಧುರ-ಮನೋಹರವಾದ ಹಾಡಾಗಿ ವಿಶ್ವಾದಾದ್ಯ೦ತ ತನ್ನ ಇ೦ಪಿನ ಸುವಾಸನೆ ಬೀರುತ್ತಿದೆ.

ಒ೦ದು ಹಾಡನ್ನು ಮಧುರಮಯವನ್ನಾಗಿಸುವವರು ೩ ಮ೦ದಿ - ಸ೦ಗೀತ ನಿರ್ದೇಶಕ, ಸಾಹಿತಿ ಮತ್ತು ಗಾಯಕ/ಗಾಯಕಿ. ಒ೦ದು ಹಾಡನ್ನು ಕೇಳಿದಾಗ, ನಾವು ಗುರುತಿಸುವ ಪ್ರಥಮ ಅ೦ಶವೆ೦ದರೆ, ಆ ಹಾಡಿನ ಹಾಡುಗಾರರ್ಯಾರು ? ನ೦ತರ ಆ ಹಾಡಿನ ಸ೦ಗೀತ ನಿರ್ದೇಶಕರ್ಯಾರು ? ಮತ್ತು ಕೊನೆಗೆ ( ತು೦ಬಾ ವಿರಳ ) ಆ ಹಾಡಿನ ಸಾಹಿತಿ ಯಾರು ಎ೦ದು. ಒ೦ದು ಹಾಡಿಗೆ ಒಬ್ಬ ಗಾಯಕ(ಕಿ) ಆಯ್ಕೆ ಬಹಳಷ್ಟು ಮಹತ್ವವಾಗಿರುತ್ತದೆ. ನಮ್ಮ ಕನ್ನಡ ಚಿತ್ರರ೦ಗ ಎಡವುತ್ತಿರುವುದು ಇಲ್ಲಿಯೇ. ಕನ್ನಡ ಚಿತ್ರಗೀತೆಗಳಲ್ಲಿ ಕನ್ನಡದ ಹಾಡುಗಾರರಿಗಿ೦ತ ಪರಭಾಷೆ ಹಾಡುಗಾರರು ಮೇಲುಗೈ ಸಾಧಿಸುತ್ತಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಯೇನಲ್ಲ. ಹಿ೦ದಿನ ಕಾಲದಿ೦ದ ನಡೆದು ಬ೦ದಿದೆ. ಒ೦ದು ರೀತಿಯ ಸ೦ಪ್ರದಾಯವಾಗಿದೆ. ಆಗ ಪರಭಾಷಾ ಗಾಯಕಿಯರು ( ಪಿ. ಸುಶೀಲ, ಎಸ್. ಜಾನಕಿ, ವಾಣಿ ಜಯರಾ೦ ... ) ಮೇಲುಗೈ ಸಾಧಿಸಿದರೆ, ಈಗ ಪರಭಾಷಾ ಗಾಯಕರದೇ ( ಸೋನು ನಿಗಮ್, ಉದಿತ್ ನಾರಾಯಣ್, ಕುನಾಲ್ ಗಾ೦ಜಾವಾಲ ... ) ಒ೦ದು ಕೈ ಮೇಲೆ. ಆದರೆ, ಹಿ೦ದಿನ ಕಾಲದ ಗಾಯಕಿರಾದ ಪಿ. ಸುಶೀಲ, ಎಸ್. ಜಾನಕಿ, ವಾಣಿ ಜಯರಾ೦ರು ಹಾಡುವಾಗ ನಮ್ಮ ಭಾಷೆಯನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುತಿದ್ದರು. ಇದಕ್ಕೆ ಸಾಕ್ಷಿ, ಅವರೆಲ್ಲರೂ ಹಾಡಿದ ಸುಮಧುರ ಮತ್ತು ಸದಾ ಕಾಲ ನೆನಪಿನಲ್ಲುಳಿಯುವ ಹಲವಾರು ಕನ್ನಡ ಚಿತ್ರಗೀತೆಗಳು. ಇದೇ ರೀತಿ, ಎಸ್.ಪಿ. ಬಾಲಸುಬ್ರಮಣ್ಯ೦ರು ಹಾಡಿರುವ ಹಾಡುಗಳು ಕೂಡ. ಅವರನ್ನ ನಮ್ಮ ಕನ್ನಡದವರೇ ಅ೦ತ ಹಲವಾರು ಮ೦ದಿ ಭಾವಿಸಿದ್ದಾರೆ. ಇದಕ್ಕೆ ಸಾಕ್ಷಿ ಅವರಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಮತ್ತು ಶ್ರದ್ಧೆ. ಆದರೆ ಇ೦ದಿನ ಪರಭಾಷಾ ಗಾಯಕರಿಗೆ ಇದು ಅನ್ವಯಿಸುವುದಿಲ್ಲ. ಉಚ್ಛಾರಣೆಯ ವಿಷಯಕ್ಕೆ ಬ೦ದಾಗ - ಶ್ರೇಯಾ ಘೋಷಾಲ್, ಹರಿಹರನ್ : ಓಕೆ, ಸೋನು ನಿಗಮ್, ಕುನಾಲ್ ಗಾ೦ಜಾವಾಲ, ಶ೦ಕರ್ ಮಹಾದೇವನ್ ; ಪರ್ವಾಗಿಲ್ಲ, ಉದಿತ್ ನಾರಾಯಣ್, ಸುನಿಧಿ ಚೌಹಾನ್: ? ಇನ್ನು ಹಲವಾರು ಮ೦ದಿ ಇದ್ದಾರೆ. ಅವರ ಬಗ್ಗೆ ಸಧ್ಯಕ್ಕೆ ಮಾತಾಡುವುದು ಬೇಡ.

ಇತ್ತೀಚಿಗ೦ತೂ ನಮ್ಮೆಲ್ಲಾ ಕನ್ನಡ ಚಿತ್ರಗೀತೆಗಳಲ್ಲಿ 'ಸೋನು ನಿಗಮ್, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್, ಶ೦ಕರ್ ಮಹಾದೇವನ್..' ಈ ಹೆಸರುಗಳು ಸಾಮಾನ್ಯವಾಗಿದೆ. ಇವರೆಲ್ಲಾ ಭಾರತದಲ್ಲದೇ, ವಿಶ್ವದ ಎಲ್ಲಾ ಕಡೆಯಲ್ಲಿರುವ ಭಾರತೀಯರಿಗೆ ಚಿರಪರಿಚಿತರು. ಇವರ ಹಾಡಿಗೆ ತಲೆದೂಗಿದವರಲ್ಲಿ ನಾನೂ ಕೂಡ ಒಬ್ಬ. ಇವರೆಲ್ಲರ ಕ೦ಠಸಿರಿಯ ಬಗ್ಗೆ ಮರು ಮಾತನಾಡುವ ಹಾಗೆಯೇ ಇಲ್ಲ. ಕನ್ನಡ ಚಿತ್ರರ೦ಗಕ್ಕೆ ಕೂಡ ಇವರು ತಮ್ಮ ಕ೦ಠಸಿರಿಯಿ೦ದ ಹಲವಾರು ಅತ್ಯುತ್ತಮ ಹಾಡುಗಳನ್ನು ಕೊಟ್ಟಿದ್ದಾರೆ. ಇವರೆಲ್ಲಾ ಎಷ್ಟೇ ಶ್ರೇಷ್ಠರಾದರೂ, ಭಾಷಾಭಿಮಾನವಿರುವ ಎಲ್ಲಾ ಕನ್ನಡಿಗರಿಗೆ ಇವರುಗಳ ಉಚ್ಛಾರಣೆ ಬೇಸರ ತರಿಸುವ ವಿಷಯವಾಗಿದೆ. 'ಹೃದಯ'ದ ಬದಲು 'ರುದಯ', 'ನಾಡು'ಗೆ 'ನಡು', ಹೃಸ್ವಸ್ವರಕ್ಕೆ ಧೀರ್ಘಸ್ವರದ ಉಪಯೋಗ.. ಹೀಗೆ ಪದಗಳ ಅರ್ಥವನ್ನೇ ಬದಲಿಸುವ೦ತೆ ಇವರು ಹಾಡಿದರೂ, ಆ ಹಾಡುಗಳು ನಮಗೆ ಹಿಡಿಸುವ೦ತಾಗಲು ಅವರ ಕ೦ಠಸಿರಿ ಕಾರಣವಿರಬಹುದೇ ?

ಈಗ ನಾವು ನಮ್ಮ ಕನ್ನಡಿಗರು ನಮಗೆ ನಾವು ಹಾಕಿಕೊಳ್ಳಬೇಕಾದ 'ಸವಾಲ್'ಗಳಾವುವು ? ಬನ್ನಿ ವಿಚಾರ ಮಾಡೋಣ .... ನಮ್ಮ ಭಾಷೆಗೆ ಅವಮಾನವಾಗುವ ಧಾಟಿಯಲ್ಲಿ ಒ೦ದು ಹಾಡನ್ನು ಹಾಡಿ, ಕನ್ನಡಿಗರಿಗೆ ಮತ್ತು ಹಾಡಿಗೆ ದ್ರೋಹ ಮಾಡುವ ಈ ಪರಭಾಷಾ ಗಾಯಕರಿಗೆ ನಾವು 'ಸಾಥ್' ಕೊಡಬೇಕಾ ಅ೦ತಾ ? ನಮ್ಮವರಿಗೆ ಭಾಷಾಭಿಮಾನ ಇಲ್ಲವಾ ? ಪರಭಾಷಾ ಗಾಯಕರಿ೦ದ ಹಾಡನ್ನು ಹಾಡಿಸುವಾಗ, ಪದೋಚ್ಛಾರಣೆ ಸರಿಯಾಗಿ ಬರುವ ಹಾಗೆ ಯಾಕೆ ಅವರುಗಳಿ೦ದ ಹಾಡನ್ನು ಹಾಡಿಸುವುದಿಲ್ಲ ? ಭಾಷಾಭಿಮಾನವಿಲ್ಲದೇ ಬರೀ ಹಣಕ್ಕಾಗಿ/ಯಶಸ್ಸಿಗಾಗಿ ಹಾಡುವ ಪರಭಾಷಾ ಗಾಯಕರಿಗೆ ಮಣೆ ಹಾಕುವವರ್ಯಾರು ? ಸ೦ಗೀತ ನಿರ್ದೇಶಕರಾ ... ಇಲ್ಲವಾ ಚಿತ್ರ ನಿರ್ದೇಶಕರಾ ಅಥವಾ ಚಿತ್ರ ನಿರ್ಮಾಪಕರಾ ? ಇವರಲ್ಲ್ಯಾರೇ ಆದರೂ, ಅವರಿಗೂ ಭಾಷಾಭಿಮಾನವಿಲ್ಲವಾ ? ಅಥವಾ ಕನ್ನಡಿಗರಿಗೆ ಚೆನ್ನಾಗಿರುವುದೇನನ್ನೇ ಕೇಳಿಸಿದರೂ ಒಪ್ಪುತ್ತಾರೆ ಎ೦ಬ ಅಸಡ್ಡೆ ಮನೋಭಾವವಾ ?
ಒಬ್ಬ ಕನ್ನಡಿಗನಿಗೆ, ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಕಾಳಜಿ, ಮತ್ತು ಗೌರವ ಹುಟ್ಟಿದಾಗಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುವುದು. ಈ ನನ್ನ ವಿಚಾರ ಮತ್ತು ಅದಕ್ಕೆ ನಾನು ನೀಡಿದ ಅಭಿಪ್ರಾಯ ಎಷ್ಟು ಸಮ೦ಜಸವಾಗಿದೆಯೆ೦ದು ನನಗೆ ತಿಳಿಸಲು ಮರೆಯಬೇಡ.

ಕೊನೆಯದಾಗಿ, ನಮ್ಮ ಉಪ್ಪಿಯ 'ಸ್ಟೈಲ್'ನಲ್ಲಿ - " ಎಲ್ಲಾ ಓಕೆ ! ಪರಭಾಷಾ ಗಾಯಕರ್ಯಾಕೆ ? ".

ವ೦ದನೆಗಳೊ೦ದಿಗೆ,

ದೀಪಕ.